ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿರ್ವಹಣೆ: ಮಾರ್ಗಸೂಚಿ ಉಲ್ಲಂಘನೆ, ನಿರ್ದೇಶನ ಪಾಲಿಸದ ಎಂಜಿನಿಯರ್‌ಗಳು

ಹೈಕೋರ್ಟ್‌ ಸೂಚನೆಯಂತೆ 2009ರಲ್ಲಿ ಮಾರ್ಗಸೂಚಿ ರಚನೆ
Last Updated 9 ನವೆಂಬರ್ 2022, 21:02 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ನಿರ್ಮಾಣ ಹಾಗೂ ರಸ್ತೆಯಲ್ಲಿ ಉಂಟಾಗುವ ಗುಂಡಿ, ಬಿರುಕು, ಪಾದಚಾರಿ ಮಾರ್ಗದ ಸಮಸ್ಯೆಗಳಿಗೆ ದುರಸ್ತಿ ಕಾಮಗಾರಿ ನಡೆಸಲು ಹೈಕೋರ್ಟ್‌ ನಿರ್ದೇಶನದಂತೆ ರಚಿಸಲಾಗಿರುವ ಮಾರ್ಗಸೂಚಿಗಳನ್ನು ಬಿಬಿಎಂಪಿ ಎಂಜಿನಿಯರ್‌ಗಳು ಉಲ್ಲಂಘಿಸುತ್ತಿದ್ದಾರೆ.

ನಗರ ವ್ಯಾಪ್ತಿಯಲ್ಲಿ ನಿರ್ಮಿಸುವ ರಸ್ತೆ ಹಾಗೂ ಅದರ ನಿರ್ವಹಣೆಗೆ ಬಿಬಿಎಂಪಿ ಮಾರ್ಗಸೂಚಿಗಳ ಕೈಪಿಡಿ ಹೊಂದಿದೆ. ದುರಸ್ತಿಗೆ ಸಮಗ್ರ ತಾಂತ್ರಿಕ ಮಾಹಿತಿ, ಅನುಷ್ಠಾನದ ಕ್ರಮ ಇದರಲ್ಲಿದೆ. ಆದರೆ, ಇದನ್ನು ಎಂಜಿನಿಯರ್‌ಗಳು ಕಾಮಗಾರಿ ಅನುಷ್ಠಾನದ ಹಂತದಲ್ಲಿ ಪಾಲಿಸುತ್ತಿಲ್ಲ.

ಹೈಕೋರ್ಟ್‌ ಆದೇಶದಂತೆ, ತಾಂತ್ರಿಕ ಸಲಹಾ ಸಮಿತಿ ರಚಿಸಿರುವ ಮಾರ್ಗಸೂಚಿಯನ್ನು ಬಿಬಿಎಂಪಿ 2009ರಿಂದ ಅಳವಡಿಸಿಕೊಂಡಿದೆ. ಇದರಲ್ಲಿ ರಸ್ತೆ ಗುಂಡಿಗಳು ಬೀಳುವ ಸಂದರ್ಭದಲ್ಲಿ ಯಾವ ರೀತಿಯ, ಹೆಚ್ಚು ಕಾಲ ಬಾಳಿಕೆ ಬರುವಂತೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಸಚಿತ್ರ, ತಾಂತ್ರಿಕ ಮಾರ್ಗೋಪಾಯಗಳನ್ನು ತಿಳಿಸಲಾಗಿದೆ.

ದುರಸ್ತಿ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು (5.3.6, ಪುಟ 31ರಿಂದ 33) ಚಿತ್ರಸಹಿತ ವಿವರಿಸಲಾಗಿದೆ. ಗುಂಡಿ ಸುತ್ತಲು ಆಯತಾಕಾರದಲ್ಲಿ (ರೆಕ್ಟಾಂಗಲ್‌) ರಸ್ತೆ ಅಗೆದುಕೊಂಡು, ಮೂಲವಾಗಿ ಹಾಕಲಾಗಿರುವ ಪದರ ಕಾಣುವಂತಾಗಬೇಕು. ನಂತರ ಅಲ್ಲಿರುವ ಎಲ್ಲ ದೂಳು ಹಾಗೂ ಸಾಮಗ್ರಿ ತೆಗೆದು ಅದಕ್ಕೆ ಪದರಗಳಲ್ಲಿ ಯಾವ ಯಾವ ಸಾಮಗ್ರಿ ಹಾಕಬೇಕು ಎಂಬುದನ್ನು ಹೇಳಲಾಗಿದೆ. ಮಳೆ ಸಂದರ್ಭದಲ್ಲಿ, ಅತಿಹೆಚ್ಚು ವಾಹನ ಓಡಾಡುವ ರಸ್ತೆಗಳಲ್ಲಿ ಎಮಲ್ಸನ್‌ ಬಳಕೆಯನ್ನು ಸೂಚಿಸಲಾಗಿದೆ. ಆದರೆ, ರಸ್ತೆ ಗುಂಡಿ ದುರಸ್ತಿ ಸಂದರ್ಭದಲ್ಲಿ ಇದ್ಯಾವುದನ್ನೂ ಪಾಲಿಸಲಾಗುತ್ತಿಲ್ಲ ಎಂಬುದು ಕಣ್ಣಿಗೆ ಕಾಣುವ ಗುಂಡಿಗಳು ಸಾಬೀತುಪಡಿಸುತ್ತಲೇ ಇರುತ್ತವೆ.

ಪಾಲನೆಗೆ ಆಯುಕ್ತರ ಸೂಚನೆ:ರಸ್ತೆ ನಿರ್ಮಾಣ, ನಿರ್ವಹಣೆಗಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಿ, ಆ ಸಮಿತಿ ನೀಡಿರುವ ಮಾರ್ಗಸೂಚಿಗಳನ್ನು ಬಿಬಿಎಂಪಿ ಅನುಸರಿಸಬೇಕು ಎಂದು ಹೈಕೋರ್ಟ್‌ ಆದೇಶ ನೀಡಿತ್ತು. ಇದರಂತೆ, ಹೈಕೋರ್ಟ್‌ ರಚಿಸಿದ್ದ ತಾಂತ್ರಿಕ ಸಮಿತಿ ತನ್ನ ಸದಸ್ಯ ಹಾಗೂ ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಎಂಜಿನಿಯರ್‌ ಕೆ.ಎನ್‌.ಶಿವಶಂಕರ ರಾವ್‌ ಅವರಿಗೆ ಮಾರ್ಗಸೂಚಿ ರಚಿಸುವ ಜವಾಬ್ದಾರಿ ನೀಡಿತು.

ಶಿವಶಂಕರ್‌ ಅವರು ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ಸೇರಿದಂತೆ ಎಲ್ಲ ರೀತಿಯ ಮಾನದಂಡಗಳ ಅಂಶಗಳನ್ನು ಪಡೆದು, ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಬಗ್ಗೆ ವರದಿಯನ್ನು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ತಾಂತ್ರಿಕ ಸಲಹಾ ಸಮಿತಿ ಅವರನ್ನು ಶ್ಲಾಘಿಸಿತ್ತು. ಈ ಮಾರ್ಗಸೂಚಿಗಳನ್ನು ಪ್ರಕಟಿಸಿ, ಅದನ್ನು ಅನುಸರಿಸಲು ಬಿಬಿಎಂಪಿ ಆಯುಕ್ತರಿಗೆ ಸಮಿತಿ ಸೂಚಿಸಿತು. ಅದರಂತೆ, ಅಂದಿನ ಆಯುಕ್ತ ಎಸ್‌. ಸುಬ್ರಮಣ್ಯ ಅವರು 144 ಪುಟಗಳ ಮಾರ್ಗಸೂಚಿಯ ಪುಸ್ತಕವನ್ನು 2009ರಲ್ಲಿ ಪ್ರಕಟಿಸಿ, ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ ಸಂದರ್ಭದಲ್ಲಿ ಎಲ್ಲ ಎಂಜಿನಿಯರ್‌ಗಳು ಈ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದ್ದರು.

ಗಾಡಿ ಓಡಿಸುವುದು ಬಿಡುತ್ತಾರಾ...?
‘ನಗರದಲ್ಲಿ 13 ಸಾವಿರ ಕಿ.ಮೀ ರಸ್ತೆ ಇದೆ. ಕಿ.ಮೀಗೆ ತಲಾ ಎರಡು ಗುಂಡಿ ಎಂದರೂ 26 ಸಾವಿರ ಗುಂಡಿಗಳಿವೆ. ಸಂಖ್ಯೆ ದೊಡ್ಡದೆನಿಸುತ್ತದೆ.ರಸ್ತೆ ಗುಂಡಿಯನ್ನು ಮಾರ್ಗಸೂಚಿಯಂತೇ ದುರಸ್ತಿ ಮಾಡುತ್ತೇವೆ. ಆದರೆ ಮಳೆ ಬಂದಾಗ ಮತ್ತೊಂದೆಡೆ ಕಿತ್ತುಹೋಗುತ್ತದೆ. ಹೆಚ್ಚು ವಾಹನಗಳ ಓಡಾಟದಿಂದ ಹೀಗಾಗುತ್ತದೆ. ರಸ್ತೆಯ ಮೇಲೆ ಅತಿ ಒತ್ತಡ ಬೀಳುತ್ತದೆ. ಹೀಗಾಗಿ ಗುಂಡಿಗಳು ಉಂಟಾಗುತ್ತವೆ. ನಗರದ ಎಲ್ಲ ರಸ್ತೆಗಳು ಗುಂಡಿ ಆಗಿವೆ ಅನ್ನುತ್ತಾರೆ. ಹಾಗೆಂದು ಸವಾರರು ಓಡಾಡುವುದನ್ನು ಬಿಟ್ಟುಬಿಡುತ್ತಾರಾ’ ಎಂದು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್‌ ಪ್ರಶ್ನಿಸಿದರು.

ಸಾಕಷ್ಟು ದೂರುಗಳು
ರಸ್ತೆ ನಿರ್ಮಾಣ, ರಸ್ತೆ ಅಗೆತ, ಗುಂಡಿಗಳ ದುರಸ್ತಿ ಕಾಮಗಾರಿಗಳ ನಿಯಮ ಉಲ್ಲಂಘನೆ ಬಗ್ಗೆ ಬಿಬಿಎಂಪಿ ಆಯುಕ್ತರು, ಮುಖ್ಯಮಂತ್ರಿ ಅವರಿಗೆ ಸಂಘ–ಸಂಸ್ಥೆಗಳು, ವ್ಯಕ್ತಿಗಳು ಸಾಕಷ್ಟು ದೂರು ನೀಡಿದ್ದಾರೆ. ಆದರೆ, ಈ ಬಗ್ಗೆ ಈವರೆಗೂ ಯಾರೂ ನಿಯಮಾವಳಿಯಂತೆ ಕಾಮಗಾರಿ ನಡೆಸಲು ಕಟ್ಟುನಿಟ್ಟಿನ ಸೂಚನೆ ನೀಡಿಲ್ಲ.

‘ರಸ್ತೆ ನಿರ್ಮಾಣವೇ ಮಾರ್ಗಸೂಚಿಗಳಂತೆ ಇಲ್ಲ. ಹೀಗಾಗಿ ಮಳೆನೀರು ನಿಲ್ಲುವುದು, ಗುಂಡಿಗಳು ಬೀಳುವುದು ಇದೆ. ಐಆರ್‌ಸಿ, ಬಿಬಿಎಂಪಿ ಮಾರ್ಗಸೂಚಿ ಉಲ್ಲಂಘನೆಯಿಂದ ಸಂಕಷ್ಟಗಳು ಎದುರಾಗುತ್ತಿವೆ’ ಎಂದು 2017ರಲ್ಲಿ ಆಗಿನ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೇ ಮಾಹಿತಿ ಹಕ್ಕು ಅಧ್ಯಯನ ಕೇಂದ್ರದ ಅಮರೇಶ್‌ ದೂರು ನೀಡಿದ್ದರು

ನಮ್ಮ ಬೆಂಗಳೂರು ಪ್ರತಿಷ್ಠಾನ, ಬೆಂಗಳೂರು ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆ ಕುರಿತಾದ ಸಮಗ್ರ ವರದಿಯನ್ನು ಸರ್ಕಾರಕ್ಕೆ 2015ರಲ್ಲಿ ನೀಡಲಾಗಿತ್ತು.

‘ರಸ್ತೆ ನಿರ್ಮಾಣ ಹಾಗೂ ರಸ್ತೆ ಗುಂಡಿಗಳಲ್ಲಿ ಐಆರ್‌ಸಿ ನಿಮಯಗಳನ್ನು ಪಾಲಿಸಲಾಗುತ್ತಿಲ್ಲ. ಬಿಡಬ್ಲ್ಯುಎಸ್‌ಎಸ್‌ಬಿ, ಬೆಸ್ಕಾಂ, ಬಿಎಸ್ಎನ್‌ಎಲ್‌ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳು, ಖಾಸಗಿಯವರು ಬೇಕಾಬಿಟ್ಟಿ ರಸ್ತೆಗಳನ್ನು ಅಗೆದು ಹಾಳುಮಾಡುತ್ತಿದ್ದಾರೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಂಕಿ–ಅಂಶ, ದಾಖಲೆ ಮೂಲಕ ಮನವಿ ಮಾಡಿಕೊಳ್ಳಲಾಗಿತ್ತು’ ಎಂದು ಪ್ರತಿಷ್ಠಾನದ ಅಂದಿನ ಸಿಇಒ ಸುರೇಶ್‌ ಹೇಳಿದರು.

ಕಟ್ಟಡ ತ್ಯಾಜ್ಯ ತುಂಬುತ್ತಾರೆ...
‘ನಗರ ರಸ್ತೆಗಳಲ್ಲಿ ಗುಂಡಿ ಬಿದ್ದಾಗ ಅದನ್ನು ಮುಚ್ಚಲು ಯಾವುದೇ ಮಾರ್ಗಸೂಚಿ ಪಾಲಿಸುತ್ತಿಲ್ಲ. ಕಟ್ಟಡ ತ್ಯಾಜ್ಯವನ್ನು ತುಂಬಿರುತ್ತಾರೆ. ಇದರಲ್ಲಿ ಇಟ್ಟಿಗೆ, ಶಕ್ತಿ ಕಳೆದುಕೊಂಡ ಸಿಮೆಂಟ್‌, ಜೆಲ್ಲಿಗಳು ಇರುತ್ತದೆ. ಇದನ್ನು ತುಂಬುವುದರಿಂದ ಯಾವುದೇ ರೀತಿಯ ಪ್ರಯೋಜನವಾಗುವುದಿಲ್ಲ. ಇದರ ಮೇಲೆ ಬಿಟಮನ್‌ ಹಾಕಿದರೆ ಅದು ಅಂಟಿಕೊಳ್ಳುವುದಿಲ್ಲ. ಎಲ್ಲವೂ ಸಡಿಲವಾಗಿ ಮತ್ತೆ ಗುಂಡಿ ಬೀಳುತ್ತದೆ’ ಎಂದು ಸರ್ಜಾಪುರದ ತಾಂತ್ರಿಕ ತಜ್ಞ ನಾಗೇಶ್‌ ಅರಸ್‌ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT