ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಗ್ರಾಮಸ್ಥರಲ್ಲಿ ಕರಡಿ ಭೀತಿ; ಸೆರೆಗೆ ಆಗ್ರಹ

Published 20 ಡಿಸೆಂಬರ್ 2023, 6:23 IST
Last Updated 20 ಡಿಸೆಂಬರ್ 2023, 6:23 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಕರಡಿ ಹಾವಳಿ ಹೆಚ್ಚಾಗಿದ್ದು, ರಾತ್ರಿ ಹೊತ್ತು ಗ್ರಾಮಗಳ ರಸ್ತೆಯಲ್ಲಿ ಅಡ್ಡಾಡುವುದು ಮಾತ್ರವಲ್ಲದೆ, ಆಹಾರಕ್ಕಾಗಿ ಅಂಗಡಿ, ಶಾಲೆಗಳಿಗೆ ನುಗ್ಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.  

ಮಲೆಮಹದೇಶ್ವರ ವನ್ಯಧಾಮದ ಹನೂರು ಬಫರ್, ರಾಮಾಪುರ ಹಾಗೂ ಹೂಗ್ಯಂ ವನ್ಯಜೀವಿ ವಲಯದಲ್ಲಿ ಕಳೆದೊಂದು ತಿಂಗಳಿನಿಂದೀಚೆಗೆ ಕರಡಿಯೊಂದು ಮೇಲಿಂದ ಮೇಲೆ ಕಾಣಿಸಿಕೊಳ್ಳುತ್ತಿದೆ. ರಾತ್ರಿ ಹೊತ್ತು ಗ್ರಾಮಗಳ ಬಡಾವಣೆಗಳಲ್ಲಿ ಅಡ್ಡಾಡುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. 

ಮೊದಲಿಗೆ ನೆಲ್ಲೂರು ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿತ್ತು. ಮನೆಗಳ ಬಾಗಿಲು ಮುರಿಯಲೂ ಯತ್ನಿಸುತ್ತು.  ಜನರ ಗದ್ದಲದಿಂದ ಓಡಿಹೋಗಿದ್ದ ಕರಡಿ ಎರಡು ದಿನಗಳ ಬಳಿಕ ನಾಲ್ ರೋಡ್ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಮತ್ತೆ ಅಲ್ಲಿಂದ ಅಜ್ಜೀಪುರ ಗ್ರಾಮಕ್ಕೆ ಬಂದು ಮದ್ಯದಂಗಡಿ ಬಳಿಯಿದ್ದ ತಳ್ಳುಗಾಡಿಯನ್ನು ಉರುಳಿಸಿ ಅಡುಗೆ ಎಣ್ಣೆ ಹಾಗೂ ಆಹಾರ ಪದಾರ್ಥಗಳನ್ನು ತಿಂದು ಹಾಕಿತ್ತು. ನಂತರ ಅರಣ್ಯ ಇಲಾಖೆ ಬೋನು ಇಟ್ಟು ಕರಡಿಯನ್ನು ಸೆರೆಹಿಡಿದು ತಮಿಳುನಾಡಿನ ಗಡಿಯಂಚಿನಲ್ಲಿ ಬಿಟ್ಟಿತ್ತು.

ಗಡಿಯಲ್ಲಿ ಬಿಟ್ಟ ಎರಡು ದಿನಗಳಲ್ಲೇ ಸಂದನಪಾಳ್ಯ ಗ್ರಾಮಕ್ಕೆ  ಬಂದು ಮನೆಯೊಂದರ ಹೆಂಚುಗಳನ್ನು ಒಡೆದು ಬಳಿಕ ಶಾಲಾ ಕೊಠಡಿ ಬಾಗಿಲು ಮುರಿದು ಅಡುಗೆ ಎಣ್ಣೆ ಕುಡಿದು ಅವಾಂತರ ಮಾಡಿತ್ತು.  ಮರುದಿನವೂ ಸಂದನಪಾಳ್ಯ ಗ್ರಾಮದ ಮುಖ್ಯ ರಸ್ತೆಯಲ್ಲೇ  ಕರಡಿ ಅಡ್ಡಾಡುತ್ತಿರುವುದನ್ನು ಸ್ಥಳೀಯರು ನೋಡಿದ್ದರು. ಇದಾದ ಎರಡು ದಿನಗಳ ಬಳಿಕ ಕೌದಳ್ಳಿ ಗ್ರಾಮದ ಮಹದೇಶ್ವರ ದೇವಸ್ಥಾನ, ಶಾಲೆ ಬಳಿ ಕರಡಿ ಕಾಣಿಸಿಕೊಂಡಿದೆ. 

ಸೆರೆ ಹಿಡಿದ ಕರಡಿ: ಅಜ್ಜೀಪುರದಲ್ಲಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದ ಕರಡಿಯೇ ಮತ್ತೆ ಬಂದಿದೆ ಎಂದು ಹೇಳುತ್ತಾರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಒಂದೊಂದು ದಿನ ಒಂದೊಂದು ಗ್ರಾಮದಲ್ಲಿ ಕಾಣಿಸಿಕೊಳ್ಳುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿರುವ ಕರಡಿಯನ್ನು ಸೆರೆಹಿಡಿದು ಬೇರೆ ಕಡೆ ಬಿಡಬೇಕು ಎಂಬ ಒತ್ತಾಯ ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

ಇದು ಹೆಚ್ಚಾಗಿ ಶಾಲೆಗಳಲ್ಲಿಯೇ ಕಾಣಿಸಿಕೊಳ್ಳುತ್ತಿರುವುದರಿಂದ ಮಕ್ಕಳ ಮೇಲೆ ದಾಳಿ ಮಾಡುವ ಸಂಭವವಿದೆ ಎಂಬ ಆತಂಕವನ್ನು ಜನರು ವ್ಯಕ್ತಪಡಿಸಿದ್ದಾರೆ. 

ಶೀಘ್ರ ಸೆರೆ

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಲೆಮಹದೇಶ್ವರ ವನ್ಯಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ಪಾಟೀಲ, ‘ಒಂದು ತಿಂಗಳಿನಿಂದ ಕಾಣಿಸಿಕೊಳ್ಳುತ್ತಿರುವ ಕರಡಿಯನ್ನು ಈಗಾಗಲೇ ಸೆರೆಹಿಡಿದು ಗಡಿಯಲ್ಲಿ ಬಿಡಲಾಗಿತ್ತು. ಆದರೆ, ಅದು ಮತ್ತೆ ಬಂದು ಗ್ರಾಮಗಳಲ್ಲಿ ಕಾಣಿಸಿಕೊಳ್ಳತೊಡಗಿದೆ. ಅದು ಹೆಚ್ಚಾಗಿ ಕಾಣಿಸಿಕೊಂಡಿರುವ ಕಡೆ ಬೋನುಗಳನ್ನು ಇಡಲಾಗಿದೆ. ಅಲ್ಲದೇ ಸಿಬ್ಬಂದಿ ಹಾಗೂ ಆನೆ ಕಾರ್ಯ ಪಡೆ ಸಿಬ್ಬಂದಿ ಹಗಲು ರಾತ್ರಿಯೆನ್ನದೇ ಕರಡಿ ಸೆರೆ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಶೀಘ್ರದಲ್ಲೇ ಕರಡಿಯನ್ನು ಸೆರೆಹಿಡಿಯಲಾಗುವುದು. ಸೆರೆಯಾದ ಬಳಿಕ ಅದನ್ನು ಹಿರಿಯ ಅಧಿಕಾರಿಗಳ ಸಲಹೆ ಪಡೆದು ಉದ್ಯಾನಕ್ಕೆ ರವಾನಿಸಲಾಗುವುದು’ ಎಂದರು.

ತಮಿಳುನಾಡಿನಿಂದ ಬಂದ ಕರಡಿ?

ಎರಡು ತಿಂಗಳ ಹಿಂದೆ ತಮಿಳುನಾಡಿನ ಕಾಡಂಚಿನ ಗ್ರಾಮಗಳಲ್ಲಿ  ಕರಡಿಯೊಂದು ರಾತ್ರಿ ವೇಳೆ ಮನೆಯೊಳಗೆ ನುಗ್ಗಿ ಅಡುಗೆ ಎಣ್ಣೆಯನ್ನು ಕುಡಿಯುತ್ತಿತ್ತು. ತಮಿಳುನಾಡಿನ ಅರಣ್ಯ ಇಲಾಖೆ ಅದನ್ನು ಸೆರೆಹಿಡಿದು ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬಿಟ್ಟಿದ್ದರು. ಮಲೆಮಹದೇಶ್ವರ ವನ್ಯಧಾಮದ ನ್ಯಾಪ್ತಿಯಲ್ಲಿ ಉಪಟಳ ನೀಡುತ್ತಿರುವ ಕರಡಿ ಕೂಡ ಅಡುಗೆ ಎಣ್ಣೆಯನ್ನು ಸೇವಿಸುತ್ತಿರುವುದು ನೋಡಿದರೆ ಇದು ತಮಿಳುನಾಡಿನಿಂದ ಬಂದಿರುವ ಕರಡಿಯೇ ಆಗಿರಬಹುದು ಎಂದು ಶಂಕಿಸುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು

ಕರಡಿ ಗಾಯಗೊಂಡಿರುವ ಸಾಧ್ಯತೆ ಇದೆ. ಅರಣ್ಯದಲ್ಲಿ ಆಹಾರ ಬೇಟೆಯಾಡಲು ಆಗುತ್ತಿಲ್ಲ. ಅದನ್ನು ಸೆರೆ ಹಿಡಿದು ಜೈವಿಕ ಉದ್ಯಾನಕ್ಕೆ ಬಿಡಲಾಗುವುದು.
ಜಿ.ಸಂತೋಷ್‌ಕುಮಾರ್‌, ಡಿಸಿಎಫ್‌, ಮಲೆ ಮಹದೇಶ್ವರವನ್ಯಧಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT