ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ | ಅಪ್ಪ–ಮಗನ ಸಿದ್ಧತೆ ಬಿರುಸು; ಕಾರ್ಯತಂತ್ರದ ಚರ್ಚೆ

ಅಭ್ಯರ್ಥಿ ಅಧಿಕೃತ ಘೋಷಣೆಗೂ ಮುನ್ನವೇ ಮುಖಂಡರ ಭೇಟಿ ಆರಂಭಿಸಿದ ಮಹದೇವಪ್ಪ, ಬೋಸ್‌
Published 28 ಮಾರ್ಚ್ 2024, 3:14 IST
Last Updated 28 ಮಾರ್ಚ್ 2024, 3:14 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ/ಯಳಂದೂರು: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ವರಿಷ್ಠರು ಅಧಿಕೃತವಾಗಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಕ್ಕೆ ಮೊದಲೇ ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಮತ್ತು ಅವರ ಮಗ, ಸಂಭಾವ್ಯ ಅಭ್ಯರ್ಥಿ ಸುನೀಲ್‌ ಬೋಸ್‌ ಅವರು ಪ್ರಚಾರ ಸಿದ್ಧತೆ ಆರಂಭಿಸಿದ್ದಾರೆ. 

ಕ್ಷೇತ್ರದಾದ್ಯಂತ ಪಕ್ಷದ ಶಾಸಕರು, ಮುಖಂಡರನ್ನು ಭೇಟಿ ಮಾಡಿ ಮಾತುಕತೆ ಶುರುಮಾಡಿದ್ದು, ಚುನಾವಣಾ ರಣತಂತ್ರದ ಬಗ್ಗೆ ಚರ್ಚಿಸುತ್ತಿದ್ದಾರೆ. 

ಮೈಸೂರು ಜಿಲ್ಲಾ ಕಾಂಗ್ರೆಸ್‌ ಸಮಿತಿಯು ತನ್ನ ಪ್ರಕಟಣೆಯಲ್ಲಿ ಸುನೀಲ್‌ ಬೋಸ್‌ ಅವರನ್ನು ಚಾಮರಾಜನಗರ ಅಭ್ಯರ್ಥಿ ಎಂದು ಉಲ್ಲೇಖಿಸಿದೆ. 

ಮಂಗಳವಾರ ಕೊಳ್ಳೇಗಾಲಕ್ಕೆ ಭೇಟಿ ನೀಡಿದ್ದ ಸುನೀಲ್‌ ಬೋಸ್‌ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿದ್ದರು. ನಂಜನಗೂಡು ಶಾಸಕ ದರ್ಶನ್‌ ಧ್ರುವನಾರಾಯಣ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಬುಧವಾರ ಸಚಿವ ಎಚ್.ಸಿ.ಮಹದೇವಪ್ಪ ಅವರು ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲಕ್ಕೆ ಭೇಟಿ ನೀಡಿ ಪಕ್ಷದ ಮುಖಂಡರು, ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೊಳ್ಳೇಗಾಲಕ್ಕೆ ಬರುವುದಕ್ಕೂ ಮುನ್ನ ಸುನೀಲ್‌ ಬೋಸ್‌ ಅವರು ಮೈಸೂರಿನಲ್ಲಿ ಗುಂಡ್ಲುಪೇಟೆ ಶಾಸಕ ಎಚ್‌.ಎಂ.ಗಣೇಶ್‌ ಪ್ರಸಾದ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.   

ಮಗ ಅಭ್ಯರ್ಥಿ ಖಚಿತ: ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಚ್‌.ಸಿ.ಮಹದೇವಪ್ಪ, ‘ಗುರುವಾರ ಕ್ಷೇತ್ರದ ಅಭ್ಯರ್ಥಿ ಹೆಸರು ಪ್ರಕಟವಾಗಲಿದೆ. ನನ್ನ ಮಗ ಸುನೀಲ್  ಬೋಸ್ ಆಗುವುದು ಖಚಿತ. ಕ್ಷೇತ್ರದ ಏಳು ಶಾಸಕರ ಸಲಹೆ ಪಡೆದು ಮುಖಂಡರ ಮಾರ್ಗದರ್ಶನದಲ್ಲಿ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದರು. 

ಮಾಲಾರ್ಪಣೆ: ಮಹದೇವಪ್ಪ ಅವರು ಸಂತೇಮರಹಳ್ಳಿ, ಯಳಂದೂರು, ಕೊಳ್ಳೇಗಾಲದಲ್ಲಿ ಅಂಬೇಡ್ಕರ್‌ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು. 

ಯಳಂದೂರಿನಲ್ಲಿ ಪಕ್ಷದ ಕಚೇರಿಗೆ ಭೇಟಿ ಮುಖಂಡರೊಂದಿಗೆ ಚರ್ಚಿಸಿದರು. 

ಕೊಳ್ಳೇಗಾಲದಲ್ಲಿ ಹನೂರು ಮಾಜಿ ಶಾಸಕ ಆರ್‌.ನರೇಂದ್ರ ಅವರ ಮನೆಗೆ ಭೇಟಿ ನೀಡಿ ಮುಖಂಡರೊಂದಿಗೆ ಚುನಾವಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿ.ಎನ್‌.ನಂಜುಂಡಸ್ವಾಮಿ ಅವರ ಮನೆಗೂ ಭೇಟಿ ನೀಡಿ ಮಾತುಕತೆ ನಡೆಸಿದರು. 

ಗೆಲುವು ಖಚಿತ: ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯವರು ಏನೇ ಮಾರೋಪ ಮಾಡಿದರೂ, ಅದರ ಬಗ್ಗೆ ಕಿವಿ ಕೊಡಬೇಡಿ. ಈ ಬಾರಿ ಮೋದಿ ಆಟ ನಡೆಯುವುದಿಲ್ಲ. ಜೂನ್‌ 4ರಂದು ಮೋದಿ ಅಲೆ ಬಗ್ಗೆ ತಿಳಿಯುತ್ತದೆ. ಮತದಾರರ ಒಲವು ಕಾಂಗ್ರೆಸ್ ಮೇಲೆ ಇದೆ. ಹಾಗಾಗಿ ನಮ್ಮ ಗೆಲುವು ಖಚಿತ’ ಎಂದರು. 

ಕಾಂಗ್ರೆಸ್‌ ಕುಟುಂಬ ರಾಜಕಾರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕುಟುಂಬ ರಾಜಕಾರಣ ಏನು ನಡೆದಿಲ್ಲ. ರಾಜಕೀಯ ಜೀವನದಲ್ಲಿ ಸಾರ್ವಜನಿಕರ ಜೊತೆ ಯಾರು ಹೆಚ್ಚು ಒಡನಾಟ ಹೊಂದಿರುತ್ತಾರೋ ಅವರು ರಾಜಕೀಯಕ್ಕೆ ಬರುವುದು ಸಾಮಾನ್ಯ’ ಎಂದರು. 

‘ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದೆ. ಜಿ.ಎನ್ ನಂಜುಂಡಸ್ವಾಮಿ ಅವರಿಗೂ ನಮಗೂ ಮುನಿಸು ಇಲ್ಲ. ನಾವೆಲ್ಲರೂ ಒಟ್ಟಿಗೆ ಸೇರಿ ಈ ಚುನಾವಣೆಯನ್ನು ಎದುರಿಸುತ್ತಿದ್ದೇವೆ. ಕ್ಷೇತ್ರದ ಎಲ್ಲ ಶಾಸಕರೂ ನನ್ನನ್ನೇ ಲೋಕಸಭಾ ಅಭ್ಯರ್ಥಿಯಾಗಿ ಎಂದು ಒತ್ತಾಯ ಮಾಡಿದರು. ಆದರೆ, ಈಗ ಸಚಿವ ಸಂಪುಟದಲ್ಲಿ ಉತ್ತಮ ಸ್ಥಾನಮಾನ ಇರುವುದರಿಂದ ಚುನಾವಣೆಯಿಂದ ಹಿಂದೆ ಸರಿದೆ. ನನ್ನ ಮಗನಿಗೆ ಟಿಕೆಟ್‌ ಸಿಗಲಿದೆ. ಎಲ್ಲ ಕ್ಷೇತ್ರದ ಶಾಸಕರು ಅವನನ್ನು ಗೆಲ್ಲಿಸುತ್ತಾರೆ’ ಎಂದರು.

ಶಾಸಕ ಎ.ಆರ್.ಕೃಷ್ಣಮೂರ್ತಿ, ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಎಸ್ ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ, ನಗರಸಭಾ ಸದಸ್ಯರು, ಮುಖಂಡರು ಭಾಗವಹಿಸಿದ್ದರು.

ಮಹದೇವಪ್ಪ ವಿರುದ್ಧ ಮುಖಂಡರ ಅತೃಪ್ತಿ

ಹನೂರು ಮಾಜಿ ಶಾಸಕ ನರೇಂದ್ರ ಅವರ ನಿವಾಸಕ್ಕೆ ಸಚಿವ ಮಹದೇವಪ್ಪ ಭೇಟಿ ನೀಡಿದ ವೇಳೆ ಹನೂರು ಕ್ಷೇತ್ರದ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಸಚಿವ ಮಹದೇವಪ್ಪ ಅವರ ವಿರುದ್ಧ ಬಹಿರಂಗವೇ ಅಸಮಾಧಾನ ವ್ಯಕ್ತಪಡಿಸಿದರು.  ಇತ್ತೀಚೆಗೆ ಚಾಮರಾಜನಗರದಲ್ಲಿ ನಡೆದಿದ್ದ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ‘ಹನೂರು ಶಾಸಕ ಮಂಜುನಾಥ್‌ ಅವರು ಕಾಂಗ್ರೆಸ್‌ ಜೊತೆ ಕೈಜೋಡಿಸುತ್ತಾರೆ’ ಎಂದು ಮಹದೇವಪ್ಪ ಹೇಳಿದ್ದರು. ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮುಖಂಡರು ನರೇಂದ್ರ ಶಾಸಕರು ಹಾಗೂ ಮುಖಂಡರ ಸಮ್ಮುಖದಲ್ಲಿ ಸಚಿವರನ್ನು ಖಾರವಾಗಿ ಪ್ರಶ್ನಿಸಿದರು ಎಂದು ಮೂಲಗಳು ತಿಳಿಸಿವೆ.  ‘ಹನೂರು ಕ್ಷೇತ್ರದಲ್ಲಿ ಪಕ್ಷ ಇನ್ನೂ ಗಟ್ಟಿಯಾಗಿದೆ. ಹೀಗಿರುವಾಗ ನೀವು ‘ ಮಂಜುನಾಥ್ ನಮ್ಮ ಪರವಾಗಿ ಇದ್ದಾರೆ. ನಮ್ಮ ಪಕ್ಷಕ್ಕೆ ಬರುತ್ತಾರೆ’ ಎಂದು ಯಾಕೆ ಹೇಳಿದಿರಿ. ಪಕ್ಷಕ್ಕೆ ಮಂಜುನಾಥ್ ಅವಶ್ಯಕತೆ. ಕ್ಷೇತ್ರದಲ್ಲಿ ನಿದ್ದೆ ಮಾಡದೆ ಪಕ್ಷಕ್ಕಾಗಿ ಹಗಲು ರಾತ್ರಿ ದುಡಿಯುತ್ತಿದ್ದೇವೆ. ಮಂಜುನಾಥ್ ಅವಶ್ಯಕತೆ ನಮಗಂತೂ ಇಲ್ಲ ನಿಮಗೆ ಇದ್ದರೆ ಅವರನ್ನೇ ಕರೆದುಕೊಂಡು ಹೋಗಿ ನಿಮ್ಮ ಮಗನ ಪರವಾಗಿ ಚುನಾವಣೆಯಲ್ಲಿ ಪ್ರಚಾರ ಮಾಡಿಕೊಳ್ಳಿ. ನಾವು ಯಾವುದೇ ಕಾರಣಕ್ಕೂ ಬರುವುದಿಲ್ಲ ಎಂದು ಹೇಳಿದರು’ ಎಂದು ಮೂಲಗಳು ತಿಳಿಸಿವೆ.  ಈ ಸಂದರ್ಭದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ಉಂಟಾಯಿತು.  ಮಹದೇವಪ್ಪ ಮತ್ತು ನರೇಂದ್ರ ಅವರು ಮುಖಂಡರು ಕಾರ್ಯಕರ್ತರನ್ನು ಸಮಾಧಾನಪಡಿಸಲು ಯತ್ನಿಸಿದರು. ‘ಮುಂದೆ ಅಂತಹ ಹೇಳಿಕೆಗಳನ್ನು ನೀಡುವುದಿಲ್ಲ. ಕ್ಷೇತ್ರದಲ್ಲಿ ಪಕ್ಷ ಗೆಲ್ಲಬೇಕಿದೆ. ನನ್ನ ಮಗ ಅಭ್ಯರ್ಥಿಯಾಗಿದ್ದಾನೆ. ಆತನನ್ನು ನೀವು ಗೆಲ್ಲಿಸಬೇಕು’ ಎಂದು ಸಚಿವರು ಮನವಿ ಮಾಡಿದರು’ ಎಂದು ತಿಳಿದು ಬಂದಿದೆ

ಪಕ್ಷ ಕೈಬಿಡುವುದಿಲ್ಲ: ನಂಜುಂಡಸ್ವಾಮಿ ವಿಶ್ವಾಸ

‘ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸದಸ್ಯ ಆಗುತ್ತೇನೆ ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ನನ್ನ ಹಣ ಬರಹ ಸರಿಯಿಲ್ಲ. ಟಿಕೆಟ್ ಕೈ ತಪ್ಪಿದೆ. ಮುಂದೆ ಪಕ್ಷ ಹಾಗೂ ನಾಯಕರು ನನ್ನನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸ ಇದೆ’ ಎಂದು ಕಾಂಗ್ರೆಸ್‌ ಮುಖಂಡ ಜಿ.ಎನ್‌.ನಂಜುಂಡಸ್ವಾಮಿ ಹೇಳಿದರು.  ಕೊಳ್ಳೇಗಾಲದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಸಚಿವ ಎಚ್. ಸಿ.ಮಹದೇವಪ್ಪ ನನ್ನನ್ನು ಭೇಟಿ ಮಾಡಿದ್ದರು. ಟಿಕೆಟ್ ಸಿಗುವುದು ಕೈ ತಪ್ಪುವುದು ರಾಜಕೀಯದಲ್ಲಿ ಸಹಜ. ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ. ಕೈ ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ಪಕ್ಷದ ಆಶಯಗಳಿಗೆ ಧಕ್ಕೆಯಾಗದಂತೆ ಕೆಲಸ ನಿರ್ವಹಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ನನ್ನ ರಾಜಕೀಯ ಗುರುಗಳು ಅವರು ನನ್ನನ್ನು ಕೈಬಿಡುವುದಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT