ಸೋಮವಾರ, ಜನವರಿ 20, 2020
27 °C
ಪೌರತ್ವ ತಿದ್ದುಪಡಿ ಕಾಯ್ದೆಗೆ ವಿರೋಧಿಸಿ ಪ್ರತಿಭಟನಾ ಮೆರವಣಿಗೆ

ಬೀದಿಗಿಳಿದ ಬೆಂಗಳೂರಿನ ವಿದ್ಯಾರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ಹಲ್ಲೆಯನ್ನು ಖಂಡಿಸಿ ನಗರದ ವಿದ್ಯಾರ್ಥಿಗಳು ಮಂಗಳವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಂಠೀರವ ಕ್ರೀಡಾಂಗಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆದ ಮೆರವಣಿಗೆಯಲ್ಲಿ ನಗರದ ವಿವಿಧ ಕಾಲೇಜಿನ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಟ್ಲರ್‌ ಹೋಲಿಕೆಯ ಭಾವಚಿತ್ರ ಹಾಗೂ ‘ಮೋದಿ ಅವರದ್ದು ಕೋಮುವಾದದ ಮುಖ’ ಎಂಬ ಬರಹವುಳ್ಳ ಫಲಕ ಪ್ರದರ್ಶಿಸಿದರು. 

‘ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಮೂಲಕ ಹಿಂದೂ–ಮುಸ್ಲಿಮರನ್ನು ಒಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಖಂಡಿಸಿ ಇಂದು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿದ್ದೇವೆ. ಕಾಯ್ದೆಯನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ ಗಂಭೀರ ಸ್ವರೂಪದ ಹೋರಾಟ ಮಾಡಲು ನಾವೆಲ್ಲರೂ ಸಿದ್ಧರಾಗಿದ್ದೇವೆ’ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

‘ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಮಾತನಾಡುವ ಹಕ್ಕಿದೆ. ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುವ ಸ್ವಾತಂತ್ರ್ಯವೂ ಇದೆ. ಇಷ್ಟಾದರೂ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಕ್ಯಾಂಪಸ್‌ನಲ್ಲೇ ಹಲ್ಲೆ ಮಾಡಲಾಗಿದೆ. ಇದನ್ನು ನಾವೆಲ್ಲರೂ ಖಂಡಿಸುತ್ತೇವೆ’ ಎಂದು ಹೇಳಿದರು. 

ಅನುಮತಿ ನೀಡದ ಪೊಲೀಸರು: ಆಕ್ರೋಶ

ಪ್ರತಿಭಟನಾ ಮೆರವಣಿಗೆ ನಡೆಸಲು ಅನುಮತಿ ಕೋರಿ ವಿದ್ಯಾರ್ಥಿಗಳು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ಅದನ್ನು ಪೊಲೀಸರು ತಿರಸ್ಕರಿಸಿದ್ದರು.

ಅದರ ನಡುವೆಯೇ ಪ್ರತಿಭಟನಾ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು ಪೊಲೀಸರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಹಕ್ಕನ್ನೇ ಪೊಲೀಸರು ಕಿತ್ತುಕೊಳ್ಳುತ್ತಿದ್ದಾರೆ’ ಎಂದು ದೂರಿದರು. 

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು