ಬುಧವಾರ, ಮೇ 27, 2020
27 °C
ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್

ಕಮಲನಗರ: ವೈದ್ಯರ ಕೊರತೆ, ಚಿಕಿತ್ಸೆಗೆ ಪರದಾಟ

ಮನೋಜಕುಮಾರ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಪಟ್ಟಣದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಗತ್ಯ ವೈದ್ಯರ ಕೊರತೆ ಇದ್ದು, ರೋಗಿಗಳು ಚಿಕಿತ್ಸೆಗಾಗಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಸಮುದಾಯ ಆರೋಗ್ಯ ಕೇಂದ್ರವು ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಪ್ರಸ್ತುತ 30 ಹಾಸಿಗೆಗಳನ್ನು ಹೊಂದಿದ್ದು, ಇಲ್ಲಿಗೆ ಮುರ್ಕಿ, ದಾಬಕಾ, ಡೋಣಗಾಂವ್, ಬೆಳಕುಣಿ, ಮುಧೋಳ, ತೋರ್ಣಾ, ಹೊಳಸಮುದ್ರ, ಸಂಗಮ, ಸೋನಾಳ ಮತ್ತು ಡಿಗ್ಗಿ ವಿವಿಧ 54 ಗ್ರಾಮಗಳಿಂದ ನಿತ್ಯ 600 ರಿಂದ 800 ಜನರು ಹೊರ ರೋಗಿಗಳಾಗಿ ಚಿಕಿತ್ಸೆ ಪ‍ಡೆಯುತ್ತಿದ್ದಾರೆ.

ಇಲ್ಲಿನ ಆಸ್ಪತ್ರೆಯಲ್ಲಿ ಒಟ್ಟು 35 ಹುದ್ದೆಗಳು ಮಂಜೂರು ಇದ್ದು, ಆ ಪೈಕಿ ಕೇವಲ 16 ಜನ ಸಿಬ್ಬಂದಿ ಇದ್ದಾರೆ. ಇನ್ನೂ 19 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಒಬ್ಬ ಹಿರಿಯ ವೈದ್ಯರು ಮಾತ್ರ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಇಬ್ಬರು ಹಿರಿಯ ವೈದ್ಯರು, ಅರವಳಿ ತಜ್ಞ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞ ವೈದ್ಯರ ಕೊರತೆ ಇದೆ. ಇದರಿಂದಾಗಿ ಚಿಕಿತ್ಸೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಕೆಲವರು ಖಾಸಗಿ ಆಸ್ಪತ್ರೆಗಳ ಮೊರೆ ಹೋಗುತ್ತಿದ್ದಾರೆ.

ಕೊರೊನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರಿಂದಾಗಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. ಪ್ರಸ್ತುತ 150 ರಿಂದ 200 ಜನರು ಮಾತ್ರ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆಗಾಗಿ 6 ಹಾಸಿಗೆಯುಳ್ಳ ಐಸೋಲೇಷನ್ ವಾರ್ಡ್ ಸ್ಥಾಪಿಸಲಾಗಿದೆ. ಆದರೆ, ವೆಂಟಿಲೇಟರ್ ವ್ಯವಸ್ಥೆ ಇಲ್ಲ.

ಸಹಾಯವಾಣಿ ಕೇಂದ್ರ ಆರಂಭ: ಕೊರೊನಾ ವೈರಸ್‌ ಸೋಂಕಿತರ ಚಿಕಿತ್ಸೆ ನೀಡುವ ಕುರಿತು ಹಾಗೂ ಸ್ವ ರಕ್ಷಣೆ ಕುರಿತು ಆಸ್ಪತ್ರೆಯ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದೆ. ಕ್ವಾರಂಟೈನ್‌ನಲ್ಲಿ ಇರುವವರ ಆರೋಗ್ಯ ವಿಚಾರಣೆಗೆ 24X7 ಸಹಾಯವಾಣಿ ಕೇಂದ್ರವನ್ನು ತೆರೆಯಲಾಗಿದೆ. ಸಾರ್ವಜನಿಕರು ಸಹಾಯ, ಸಲಹೆಗಳಿಗಾಗಿ ಮೊಬೈಲ್‌: 94481 00173 ಕ್ಕೆ ಸಂಪರ್ಕಿಸಬಹುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ಮಾಹಿತಿ ನೀಡುತ್ತಾರೆ.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯ ವೈದರ ನೇಮಕ ಮಾಡಬೇಕು ಎಂದು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದು ಡಿಎಚ್‍ಒ ಡಾ. ವಿ.ಜಿ.ರೆಡ್ಡಿ ಹೇಳುತ್ತಾರೆ.

ಆಸ್ಪತ್ರೆಗೆ ಅಗತ್ಯ ಹಿರಿಯ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಕಮಲನಗರ ಗ್ರಾಮ ಪಂಚಾಯಿತಿ ಸದಸ್ಯ ಬಾಲಾಜಿ ತೆಲಂಗ್‌ ಆಗ್ರಹಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು