ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ.ರಸ್ತೆಯಲ್ಲಿ ವೈಟ್‌ಟಾಪಿಂಗ್‌ಗೆ ಸಿದ್ಧತೆ

92 ರಸ್ತೆಗಳಲ್ಲಿ ಕಾಮಗಾರಿ ನಡೆಸಲು ಪ್ರಸ್ತಾವ ಸಲ್ಲಿಸಿದ ಬಿಬಿಎಂಪಿ
Last Updated 4 ಜುಲೈ 2019, 20:27 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆ’ ಯಡಿ ಕೇಂದ್ರ ವಾಣಿಜ್ಯ ಪ್ರದೇಶದ ರಸ್ತೆಗಳು ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಬಿಎಂಪಿ ಮುಂದಾಗಿದೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ.

ಎಂ.ಜಿ. ರಸ್ತೆ, ಕಬ್ಬನ್‌ ರಸ್ತೆ, ಕನ್ನಿಂಗ್‌ಹ್ಯಾಂ ರಸ್ತೆ ಸೇರಿದಂತೆ 92 ರಸ್ತೆಗಳಲ್ಲಿ (120 ಕಿ.ಮೀ.) ಕಾಮಗಾರಿ ಕೈಗೆತ್ತಿಕೊಳ್ಳಲು ಪಾಲಿಕೆ ಸಿದ್ಧತೆ ನಡೆಸಿದೆ. ಈ ಕಾಮಗಾರಿಗಳಿಗಾಗಿ ₹1,172 ಕೋಟಿ ವೆಚ್ಚ ಮಾಡಲಾಗುತ್ತಿದೆ. ನಗರಾಭಿವೃದ್ಧಿ ಇಲಾಖೆಯಿಂದ ಒಪ್ಪಿಗೆ ಸಿಕ್ಕ ಬಳಿಕ ಕಾಮಗಾರಿಗಳು ಹಂತ ಹಂತವಾಗಿ ಆರಂಭವಾಗಲಿವೆ.

ಮುಂದಿನ ಐದು ವರ್ಷಗಳಲ್ಲಿ ನಗರದ ಎಲ್ಲ ಆರ್ಟಿರಿಯಲ್‌ ಹಾಗೂ ಸಬ್‌ ಆರ್ಟಿರಿಯಲ್‌ ರಸ್ತೆಗಳನ್ನು ವೈಟ್‌ಟಾಪಿಂಗ್‌ ಮಾಡಲು ಉದ್ದೇಶಿಸಲಾಗಿದ್ದು, 2018–19ನೇ ಸಾಲಿನಲ್ಲಿ 150 ಕಿ.ಮೀ. ಉದ್ದದ ರಸ್ತೆಗಳ ವೈಟ್‌ ಟಾಪಿಂಗ್‌ ಮಾಡಲು ಉದ್ದೇಶಿಸಲಾಗಿದೆ ಎಂದು ಈ ಸಲದ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಬಳಿಕ ನವ ಬೆಂಗಳೂರು ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಈ ಯೋಜನೆಯಡಿ ವೈಟ್‌ಟಾಪಿಂಗ್‌ ಕಾಮಗಾರಿಗಾಗಿ ₹1,172 ಕೋಟಿ ಮೀಸಲಿಡಲಾಗಿದ್ದು, ಐದು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ನಡೆಸಲು ಪಾಲಿಕೆ ಉದ್ದೇಶಿಸಿದೆ.

ಮೊದಲ ಹಂತದಲ್ಲಿ 94 ಕಿ.ಮೀ. ರಸ್ತೆಗಳನ್ನು ಹಾಗೂ ಎರಡನೇ ಹಂತದಲ್ಲಿ 63 ಕಿ.ಮೀ. ರಸ್ತೆಗಳನ್ನು ವೈಟ್‌ಟಾಪಿಂಗ್‌ ಮಾಡಲಾಗಿತ್ತು.

‘ನಮ್ಮ ಮೆಟ್ರೊ’ ಯೋಜನೆಯ ಎರಡನೇ ಹಂತದಲ್ಲಿ ಎಂ.ಜಿ.ರಸ್ತೆಯಲ್ಲಿ ಈಗಾಗಲೇ ಸುರಂಗ ನಿಲ್ದಾಣ ನಿರ್ಮಾಣದ ಕಾಮಗಾರಿ ಆರಂಭವಾಗಿದೆ. ಹೀಗಾಗಿ, ಕಾಮರಾಜ ರಸ್ತೆಯನ್ನು ಬಂದ್‌ ಮಾಡಲಾಗಿದೆ. ಒಂದು ವೇಳೆ, ವೈಟ್‌ಟಾಪಿಂಗ್‌ ಕಾಮಗಾರಿ ಆರಂಭವಾದರೆ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ. ಸಂಚಾರ ದಟ್ಟಣೆಯ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಅಂಕಿ–ಅಂಶಗಳು
₹8,015 ಕೋಟಿ – ಮುಖ್ಯಮಂತ್ರಿ ನವ ಬೆಂಗಳೂರು ಯೋಜನೆಯ ಮೊತ್ತ
₹1,172 ಕೋಟಿ– ವೈಟ್‌ಟಾಪಿಂಗ್‌ ಕಾಮಗಾರಿಗೆ ಮೀಸಲಿಟ್ಟಿರುವ ಅಂದಾಜು ಮೊತ್ತ
₹250 ಕೋಟಿ– 2018–19ನೇ ಸಾಲಿಗೆ ಬೇಕಿರುವ ಮೊತ್ತ
₹500 ಕೋಟಿ–2019–20ನೇ ಸಾಲಿಗೆ ಬೇಕಿರುವ ಮೊತ್ತ
₹422 ಕೋಟಿ –2020–21ನೇ ಸಾಲಿಗೆ ಬೇಕಿರುವ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT