ಬೀದರ್: ಕಬ್ಬಿನ ಬೆಲೆ ನಿಗದಿ ಸಂಬಂಧ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಗುರುವಾರ ಕಬ್ಬು ಬೆಳೆಗಾರರು, ರೈತರೊಂದಿಗೆ ನಡೆಸಿದ ನಾಲ್ಕನೇ ಸಭೆ ಫಲ ಕೊಟ್ಟಿದ್ದು, ಕಳೆದ ಎಂಟು ದಿನಗಳಿಂದ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಎದುರು ನಡೆಸುತ್ತಿದ್ದ ಅಹೋರಾತ್ರಿ ಧರಣಿಯನ್ನು ರೈತರು ಕೈಬಿಟ್ಟಿದ್ದಾರೆ.

ಬೆಳಗಾವಿ ಮಾದರಿಯಲ್ಲಿ ಪ್ರತಿ ಟನ್ ಕಬ್ಬಿಗೆ ₹3,300 ಕೊಡಬೇಕೆನ್ನುವುದು ರೈತರ ಬೇಡಿಕೆಯಾಗಿತ್ತು. ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಿ, ಎಂಟು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರು. ‘ಬೀದರ್ ಜಿಲ್ಲೆಯಲ್ಲಿ ರಿಕವರಿ ಪ್ರಮಾಣ ಕಡಿಮೆ ಇರುವುದರಿಂದ ಬೆಳಗಾವಿಯಷ್ಟು ದರ ಕೊಡಲಾಗುವುದಿಲ್ಲ’ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ, ರೈತರು ಪಟ್ಟು ಸಡಿಲಿಸಿರಲಿಲ್ಲ. ಜಿಲ್ಲಾಧಿಕಾರಿ ಮೂರು ಸಲ ಕರೆದ ಸಂಧಾನ ಸಭೆ ಫಲ ಕೊಟ್ಟಿರಲಿಲ್ಲ. ಕೊನೆಗೆ ಪ್ರತಿ ಟನ್ನಿಗೆ ₹3,100 ಕೊಡಬೇಕೆಂದು ರೈತರು ಪಟ್ಟು ಹಿಡಿದಿದ್ದರು.

ಗುರುವಾರ ಜಿಲ್ಲಾಧಿಕಾರಿ ಸಭೆ ಕರೆದು, ಬೆಂಗಳೂರಿನಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ಕರೆ ಮಾಡಿ, ಸಕ್ಕರೆ ಕಾರ್ಖಾನೆಗಳಿಂದ ₹2,900 ಹಾಗೂ ರಾಜ್ಯ ಸರ್ಕಾರ ಘೋಷಿಸಿರುವ ₹50 ಸೇರಿಸಿ ಒಟ್ಟು ₹2,950 ಕೊಡಲಾಗುವುದು ಎಂದು ಆಶ್ವಾಸನೆ ನೀಡಿದರು.

ಇತರೆ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಬೀದರ್ ಜಿಲ್ಲೆಯಿಂದ ರೈತರನ್ನು ಒಳಗೊಂಡ ನಿಯೋಗ ಮುಖ್ಯಮಂತ್ರಿ ಬಳಿಗೆ ಕರೆದೊಯ್ಯಲಾಗುವುದು ಎಂದು ಹೇಳಿದರು. ಇದಕ್ಕೆ ರೈತರು ಸಮ್ಮತಿ ಸೂಚಿಸಿ, ಧರಣಿ ಕೈಬಿಡುವ ನಿರ್ಧಾರ ಘೋಷಿಸಿದರು. ಬಳಿಕ ರೈತರು ಜಯಘೋಷ ಹಾಕಿ, ಹಸಿರು ಶಾಲು ಬೀಸುತ್ತ ನಿರ್ಗಮಿಸಿದರು.

‘ಬೆಳಗಾವಿಯಲ್ಲಿ ಎರಡು ಕಬ್ಬಿನ ತಳಿ ಸಂಶೋಧನಾ ಕೇಂದ್ರಗಳಿವೆ. ಕಲ್ಯಾಣ ಕರ್ನಾಟಕದಲ್ಲಿ ಒಂದೂ ಇಲ್ಲ. ಬೀದರ್ ಜಿಲ್ಲೆಯಲ್ಲಿ ಒಂದು ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ನಮ್ಮ ಜಿಲ್ಲೆಯ ಮಣ್ಣು, ನೀರಿನಲ್ಲಿ ಯಾವ ತಳಿ ಬೆಳೆದರೆ ಸೂಕ್ತ ಎನ್ನುವ ಮಾಹಿತಿ ರೈತರಿಗೆ ಲಭಿಸುತ್ತದೆ. ಇದಕ್ಕೆ ಸರ್ಕಾರ ಆದ್ಯತೆ ಕೊಡಬೇಕು’ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಸ್ವಾಮಿ ಸಭೆಯಲ್ಲಿ ಹೇಳಿದ್ದಾರೆ.

ಕಬ್ಬಿನ ತೂಕ, ಇಳುವರಿಯಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ. ಇದನ್ನು ತಡೆಯಲು ಐಎಎಸ್ ಅಧಿಕಾರಿ, ಆಹಾರ ಇಲಾಖೆಯ ಅಧಿಕಾರಿ, ಕೆಮಿಸ್ಟ್ ಹಾಗೂ ರೈತರನ್ನು ಒಳಗೊಂಡ ಸಮಿತಿ ರಚಿಸಬೇಕೆಂಬ ಎರಡು ಪ್ರಮುಖ ಬೇಡಿಕೆಗಳನ್ನು ಇಡಲಾಗಿದೆ. ಈ ಕುರಿತು ಸಿಎಂ ಬಳಿ ನಿಯೋಗದಲ್ಲಿ ತೆರಳಿ, ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ಆಶ್ವಾಸನೆ ನೀಡಿರುವುದರಿಂದ ಧರಣಿ ಕೈಬಿಡಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಈಗಾಗಲೇ ಹಲವೆಡೆ ಕಬ್ಬು ನುರಿಸುವ ಕೆಲಸ ಆರಂಭಗೊಂಡಿದೆ. ಜಿಲ್ಲೆಯಲ್ಲಿ ಚಳಿ ಕೂಡ ಜಾಸ್ತಿಯಾಗಿದೆ. ಧರಣಿಯಿಂದ ರೈತರಿಗೂ ಸಮಸ್ಯೆಯಾಗುತ್ತಿತ್ತು. ಜಿಲ್ಲಾಡಳಿತ ಕೂಡ ನಮ್ಮ ಬೇಡಿಕೆಗಿಂತ ₹150 ಕಡಿಮೆ ಕೊಟ್ಟಿದೆ. ಆದರೆ, ಈ ನಿರ್ಧಾರ ಸಮಾಧಾನ ತಂದಿದೆ. ಪ್ರತಿ ಕ್ವಿಂಟಲ್ ಸಕ್ಕರೆಗೆ ಕೇಂದ್ರ ಸರ್ಕಾರ ₹4,000 ಬೆಂಬಲ ಬೆಲೆ ಘೋಷಿಸಿರುವುದು ಸ್ವಾಗತಾರ್ಹ. ಕರ್ನಾಟಕದ ರೈತರ ಹೋರಾಟದಿಂದ ಇದು ಸಾಧ್ಯವಾಗಿದೆ. ಇಡೀ ದೇಶದ ಕಬ್ಬು ಬೆಳೆಗಾರರಿಗೆ ಲಾಭವಾಗಿದೆ ಎಂದಿದ್ದಾರೆ.

ಮುಖಂಡರಾದ ಸಿದ್ರಾಮಪ್ಪ ಆಣದೂರೆ, ಶಂಕ್ರೆಪ್ಪ ಪಾರಾ, ವಿಠ್ಠಲರೆಡ್ಡಿ ಆಣದೂರ, ಷಣ್ಮುಖಪ್ಪ, ಪ್ರವೀಣ ಕುಲಕರ್ಣಿ, ಬಸವರಾಜ ಅಷ್ಟೂರ್, ಕೊಂಡಿಬಾರಾವ್ ಪಾಂಡ್ರೆ, ವೈಜಿನಾಥ ಬುಯ್ಯಾ, ಶಂಕರ ಪಾಟೀಲ ಅತಿವಾಳ, ಶಿವರಾಜ ಪಾಟೀಲ ಅತಿವಾಳ, ವಿಠ್ಠಲರಾವ್ ಮೇತ್ರೆ, ಕಲ್ಲಪ್ಪ, ಶಿವಲೀಲಾ ಹೊಳಸಮುದ್ರ ಮತ್ತಿತರರು ಇದ್ದರು.

ಸರ್ಕಾರಕ್ಕೆ ಪ್ರಸ್ತಾವ–ಜಿಲ್ಲಾಧಿಕಾರಿ

‘ಬೀದರ್ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹2,950 ಕೊಡಲು ಒಪ್ಪಿಸಲಾಗುವುದು ಎಂದು ಸಚಿವ ಈಶ್ವರ ಬಿ. ಖಂಡ್ರೆಯವರು ರೈತರಿಗೆ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕಬ್ಬಿನ ತಳಿ ಸಂಶೋಧನಾ ಕೇಂದ್ರ ಸ್ಥಾಪಿಸಬೇಕು. ಕಾರ್ಖಾನೆಗಳಲ್ಲಿ ತೂಕ ಮತ್ತು ಇಳುವರಿ ಪರಿಶೀಲನೆಗೆ ಸಮಿತಿ ರಚಿಸಬೇಕೆಂಬ ಎರಡು ಬೇಡಿಕೆಗಳನ್ನು ರೈತರು ಇಟ್ಟಿದ್ದರು. ಇದರ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ‘ಪ್ರಜಾವಾಣಿ‘ಗೆ ತಿಳಿಸಿದ್ದಾರೆ.

ರೈತರ ಹೋರಾಟಕ್ಕೆ ಸ್ಪಂದಿಸಿದ ಸಚಿವ ಈಶ್ವರ ಬಿ. ಖಂಡ್ರೆ, ಬೆಂಬಲ ಸೂಚಿಸಿದ ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳಿಗೆ ಇಡೀ ರೈತ ಕುಲ ಕೃತಜ್ಞತೆ ಸಲ್ಲಿಸುತ್ತದೆ.
–ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧ್ಯಕ್ಷ, ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.