ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್ | ಅಂತರ್ಜಲ ಮಟ್ಟ ಕುಸಿತ, 29 ಗ್ರಾಮಗಳಿಗೆ ಟ್ಯಾಂಕರ್‌ ನೀರು

ಜಿಲ್ಲೆಯ 63 ಗ್ರಾಮಗಳಿಗೆ ಕೊಳವೆಬಾವಿ ನೀರೇ ಗತಿ
Last Updated 21 ಮೇ 2020, 19:30 IST
ಅಕ್ಷರ ಗಾತ್ರ

ಬೀದರ್‌: ಮಳೆಗಾಲ ಶುರುವಾಗಲು ಇನ್ನೂ 20 ದಿನ ಬಾಕಿ ಇದೆ. ಭಾಲ್ಕಿ, ಬೀದರ್‌ ಹಾಗೂ ಕಮಲನಗರ ತಾಲ್ಲೂಕುಗಳ ಬಹುತೇಕ ಕಡೆ ಅಂತರ್ಜಲ ಮಟ್ಟ 600 ಅಡಿ ಆಳಕ್ಕೆ ಕುಸಿದಿದೆ. ಕೆರೆ ಕಟ್ಟೆಗಳಲ್ಲೂ ನೀರಿಲ್ಲದ ಕಾರಣ ಜಿಲ್ಲೆಯ 63 ಗ್ರಾಮಗಳ ಜನರು ಖಾಸಗಿ ಕೊಳವೆಬಾವಿಗಳನ್ನೇ ಅವಲಂಬಿಸಬೇಕಾಗಿದೆ.

ಭಾಲ್ಕಿ ತಾಲ್ಲೂಕಿನ 18, ಔರಾದ್‌ ತಾಲ್ಲೂಕಿನ 11, ಬೀದರ್‌ ಹಾಗೂ ಬಸವಕಲ್ಯಾಣ ತಾಲ್ಲೂಕಿನ ತಲಾ ಒಂದು ಗ್ರಾಮದಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಶಾಸಕ ಈಶ್ವರ ಖಂಡ್ರೆ ಅವರು, ಭಾಲ್ಕಿ ವಿಧಾನಸಭಾ ಕ್ಷೇತ್ರ ಜನರ ಕುಡಿಯುವ ನೀರಿನ ಸಮಸ್ಯೆ ಅರಿತು ತಕ್ಷಣ ವೈಯಕ್ತಿಕ ಟ್ಯಾಂಕರ್‌ ಮೂಲಕ ನೀರು ಪೂರೈಸಲು ಶುರು ಮಾಡಿದ್ದರು. ಇದೀಗ ಜಿಲ್ಲಾಡಳಿತ ಜನರಿಗೆ ನೀರು ಕೊಡುತ್ತಿದೆ.

ಭಾಲ್ಕಿ ತಾಲ್ಲೂಕಿನ ಜೋಳದಾಬಕಾ, ತೇಗಂಪೂರ, ಭಾತಂಬ್ರಾ, ಕೇರೂರ್, ಕೇಸರಜವಳಗಾ, ಚಿಕ್ಕಲಚಂದ, ಮರೂರ್, ಧನ್ನೂರ್‌ (ಎಚ್), ನಿಡೇಬಾನ್‌, ಕೊಟಗೇರಾ, ಕಣಜಿ, ಪಾಂಡರಿ, ಹಲಬರ್ಗಾ, ನೇಳಗಿ, ಬೀದರ್‌ ತಾಲ್ಲೂಕಿನ ಬೆನಕಹಳ್ಳಿ ಹಾಗೂ ಬಸವಕಲ್ಯಾಣ ತಾಲ್ಲೂಕಿನ ಗೊರ್ಟಾ (ಬಿ) ಗ್ರಾಮಕ್ಕೆ ನಿತ್ಯ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ಅವಿಭಜಿತ ಔರಾದ್‌ ತಾಲ್ಲೂಕಿನ ಜಮಗಿ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ತಾಂಡಾ, ಧಾಕು ತಾಂಡಾ, ಗಂಗಾರಾಮ ತಾಂಡಾ,, ಗುಡಪಳ್ಳಿಯ ಗಾಂಧಿನಗರ, ರೂಪ್ಲಾ ತಾಂಡಾ, ಸಂತಪುರ, ಏಕಲಾರ ತಾಂಡಾ, ಚಿಕಲಿ(ಯು) ಪಂಚಾಯಿತಿ ವ್ಯಾಪ್ತಿಯ ಕಿಶನ್ ನಾಯ್ಕ ತಾಂಡಾ, ವಾಸುರಾಮನ್‌ ತಾಂಡಾ, ಸೋಮಲಾನಾಯ್ಕ ತಾಂಡದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ.

ಭಾಲ್ಕಿ ತಾಲ್ಲೂಕಿನ ವರವಟ್ಟಿ, ಇಂಚೂರ್, ಖಟಕಚಿಂಚೋಳಿ, ಮೊರಂಬಿ, ಶಿವಣಿ, ದಾಡಗಿ, ವಾಂಜರಖೇಡಾ, ಹಲಬರ್ಗಾ, ಕೋನ ಮೇಳಕುಂದಾ, ಸಾಯಿಗಾಂವ, ಅತ್ತರಗಾ, ಏಣಕೂರ್, ಗೋರಚಿಂಚೋಳಿ, ಬಾಳೂರ ಬೀರಿ(ಕೆ), ಅಳವಾಯಿ, ನಿಟ್ಟೂರ್, ಸಿದ್ದೇಶ್ವರ, ತೆಲಗಾಂವ, ಬ್ಯಾಲಹಳ್ಳಿ ಹಾಗೂ ತೂಗಾಂವ(ಎಚ್) ಗ್ರಾಮಸ್ಥರು ಖಾಸಗಿ ಕೊಳವೆ ಬಾವಿಗಳನ್ನೇ ಆಶ್ರಯಿಸಿದ್ದಾರೆ.

ಹುಮನಾಬಾದ್‌ ತಾಲ್ಲೂಕಿನಲ್ಲಿ ನಂದಗಾಂವದಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಇದೆ. ಚಿಟಗುಪ್ಪ ತಾಲ್ಲೂಕಿನ ಬೆಳಕೇರಾ, ಬೇಮಳಖೇಡಾ, ಮೀನಕೇರಾ ಹಾಗೂ ಒಳಖಿಂಡಿ ಗ್ರಾಮಗಳಿಗೆ ಖಾಸಗಿ ಕೊಳವೆಬಾವಿಯ ಮೂಲಕ ನೀರು ಪೂರೈಕೆ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ.

ಬೀದರ್‌ ತಾಲ್ಲೂಕಿನ ಮಲ್ಕಾಪುರ, ನಾಗೂರಾ, ಹೊಕ್ರಾಣಾ(ಬಿ), ಬರೂರ್, ರೇಕುಳಗಿ, ಗಾದಗಿ, ಚಿಮಕೋಡ, ಕಪಲಾಪುರ, ಅಷ್ಟೂರ್, ಅಲಿಯಂಬರ್‌ದಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ತಾಲ್ಲೂಕಿನ ಬಹುತೇಕ ಕೆರೆ ಕಟ್ಟೆಗಳು ಖಾಲಿಯಾಗಿವೆ. ಕಾರಂಜಾ ಜಲಾಶಯದಲ್ಲೂ ನೀರು ತಳಮಟ್ಟಕ್ಕೆ ತಲುಪಿದೆ. ಕೆರೆಗಳು ಬತ್ತಿರುವ ಕಾರಣ ಅಂತರ್ಜಲಮಟ್ಟ ಕುಸಿದು ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದೆ.

‘ಡಿಸೆಂಬರ್‌ನಲ್ಲೇ ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ಪಡೆಯಲಾಗಿತ್ತು. ಮಾರ್ಚ್‌ನಲ್ಲೂ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿ ಮಾಡಿ ಮಾಹಿತಿ ಪಡೆದು ಅಗತ್ಯವಿರುವ ಕಡೆಗೆ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದೆ. ಖಾಸಗಿ ಕೊಳವೆಬಾವಿಗಳಿಂದಲೂ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌ ಹೇಳುತ್ತಾರೆ.

ಬೀದರ್ ನಗರದಲ್ಲಿ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗಿದೆ. ಕಾರಂಜಾ ಜಲಾಶಯದಲ್ಲೂ ನೀರಿನ ಪ್ರಮಾಣ ಕಡಿಮೆ ಇರುವ ಕಾರಣ ಪ್ರತಿ ಎರಡು ದಿನಕ್ಕೊಮ್ಮೆ ನಗರದಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ನಗರದ ಹಕ್‌ ಕಾಲೊನಿ, ಸಿಎಂಸಿ ಕಾಲೊನಿ ಹಾಗೂ ಹೈದರಾಬಾದ್ ರಸ್ತೆಯ ಕಾಲೊನಿಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT