ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೈಗಾರಿಕೆಗಳ ಅಭಿವೃದ್ಧಿಗೆ ಎಲ್ಲ ಸಹಕಾರ -ಜಿಲ್ಲಾಧಿಕಾರಿ

ನೂತನ ಕೈಗಾರಿಕಾ ನೀತಿ, ಜವಳಿ, ಸಿದ್ಧ ಉಡುಪು ನೀತಿ ಬಗ್ಗೆ ಅರಿವು ಕಾರ್ಯಕ್ರಮ
Last Updated 9 ಮಾರ್ಚ್ 2021, 16:54 IST
ಅಕ್ಷರ ಗಾತ್ರ

ಚಾಮರಾಜನಗರ: ‘ಚಾಮರಾಜನಗರ ಎಂದಿಗೂ ಹಿಂದುಳಿದ ಜಿಲ್ಲೆ ಅಲ್ಲ. ಜಿಲ್ಲೆಯ ಅಭಿವೃದ್ಧಿಯೇ ಜಿಲ್ಲಾಡಳಿತದ ಗುರಿ. ಕೈಗಾರಿಕೆಗಳ ಸ್ಥಾಪನೆಗೆ ಮುಂದೆ ಬರುವವರಿಗೆ ಜಿಲ್ಲಾಡಳಿತ ಎಲ್ಲ ಸಹಕಾರ ನೀಡಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಂಗಳವಾರ ಭರವಸೆ ನೀಡಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ), ಜಿಲ್ಲಾ ಕೈಗಾರಿಕಾ ಕೇಂದ್ರ, ಭಾರತೀಯ ಮಾನಕ ಬ್ಯೂರೊ ಮತ್ತು ಚಾಮರಾಜನಗರ ಸಣ್ಣ ಕೈಗಾರಿಕೆಗಳ ಸಂಘಗಳ (ಚಾಸಿಯಾ) ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ, ಕೈಗಾರಿಕಾ ನೀತಿ 2020–25 ಮತ್ತು ಹೂಡಿಕೆ ಅವಕಾಶಗಳು, ಭಾರತೀಯ ಮಾನಕ ಬ್ಯೂರೊ ಪ್ರಮಾಣೀಕರಣ ಹಾಗೂ ನೂತನ ಜವಳಿ ಮತ್ತು ಸಿದ್ಧ ಉಡುಪು ನೀತಿ 2019–24ರ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಲ್ಲಿ ಸಾಕಷ್ಟು ಸಂಪನ್ಮೂಲಗಳಿವೆ. ಕೈಗಾರಿಕೆಗಳ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಅನುಷ್ಠಾನಕ್ಕೆ ತರಲು ಹಲವು ಸಮಸ್ಯೆಗಳಿವೆ. ಉದ್ಯಮಿಗಳು ಸರ್ಕಾರದ ನೀತಿಗಳ ಅಡಿಯಲ್ಲಿ ಸಬ್ಸಿಡಿ ಹಾಗೂ ಇನ್ನಿತರ ಪ್ರೋತ್ಸಾಹಕ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ಎಲ್ಲರೂ ಸಂಕಲ್ಪ ಮಾಡಿದರೆ ಚೆಲುವ ಚಾಮರಾಜನಗರವನ್ನು ಚಾರ್ಮಿಂಗ್‌ ಚಾಮರಾಜನಗರವನ್ನಾಗಿ ಮಾಡಬಹುದು’ ಎಂದರು.

‘ಇದು ಹಿಂದುಳಿದ ಜಿಲ್ಲೆ ಅಲ್ಲ. ಅದು ನಮ್ಮ ಮನಃಸ್ಥಿತಿ. ಚಾಮರಾಜನಗರ ಎಂದರೆ ಹಿಂದುಳಿದ ಜಿಲ್ಲೆ ಎಂಬುದು ನಮ್ಮ ಮನಸ್ಸಿನಲ್ಲಿ ಕೂತು ಬಿಟ್ಟಿದೆ. ಅದನ್ನು ಬಸಲಾಯಿಸಬೇಕು. ಆಗ ಎಲ್ಲವೂ ಸರಿಯಾಗುತ್ತದೆ.

‘ನಮ್ಮದು ಗ್ರಾಮೀಣ ಅರ್ಥ ವ್ಯವಸ್ಥೆ. ಇಲ್ಲಿ ಕೌಶಲ ಕಾರ್ಮಿಕರಿಲ್ಲ. ಕೌಶಲ ಇಲ್ಲದಿರುವವರು, ಅರೆ ಕೌಶಲ ಹೊಂದಿರುವವರು ಮಾತ್ರ ಇದ್ದಾರೆ. ಅವರಿಗೆ ತರಬೇತಿ ಕೊಡುವ ಕೆಲಸ ಆಗಬೇಕು. ಜವಳಿ ಉದ್ಯಮ, ಕೃಷಿ ಉದ್ಯಮ ಬೆಳೆಯುವುದಕ್ಕೆ ಇಲ್ಲಿ ಸಾಕಷ್ಟು ಅವಕಾಶಗಳಿವೆ. ಅದಕ್ಕೆ ಪೂರಕವಾದ ಯೋಜನಾ ವರದಿಗಳನ್ನು ತಯಾರಿಸಲಾಗಿದೆ. ಜಗತ್ತಿನಲ್ಲೇ ಹೆಸರುವಾಸಿಯಾಗಿರುವ ಇಲ್ಲಿನ ಕಪ್ಪು ಶಿಲೆಯ ಉದ್ಯಮ ಅಭಿವೃದ್ಧಿಗೂ ಅವಕಾಶ ಇದೆ. ಗ್ರ್ಯಾನೈಟ್‌ ಪಾಲಿಶಿಂಗ್‌ ಹಾಗೂ ಕಟ್ಟಿಂಗ್‌ ಕೌಶಲದ ಬಗ್ಗೆ ಸ್ಥಳೀಯರಿಗೆ ತರಬೇತಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ಇಂಡಿಯನ್‌ ಆಯಿಲ್‌ ಸಂಸ್ಥೆಯು ಇದರ ಪ್ರಾಯೋಜಕತ್ವ ವಹಿಸಿದೆ’ ಎಂದರು.

ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಅವರು ಮಾತನಾಡಿ, ‘ಎಂಎಸ್‌ಎಂಇಗಳ ಸ್ಥಾಪನೆಗೆ ಜಿಲ್ಲೆಯಲ್ಲಿ ವಿಪುಲ ಅವಕಾಶಗಳಿವೆ. ಜಿಲ್ಲೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ, ಸಬ್ಸಿಡಿ, ಪ್ರೋತ್ಸಾಹಕ ಮೊತ್ತವನ್ನು ಹೆಚ್ಚು ನೀಡುವ ಮೂಲಕ ಸರ್ಕಾರ ಉದ್ಯಮಿಗಳ ನೆರವಿಗೆ ಬರಬೇಕು. ಈ ಬಗ್ಗೆ ಜಿಲ್ಲಾಡಳಿತ‌ ಕೈಗಾರಿಕಾ ಇಲಾಖೆಗೆ ವರದಿ ಸಲ್ಲಿಸಬಹುದು’ ಎಂದು ಮನವಿ ಮಾಡಿದರು.

‘ಬದನಗುಪ್ಪೆ–ಕೆಲ್ಲಂಬಳ್ಳಿ ಪ್ರದೇಶದಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನೂ ಕೆಲವು ಮೂಲಸೌಕರ್ಯಗಳನ್ನು ಒದಗಿಸಿಲ್ಲ. ನೀರು ಸಂಪರ್ಕ ಆಗಿಲ್ಲ. ಸಣ್ಣ ಕೈಗಾರಿಕೆಗಳು ಸಲ್ಲಿಸಿರುವ ಬಹಳಷ್ಟು ಅರ್ಜಿಗಳು ಹಂಚಿಕೆಗಾಗಿ ಬಾಕಿ ಉಳಿದಿವೆ. ಅಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಬೇಕಿದೆ. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಬೇಕು’ ಎಂದು ಅವರು ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

‘ಜಿಲ್ಲೆಯಲ್ಲಿ ಆಹಾರ ಸಂಸ್ಕರಣಾ ಉದ್ದಿಮೆಗಳು ಮತ್ತು ಜೈವಿಕ ತಂತ್ರಜ್ಞಾನ ಉದ್ದಿಮೆಗಳನ್ನು ಸ್ಥಾಪಿಸಲು ಅವಕಾಶ ಇದ್ದು, ಬಯೋಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್ ಷಾ ಅವರನ್ನು ಜಿಲ್ಲಾ ರಾಯಭಾರಿಯನ್ನಾಗಿ ನೇಮಿಸಬೇಕು’ ಎಂದು ಹೇಳಿದ್ದರು.

‌ಇದಕ್ಕೆ ತಮ್ಮ ಭಾಷಣದಲ್ಲಿ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ‘ಈಗಾಗಲೇ ಕೈಗಾರಿಕಾ ಸಚಿವರಿಗೆ ಈ ಎಲ್ಲ ವಿಚಾರಗಳನ್ನು ಗಮನಕ್ಕೆ ತರಲಾಗಿದೆ. ನೀರಿನ ಸರಬರಾಜು ಸೇರಿದಂತೆ ಎಲ್ಲ ಸೌಕರ್ಯಗಳನ್ನು ಶೀಘ್ರವಾಗಿ ಒದಗಿಸಲಾಗುವುದು’ ಎಂದರು.

ಭಾರತೀಯ ಮಾನಕ ಬ್ಯುರೊ ನಿರ್ದೇಶಕ ಅಮಿತ್‌ ರಾಯ್‌, ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಜಯಸಿಂಹ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿ.ಚೌಡಯ್ಯ, ಗ್ರ್ಯಾನೈಟ್‌ ಗಣಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ.ಹೆಗಡೆ, ವರ್ತಕರ ಸಂಘದ ಅಧ್ಯಕ್ಷ ಕೆ.ಎಸ್‌.ರವಿಶಂಕರ್‌, ಜವಳಿ ಮತ್ತು ಕೈಮಗ್ಗ ಇಲಾಖೆ ಉಪನಿರ್ದೇಶಕ ಮಂಜುನಾಥ್‌ ಇತರರು ಇದ್ದರು.

ಮಹಿಳಾ ಉದ್ಯಮಿಗಳ ತಂಡ ರಚಿಸಲು ಸಲಹೆ
ಹೆಣ್ಣುಮಕ್ಕಳಲ್ಲಿ ಉದ್ಯಮಶೀಲತೆ ಬೆಳೆದರೆ, ಮಹಿಳಾ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ಷೇತ್ರದಲ್ಲಿ ಆರೋಗ್ಯಕರ ಪೈಪೋಟಿ ಇರುತ್ತದೆ. ಹೆಣ್ಣುಮಕ್ಕಳೇ ಸೇರಿಕೊಂಡು ಉದ್ಯಮಿಗಳ ತಂಡ ಕಟ್ಟಿಕೊಂಡು ಕೆಲಸ ಮಾಡಬಹುದು ಎಂದು ಜಿಲ್ಲಾಧಿಕಾರಿ ಅವರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT