ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯೆಲ್ಲ ದೂಳು, ದಟ್ಟಣೆ ಗೋಳು

ಮಾರ್ಗೋಸಾ ರಸ್ತೆಯಲ್ಲಿ ವರ್ಷ ಕಳೆದರೂ ಮುಗಿಯದ ಟೆಂಡರ್‌ಶ್ಯೂರ್‌ ಕಾಮಗಾರಿ
Last Updated 14 ಮಾರ್ಚ್ 2020, 22:20 IST
ಅಕ್ಷರ ಗಾತ್ರ

ಬೆಂಗಳೂರು: ಈ ರಸ್ತೆಗೆ ಬಂದ ಕೂಡಲೇ ಸಾರ್ವಜನಿಕರು ಹಾಗೂ ಪ್ರಯಾಣಿಕರು ಬಟ್ಟೆಯಿಂದ ಮುಖ ಮುಚ್ಚಿಕೊಳ್ಳುತ್ತಾರೆ. ನಡೆದಾಡಲು ಜಾಗವಿಲ್ಲದೆ ಪಾದಚಾರಿಗಳು ರಸ್ತೆಗೆ ಇಳಿಯುತ್ತಾರೆ. ವಾಹನ ಸವಾರರಿಗಂತೂ ಈ ರಸ್ತೆ ನಿತ್ಯದ ಗೋಳಾಗಿದೆ.

ಮಲ್ಲೇಶ್ವರದ ಮಾರಮ್ಮ ದೇವಾಲಯದ ವೃತ್ತದಿಂದ ಮಹಾಕವಿ ಕುವೆಂಪು ರಸ್ತೆಗೆ ಸಂಪರ್ಕಿಸುವ ಮಾರ್ಗೋಸಾ ರಸ್ತೆಯಲ್ಲಿ ಸಾಗುವಾಗ ಕಾಣಸಿಗುವ ದೃಶ್ಯಗಳಿವು.

ಟೆಂಡರ್‌ಶ್ಯೂರ್‌ ಯೋಜನೆಯಡಿ2019ರ ಜನವರಿಯಲ್ಲಿ ಪಾಲಿಕೆಆರಂಭಿಸಿದ ಈ ಕಾಮಗಾರಿ ಪೂರ್ಣಗೊಳಿಸಲು ನೀಡಿದ್ದ ಗಡುವು ಒಂದು ವರ್ಷ. ಆದರೆ, ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ವಾಹನಗಳುಈ ಕಿರಿದಾದ ರಸ್ತೆಯಲ್ಲಿ ಏಕಮುಖವಾಗಿ ಸಂಚರಿಸುತ್ತವೆ. ಬಹುತೇಕ ಬಿಎಂಟಿಸಿ ವಾಹನಗಳು ಈ ಮಾರ್ಗದಲ್ಲೇ ಮೆಜೆಸ್ಟಿಕ್ ತಲುಪುತ್ತವೆ. ಒಂದು ಕಿ.ಮೀ. ಉದ್ದದ ರಸ್ತೆಯಲ್ಲಿ ಮೂರು ಟ್ರಾಫಿಕ್ ಸಿಗ್ನಲ್‌ಗಳಿವೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

ರಸ್ತೆಬದಿ ಹೈಟೆಕ್‌ ಮಾದರಿಯ ಪಾದಚಾರಿ ಮಾರ್ಗ ನಿರ್ಮಿಸಲು ಇದ್ದ ಹಳೆಯ ಮಾರ್ಗ ಅಗೆಯಲಾಗಿದೆ. ಇದರಿಂದ ಪಾದಚಾರಿಗಳಿಗೆ ನಡೆದಾಡಲು ಜಾಗ ಇಲ್ಲವಾಗಿದೆ. ಕೆಲವೆಡೆ ಮಾತ್ರ ಪಾದಚಾರಿ ಮಾರ್ಗಗಳನ್ನು ಹಾಕಲಾಗಿದೆ.

ಈ ಯೋಜನೆಯಡಿ ವಿದ್ಯುತ್‌, ನೀರು, ಒಳಚರಂಡಿ,ಆಪ್ಟಿಕಲ್ ಫೈಬರ್‌ ಕೇಬಲ್ (ಒಎಫ್‌ಸಿ) ಸಂಪರ್ಕಗಳನ್ನು ರಸ್ತೆಯ ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಅಳವಡಿಸಲಾಗುತ್ತಿದೆ.ಇದರೊಟ್ಟಿಗೆ ಅಲ್ಲಲ್ಲಿ ಎಲ್‌ಇಡಿ ದೀಪಗಳ ಅಳವಡಿಕೆ ಕಾಮಗಾರಿಯೂ ನಡೆಯುತ್ತಿದೆ. ಮಾರಮ್ಮ ವೃತ್ತದಿಂದ ಆರಂಭವಾಗಿ ಅಲ್ಲಲ್ಲಿ ಮಾತ್ರ ಪಾದಚಾರಿ ಮಾರ್ಗ ಸಿದ್ಧವಾಗಿದೆ.

‘ಟೆಂಡರ್‌ಶ್ಯೂರ್‌ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಇದರಿಂದ ರಸ್ತೆ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಆದರೆ, ಈ ಕಿರಿದಾದ ರಸ್ತೆಯಲ್ಲಿ ಪಾದಚಾರಿಗಳಿಗೆ ನಡೆಯಲು ಸೂಕ್ತ ಜಾಗವೇ ಇಲ್ಲ. ಕಾಮಗಾರಿ ಪೂರ್ಣಗೊಳಿಸಲು ಪಾಲಿಕೆ ಅಧಿಕಾರಿಗಳು ಗಮನ ಹರಿಸಬೇಕು’ ಎಂದು ಸ್ಥಳೀಯ ನಿವಾಸಿ ಪ್ರತಾಪ್‌ ಒತ್ತಾಯಿಸಿದರು.

‘ನಿಗದಿತ ಅವಧಿಯಂತೆ ಕಾಮಗಾರಿ ಪೂರ್ಣಗೊಳ್ಳುತ್ತಿತ್ತು. ಶೀಘ್ರವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ರಾತ್ರಿ ವೇಳೆಯಲ್ಲಿಕಾಮಗಾರಿ ಆರಂಭಿಸಿದೆವು. ಆದರೆ, ಇದಕ್ಕೆ ಸ್ಥಳೀಯ ನಿವಾಸಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಇಲ್ಲಿನ 75 ಮರಗಳಿಗೆ ಹಾನಿಯಾಗದಂತೆ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದಲೇ ಕೆಲಸ ವಿಳಂಬವಾಗಿದೆ. ಏಪ್ರಿಲ್‌ ಎರಡನೇ ವಾರದ ವೇಳೆ ಟೆಂಡರ್‌ಶ್ಯೂರ್‌ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಸ್ಥಳೀಯ ಪಾಲಿಕೆ ಸದಸ್ಯ ಜಿ.ಮಂಜುನಾಥರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯಾಪಾರಕ್ಕೆ ಹಿನ್ನಡೆ
ಕಾಮಗಾರಿಯಿಂದಾಗಿ ಇಲ್ಲಿನ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ರಸ್ತೆ ಅಗೆದ ಕಾರಣ ಗ್ರಾಹಕರ ವಾಹನಗಳ ನಿಲುಗಡೆಗೆ ಸಮಸ್ಯೆಯಾಗಿದೆ. ಇದರಿಂದ ವ್ಯಾಪಾರ ಕುಸಿದಿದೆ ಎಂದು ಅಂಗಡಿ ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ.

‘ದೂಳಿನ ಸಮಸ್ಯೆಯಿಂದ ಅಂಗಡಿ ಒಳಗೆ ಕೂರಲು ಆಗುತ್ತಿಲ್ಲ. ಅಂಗಡಿ, ಮಳಿಗೆಗಳ ಮುಂಭಾಗವೇ ಕಾಮಗಾರಿ ನಡೆಯುತ್ತಿರುವುದರಿಂದ ಗ್ರಾಹಕರು ಖರೀದಿಗೂ ಬರುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡರೆ ಅನುಕೂಲವಾಗಲಿದೆ’ ಎಂದು ಇಲ್ಲಿನ ವ್ಯಾಪಾರಿಯೊಬ್ಬರು ತಿಳಿಸಿದರು.

*
ಕಾರಿನಲ್ಲಾದರೆ ದೂಳಿಗೆ ಕಿಟಕಿ ಹಾಕಿ ಪಾರಾಗಬಹುದು. ಆದರೆ, ದ್ವಿಚಕ್ರ ವಾಹನ ಸವಾರರಿಗೆ ಈ ರಸ್ತೆಯಲ್ಲಿ ಸಂಚರಿಸುವುದೇ ಸವಾಲಾಗಿದೆ
-ಮುನಿರಾಜ್,ಬೈಕ್‌ ಸವಾರ

*
ಕಾಲೇಜಿನಿಂದ ಮನೆಗೆ ತೆರಳಲು ಇದೇ ರಸ್ತೆಯಲ್ಲಿ ಬಸ್‌ಗಾಗಿ ಕಾಯುತ್ತೇನೆ. ದೂಳಿನಿಂದ ರಸ್ತೆಯಲ್ಲಿ ನಿಲ್ಲಲಾಗುವುದಿಲ್ಲ.
-ಎನ್‌.ಪ್ರಿಯಾ, ಕಾಲೇಜು ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT