ಬುಧವಾರ, ಸೆಪ್ಟೆಂಬರ್ 30, 2020
20 °C
ಜಿಲ್ಲಾಡಳಿತದ ಮುಂದೆ ಬೃಹತ್‌ ಸವಾಲು

ಕೊಳ್ಳೇಗಾಲ: ನದಿ ಪಾತ್ರದ ಜಮೀನುಗಳಿಗೆ ನುಗ್ಗಿದ ಕಾವೇರಿ ನೀರು

ಅವಿನ್ ಪ್ರಕಾಶ್ ವಿ. Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ತಾಲ್ಲೂಕಿನ ನದಿ ತೀರದಲ್ಲಿರುವ ಕೆಲವು ಗ್ರಾಮಗಳ ಜಮೀನುಗಳಿಗೆ ಭಾನುವಾರ ನೀರು ನುಗ್ಗಿದ್ದು, ನೀರಿನ ಹರಿವು ಇನ್ನಷ್ಟು ಹೆಚ್ಚಿದರೆ ಗ್ರಾಮಗಳು ಜಲಾವೃತವಾಗುವುದು ಖಚಿತ.

ಈ ಬಾರಿ ನೆರೆ ಪರಿಸ್ಥಿತಿ ಬಿಗಡಾಯಿಸಿದರೆ, ಕೋವಿಡ್‌ ಹಾವಳಿಯ ನಡುವೆ ಪ್ರವಾಹ ಸ್ಥಿತಿ ನಿಭಾವಣೆ ಜಿಲ್ಲಾಡಳಿತಕ್ಕೆ ಬೃಹತ್‌ ಸವಾಲಾಗಿ ಪರಿಣಮಿಸಲಿದೆ.

ಕಳೆದ ವರ್ಷ ನೆರೆ ಬಂದಿದ್ದ ಸಂದರ್ಭದಲ್ಲಿ ಪ್ರವಾಹ ಪೀಡಿತ ದಾಸನಪುರ, ಹಳೆ ಅಣಗಳ್ಳಿ, ಹಳೆ ಹಂಪಾಪುರ, ಮುಳ್ಳೂರು, ಹರಳೆ, ನರೀಪುರ, ಸರಗೂರು, ಧನಗೆರೆ ಹಾಗೂ ಯಡಕುರಿಯಾ ಗ್ರಾಮಗಳ ಜನರಿಗಾಗಿ ಐದು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿತ್ತು. ಸಂತ್ರಸ್ತರಾಗಿದ್ದ 1,700ಕ್ಕೂ ಹೆಚ್ಚು ಮಂದಿಗೆ ಇಲ್ಲಿ ಆಶ್ರಯ ನೀಡಲಾಗಿತ್ತು. 

‌ಸದ್ಯ ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, ನೆರೆ ಬಂದ ಸಂದರ್ಭದಲ್ಲಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಾಗ ಹಾಗೂ ಪ್ರವಾಹ ಸ್ಥಿತಿ ಇಳಿಮುಖವಾಗುವವರೆಗೂ ಅವರಿಗೆ ಆಶ್ರಯ ಕಲ್ಪಿಸುವಾಗ ಕೋವಿಡ್‌ ತಡೆಗೆ ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿದೆ. ‌

ಜಿಲ್ಲಾಡಳಿತ, ತಾಲ್ಲೂಕು ಆಡಳಿತದ ವಿವಿಧ ಇಲಾಖೆಗಳ ಸಿಬ್ಬಂದಿ ಈಗಾಗಲೇ ಕೋವಿಡ್‌ ಕರ್ತವ್ಯದಲ್ಲಿ ನಿರತರಾಗಿದ್ದು, ನೆರೆ ಉಲ್ಬಣಿಸಿದರೆ ಅವರ ಮೇಲಿನ ಕರ್ತವ್ಯದ ಹೊರೆ ಇನ್ನಷ್ಟು ಹೆಚ್ಚಾಗಲಿದೆ. 

ಈಗಾಗಲೇ, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನೆರೆ ಉಂಟಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಕೂಡ ಶನಿವಾರ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.  

ಸದ್ಯದ ಸ್ಥಿತಿ: ಕೇರಳದ ವಯನಾಡು ಹಾಗೂ ಕೊಡಗಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿ ನೀರಿನ ಹರಿವು ಹೆಚ್ಚಾಗಿದೆ. ಕಬಿನಿ ಜಲಾಶಯದಿಂದ 70 ಸಾವಿರ ಕ್ಯುಸೆಕ್‌, ಕೆಆರ್‌ಎಸ್‌ ಜಲಾಶಯಗಳಿಂದ 54 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ತಾಲ್ಲೂಕಿನ ನದಿ ಪಾತ್ರದ ಕೆಲವು ಗ್ರಾಮಗಳ ಜಮೀನು ಜಲಾವೃತವಾಗಿವೆ. ಹಳೆ ಅಣಗಳ್ಳಿಯ ನೂರಾರು ಎಕರೆಯಲ್ಲಿ ಹಾಕಿದ್ದ ಭತ್ತ, ಜೋಳ, ಕಬ್ಬು ಜಲಾವೃತಗೊಂಡಿದೆ. 

ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ನೀರಿನ ಮಟ್ಟದಲ್ಲಿ ವ್ಯತ್ಯಾಸವಾಗಿಲ್ಲ. ಆದರೆ, ತಡರಾತ್ರಿ ಹೆಚ್ಚು ಮಳೆಯಾದರೆ, ಸೋಮವಾರವೂ ಮಳೆ ಮುಂದುವರಿದರೆ ನೀರಿನ ಹರಿವು ಹೆಚ್ಚಾಗುವುದು ಖಚಿತ.  

ಜಿಲ್ಲೆ ಮತ್ತು ತಾಲ್ಲೂಕಿನ ಆಡಳಿತ, ಪ್ರವಾಹ ಬಂದರೆ ಜನರನ್ನು ಸ್ಥಳಾಂತರಿಸುವುದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ, ಈ ಬಾರಿ ಕೋವಿಡ್‌–19 ಕಾರಣದಿಂದಾಗಿ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗಿದೆ. ಪ್ರವಾಹ ಆತಂಕ ಎದುರಿಸುತ್ತಿರುವ ಗ್ರಾಮಗಳಲ್ಲಿ ಕೋವಿಡ್‌–19 ಪ್ರಕರಣಗಳು ವರದಿಯಾಗಿವೆ. ಇಲ್ಲೂ ಕಂಟೈನ್‌ಮೆಂಟ್‌, ಬಫರ್‌ ವಲಯಗಳಿವೆ. 

ಅವರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸುವಾಗ ಅಂತರ ಕಾಯ್ದುಕೊಳ್ಳುವುದು ಹಾಗೂ ಇತರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಪರಿಹಾರ ಕೇಂದ್ರಗಳಲ್ಲೂ ಈ ನಿಯಮಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್‌ ಕೆ.ಕುನಾಲ್‌ ಅವರು, ‘ನೆರೆ ಸಿದ್ಧತೆಯನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಆತಂಕ ಪಡಬೇಕಾಗಿಲ್ಲ. ನದಿ ತೀರದ ಗ್ರಾಮಗಳಿಗೆ ಅಧಿಕಾರಿಗಳನ್ನೂ ನಿಯೋಜಿಸಲಾಗಿದೆ’ ಎಂದು ಹೇಳಿದರು. 

ಭಾನುವಾರ ‘ಪ್ರಜಾವಾಣಿ’ ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರು ಎಂದಿನಂತೆ ಚಟುವಟಿಕೆಗಳಲ್ಲಿ ತೊಡಗಿದ್ದರು. ನೀರಿನ ಮಟ್ಟ ಹೆಚ್ಚಿರುವುದನ್ನೂ ಲೆಕ್ಕಿಸದೆ ಜನರು ನದಿ ದಡದಲ್ಲಿ ಬಟ್ಟೆ, ಪಾತ್ರೆ, ದನಕರುಗಳನ್ನು ತೊಳೆಯುತ್ತಿದ್ದರು. ಯಾವ ಅಧಿಕಾರಿ/ಸಿಬ್ಬಂದಿಯೂ ಕಂಡು ಬರಲಿಲ್ಲ. 

ನದಿ ನೋಡಲು ಬರುತ್ತಿರುವ ಜನ

ಈ ಮಧ್ಯೆ, ಕಾವೇರಿ ನದಿಯಲ್ಲಿ ಹರಿಯುತ್ತಿರುವ ಭಾರಿ ಪ್ರಮಾಣದ ನೀರನ್ನು ನೋಡಲು ತಾಲ್ಲೂಕಿನ ವಿವಿಧ ಭಾಗಗಳಿಂದ ಜನರು ಬರುತ್ತಿದ್ದಾರೆ. ಹೊರಗಡೆಯಿಂದ ಹೆಚ್ಚು ಜನರು ಬರುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. 

ಜನರು ಅಪಾಯಕಾರಿ ಸ್ಥಳಗಳಿಗೆ ಹೋಗಿ ಮೊಬೈಲ್‌ನಲ್ಲಿ ಫೋಟೊ, ಸೆಲ್ಫಿ ತೆಗುವಂತಹ ದುಸ್ಸಾಹಕ್ಕೂ ಕೈಹಾಕುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು