ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಇಂದಿನಿಂದ ಕನ್ನಡ ಸಾಹಿತ್ಯ ಡಿಂಡಿಮ

ಬಸವಲಿಂಗ ಪಟ್ಟದ್ದೇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ
Published 8 ಮಾರ್ಚ್ 2024, 23:30 IST
Last Updated 8 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೀದರ್‌: ಆರ್ಥಿಕ ಮುಗ್ಗಟ್ಟಿನಿಂದ ಸತತ ಎರಡು ಸಲ ಮುಂದೂಡಿಕೆಯಾಗಿದ್ದ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊನೆಗೂ ಕಾಲ ಕೂಡಿ ಬಂದಿದೆ.

‘ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಅಧ್ಯಕ್ಷತೆಯಲ್ಲಿ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶನಿವಾರ, ಭಾನುವಾರ (ಮಾ. 9,10) ಸಮ್ಮೇಳನ ನಡೆಯಲಿದ್ದು, ಈಗಾಗಲೇ ಸಿದ್ಧತೆ ಪೂರ್ಣಗೊಂಡಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.

‘ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಸಮ್ಮೇಳನ ಅರ್ಥಪೂರ್ಣವಾಗಿಸಲು ಬಸವಲಿಂಗ ಪಟ್ಟದ್ದೇವರ ಜೀವನ ಮತ್ತು ಸಾಧನೆಯ ಛಾಯಾಚಿತ್ರ ಪ್ರದರ್ಶನ, ಪುಸ್ತಕ ಸಂತೆ, ಚಿತ್ರ ಸಂತೆ, ಚಿತ್ರಕಲಾ ಸ್ಪರ್ಧೆ, ಉದ್ಯೋಗ ಮೇಳ, ಆರೋಗ್ಯ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಶುಕ್ರವಾರ ಮಾಹಿತಿ ಹಂಚಿಕೊಂಡಿದ್ದಾರೆ.

ಮುಖ್ಯ ವೇದಿಕೆಗೆ ರಾಜ್ಯದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ, ಮಂಟಪಕ್ಕೆ ಡಾ.ಚನ್ನಬಸವ ಪಟ್ಟದ್ದೇವರು, ಮಹಾದ್ವಾರಕ್ಕೆ ಡಾ.ಜಯದೇವಿ ತಾಯಿ ಲಿಗಾಡೆ ಹಾಗೂ ಪ್ರಭುರಾವ್ ಕಂಬಳಿವಾಲೆ ಅವರ ಹೆಸರು ಇಡಲಾಗಿದೆ. ಸಮ್ಮೇಳನದಲ್ಲಿ ಪಾಲ್ಗೊಳ್ಳುವವರಿಗೆ ಎರಡು ದಿನ ವಿಭಿನ್ನ ಖಾದ್ಯಗಳನ್ನು ಒಳಗೊಂಡ ಊಟದ ವ್ಯವಸ್ಥೆ ಇರಲಿದೆ. ಒಂದು ದಿನ ಬಿಳಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿ, ಕುಟ್ಟಿದ ಗೋಧಿ ಹುಗ್ಗಿ, ಅನ್ನ, ಸಾಂಬಾರು, ಮಿರ್ಚಿ, ಹಪ್ಪಳ ಮಜ್ಜಿಗೆ ಇರಲಿದೆ. ಮಿಕ್ಸ್ ಪಲ್ಯ, ಚಪಾತಿ, ಅನ್ನ, ಸಾಂಬಾರು, ಲಡ್ಡು, ಅಂಬಲಿ ಇನ್ನೊಂದು ದಿನದ ಭೋಜನದ ಭಾಗವಾಗಿರಲಿವೆ ಎಂದು ತಿಳಿಸಿದ್ದಾರೆ.

ಮೊದಲ ದಿನ ಏನೇನು ಇರಲಿದೆ?

ಶನಿವಾರ ಬೆಳಿಗ್ಗೆ 8ಕ್ಕೆ ರಂಗ ಮಂದಿರದಲ್ಲಿ ರಾಷ್ಟ್ರ ಧ್ವಜಾರೋಹಣದೊಂದಿಗೆ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ರಾಷ್ಟ್ರ ಧ್ವಜಾರೋಹಣ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ನಾಡ ಧ್ವಜಾರೋಹಣ ಹಾಗೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಪರಿಷತ್ ಧ್ವಜಾರೋಹಣ ನೆರವೇರಿಸುವರು.

ಬೆಳಿಗ್ಗೆ 8.30ಕ್ಕೆ ಜಿಲ್ಲಾ ಕನ್ನಡ ಭವನದಲ್ಲಿ ಕನ್ನಡ ತಾಯಿ ಭುವನೇಶ್ವರಿ ಪೂಜೆ ಬಸವಣ್ಣ ಚನ್ನಬಸವ ಪಟ್ಟದ್ದೇವರು ಹಾಗೂ ಜಯದೇವಿ ತಾಯಿ ಲಿಗಾಡೆ ಅವರ ಪ್ರತಿಮೆಗಳ ಅನಾವರಣ ನಡೆಯಲಿದೆ. ಬೆಳಿಗ್ಗೆ 9ಕ್ಕೆ ಅಲಂಕೃತ ರಥದಲ್ಲಿ ಗುಂಪಾ ಸಮೀಪದ ಕರ್ನಾಟಕ ಪದವಿಪೂರ್ವ ಕಾಲೇಜಿನಿಂದ ರಂಗ ಮಂದಿರದವರೆಗೆ ತಾಯಿ ಭುವೇಶ್ವರಿ ಹಾಗೂ ಸಮ್ಮೇಳನದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಭವ್ಯ ಮೆರವಣಿಗೆ ಜರುಗಲಿದೆ. ‌

ಬೆಳಿಗ್ಗೆ 11.30ಕ್ಕೆ ರಂಗ ಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಮನು ಬಳಿಗಾರ ಸಮ್ಮೇಳನ ಉದ್ಘಾಟಿಸುವರು. ಹುಲಸೂರಿನ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ಹಾರಕೂಡದ ಚನ್ನವೀರ ಶಿವಾಚಾರ್ಯರು ನೇತೃತ್ವ ಭಾಲ್ಕಿಯ ಗುರುಬಸವ ಪಟ್ಟದ್ದೇವರು ಉಪಸ್ಥಿತರಿರುವರು. ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷೀಯ ನುಡಿ ಆಡುವರು. ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆ ವಹಿಸುವರು. 

ಪೌರಾಡಳಿತ ಸಚಿವ ರಹೀಂ ಖಾನ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕ ಪ್ರಭು ಚವಾಣ್ ಚಿತ್ರ ಸಂತೆ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಪರಿಷತ್ ಧ್ವಜ ಹಸ್ತಾಂತರಿಸುವರು. ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಪುಸ್ತಕ ಬಿಡುಗಡೆ ಮಾಡುವರು.

ಶಾಸಕ ಶರಣು ಸಲಗರ ಪುಸ್ತಕ ಮಳಿಗೆ ಉದ್ಘಾಟಿಸುವರು. ಶಾಸಕ ಡಾ.ಸಿದ್ಧಲಿಂಗಪ್ಪ ಪಾಟೀಲ ವಸ್ತು ಪ್ರದರ್ಶನ ಉದ್ಘಾಟಿಸುವರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಆಶಯ ನುಡಿ ಆಡುವರು.

ಮಧ್ಯಾಹ್ನ 2ಕ್ಕೆ ಸಾಂಸ್ಕೃತಿಕ ನಾಯಕ ಬಸವಣ್ಣ: ಕನ್ನಡದ ಆಸ್ಮಿತೆ ಕುರಿತ ಪ್ರಥಮ ವಿಶೇಷ ಗೋಷ್ಠಿ ಮಧ್ಯಾಹ್ನ 3.30ಕ್ಕೆ ಸಮ್ಮೇಳನಾಧ್ಯಕ್ಷರ ಜೀವನ-ಸಾಧನೆಯ ದ್ವಿತೀಯ ಗೋಷ್ಠಿ ಸಂಜೆ 4.30ಕ್ಕೆ ಕವಿಗೋಷ್ಠಿ 6.30ಕ್ಕೆ ಸಾಂಸ್ಕೃತಿಕ ಸಂಜೆ ನಡೆಯಲಿದೆ.

ಎರಡನೇ ದಿನ ಏನೇನು ಇರಲಿದೆ? ಮಾ. 10ರಂದು ಬೆಳಿಗ್ಗೆ 10ಕ್ಕೆ ಕವಿಗೋಷ್ಠಿ ಮಧ್ಯಾಹ್ನ 12ಕ್ಕೆ ಗೋಷ್ಠಿ ಮಧ್ಯಾಹ್ನ 2ಕ್ಕೆ ಸಮಕಾಲೀನ ಕನ್ನಡ: ಸವಾಲು ಮತ್ತು ಸಾಧ್ಯತೆಗಳು ಕುರಿತ ಗೋಷ್ಠಿ ಸಂಜೆ 4ಕ್ಕೆ ಸಂವಿಧಾನದ ಅಮೃತ ಮಹೋತ್ಸವ ಗೋಷ್ಠಿ ಸಂಜೆ 5ಕ್ಕೆ ಕವಿಗೋಷ್ಠಿ ಸಂಜೆ 7ಕ್ಕೆ ಬಹಿರಂಗ ಅಧಿವೇಶನ ಸಂಜೆ 7.15ಕ್ಕೆ ಸನ್ಮಾನ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT