ಹೈಬ್ರಿಡ್‌ಗಿಂತ ದೇಶಿ ತಳಿಗೆ ಒತ್ತು ಕೊಡಿ–ಸಚಿವ ಖಂಡ್ರೆ
ಪ್ರಜಾವಾಣಿ ವಾರ್ತೆ
ಹೆಡಗಾಪೂರ (ಬೀದರ್): ರಾಜ್ಯದ ಎರಡನೇ ಜಾನುವಾರು ತಳಿ ಸಂವರ್ಧನಾ ಮತ್ತು ತರಬೇತಿ ಕೇಂದ್ರಕ್ಕೆ ಇಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿ, ಬೀದರ್ ಜಿಲ್ಲೆ ಎಲ್ಲ ರೀತಿಯಿಂದಲೂ ಸಮೃದ್ಧವಾಗಿದೆ. ಉತ್ತಮ ಹವಾಮಾನ, ಫಲವತ್ತಾದ ಭೂಮಿ, ಪಶು ಸಂಪತ್ತು ಇದೆ. ಕಾರಂಜಾ, ಮಾಂಜ್ರಾ ನದಿಗಳಿವೆ. ಪಶು ಸಂಗೋಪನೆಗೆ ಉತ್ತಮ ವಾತಾವರಣ ಇದೆ. ಪಶು ಸಂಪತ್ತು ಉಳಿಸಿ, ಬೆಳೆಸಬೇಕು. ಅದರಲ್ಲೂ ಹೈಬ್ರಿಡ್‌ಗಿಂತ ದೇಶಿ ತಳಿ ಸಂರಕ್ಷಿಸಿ, ಅಭಿವೃದ್ಧಿ ಪಡಿಸಲು ಹೆಚ್ಚಿನ ಒತ್ತು ಕೊಡಬೇಕು ಎಂದು ತಿಳಿಸಿದರು.
ಹೈಬ್ರಿಡ್ ತಳಿಯ ಜಾನುವಾರುಗಳಿಂದ ಹಾಲಿನ ಗುಣಮಟ್ಟ ತಗ್ಗಿದೆ. ಪೌಷ್ಟಿಕಾಂಶವೂ ಕಡಿಮೆ. ಬೇರೆ ತರಹದ ಸಮಸ್ಯೆಗಳು ಉಂಟಾಗುತ್ತಿವೆ. ದೇವಣಿ, ಮುರ್ರಾ, ಬಿದ್ರಿ ತಳಿಯ ಮೇಕೆಗಳ ಅಭಿವೃದ್ಧಿ ಮತ್ತು ಸಾಕಾಣಿಕೆಗೆ ಒತ್ತು ಕೊಡಬೇಕು. ರೈತರಿಗೆ ಸೂಕ್ತ ತರಬೇತಿ ಕೊಟ್ಟರೆ ಸ್ವಾವಲಂಬಿ, ಸ್ವಾಭಿಮಾನಿ ಆಗುತ್ತಾರೆ. ಆರ್ಥಿಕವಾಗಿ ಬಲಗೊಳ್ಳುತ್ತಾರೆ ಎಂದರು.
ನಬಾರ್ಡ್‌ನ ₹35 ಕೋಟಿ ಅನುದಾನದಲ್ಲಿ ಸಮುಚ್ಚಯ ನಿರ್ಮಿಸಲಾಗುವುದು. ಗುಣಮಟ್ಟದ ಕಾಮಗಾರಿಗೆ ಒತ್ತು ಕೊಡಲಾಗುವುದು. ಕಟ್ಟಡದ ಜೊತೆಯಲ್ಲಿ ಅಗತ್ಯ ಅಧಿಕಾರಿ, ಸಿಬ್ಬಂದಿ, ಪಶು ವೈದ್ಯಾಧಿಕಾರಿಗಳು, ಸಂಪನ್ಮೂಲ ವ್ಯಕ್ತಿಗಳನ್ನು ನೇಮಕ ಮಾಡಬೇಕು. ಈ ನಿಟ್ಟಿನಲ್ಲಿ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ ಅವರು ಗಮನಹರಿಸಬೇಕು ಎಂದು ಅವರತ್ತ ನೋಡಿ ಹೇಳಿದರು.
ರೈತರು ಬದುಕು ಹಸನಾಗಬೇಕು. ಕೃಷಿಯಿಂದಲೇ ರೈತರು ಆರ್ಥಿಕವಾಗಿ ಸದೃಢರಾಗುವುದಿಲ್ಲ. ಬರ, ಅತಿವೃಷ್ಟಿಯಿಂದ ರೈತರು ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಕೃಷಿ ಜೊತೆಯಲ್ಲಿ ಕೋಳಿ, ಆಡು ಸಾಕಾಣಿಕೆ ಸೇರಿದಂತೆ ಇತರೆ ಕೆಲಸಗಳನ್ನು ಮಾಡಬೇಕು. ಹಾಲಿನ ಉಪ ಉತ್ಪನ್ನಗಳನ್ನು ತಯಾರಿಸಿ ಹೆಚ್ಚಿನ ಲಾಭ ಗಳಿಸಬಹುದು. ಜಿಲ್ಲೆಯಲ್ಲಿ ಸದ್ಯ ದಿನಕ್ಕೆ 50 ಸಾವಿರ ಲೀಟರ್ ಹಾಲು ಉತ್ಪಾದನೆ ಮಾಡಲಾಗುತ್ತಿದೆ. 5 ಲಕ್ಷ ಲೀಟರ್ ವರೆಗೆ ಹಾಲು ಉತ್ಪಾದಿಸುವ ಸಾಧ್ಯತೆ ಜಿಲ್ಲೆಯಲ್ಲಿದೆ. ಇದಕ್ಕಾಗಿ ರಾಜ್ಯಸಭೆ ಸದಸ್ಯರೂ ಆದ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಅವರ ಸಂಸದರ ಅನುದಾನವನ್ನು ಕೊಟ್ಟಿದ್ದಾರೆ. ಸಂಸದ ಸಾಗರ್ ಖಂಡ್ರೆ ಅವರ ನಿಧಿಯಿಂದಲೂ ಅಗತ್ಯ ಅನುದಾನ ಕೊಡಲಾಗುವುದು ಎಂದು ಭರವಸೆ ನೀಡಿದರು.
ಬೀದರ್‌ನ ಪಶು ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಬೇಕು. ನಮ್ಮ ವಿಶ್ವವಿದ್ಯಾಲಯಕ್ಕಿಂತ ಹಾಸನದಲ್ಲಿರುವ ಕಾಲೇಜು ಬಹಳ ಉತ್ತಮವಾಗಿದೆ. ಅದಕ್ಕೆ ₹100 ಕೋಟಿ ಅನುದಾನ ಕೊಡಬೇಕು. ಕೆಕೆಆರ್‌ಡಿಬಿಯಿಂದಲೂ ಅಗತ್ಯ ಅನುದಾನ ಕೊಡಿಸಲು ನಾನು ಶ್ರಮಿಸುತ್ತೇನೆ. ಪಶುಗಳ ಚಿಕಿತ್ಸೆಗೆ ಜಿಲ್ಲೆಗೆ ಕೊಟ್ಟಿದ್ದ ಎರಡೂ ಆಂಬುಲೆನ್ಸ್‌ಗಳು ಕೆಟ್ಟು ಹೋಗಿದ್ದು ಅವುಗಳನ್ನು ಸರಿಪಡಿಸಬೇಕು. ಜಾನುವಾರುಗಳಿಗೆ ಸಕಾಲಕ್ಕೆ ಲಸಿಕೆ ಕೊಟ್ಟರೆ ಅವುಗಳು ಸಾಯುವುದಿಲ್ಲ ಎಂದು ಹೇಳಿದರು.
ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ, ಶಾಸಕ ಪ್ರಭು ಚವಾಣ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾವತಿ ಜೇಮ್ಸ್ ತಾರೆ, ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ. ವೀರಣ್ಣ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ನಿರ್ದೇಶಕ ಡಾ. ಮಂಜುನಾಥ ಎಸ್. ಪಾಳೆಗಾರ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ರಾಯಚೂರಿನ ಜಂಟಿ ನಿರ್ದೇಶಕ ಡಾ. ಶರಣಬಸಪ್ಪ ಎಸ್. ಪಾಟೀಲ, ಬೀದರ್ ಉಪನಿರ್ದೇಶಕ ಡಾ. ನರಸಪ್ಪ ಎ.ಡಿ., ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರ ಹಾಜರಿದ್ದರು.
/ಬಾಕ್ಸ್/
₹35 ಕೋಟಿಯಲ್ಲಿ ತರಬೇತಿ ಕೇಂದ್ರ
ನಬಾರ್ಡ್‌ನ ₹35 ಕೋಟಿ ಅನುದಾನದಲ್ಲಿ ಜಾನುವಾರು ತಳಿ ಸಂವರ್ಧನಾ ಹಾಗೂ ತರಬೇತಿ ಕೇಂದ್ರ ತಲೆ ಎತ್ತಲಿದೆ. ಹೆಡಗಾಪೂರ ಹೊರವಲಯದ 33 ಎಕರೆ ಜಾಗದಲ್ಲಿ ತಳಿ ಸಂಶೋಧನೆ, ರೈತರಿಗೆ ತರಬೇತಿ ಹಾಗೂ ಅಧಿಕಾರಿ, ಸಿಬ್ಬಂದಿಯ ಸಮುಚ್ಚಯ ನಿರ್ಮಾಣವಾಗಲಿದೆ. ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಂಶೋಧನೆಗೂ ನೆರವಾಗಲಿದೆ. ಒಂದು ವರ್ಷದೊಳಗೆ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.