ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ | ಶೌಚಾಲಯಗಳ ಕೊರತೆ; ಬಹಿರ್ದೆಸೆಗೆ ಪರದಾಟ

Published 17 ಜುಲೈ 2023, 5:45 IST
Last Updated 17 ಜುಲೈ 2023, 5:45 IST
ಅಕ್ಷರ ಗಾತ್ರ

ಜಿ.ಪ್ರದೀಪ್‌ಕುಮಾರ್‌

ಮಹದೇಶ್ವರ ಬೆಟ್ಟ: ಪ್ರಸಿದ್ದ ಧಾರ್ಮಿಕ ಯಾತ್ರ ಸ್ಥಳವಾದ ಮಲೆಮಹದೇಶ್ವರ ಸ್ವಾಮಿ ದೇವಾಲಯವು ಇತ್ತೀಚೆಗೆ ಹೆಚ್ಚು ಭಕ್ತರನ್ನು ಆಕರ್ಷಿಸುತ್ತಿದೆ. ಉತ್ತಮ ಆದಾಯವೂ ಬರುತ್ತಿದೆ. ಆದರೆ ಸಾಕಷ್ಟು ಶೌಚಾಲಯಗಳು ಇಲ್ಲದಿರುವುದರಿಂದ ಭಕ್ತರು ಕಿರಿಕಿರಿ ಅನುಭವಿಸಬೇಕಾಗಿದೆ. 

ಪವಾಡ ಪುರುಷನೆಂದೇ ಕರೆಯುವ ಮಾದಪ್ಪನ ಸನ್ನಿಧಿಗೆ ಕೆಲವು ವಾರಗಳಿಂದ ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಿದ್ದು, ಪ್ರತಿ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಂದು ಮಹದೇಶ್ವರ ಸ್ವಾಮಿಯ ದರ್ಶನಕ್ಕಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. 

ಬೆಟ್ಟ ವ್ಯಾ‍ಪ್ತಿಯಲ್ಲಿ, ದೇವಾಲಯದ ಆವರಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶೌಚಾಲಯಗಳು ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. 

ಬೆಟ್ಟದ ಕಾರ್ ಪಾರ್ಕಿಂಗ್ ಬಳಿ ಮೂರು ಶೌಚಾಲಯಗಳಿದ್ದು, ಅದರಲ್ಲಿ ಒಂದನ್ನು ನಿರ್ವಹಣೆಗಾಗಿ ಗುತ್ತಿಗೆಗೆ ನೀಡಲಾಗಿದೆ. ಹಣ ಪಾವತಿಸಿ ಶೌಚಾಲಯ ಬಳಸಬೇಕು. ಮತ್ತೊಂದು ಪ್ರಾಧಿಕಾರದ್ದು. ಜನಸಂದಣಿ ಇರುವ ಜಾಗದಲ್ಲಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಎರಡು ಶೌಚಾಲಗಳಿದ್ದು ಒಂದು ಸರ್ಕಾರಿ ಬಸ್ ನಿಲ್ದಾಣದಲ್ಲಿದ್ದರೆ ಮತ್ತೊಂದು ಪೊಲೀಸ್ ಠಾಣೆಯಲ್ಲಿ ಇರುವ ರಸ್ತೆಯಲ್ಲಿದ್ದು ಅದಕ್ಕೂ ಬೀಗ ಹಾಕಲಾಗಿದೆ. ಮಾರುಕಟ್ಟೆ ಆವರಣದಲ್ಲಿ ಒಂದೇ ಒಂದು ಶೌಚಾಲಯವಿದ್ದು, ಅದು ಕೂಡ ಅಶುಚಿತ್ವದಿಂದ ಕೂಡಿದೆ.

ಬಳಕೆಯಲ್ಲಿ ಇಲ್ಲದ ಶೌಚಾಲಯಗಳ ಆವರಣದ ತುಂಬೆಲ್ಲ ಗಿಡಗಂಟಿಗಳು ಬೆಳೆದು ನಿಂತಿವೆ. ಇವುಗಳನ್ನು ಭಕ್ತರ ಬಳಕೆಗೆ ಮುಕ್ತ ಮಾಡುವ ನಿಟ್ಟಿನಲ್ಲಿ ಪ್ರಾಧಿಕಾರ ಗಮನಹರಿಸುತ್ತಿಲ್ಲ ಎಂಬುದು ಭಕ್ತರ ದೂರು. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಉಪ ಕಾರ್ಯಧರ್ಶಿ ಚಂದ್ರಶೇಖರ್, 'ಸದ್ಯ, ಪ್ರಾಧಿಕಾರದ ಎಲ್ಲ  ಶೌಚಾಲಯಗಳು ಬಳಕೆಯಲ್ಲಿವೆ. ಮುಚ್ಚಿರುವ ಶೌಚಾಲಯಗಳ ಆವರಣ ಸ್ವಚ್ಛಗೊಳಿಸಿ ಅವುಗಳನ್ನೂ ಜನರ ಬಳಕೆಗೆ ಮುಕ್ತಗೊಳಿಸಲಾಗುವುದು’ ಎಂದು ಹೇಳಿದರು. 

ಮಹಿಳಾ ಭಕ್ತರಿಗೆ ತೊಂದರೆ

‘ಕ್ಷೇತ್ರಕ್ಕೆ ಕೋಟ್ಯಂತರ ರೂಪಾಯಿ ಆದಾಯ ಬರುತಿದ್ದರೂ ಕನಿಷ್ಠ ಮೂಲ ಸೌಕರ್ಯವನ್ನು ಭಕ್ತಾದಿಗಳಿಗೆ ಒದಗಿಸಿಲ್ಲ. ನೂರಾರು ಕಿ.ಮೀ. ದೂರದಿಂದ ದೇವಾಲಯಕ್ಕೆ ಬರುವಂತಹ ಭಕ್ತಾದಿಗಳು ಬಸ್ ಇಳಿಯುತ್ತಿದ್ದಂತೆ ಮೊದಲು ಹುಡುಕುವುದು ಶೌಚಾಲಯಗಳನ್ನು. ಬಸ್ ನಿಲ್ದಾಣದ ಸಮೀಪವಿರುವ ಒಂದು ಶೌಚಾಲಯಕ್ಕೆ ಬೀಗ ಜಡಿದಿದ್ದು ಬಯಲಿನಲ್ಲೇ ಮೂತ್ರ ವಿಸರ್ಜನೆಯನ್ನು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದು ಮೈಸೂರಿನಿಂದ ಬಂದಿದ್ದ ಭಕ್ತರಾದ ಆನಂದ್‌ಕುಮಾರ್‌ ದೂರಿದರು.  ‘ಪುರುಷರು ಬಯಲಿಗೆ ಹೋಗಿ ಬಹಿರ್ದೆಸೆ ಮಾಡುತ್ತಾರೆ. ಆದರೆ ಹೆಣ್ಣುಮಕ್ಕಳಿಗೆ ಕಷ್ಟ. ಪ್ರಾಧಿಕಾರದವರು ಶೌಚಾಲಯಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು’ ಎಂದು ಅವರು ಹೇಳಿದರು. 

ದೇವಾಲಯದ ಮುಂಭಾಗವಿರುವ ಪಾರ್ಕಿಂಗ್ ಸ್ಥಳದಲ್ಲಿರುವ ಶೌಚಾಲಯದ ಒಳಭಾಗ ಗಿಡಗಂಟಿಗಳು ಬೆಳೆದಿರುವುದು
ದೇವಾಲಯದ ಮುಂಭಾಗವಿರುವ ಪಾರ್ಕಿಂಗ್ ಸ್ಥಳದಲ್ಲಿರುವ ಶೌಚಾಲಯದ ಒಳಭಾಗ ಗಿಡಗಂಟಿಗಳು ಬೆಳೆದಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT