ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂ‍ಪೊ ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದವರ ಬಂಧನ: 1,282 ಸ್ಮಾರ್ಟ್ ವಾಚ್‌ ಜಪ್ತಿ

ವಾಚ್‌ ಬಾಕ್ಸ್‌ ಸಾಗಿಸುತ್ತಿದ್ದ ಟೆಂ‍ಪೊ ಅಡ್ಡಗಟ್ಟಿ ಸುಲಿಗೆ
Last Updated 24 ಜನವರಿ 2023, 22:53 IST
ಅಕ್ಷರ ಗಾತ್ರ

ಬೆಂಗಳೂರು: ಸ್ಮಾರ್ಟ್‌ ವಾಚ್‌ ಬಾಕ್ಸ್‌ ಸಾಗಿಸುತ್ತಿದ್ದ ಟೆಂ‍ಪೊ ಅಡ್ಡಗಟ್ಟಿ ಚಾಲಕನನ್ನು ಥಳಿಸಿ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜ ರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಮೀರ್ ಅಹಮ್ಮದ್ (28) ಹಾಗೂ ಸೈಯದ್ ಶಾಹಿದ್ (26) ಬಂಧಿತರು. ಇವರಿಂದ ₹ 57 ಲಕ್ಷ ಮೌಲ್ಯದ 1,282 ಸ್ಮಾರ್ಟ್ ವಾಚ್‌ಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳು ತಲೆಮರೆಸಿ
ಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಟೈಟಾನ್ ಕಂಪನಿಯ 1,282 ಸ್ಮಾರ್ಟ್‌ ವಾಚ್‌ಗಳನ್ನು 23 ಬಾಕ್ಸ್‌ಗಳಲ್ಲಿ ತುಂಬಿ ಟೆಂಪೊದಲ್ಲಿ ರಾಜರಾಜೇಶ್ವರಿನಗರದ ಜೈದೀಪ್ ಎಂಟರ್‌ಪ್ರೈಸಸ್ ಗೋದಾಮಿಗೆ ತರಲಾಗಿತ್ತು. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಹಾಗೂ ಬಿಸಾಲ್‌ಕಿಸಾನ್, ರಾತ್ರಿ 10 ಗಂಟೆ ಸುಮಾರಿಗೆ ಸಿಗರೇಟ್ ಸೇದಬೇಕೆಂದು ಮಾತನಾಡಿ
ಕೊಂಡಿದ್ದರು‘.

‘ಕೆಲಸಗಾರರ ಬಳಿ ಸಿಗರೇಟ್‌ ಇರಲಿಲ್ಲ. ಅಂಗಡಿಗೆ ಹೋಗಿ ತರಲು ಯೊಚಿಸಿದ್ದರು. ಆಗ, ಇಬ್ಬರೂ ಬಾಕ್ಸ್‌ಗಳಿದ್ದ ಟೆಂಪೊದಲ್ಲೇ ನಾಯಂಡನಹಳ್ಳಿ ಕಡೆಗೆ ಹೋಗಿದ್ದರು. ಸಿಗರೇಟ್‌ ತೆಗೆದುಕೊಂಡು ವಾಪಸ್‌ ಗೋದಾಮಿನತ್ತ ಬರುತ್ತಿದ್ದರು. ಇದೇ ವೇಳೆಯೇ ಆರೋಪಿಗಳ ದ್ವಿಚಕ್ರ ವಾಹನಕ್ಕೆ ಟೆಂಪೊ ತಾಗಿತ್ತು. ಅದನ್ನು ಪ್ರಶ್ನಿಸಲೆಂದು ಆರೋಪಿಗಳು, ಟೆಂಪೊ ಹಿಂಬಾಲಿಸಿ ಮಾರ್ಗಮಧ್ಯೆ ಅಡ್ಡಗಟ್ಟಿದ್ದರು’ ಎಂದು ಪೊಲೀಸರು
ತಿಳಿಸಿದರು.

‘ಜಾನ್ ಹಾಗೂ ಬಿಸಾಲ್ ಕಿಸಾನ್ ಅವರನ್ನು ಟೆಂಪೊದಿಂದ ಕೆಳಗೆ ಇಳಿಸಿ ಹಲ್ಲೆ ಮಾಡಿದ್ದರು. ಪ್ರಾಣ ಭಯದಲ್ಲಿ ಅವರಿಬ್ಬರು ಸ್ಥಳದಿಂದ ಹೊರಟು ಹೋಗಿದ್ದರು. ನಂತರ, ಆರೋಪಿಗಳು ಟೆಂಪೊ ಸಮೇತ ಸ್ಥಳದಿಂದ ಪರಾರಿ
ಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ಖಾಲಿ ಟೆಂಪೊ ನಿಲ್ಲಿಸಿ ಪರಾರಿ: ‘ಟೆಂಪೊದಲ್ಲಿದ್ದ ಬಾಕ್ಸ್‌ ನೋಡಿದ್ದ ಆರೋಪಿಗಳು, ಅವುಗಳನ್ನು ಇಳಿಸಿಕೊಂಡಿದ್ದರು. ನಂತರ, ಖಾಲಿ ಟೆಂಪೊವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದರು. ಕೃತ್ಯದ ಬಗ್ಗೆ ಜೈದೀಪ್ ಎಂಟರ್‌ಪ್ರೈಸಸ್ ವ್ಯವಸ್ಥಾಪಕ ದೂರು ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT