ಶನಿವಾರ, ಮೇ 8, 2021
25 °C
ಗುರುಕುಲ ಪಬ್ಲಿಕ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ಮಕ್ಕಳ ವಿಚಾರಗಳನ್ನು ಪ್ರೋತ್ಸಾಹಿಸಿ: ಪಟ್ಟದ್ದೇವರು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಬಾಲ್ಯದಿಂದಲೇ ಮಕ್ಕಳು ತೋರ್ಪಡಿಸುವ ಸ್ವತಂತ್ರ ವಿಚಾರಗಳಿಗೆ ಪಾಲಕರು, ಶಿಕ್ಷಕರು ಪ್ರೋತ್ಸಾಹಿಸಿ ಬದುಕಿನಲ್ಲಿ ಉನ್ನತ ಸಾಧನೆ ಮಾಡಲು ಸಹಕರಿಸಬೇಕು ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.

ತಾಲ್ಲೂಕಿನ ಕರಡ್ಯಾಳ ಗುರುಕುಲದ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿನಂತೆ ಬಾಲ್ಯದ ವರ್ತನೆಗಳಿಂದಲೇ ಮಗು, ವಿದ್ಯಾರ್ಥಿ ಮುಂದೆ ಏನಾಗಬಹುದು ಎಂಬುದನ್ನು ಅರಿತುಕೊಳ್ಳಬಹುದು. ಹಾಗಾಗಿ, ಬಾಲ್ಯದಿಂದಲೇ ಮಕ್ಕಳಲ್ಲಿ ಉದಾತ್ತ ಮಾನವೀಯ ಮೌಲ್ಯಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಶಾಲೆ ಮತ್ತು ಮನೆಯ ಮೇಲಿದೆ ಎಂದು ಮಾರ್ಮಿಕವಾಗಿ ನುಡಿದರು.

ವಿದ್ಯಾರ್ಥಿಗಳಿಗೆ ಸಂಸ್ಕಾರಯುತ, ಗುಣಾತ್ಮಕ ಶಿಕ್ಷಣ ಒದಗಿಸುವುದು ಗುರುಕುಲದ ಮೂಲ ಧ್ಯೇಯವಾಗಿದೆ. ಇಂದಿನ ಮಕ್ಕಳಲ್ಲಿ ಅಗಾಧವಾದ ಪ್ರತಿಭೆ ಅಡಗಿದೆ. ಅವರಿಗೆ ಶಿಕ್ಷಕರು, ಪಾಲಕರು ಸೂಕ್ತ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿದಲ್ಲಿ ಅವರು ಜೀವನದಲ್ಲಿ ಎತ್ತರಮಟ್ಟಕ್ಕೆ ಬೆಳೆಯುತ್ತಾರೆ. ನಮ್ಮ ಗುರುಕುಲದಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ದೇಶ, ವಿದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಸಂತಸದ ಸಂಗತಿ ಆಗಿದೆ ಎಂದು ಹೇಳಿದರು.

ವಿಂಗ್ ಕಮಾಂಡರ್ ಸಚಿನ್ ಮಹಾಜನ್ ಮಾತನಾಡಿ,‘ಶಿಕ್ಷಣ ಸಂಸ್ಥೆಗಳ ಉದ್ದೇಶ ಕೇವಲ ಹಣ ಗಳಿಕೆ ಆಗಿರುವ ಸದ್ಯದ ಪರಿಸ್ಥಿತಿಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಶಿಕ್ಷಣ ನೀಡಿ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಸೀಟು ಸಿಗುವಂತೆ ಮಾಡುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆ ಮಾದರಿ ಶಿಕ್ಷಣ ಸಂಸ್ಥೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಮುಖರಾದ ದತ್ತಾತ್ರೇಯ ತೂಗಾಂವ್ಕರ್, ವೈದ್ಯ ಅಮಿತ್ ಅಷ್ಟೂರೆ, ಗುತ್ತಿಗೆದಾರ ಸಂಜೀವಕುಮಾರ ಕನಾಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿಧರ ಕೋಸಂಬೆ, ಪಿಡಿಓ ಚಂದ್ರಶೇಖರ ಬನ್ನಾಳೆ, ಚಂದ್ರಶೇಖರ ವಂಕೆ, ಪ್ರಶಾಂತ ಪಾತ್ರೆ, ವಕೀಲ ವಾಗೇಶ ಪಾಟೀಲ, ಅವಿನಾಶ ಪಾಟೀಲ, ಪ್ರೇಮಕುಮಾರ ಪಾಟೀಲ, ಕುಪೇಂದ್ರ, ಶಿಕ್ಷಕಿಯರಾದ ಹೇಮಾ ಪಾಟೀಲ, ಅಪೇಕ್ಷಾ, ಪ್ರತಿಭಾ, ರಾಜಿಶಾ ಇದ್ದರು.

ಶೈಕ್ಷಣಿಕ ನಿರ್ದೇಶಕಿ ರಜನಿ ರಾವ್ ಸ್ವಾಗತಿಸಿದರು. ಪ್ರಾಚಾರ್ಯ ಆರತಿ ಮಹಾಜನ ವಾರ್ಷಿಕ ವರದಿ ವಾಚಿಸಿದರು. ಸಂಗಪ್ಪ ಸೋಲಮಲ್, ಸುಪ್ರೀಯಾ ಪಾಟೀಲ ನಿರೂಪಿಸಿದರು. ಮೀನಾ ಬಿ. ಪ್ರಭಾ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು