ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾಲ್ಕಿ | ವಿದ್ಯಾರ್ಥಿಗೆ ಥಳಿಸಿದ ಆರೋಪ: ಶಾಲೆಗೆ ಶೋಕಾಸ್ ನೋಟೀಸ್ ನೀಡಲು ಸೂಚನೆ

ನಿಟ್ಟೂರ (ಬಿ) ವೀರಭದ್ರೇಶ್ವರ ಶಾಲೆಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ
Published 22 ಜೂನ್ 2024, 15:34 IST
Last Updated 22 ಜೂನ್ 2024, 15:34 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ನಿಟ್ಟೂರ (ಬಿ) ಗ್ರಾಮದ ವೀರಭದ್ರೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿಗೆ ಥಳಿಸಿದ ಆರೋಪದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಶನಿವಾರ ಶಾಲೆಗೆ ಭೇಟಿ ನೀಡಿದ ಅವರು,‘ಶಿಕ್ಷಕರು ಮಕ್ಕಳಿಗೆ ಹೊಡೆಯುವುದು, ಥಳಿಸುವುದು, ಹಲ್ಲೆ ನಡೆಸುವುದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ. ಯಾವ ಆಧಾರದ ಮೇಲೆ ಶಿಕ್ಷಕರು ಮಗುವಿಗೆ ಥಳಿಸಿದ್ದಾರೆ. ಮಗುವಿಗೆ ಹೆಚ್ಚು ಕಡಿಮೆಯಾದರೆ ಯಾರೂ ಹೊಣೆ’ ಎಂದು ಪ್ರಶ್ನಿಸಿದರು.

ಮಗುವಿನ ಮನೆಗೆ ಭೇಟಿ ನೀಡಿದ್ದು ಮಗುವಿನ ಬೆನ್ನು, ತೊಡೆ, ಕಾಲಿನ ಮೇಲೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಮಗುವನ್ನು ಥಳಿಸುವ ಸಂದರ್ಭದಲ್ಲಿ ಉಳಿದ ಶಿಕ್ಷಕರು ತಡೆಯುವ ಪ್ರಯತ್ನ ಏಕೆ ಮಾಡಲಿಲ್ಲ. ಇದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.

ಪ್ರಕರಣ ಬೆಳಕಿಗೆ ಬಂದ ಮೇಲೆ ಥಳಿಸಿದ ಶಿಕ್ಷಕನನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಆದರೆ ಘಟನೆ ನಡೆದು ಎರಡ್ಮೂರು ದಿನಗಳು ಕಳೆದರೂ ಆಡಳಿತ ಮಂಡಳಿ ಶಿಕ್ಷಕನ ವಿರುದ್ಧ ಕ್ರಮ ಜರುಗಿಸಲು ಏಕೆ ಹಿಂದೇಟು ಹಾಕಿದೆ. ಥಳಿತಕ್ಕೊಳಗಾದ ವಿದ್ಯಾರ್ಥಿ ಎಂಟನೇ ತರಗತಿಯಲ್ಲಿ ಓದುತ್ತಿದ್ದು, ಶಾಲೆಯಲ್ಲಿನ ಸಿಸಿ ಟಿವಿ ಕ್ಯಾಮೆರಾದಲ್ಲಿ ವಿದ್ಯಾರ್ಥಿಗೆ ಥಳಿಸಿದ ದೃಶ್ಯಾವಳಿ ಸೆರೆಯಾದರೂ ಇದನ್ನು ಮುಚ್ಚಿಡುವ ಪ್ರಯತ್ನ ಮಾಡಲಾಗುತ್ತಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೂಕ್ತ ತನಿಖೆ ನಡೆದರಷ್ಟೇ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದರು.

ಶಾಲೆಯಲ್ಲಿ ವಿವಿಧ ತರಗತಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಇಲ್ಲದಿರುವುದು ಕಂಡುಬಂದಿದೆ. ಶಿಕ್ಷಣ ಹಕ್ಕು ಕಾಯಿದೆ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ. ತರಗತಿ ಕೋಣೆಗಳಲ್ಲಿ ನಿಗದಿಗಿಂತ ಹೆಚ್ಚು ಮಕ್ಕಳನ್ನು ಕೂಡಿಸಿ ಪಾಠ ಮಾಡಲಾಗುತ್ತಿದೆ. ಶೆಡ್‍ಗಳಲ್ಲಿ ತರಗತಿ ನಡೆಸುವುದು. ಸೂಕ್ತ ಶೌಚಾಲಯ ಇಲ್ಲದಿರುವುದು. ಸುರಕ್ಷಿತ ಕ್ರಮಗಳನ್ನು ಅನುಸರಿಸದಿರುವುದು ಕಂಡು ಬಂದಿದೆ. ಇವೆಲ್ಲ ಮಾನದಂಡಗಳನ್ನು ಆಧರಿಸಿ ಕೂಡಲೇ ಶಾಲೆಗೆ ಶೋಕಾಸ್ ನೋಟಿಸ್ ನೀಡಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಚಿತ್ರ ನಿಡೋದಾ ಗ್ರಾಮದಲ್ಲಿ ಶಿಕ್ಷಕನಿಂದ ಥಳಿತಕ್ಕೊಳಾದ ಮಗುವಿನ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು
ಚಿತ್ರ ನಿಡೋದಾ ಗ್ರಾಮದಲ್ಲಿ ಶಿಕ್ಷಕನಿಂದ ಥಳಿತಕ್ಕೊಳಾದ ಮಗುವಿನ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಮಗುವಿನ ಆರೋಗ್ಯ ವಿಚಾರಿಸಿದರು

ಡಿಡಿಪಿಐ ಸಲೀಂ ಪಾಷಾ, ಬಿಇಒ ಮನೋಹರ ಹೋಳ್ಕರ್, ಧನ್ನೂರಾ ಪೊಲೀಸ್ ಠಾಣೆ ಪಿಎಸ್‍ಐ ವಿಶ್ವರಾಧ್ಯ ಹಾಜರಿದ್ದರು.

ಶಿಕ್ಷಕರು ಮಗುವನ್ನು ಥಳಿಸಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ. ತನಿಖಾ ವರದಿ ಬಂದ ಬಳಿಕ ಶಾಲೆಯ ಮಾನ್ಯತೆ ರದ್ದತಿಗೆ ಶಿಫಾರಸು ಮಾಡಲಾಗುವುದು. ಮಗುವನ್ನು ಥಳಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು ಬಾಲ ನ್ಯಾಯ ಕಾಯ್ದೆಯಡಿ ದೂರು ದಾಖಲಿಸಿ ಚಾರ್ಜ್‍ಶೀಟ್ ಸಲ್ಲಿಸಲು ಸೂಚನೆ ನೀಡಲಾಗಿದೆ
ಶಶಿಧರ ಕೋಸಂಬೆ ಸದಸ್ಯರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT