ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಪುರಾಂತ ಕೆರೆ ಸೇತುವೆ: ಅಪಾಯದ ಭಯ

ಬ್ಯಾರಿಕೇಡ್‌ ಮುರಿದರೂ ದುರಸ್ತಿಗೆ ಮುಂದಾಗದ ಅಧಿಕಾರಿಗಳು
Published 14 ಮಾರ್ಚ್ 2024, 5:23 IST
Last Updated 14 ಮಾರ್ಚ್ 2024, 5:23 IST
ಅಕ್ಷರ ಗಾತ್ರ

ಬಸವಕಲ್ಯಾಣ: ವಾಹನ ಡಿಕ್ಕಿಯಾದ ಪರಿಣಾಮ ನಗರದ ತ್ರಿಪುರಾಂತ ಕೆರೆ ನಾಲೆಗಿರುವ ಹೊಸ ಸೇತುವೆಯ ಬ್ಯಾರಿಕೇಡ್ ಮುರಿದಿದೆ. ಇದರಿಂದ ಅಪಾಯದ ಸಾಧ್ಯತೆ ಇದೆ.

ಜಿಲ್ಲೆಯಲ್ಲಿಯೇ  ಬಸವಕಲ್ಯಾಣದಲ್ಲಿ ಅತ್ಯಧಿಕ ಸರಕು ಸಾಗಾಣಿಕೆ ವಾಹನಗಳಿವೆ. 10 ಸಾವಿರಕ್ಕೂ ಅಧಿಕ ಲಾರಿಗಳಿರುವ ಬಗ್ಗೆ ಅಂದಾಜು ಮಾಡಲಾಗಿದ್ದು ಸಾವಿರಕ್ಕೂ ಅಧಿಕ ಆಟೊ, ಟಂಟಂಗಳಿವೆ. ಸಾವಿರಾರು ದ್ವಿಚಕ್ರವಾಹನಗಳಿವೆ. ಹೀಗಾಗಿ ಇಲ್ಲಿ ವಾಹನಗಳ ಓಡಾಟ ಹೆಚ್ಚಿರುತ್ತದೆ. ಇಲ್ಲಿಂದ 7 ಕಿ.ಮೀ ಅಂತರದಲ್ಲಿನ ಸಸ್ತಾಪುರ ಬಂಗ್ಲಾ ಬಳಿಯ ರಾಷ್ಟ್ರೀಯ ಹೆದ್ದಾರಿವರೆಗೆ ರಾತ್ರಿ ಹಗಲು ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆಯಲ್ಲಿನ ತ್ರಿಪುರಾಂತ ಕೆರೆಯ ನಾಲೆಗೆ ಕಟ್ಟಿರುವ ಹೊಸ ಸೇತುವೆಯ ಬ್ಯಾರಿಕೇಡ್‌ಗೆ ಈಚೆಗೆ ಹಾನಿ ಆಗಿದ್ದರಿಂದ ತೊಂದರೆಯಾಗಿದೆ.

ನಗರದಿಂದ ಹೊರ ಹೋಗುವ ವಾಹನಗಳು ಇಲ್ಲಿನ ಎತ್ತರದ ಹೊಸ ಸೇತುವೆಯಿಂದ ಸಾಗುತ್ತವೆ. ಆದರೆ ನಗರದೊಳಗೆ ಬರುವ ವಾಹನಗಳು ಪಕ್ಕದಲ್ಲಿನ ಚಿಕ್ಕದಾಗಿರುವ ಹಳೆಯ ಸೇತುವೆಯ ಮೇಲಿಂದಲೇ ಸಂಚರಿಸುತ್ತವೆ. ಈ ಸೇತುವೆ ಸಹ ಶಿಥಿಲಗೊಂಡಿದೆ. ಇಲ್ಲಿಯೂ ಹೊಸದಾಗಿ ಎತ್ತರದ ಸೇತುವೆ ನಿರ್ಮಿಸುವ ಅಗತ್ಯವಿದೆ.

ಎರಡೂ ಸೇತುವೆಗಳಿಂದಲೂ ಅಪಾಯದ ಭಯ ಕಾಡುತ್ತಿದ್ದರೂ ಸಂಬಂಧಿತರು ಮಾತ್ರ ನಿರ್ಲಕ್ಷ ತೋರಿದ್ದಾರೆ. ಹೊಸ ಸೇತುವೆಯ ಬ್ಯಾರಿಕೇಡ್ ಮುರಿದು ಕೆಲ ತಿಂಗಳುಗಳಾದರೂ ಇದುವರೆಗೆ ದುರಸ್ತಿ ಕೈಗೊಂಡಿಲ್ಲ. ತಡೆಗೋಡೆಯೂ ನಿರ್ಮಿಸಿಲ್ಲ.

‘ಬ್ಯಾರಿಕೇಡ್ ಹಾಳಾಗಿದ್ದರಿಂದ ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನದವರಿಗೆ ರಸ್ತೆ ಕಾಣದೆ ಕೆಳಗೆ ಜಾರಿ ಬೀಳುವ ಸಾಧ್ಯತೆಯಿದೆ’ ಎಂದು ವ್ಯಾಪಾರಸ್ಥ ವೀರೇಶ ಬೋರಗೆ ಭೀತಿ ವ್ಯಕ್ತಪಡಿಸಿದ್ದಾರೆ.

‘ರಸ್ತೆ ಸರಳವಾಗಿರದೆ ತಿರುವಿನಂತಿದೆ. ಇಂಥದರಲ್ಲಿ ಬ್ಯಾರಿಕೇಡ್ ಸಹ ವ್ಯವಸ್ಥಿತವಾಗಿಲ್ಲ. ಹೊಸಬರಿಗೆ ಇಲ್ಲಿಂದ ಸುಲಭವಾಗಿ ವಾಹನಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಆಗಲಾರದು' ಎಂದು ಮುಖಂಡ ಲಕ್ಷ್ಮಣ ಕಪನೂರೆ ಹೇಳಿದ್ದಾರೆ.

‘ಹೊಸ ಸೇತುವೆಗೆ ಬ್ಯಾರಿಕೇಡ್ ಅಳವಡಿಸುವುದಕ್ಕೆ ಮತ್ತು ಹಳೆಯ ಸೇತುವೆಯ ದುರಸ್ತಿಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನಕ್ಕಗಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ಧನರಾಜ ಚವಾಣ್ ಹೇಳಿದ್ದಾರೆ.

ಇಲಾಖೆಗೆ ಹೊಸ ಅನುದಾನ ಬಿಡುಗಡೆಯಾದ ಬಳಿಕ ಬ್ಯಾರಿಕೇಡ್ ಅಳವಡಿಸಲಾಗುವುದು. ಹಳೆಯ ಸೇತುವೆಯ ದುರುಸ್ತಿಗೂ ಕ್ರಮ ಕೈಗೊಳ್ಳಲಾಗುವುದು

-ಧನರಾಜ ಚವಾಣ್ ಎಇಇ ಲೋಕೋಪಯೋಗಿ ಇಲಾಖೆ

ಸೇತುವೆ 25 ಅಡಿ ಎತ್ತರವಿದೆ. ಅಲ್ಲದೆ ರಸ್ತೆಗೆ ಹತ್ತಿಕೊಂಡಿಯೇ ಮುಳ್ಳುಕಂಟೆಗಳು ಇರುವುದರಿಂದ ವಾಹನ ಕೆಳಕ್ಕೆ ಬಿದ್ದರೆ ದೊಡ್ಡ ಪ್ರಮಾಣದ ಹಾನಿ ಆಗಲಿದೆ

-ಲಕ್ಷ್ಮಣ ಕಪನೂರೆ ಮುಖಂಡ ಬಸವಕಲ್ಯಾಣ

ಸೇತುವೆ ಸ್ಥಳದಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಹಾಗೂ ಸಿಗ್ನಲ್ ಫಲಕಗಳನ್ನು ಅಳವಡಿಸಲು ಆಗ್ರಹಿಸಿ ಸಂಬಂಧಿತರಿಗೆ ಈಚೆಗೆ ಮನವಿಪತ್ರ ಸಲ್ಲಿಸಲಾಗಿದೆ

-ವೀರೇಶ ಬೋರಗೆ ವ್ಯಾಪಾರಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT