ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ, ಸಮಾವೇಶ; ಜನರಿಗೆ ತಟ್ಟಿದ ಬಿಸಿ

Last Updated 3 ಜನವರಿ 2020, 22:58 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಶುಕ್ರವಾರ ಮೂರು ಕಡೆಗಳಲ್ಲಿ ಬೃಹತ್‌ ಪ್ರತಿಭಟನೆ ಹಾಗೂ ಸಮಾವೇಶ ನಡೆದಿದ್ದರಿಂದ ವಿಪರೀತ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು. ಹಲವು ರಸ್ತೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಹಲವು ಗಂಟೆಯವರೆಗೂ ಕಾದು ಕಾದು ಜನರು ಹಿಡಿಶಾಪ ಹಾಕಿದರು.

ಜಿಕೆವಿಕೆ ಆವರಣದಲ್ಲಿ ಭಾರತೀಯ ವಿಜ್ಞಾನ ಸಮಾವೇಶ,ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಿಎಎ ವಿರುದ್ಧ ಪ್ರತಿಭಟನೆ ಹಾಗೂ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪುರಭವನದ ಎದುರು ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಬಂದಿದ್ದರು. ರಾಜಭವನದಿಂದ ಜಿಕೆವಿಕೆ ಆವರಣದವರೆಗಿನ ರಸ್ತೆಯನ್ನು ಅವರ ವಾಹನಗಳ ಸಂಚಾರಕ್ಕೆ ಮೀಸಲಿಡಲಾಗಿತ್ತು. ಅದಕ್ಕಾಗಿ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಬಳ್ಳಾರಿ ರಸ್ತೆಯಲ್ಲಿ ನಿಮಿಷಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರ ಫೋಟೊ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಜನ, ‘ರಸ್ತೆಯಲ್ಲೇ ಕಾಯುವಂತೆ ಮಾಡಿದ ಪ್ರಧಾನಿಗೆ ಧನ್ಯವಾದ’ ಎಂದು ವ್ಯಂಗ್ಯವಾಡಿದ್ದಾರೆ.

‘ಪ್ರಧಾನಿ ಹಾದು ಹೋಗುವ ಅರ್ಧ ಗಂಟೆ ಮುಂಚಿತವಾಗಿಯೇ ಬಳ್ಳಾರಿ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿತ್ತು. ಅಕ್ಕ– ಪಕ್ಕದಲ್ಲಿ ಬ್ಯಾರಿಕೇಡ್ ಸಹ ಅಳವಡಿಸಲಾಗಿತ್ತು. ಮೇಖ್ರಿ ವೃತ್ತದಲ್ಲೇ ಮಾರ್ಗ ಬದಲಾವಣೆ ಮಾಡಿ ಸದಾಶಿವನಗರ ಹಾಗೂ ನ್ಯೂ ಬಿಇಎಲ್ ರಸ್ತೆ ಮೂಲಕ ವಾಹನಗಳನ್ನು ಕಳುಹಿಸಲಾಯಿತು. ಅಲ್ಲಿಯೇ ವಾಹನಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಕಿ.ಮೀ.ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಂತಿದ್ದವು’ ಎಂದು ಕಾರು ಚಾಲಕ ಅಭಿಷೇಕ್‌ ಟ್ವೀಟ್‌ ಮಾಡಿದ್ದಾರೆ.

ಮೈಸೂರು ರಸ್ತೆಯಲ್ಲಿ ಅಸ್ತವ್ಯಸ್ತ: ಕಾಮಗಾರಿ ಹಿನ್ನೆಲೆಯಲ್ಲಿ ಮೈಸೂರು ರಸ್ತೆಯಲ್ಲಿ ನಿತ್ಯವೂ ದಟ್ಟಣೆ ಇರುತ್ತದೆ. ಅದರ ನಡುವೆಯೇ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಪ್ರತಿಭಟನೆ ಆಯೋಜಿಸಿದ್ದು ಮತ್ತಷ್ಟು ದಟ್ಟಣೆಗೆ ಕಾರಣವಾಯಿತು. ಇಡೀ ಮೈಸೂರು ರಸ್ತೆಯಲ್ಲಿ ಅಸ್ತವ್ಯಸ್ತ ಉಂಟಾಯಿತು. ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರಿಂದ ಜನರು ಹಿಡಿಶಾಪ ಹಾಕಿದರು.

ಮೆಜೆಸ್ಟಿಕ್‌ ಸುತ್ತಮುತ್ತ ಜನ ಹೈರಾಣು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಆಶಾ ಕಾರ್ಯಕರ್ತೆಯರು ರ‍್ಯಾಲಿ ನಡೆಸಿದ್ದರಿಂದ ಮೆಜೆಸ್ಟಿಕ್ ಸುತ್ತಮುತ್ತ ದಟ್ಟಣೆ ಉಂಟಾಗಿ ಜನ ಹೈರಾಣಾದರು. ಈ ಭಾಗದಲ್ಲಿ ಅರ್ಧ ಗಂಟೆಯವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT