ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ: ಚಾಮರಾಜನಗರ ಜಿಲ್ಲೆಯ ರೈತ ದಂಪತಿ ಮಗ ಪ್ರಮೋದ್‌ಗೆ 601ನೇ ರ‍್ಯಾಂಕ್‌

Last Updated 24 ಸೆಪ್ಟೆಂಬರ್ 2021, 18:21 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಪ್ರಮೋದ್‌ ಆರಾಧ್ಯ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 601 ರ‍್ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳದಮಾದಹಳ್ಳಿಯ ರೈತ ರುದ್ರಾರಾಧ್ಯ ಹಾಗೂ ಮಮತಾಮಣಿ ದಂಪತಿಯ ಹಿರಿಯ ಮಗನಾಗಿರುವ 25 ವರ್ಷದ ಪ್ರಮೋದ್‌ ಅವರು ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ.

ಎಚ್.ಡಿ.ಕೋಟೆಯ ಸೇಂಟ್‌ ಮೇರಿಸ್‌ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿರುವ ಪ್ರಮೋದ್‌ ಅವರು, ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ ಪಿಯು ಶಿಕ್ಷಣ ಹಾಗೂ ಮಂಡ್ಯದ ಪಿಇಎಸ್‌ ಎಂಜಿನಿಯರಿಂ‌ಗ್‌ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಮಾಡಿದ್ದಾರೆ.

ಪ್ರಮೋದ್‌ ಆರಾಧ್ಯ
ಪ್ರಮೋದ್‌ ಆರಾಧ್ಯ

ಮೂರು ಪ್ರಯತ್ನ: 2017ರಲ್ಲಿ ವೃತ್ತಿ ಶಿಕ್ಷಣ ಪೂರೈಸಿದ ಅವರು ಸ್ನೇಹಿತರು ಹಾಗೂ ಬೋಧಕರ ಸಲಹೆ ಪಡೆದು ಯುಪಿಎಸ್‌ಸಿ ಪ‍ರೀಕ್ಷೆಗೆ ಎದುರಿಸಲು ಸಿದ್ಧತೆ ನಡೆಸುತ್ತಾರೆ. ಸ್ನೇಹಿತರೊಂದಿಗೆ ದೆಹಲಿಗೆ ತೆರಳಿ ತರಬೇತಿ ಪಡೆದು ಪರೀಕ್ಷೆ ಬರೆಯುತ್ತಾರೆ. ಮೊದಲ ಪ್ರಯತ್ನದಲ್ಲಿ ಅವರಿಗೆ ಯಶಸ್ಸು ಸಿಗುವುದಿಲ್ಲ.

ಎರಡನೇ ಪ್ರಯತ್ನದಲ್ಲಿ ಪ್ರಾಥಮಿಕ ಹಾಗೂ ಪ್ರಮುಖ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದು ಸಂದರ್ಶನಕ್ಕೆ ಹಾಜರಾಗುತ್ತಾರೆ. ಕೇವಲ 15 ಅಂಕಗಳಿಂದ ಪಟ್ಟಿಯಲ್ಲಿ ಹೆಸರು ತಪ್ಪುತ್ತದೆ.

ಕಳೆದ ವರ್ಷದ ಮಾರ್ಚ್‌ನಿಂದ ಮನೆಯಲ್ಲೇ ಇದ್ದುಕೊಂಡು ಮೂರನೇ ಬಾರಿ ಪರೀಕ್ಷೆಗೆ ಸಿದ್ಧತೆ ನಡೆಸುವ ಪ್ರಮೋದ್‌ ಅವರು ಸಂದರ್ಶನವನ್ನೂ ಯಶಸ್ವಿಯಾಗಿ ಪೂರೈಸಿ 601 ರ‍್ಯಾಂಕ್‌ನೊಂದಿಗೆ ಗೆಲುವಿನ ನಗೆ ಬೀರಿದ್ದಾರೆ.

ನೆರವಾದ ತರಬೇತಿ: ಐಎಎಸ್‌, ಐಪಿಎಸ್‌ ಪರೀಕ್ಷೆ ಬರೆಯುವವರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಾರಿಗೊಳಿಸಿರುವ ವಿದ್ಯಾರ್ಥಿ ವೇತನ ಯೋಜನೆ ಪ್ರಮೋದ್‌ ಅವರಿಗೆ ನೆರವಾಗಿದೆ.

ನಾಗರಿಕ ಸೇವೆಗಳಿಗೆ ಆಯ್ಕೆಯಾಗಿರುವುದಕ್ಕೆ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡ ಪ್ರಮೋದ್‌ ಆರಾಧ್ಯ ಅವರು, ‘ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ನನಗೆ ದೆಹಲಿಯಲ್ಲಿ ತರಬೇತಿ ಪಡೆಯಲು ನೆರವಾಯಿತು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಚಿಕ್ಕ ಜಿಲ್ಲೆಯಿಂದ ಯುಪಿಎಸ್‌ಸಿಗೆ ಆಯ್ಕೆಯಾಗಿರುವುದಕ್ಕೆ ಸಂತಸವಾಗಿದೆ. ಕೃಷಿಯಲ್ಲಿ ತೊಡಗಿರುವ ಪೋಷಕರು ಬೆಂಬಲ ನೀಡಿದರು. ಸ್ನೇಹಿತರು ಹಾಗೂ ಬೋಧಕರ ಮಾರ್ಗದರ್ಶನ, ಸಲಹೆಯಿಂದ ಈ ಸಾಧನೆ ಸಾಧ್ಯವಾಗಿದೆ’ ಎಂದು ಹೇಳಿದರು.

‘ಕಳೆದ ಬಾರಿಯೂ ಸಂದರ್ಶನಕ್ಕೆ ಆಯ್ಕೆಯಾಗಿದೆ. ಆದರೆ, ಅಂತಿಮ‌ಪಟ್ಟಿಯಲ್ಲಿ ಹೆಸರು ಇರಲಿಲ್ಲ. ಕಳೆದ ವರ್ಷದ ಅನುಭವ ಈ ಸಲದ ಸಂದರ್ಶನದಲ್ಲಿ ನೆರವಿಗೆ ಬಂತು. ಈ ಬಾರಿಯ ಪರೀಕ್ಷೆ ಹಾಗೂ ಸಂದರ್ಶನಕ್ಕೆ ಮನೆಯಲ್ಲೇ ಕುಳಿತು ಸಿದ್ಧತೆ ಮಾಡಿಕೊಂಡಿದ್ದೆ’ ಎಂದು ಪರೀಕ್ಷೆಗೆ ನಡೆಸಿರುವ ಸಿದ್ಧತೆಗಳ ಬಗ್ಗೆ ಅವರು ವಿವರಿಸಿದರು.

‘ಗ್ರಾಮೀಣ ಭಾಗದ ಜನರಿಗೆ ಲೋಕ ಜ್ಞಾನ ಇರುವುದಿಲ್ಲ. ಅದರಿಂದಾಗಿ ಇಂತಹ ಪರೀಕ್ಷೆಗಳನ್ನು ಎದುರಿಸಲು ಸ್ವಲ್ಪ ಹಿಂಜರಿಯುತ್ತಾರೆ. ನನಗೂ ಆ ಹಿಂಜರಿಕೆ ಇತ್ತು. ಮೂರು ಬಾರಿ ಪರೀಕ್ಷೆ ಬರೆದು, ಎರಡು ಬಾರಿ ಸಂದರ್ಶನ ಎದುರಿಸಿದಾಗ ಎಲ್ಲವೂ ಸರಿಯಾಯಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರ ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಮುಂದಾಗಬೇಕು’ ಎಂಬ ಸಲಹೆಯನ್ನೂ ಪ್ರಮೋದ್‌ ಆರಾಧ್ಯ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT