ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಪ್ರಜಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಹಾಗೂ ಎದ್ದೇಳು ಕರ್ನಾಟಕ ಸಂಘಟನೆಯ ಆಕ್ರೋಶ
Published 7 ಮೇ 2024, 13:24 IST
Last Updated 7 ಮೇ 2024, 13:24 IST
ಅಕ್ಷರ ಗಾತ್ರ

ಚಾಮರಾಜನಗರ: ಲೈಂಗಿಕ ಹಗರಣದಲ್ಲಿ ಸಿಲುಕಿರುವ ಹಾಸನ ಸಂಸದ ಪ‍್ರಜ್ವಲ್‌ ರೇವಣ್ಣ ಬಂಧನಕ್ಕೆ ಆಗ್ರಹಿಸಿ ಎದ್ದೇಳು ಕರ್ನಾಟಕ ಸಂಘಟನೆ ಮತ್ತು ಜಿಲ್ಲಾ ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ತನಿಖೆ ಚುರುಕುಗೊಳಿಸಿ: ಎದ್ದೇಳು ಕರ್ನಾಟಕ ಸಂಘಟನೆಯ ಆಶ್ರಯದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾನವ ಬಂಧುತ್ವ ವೇದಿಕೆ, ಪುನರ್ಚಿತ್‌, ಶಾಂತಲಾ ಕಲಾವಿದರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು. 

ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಮತ್ತು ಅವರ ತಂದೆ ಎಚ್‌.ಡಿ.ರೇವಣ್ಣ ಅವರ ವಿರುದ್ಧ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. 

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಕಾರರು, ಅವರು ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿ, ಕೆಲಕಾಲ ಮಾನವ ಸರಪಳಿ ರಚಿಸಿ ವಾಹನಗಳ ಸಂಚಾರ ತಡೆದರು. ಪ್ರಜ್ವಲ್ ಹಾಗೂ ರೇವಣ್ಣ ವಿರುದ್ಧ ಧಿಕ್ಕಾರದ ಕೂಗಿ ಆಕ್ರೋಶ ಹೊರಹಾಕಿದರು. 

ರಂಗಕರ್ಮಿ ಕೆ.ವೆಂಕಟರಾಜು ಮಾತನಾಡಿ, ‘ಹಾಸನದಲ್ಲಿ ನಡೆದಿರುವ ಲೈಂಗಿಕ ಹಗರಣವು ದೇಶವೇ ತಲೆ ತಗ್ಗಿಸುವಂತಹ ಅಮಾನವೀಯ ಘಟನೆ. ಈ ದೌರ್ಜನ್ಯದ ಕುರಿತಾಗಿ ಸರ್ಕಾರ ಈಗಾಗಲೇ ಕ್ರಮ ಜರುಗಿಸಿದೆ. ಎಸ್‌ಐಟಿ ತನಿಖೆ ನಡೆಸುತ್ತಿದೆ. ಅದನ್ನು ಇನ್ನಷ್ಟು ಚುರುಕುಗೊಳಿಸಬೇಕು’ ಎಂದರು.

‘ಈಗಾಗಲೇ ರೇವಣ್ಣ ಅವರನ್ನು ಬಂಧಿಸಲಾಗಿದ್ದು, ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರನ್ನೂ ಬಂಧಿಸಬೇಕು. ಆರೋಪಿಗಳ ವಿರುದ್ಧ ತಕ್ಷಣವೇ ಆರೋಪ ಪಟ್ಟಿ ಸಲ್ಲಿಸಬೇಕು. ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯರು ಹಾಗೂ ಅವರ ಕುಟುಂಬದವರು ಇದರ ಬಗ್ಗೆ ಮುಜುಗರಕ್ಕೆ ಒಳಗಾಗದೇ, ತಮಗಾಗಿರುವ ಅನ್ಯಾಯದ ವಿರುದ್ಧ ದೂರು ಸಲ್ಲಿಸಬೇಕು. ಇದಕ್ಕೆ ಪ್ರತಿಯೊಬ್ಬರ ಬೆಂಬಲ ದೊರೆಯಬೇಕುಠ ಎಂದರು.

ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ವೀರಭದ್ರ ನಾಯಕ, ಮುತ್ತಯ್ಯ, ಅಬ್ರಾಹಿಂ ಡಿ‘ ಸಿಲ್ವ, ಬ್ರಿಜೇಶ್, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಸುಭಾಷ್ ಮಾಡ್ರಹಳ್ಳಿ, ಉಲ್ಲಾಸ್, ಪುಟ್ಟಮ್ಮ, ರಾಜೇಶ್ವರಿ, ಸಾಕಮ್ಮ, ಪುಟ್ಟಗೌರಿ, ಸುಂದ್ರಮ್ಮ ಇತರರು ಭಾಗವಹಿಸಿದ್ದರು. 

ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಚಾಮರಾಜನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು
ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಮಹಿಳಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಚಾಮರಾಜನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು

ಕಠಿಣ ಶಿಕ್ಷೆಗೆ ಮಹಿಳಾ ಕಾಂಗ್ರೆಸ್‌ ಆಗ್ರಹ

ಜಿಲ್ಲಾ ಮಹಿಳಾ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಇಬ್ಬರ ಬಂಧನಕ್ಕೆ ಆಗ್ರಹಿಸಿದರು.  ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಸೇರಿದ ಪ್ರತಿಭಟನಕಾರರು. ಅಲ್ಲಿಂದ ಭುವನೇಶ್ವರಿ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಪ್ರಜ್ವಲ್‌ ರೇವಣ್ಣ ಹಾಗೂ ಅವರ ತಂದೆ ಎಚ್‌.ಡಿ.ರೇವಣ್ಣ ವಿರುದ್ಧ ಘೋಷಣೆ ಕೂಗಿದ ಅವರು ಸ್ವಲ್ಪ ಸಮಯ ವಾಹನ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.  ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲತಾ ಜತ್ತಿ ಮಾತನಾಡಿ ‘ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅನೇಕ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇಂತಹ ನಾಯಕರ ಅಗತ್ಯ ನಮಗಿಲ್ಲ. ಕೆಲಸ ಕೇಳಿಕೊಂಡು ಹೋದ ಮಹಿಳೆಯರ ಮೇಲೂ ದೌರ್ಜನ್ಯ ನಡೆಸಿರುವುದು ಖಂಡನೀಯ. ಮಾದರಿಯಾಗಿರಬೇಕಾದ ಶಾಸಕ ಎಚ್.ಡಿ.ರೇವಣ್ಣ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಬೇಕು. ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸಿ ರಕ್ಷಣೆ ಒದಗಿಸಬೇಕು’ ಎಂದು ಒತ್ತಾಯಿಸಿದರು.   ಪ್ರಧಾನ ಕಾರ್ಯದರ್ಶಿ ನಾಗರತ್ನ ಬ್ಲಾಕ್ ಅಧ್ಯಕ್ಷೆ ನಾಗಶ್ರೀ ಯಳಂದೂರು ಭಾಗ್ಯ ಹನೂರು ಸುವರ್ಣಾ ಗುಂಡ್ಲುಪೇಟೆ ರತ್ನಮ್ಮ ಕೊಳ್ಳೇಗಾಲ ಕೃಷ್ಣವೇಣಿ ನಗರಸಭೆ ಸದಸ್ಯೆ ಕಲಾವತಿ ಪದಾಧಿಕಾರಿಗಳಾದ ಪದ್ಮ ಪುರುಷೋತ್ತಮ ಕಾವೇರಿ ನಾಗಮ್ಮ ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT