ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೆರೆ ಅಭಿವೃದ್ಧಿಗೆ ಷರತ್ತಿನ ಬಿಕ್ಕಟ್ಟು!

ಮೊದಲು ಸರ್ವೆ, ಒತ್ತುವರಿ ತೆರವು, ನಂತರವಷ್ಟೇ ಕಾಮಗಾರಿ: ಸರ್ಕಾರದ ಆದೇಶ
Published 18 ಡಿಸೆಂಬರ್ 2023, 0:30 IST
Last Updated 18 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕೆರೆಗಳ ಅಭಿವೃದ್ಧಿಗೆ ಹಣಕಾಸು ಆಯೋಗದ ಅನುದಾನದಲ್ಲಿ ರೂಪಿಸಲಾಗಿರುವ ಕ್ರಿಯಾಯೋಜನೆಗೆ ನೀಡಿರುವ ಅನುಮೋದನೆಯಲ್ಲಿರುವ ಷರತ್ತಿನಿಂದ ಬಿಬಿಎಂಪಿ ಬಿಕ್ಕಟ್ಟಿಗೆ ಸಿಲುಕಿದೆ.

‘ಕೆರೆಗಳ ಗಡಿಯನ್ನು ಗುರುತಿಸಿ, ಅವುಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಿದ ನಂತರವಷ್ಟೇ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ತೆಗೆದುಕೊಳ್ಳಬೇಕು’ ಎಂದು ಸರ್ಕಾರ ಷರತ್ತು ವಿಧಿಸಿದೆ. 15ನೇ ಹಣಕಾಸು ಆಯೋಗದ 2022–23ನೇ ಸಾಲಿನ ಅನುದಾನದಲ್ಲಿ ₹49 ಕೋಟಿಯನ್ನು 14 ಕೆರೆಗಳ ಅಭಿವೃದ್ಧಿಗೆ ನೀಡಲಾಗಿದೆ.

ಕೆರೆಗಳ ಅಭಿವೃದ್ಧಿಗೆ ಅನುಮೋದನೆ ದೊರೆತ ಕೂಡಲೇ ಈ ಹಿಂದೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ, ಟೆಂಡರ್‌ ಕರೆದು ಕಾರ್ಯಾದೇಶವನ್ನು ನೀಡಲಾಗುತ್ತಿತ್ತು. ಕಾಮಗಾರಿ ಆರಂಭವಾದ ಮೇಲಷ್ಟೇ ಒತ್ತುವರಿ ಗಮನಕ್ಕೆ ಬರುತ್ತಿತ್ತು. ಅದನ್ನು ಉಳಿಸಿ, ಕಾಮಗಾರಿಗಳನ್ನು ನಡೆಸಿರುವ ಉದಾಹರಣೆಗಳೂ ಹಲವು ಕೆರೆಗಳಲ್ಲಿವೆ.

ಈ ಬಾರಿ ಇಂತಹ ಕಾರ್ಯಕ್ಕೆ ಅವಕಾಶ ಇಲ್ಲದಿರುವುದು ಬಿಬಿಎಂಪಿ ಅಧಿಕಾರಿಗಳನ್ನು ‘ಸಂಕಷ್ಟಕ್ಕೆ’ ದೂಡಿದೆ. ಕೆರೆಯ ವಿಸ್ತೀರ್ಣ, ಗಡಿ ಗುರುತು, ಒತ್ತುವರಿ ತೆರವಿನ ನಂತರವಷ್ಟೇ ಕಾಮಗಾರಿ ಆರಂಭವಾಗಬೇಕಿರುವುದು ಬಿಬಿಎಂಪಿ ಎಂಜಿನಿಯರ್‌ಗಳ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಆದರೆ, ಈ ಷರತ್ತು ನಗರವಾಸಿಗಳು, ಪರಿಸರ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದ್ದು, ಕೆರೆಗಳು ಸಮಗ್ರವಾಗಿ ಉಳಿಯುವ ಭರವಸೆ ಮೂಡಿಸಿದೆ.

ಮಡಿವಾಳ ಕೆರೆ ಒತ್ತುವರಿ ತೆರವು ಸಾಧ್ಯವೇ?: ಅರಣ್ಯ ಇಲಾಖೆಗೆ ಇತ್ತೀಚೆಗೆ ಬಿಬಿಎಂಪಿಗೆ ಹಸ್ತಾಂತರಗೊಂಡಿರುವ ಮಡಿವಾಳ ಕೆರೆ ಅಭಿವೃದ್ಧಿಗೆ ₹15 ಕೋಟಿ ಮೀಸಲಿಡಲಾಗಿದೆ. 267 ಎಕರೆ ವಿಸ್ತೀರ್ಣದಲ್ಲಿರುವ ಮಡಿವಾಳ ಕೆರೆಯಲ್ಲಿ ಸರ್ಕಾರಿ ಒತ್ತುವರಿಯೇ 10 ಎಕರೆಯಷ್ಟಿದೆ. ಬಿಡಿಎ ರಸ್ತೆ, ಇತರೆ ರಸ್ತೆ, ಕೊಳೆಗೇರಿ, ಕಟ್ಟಡಗಳು ನಿರ್ಮಾಣವಾಗಿವೆ. ಹಲವು ದಶಕಗಳಿಂದ ಈ ಒತ್ತುವರಿಯನ್ನು ತೆರವು ಮಾಡಿಲ್ಲ. ಇದು ಬಿಬಿಎಂಪಿ ಅಧಿಕಾರಿಗಳಿಗೆ ಸವಾಲಾಗಿದೆ.

‘ಮಡಿವಾಳ ಕೆರೆಯಲ್ಲಿ ದಶಕಗಳಿಂದ ಹೂಳು ತೆಗೆದಿಲ್ಲ. ಇದರ ಕಾಮಗಾರಿಯೇ ಅತಿಹೆಚ್ಚಿದೆ. ಜೊತೆಗೆ ಒತ್ತುವರಿ ಅತಿಯಾಗಿದೆ. ಇದನ್ನು ಮೊದಲು ತೆಗೆಯಬೇಕೆಂದರೆ ಪುನರ್‌ವಸತಿ, ಬಿಡಿಎ ರಸ್ತೆಗಳೆಲ್ಲ ಅಡ್ಡಿಯಾಗಿವೆ. ಇವುಗಳನ್ನು ತೆರವು ಮಾಡಲು ಕಷ್ಟಸಾಧ್ಯವಾಗಬಹುದು. ಆದರೂ ಒತ್ತುವರಿ ತೆರವು ಮಾಡಲು ಪ್ರಯತ್ನಿಸಲಾಗುವುದು. ಮಡಿವಾಳ ಕೆರೆ ಬಹಳ ದೊಡ್ಡದಾಗಿದ್ದು, ಅಭಿವೃದ್ಧಿಗೆ ಅತಿ ಹೆಚ್ಚಿನ ಹಣ ಬೇಕಾಗಿದೆ. ಮೊದಲು ಡಿಪಿಆರ್‌ ಸಿದ್ಧಪಡಿಸಲಾಗುತ್ತದೆ. ನಂತರ ಎಲ್ಲ ಪ್ರಕ್ರಿಯೆ ಆರಂಭವಾಗುತ್ತದೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

‘ಕಾಚರಕನಹಳ್ಳಿ ಕೆರೆಯಲ್ಲಿ ಕೊಳೆಗೇರಿಗಳು ನಿರ್ಮಾಣವಾಗಿವೆ. ಇಲ್ಲಿ ಕೆರೆಯ ಸರ್ವೆ ಕಾರ್ಯವೇ ನಡೆದಿಲ್ಲ. ಸ್ಥಳೀಯ ರಾಜಕಾರಣಿಗಳು ಒತ್ತುವರಿಯನ್ನು ತೆರವು ಮಾಡಿಸುತ್ತೇವೆ. ಕಾಮಗಾರಿ ಆರಂಭಿಸಿ ಎನ್ನುತ್ತಿದ್ದಾರೆ. ಆದರೆ, ಕೆರೆಯ ಅರ್ಧದಷ್ಟು ಭಾಗದಲ್ಲಿ ಒತ್ತುವರಿ ಇದೆ. ಷರತ್ತಿನ ಪ್ರಕಾರ ಅವರಿಗೆಲ್ಲ ಪುನರ್ವಸತಿ ಕಲ್ಪಿಸಿದ ನಂತರವಷ್ಟೇ ಕಾಮಗಾರಿ ಆರಂಭಿಸಬೇಕು. ಇದಕ್ಕೆ ಸಾಕಷ್ಟು ವರ್ಷಗಳು ಕಾಯಬೇಕಾಗುತ್ತದೆ’ ಎಂಬುದು ಎಂಜಿನಿಯರ್‌ಗಳ ಮಾತು.

ಹಲಸೂರು, ವೀರಸಾಗರ ಕೆರೆಗಳ ಸರ್ವೆಯನ್ನೇ ಈವರೆಗೂ ಮಾಡಿಲ್ಲ. ಇವುಗಳ ಸರ್ವೆ ಕಾರ್ಯ ಮೊದಲು ನಡೆಯಬೇಕಿದೆ. ನಂತರವಷ್ಟೇ ಅಭಿವೃದ್ಧಿ ಕಾಮಗಾರಿಯ ಪ್ರಕ್ರಿಯೆ ಆರಂಭವಾಗಬೇಕು. ಅಲ್ಲದೆ 14 ಕೆರೆಗಳ ಪೈಕಿ ಹಲವು ಕೆರೆಗಳಲ್ಲಿ ಈಗಾಗಲೇ ಅಭಿವೃದ್ಧಿ ಒಂದಷ್ಟು ಆಗಿದೆ. ಅಲ್ಲಿ ಹೇಗೆ ಈ ಷರತ್ತು ಅನ್ವಯವಾಗುತ್ತದೆ ಎಂಬುದೂ ಪ್ರಶ್ನೆಯಾಗಿದೆ. ಹೀಗಾಗಿ, ಸರ್ಕಾರದ ಷರತ್ತು ಬಿಬಿಎಂಪಿಯ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ವಹಿಸಿರುವುದಂತೂ ನಿಜ. ಇದು ಪೂರ್ಣ ಪ್ರಮಾಣದಲ್ಲಿ ಕಾರ್ಯಗತವಾದರೆ ಪರಿಸರಕ್ಕೇ ಲಾಭ ಎಂಬುದು ಪರಿಸರ ಕಾರ್ಯಕರ್ತರ ಅಭಿಪ್ರಾಯ.

‘ಕ್ರಿಯಾಯೋಜನೆ’ಯಲ್ಲಿ ಸೇರಿಲ್ಲ!

ಹೈಕೋರ್ಟ್‌ ಕೆರೆಗಳ ಒತ್ತುವರಿ ತೆರವಿನ ಬಗ್ಗೆ ಸಲ್ಲಿಸಲಾಗಿರುವ ‘ಕ್ರಿಯಾ ಯೋಜನೆ’ಯಲ್ಲಿ ಮಡಿವಾಳ ಕಾಚರಕನಹಳ್ಳಿ ಹಲಸೂರು ಅಂಜನಾಪುರ ಕೆರೆಗಳನ್ನು ಸೇರಿಸಿಲ್ಲ. 149 ಕೆರೆಗಳು ಮಾತ್ರ ಕ್ರಿಯಾಯೋಜನೆಯಲ್ಲಿದ್ದು ಉಳಿದ ಕೆರೆಗಳಲ್ಲಿ ಒತ್ತುವರಿ ಇದ್ದರೂ ಅವುಗಳು ಪಟ್ಟಿಯಲ್ಲಿ ಇಲ್ಲದಿರುವುದು ಸಂಶಯ ಮೂಡಿಸಿದೆ. ‘ಕ್ರಿಯಾಯೋಜನೆ’ಯಲ್ಲಿರುವ ಕೆರೆಗಳಲ್ಲಿನ ಒತ್ತುವರಿಯನ್ನು ಮಾತ್ರ ತೆರವು ಮಾಡಬೇಕೆಂದೇನೂ ಇಲ್ಲ. ಎಲ್ಲ ಕೆರೆಗಳಲ್ಲೂ ಒತ್ತುವರಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಒತ್ತುವರಿ ತೆರವಿಗೆ ಪ್ರಥಮ ಆದ್ಯತೆ ನೀಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಎಂಜಿನಿಯರ್‌ಗಳು ತಿಳಿಸಿದರು.

ಯಾವ ನಕ್ಷೆಯಂತೆ ಸರ್ವೆ?

‘ಕೆರೆಗಳ ಸರ್ವೆ ಮಾಡಿ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಮಾಡಿ ಎಂದು ಸರ್ಕಾರ ಷರತ್ತು ವಿಧಿಸಿರುವುದು ಸಂತಸದ ವಿಷಯ. ಆದರೆ ಯಾವ ನಕ್ಷೆಯ ಆಧಾರದಲ್ಲಿ ಸರ್ವೆ ನಡೆಸುತ್ತಾರೆ ಎಂಬುದೇ ಪ್ರಶ್ನೆ. ಇದಕ್ಕೆ ಉತ್ತರಿಸಿ ಸ್ಪಷ್ಟ ನಿಲುವು ತೆಗೆದುಕೊಂಡು ಮುಂದುವರಿಯಬೇಕು’ ಎಂದು ಫ್ರೆಂಡ್ಸ್‌ ಆಫ್‌ ಲೇಕ್‌ನ ರಾಮ್‌ಪ್ರಸಾದ್‌ ಆಗ್ರಹಿಸಿದರು. ‘1974ರಿಂದ 76ರಲ್ಲಿದ್ದ ಕಂದಾಯ ನಕ್ಷೆಯಂತೆಯೇ ಸರ್ವೆ ನಡೆಯಬೇಕು. 2015ರಲ್ಲಿ ಹೊಸದಾಗಿ ತಮ್ಮಿಷ್ಟಕ್ಕೇ ಕಂದಾಯ ಇಲಾಖೆ ಭೂಮಾಪಕರು ಮಾಡಿಟ್ಟಿರುವ ಸರ್ವೆಗಳಿವೆ. ಇವುಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹೀಗಾಗಿ ಹಳೆಯ ಕಂದಾಯ ನಕ್ಷೆಯಂತೆಯೇ ಸರ್ವೆ ನಡೆಸಿ ಅಭಿವೃದ್ಧಿ ಮಾಡಿದರೆ ಕೆರೆಗಳ ಜಲಸಂಗ್ರಹ ಸಾಮರ್ಥ್ಯ ಹೆಚ್ಚಾಗುತ್ತದೆ. ಅಂತರ್ಜಲ ವೃದ್ಧಿ ಜೊತೆಗೆ ಪರಿಸರ ರಕ್ಷಣೆಯೂ ಆಗುತ್ತದೆ’ ಎಂದರು.

ಯಾವ ಕೆರೆಯಲ್ಲಿ ಎಷ್ಟು ಒತ್ತುವರಿ?

ಮಡಿವಾಳ ಕೆರೆ ಸರ್ಕಾರಿ ಒತ್ತುವರಿ 10 ಎಕರೆ 2 ಗುಂಟೆ ಖಾಸಗಿ ಒತ್ತುವರಿ 1 ಎಕರೆ ಗರುಡಾಚಾರ್‌ಪಾಳ್ಯ ಕೆರೆ ಸರ್ಕಾರಿ ಒತ್ತುವರಿ 25 ಗುಂಟೆ ಮಹದೇವಪುರ ಸರ್ವೆ ನಂ.31 ಸರ್ಕಾರಿ ಒತ್ತುವರಿ 26 ಗುಂಟೆ ಖಾಸಗಿ ಒತ್ತುವರಿ 7.25 ಗುಂಟೆ ಶೀಲವಂತನ ಕೆರೆ ಸರ್ಕಾರಿ ಒತ್ತುವರಿ 1 ಎಕರೆ 1 ಗುಂಟೆ ಖಾಸಗಿ ಒತ್ತುವರಿ 2 ಕೆರೆ 32 ಗುಂಟೆ ಮಹದೇವಪುರ ಕೆರೆ ಸರ್ಕಾರಿ ಒತ್ತುವರಿ 3 ಎಕರೆ 22 ಗುಂಟೆ ಖಾಸಗಿ ಒತ್ತುವರಿ 4.75 ಗುಂಟೆ ಕೋಗಿಲು ಕೆರೆ ಸರ್ಕಾರಿ ಒತ್ತುವರಿ 1 ಎಕರೆ 2 ಗುಂಟೆ ಖಾಸಗಿ ಒತ್ತುವರಿ 3.5 ಗುಂಟೆ ಕಟ್ಟಿಗೇನಹಳ್ಳಿ ಕೆರೆ ಸರ್ಕಾರಿ ಒತ್ತುವರಿ 1 ಗುಂಟೆ ಖಾಸಗಿ ಒತ್ತುವರಿ 1.5 ಗುಂಟೆ ಲಿಂಗಧೀರನಹಳ್ಳಿ ಕೆರೆ–13 ಸರ್ಕಾರಿ ಒತ್ತುವರಿ 2.5 ಗುಂಟೆ ನರಸೀಪುರ ಕೆರೆ– 20 ಸರ್ಕಾರಿ ಒತ್ತುವರಿ 29 ಗುಂಟೆ ಖಾಸಗಿ ಒತ್ತುವರಿ 1 ಗುಂಟೆ ನರಸೀಪುರ ಕೆರೆ–26 ಸರ್ಕಾರಿ ಒತ್ತುವರಿ 30.5 ಗುಂಟೆ ಖಾಸಗಿ ಒತ್ತುವರಿ 1 ಎಕರೆ 29 ಗುಂಟೆ ಯಲಹಂಕ ಕೆರೆ ಖಾಸಗಿ ಒತ್ತುವರಿ 2 ಎಕರೆ 39 ಗುಂಟೆ ಅಂಜನಾಪುರ ಕೆರೆ ಸರ್ಕಾರಿ ಒತ್ತುವರಿ 14 ಗುಂಟೆ ಖಾಸಗಿ ಒತ್ತುವರಿ 3 ಗುಂಟೆ ಕಾಚರಕನಹಳ್ಳಿ ಕೆರೆ ಸರ್ವೆ ಮಾಡಿಲ್ಲ ವೀರಸಾಗರ ಕೆರೆ ಸರ್ವೆ ಮಾಡಿಲ್ಲ ಹಲಸೂರು ಕೆರೆ ಸರ್ವೆ ಮಾಡಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT