ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಎಬಿವಿಪಿ ರಾಜ್ಯ ಸಮ್ಮೇಳನಕ್ಕೆ ಚಾಲನೆ

ಆರು ತಿಂಗಳಲ್ಲಿ 6,500 ತರಗತಿ ಕೊಠಡಿಗಳು ಸ್ಮಾರ್ಟ್‌– ಸಚಿವ ಅಶ್ವತ್ಥನಾರಾಯಣ
Last Updated 15 ಫೆಬ್ರುವರಿ 2022, 13:12 IST
ಅಕ್ಷರ ಗಾತ್ರ

ಚಾಮರಾಜನಗರ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ (ಎಬಿವಿಪಿ) 41ನೇ ರಾಜ್ಯ ಸಮ್ಮೇಳನಕ್ಕೆ ಮಂಗಳವಾರ ನಗರದಲ್ಲಿ ಚಾಲನೆ ದೊರೆಯಿತು.

ಎರಡು ದಿನಗಳ ಸಮ್ಮೇಳನವನ್ನು ಉನ್ನತ ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಐಟಿ, ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ’ದೇಶದಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಣ್ಣದ ಶಿಕ್ಷಣ, ಕೌಶಲ ಅಭಿವೃದ್ಧಿ, ಗುಣಮಟ್ಟದ ಆವಿಷ್ಕಾರಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿದೆ. ಶಿಕ್ಷಣದಲ್ಲಿ ವರ್ಚ್ಯುವಲ್‌ ವ್ಯವಸ್ಥೆ, ಡಿಜಿಟಲೀಕರಣಕ್ಕೆ ಆದ್ಯತೆ ನೀಡಲಾಗಿದೆ.ವಿಶ್ವವಿದ್ಯಾಲಯ ನಿರ್ವಹಣೆಯಿಂದ ಹಿಡಿದು ಬೋಧನೆ ಮತ್ತು ಅಂಕಪಟ್ಟಿ ವಿತರಣೆವರೆಗೆ ಎಲ್ಲವನ್ನೂ ತಂತ್ರಜ್ಞಾನದ ನೆರವಿನಿಂದ ಪಾರದರ್ಶಕಗೊಳಿಸಲಾಗಿದೆ‘ ಎಂದರು.

’ರಾಜ್ಯದಲ್ಲಿ ಕಲಿಕಾ ನಿರ್ವಹಣಾ ವ್ಯವಸ್ಥೆಯನ್ನು (ಲರ್ನಿಂಗ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌) ಅಭಿವೃದ್ಧಿ ಪಡಿಸಲಾಗಿದ್ದು, 430 ಪದವಿ ಕಾಲೇಜುಗಳು, 14 ಎಂಜಿನಿಯರಿಂಗ್‌ ಕಾಲೇಜುಗಳು ಹಾಗೂ 70 ಪಾಲಿಟೆಕ್ನಿಕ್‌ ಕಾಲೇಜುಗಳನ್ನು ಇದರ ವ್ಯಾಪ್ತಿಯಲ್ಲಿ ತರಲಾಗಿದೆ. ಒಟ್ಟು 8,000 ತರಗತಿ ಕೊಠಡಿಗಳಿದ್ದು (ಕ್ಲಾಸ್‌ ರೂಂ) ಎಲ್ಲವನ್ನೂ ಸ್ಮಾರ್ಟ್‌ ಕ್ಲಾಸ್‌ಗಳನ್ನಾಗಿ ಮಾಡಲು ಕ್ರಮ ವಹಿಸಲಾಗಿದೆ. ಈಗಾಗಲೇ 2,500 ಕೊಠಡಿಗಳನ್ನು ಸ್ಲಾರ್ಟ್‌ಕ್ಲಾಸ್‌ಗಳನ್ನಾಗಿ ಮಾಡಲಾಗಿದೆ. ಇನ್ನು ಆರು ತಿಂಗಳಲ್ಲಿ ಉಳಿದ 6,500 ಕೊಠಡಿಗಳನ್ನು ಸ್ಮಾರ್ಟ್‌ಕ್ಲಾಸ್‌ಗಳನ್ನಾಗಿ ಪರಿವರ್ತಿಸಲಾಗುವುದು‘ ಎಂದರು.

’ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರು ಹಾಗೂ ವಿದ್ಯಾರ್ಥಿಗಳ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದೆ. ಹೊಸ ಶಿಕ್ಷಣ ನೀತಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೂಪಿಸಿರುವ ಚಾರಿತ್ರಿಕ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಎಬಿವಿಪಿ ಮಾಡಬೇಕು‘ ಎಂದು ಅಶ್ವತ್ಥನಾರಾಯಣ ಅವರು ಹೇಳಿದರು.

ಈ ಸಾಲಿನಲ್ಲಿ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾಗಿರುವ ವಿಜ್ಞಾನಿ ಡಾ.ಎಸ್‌.ಅಯ್ಯಪ್ಪನ್‌, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಡಾ.ಛಗನ್ ಬಾಯ್‌ ಪಟೇಲ್‌, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌, ಮೈಸೂರಿನ ಪ್ರಲಕ್ಷ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ನಿರ್ದೇಶಕ ಡಾ.ಮೋಹನ್‌, ಎಬಿವಿಪಿ ರಾಜ್ಯ ಅಧ್ಯಕ್ಷ ಡಾ.ವೀರೇಶ ಬಾಳಿಕಾಯಿ, ಕಾರ್ಯದರ್ಶಿ ಪ್ರತೀಕ ಮಾಳಿ, ಸಮ್ಮೇಳನಾಧ್ಯಕ್ಷೆ ಭಾಗ್ಯಶ್ರೀ ಇದ್ದರು.

ರಾಜ್ಯದ ಎಲ್ಲ ಜಿಲ್ಲೆಗಳ ಎಬಿವಿಪಿ ಸಂಚಾಲಕರು,ಪ್ರಮುಖರು ಹಾಗೂ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT