ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ತುಂತುರು ಮಳೆ: ಹಿಡುವಳಿದಾರರ ಕೈಹಿಡಿದ ಹೈಬ್ರಿಡ್ ‘ಬಿಳಿಜೋಳ’

Published 5 ಜುಲೈ 2024, 6:44 IST
Last Updated 5 ಜುಲೈ 2024, 6:44 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಮಳೆಯ ಅಭಾವ ರೈತರನ್ನು ತೀವ್ರವಾಗಿ ಕಾಡಿತ್ತು. ಒಂದೆರಡು ಬಾರಿ ವರ್ಷಧಾರೆಯಾದರೂ ಭತ್ತ ಬಿತ್ತನೆ ಅವಧಿ ಮುಗಿದಿದ್ದರಿಂದ ರೈತರು ಭತ್ತಕ್ಕೆ ಪರ್ಯಾಯವಾಗಿ ಹೈಬ್ರಿಡ್‌ ಬಿಳಿ ಜೋಳ ಬಿತ್ತನೆ ಮಾಡಿದ್ದಾರೆ. ಭೂಮಿಯಲ್ಲಿ ತೇವಾಂಶ ಉಳಿದುಕೊಂಡಿದ್ದರಿಂದ ಹೈಬ್ರಿಡ್ ಜೋಳಕ್ಕೆ ಪೂರಕ ವಾತಾವರಣ ನಿರ್ಮಾಣವಾಗಿ ಇದೀಗ ಬೆಳೆ ಕಟಾವಿನ ಹಂತಕ್ಕೆ ಬಂದು ತಲುಪಿದೆ. ಮಳೆಯ ಕೊರತೆಯ ಮಧ್ಯೆಯೂ ರೈತರು ಹೈಬ್ರಿಡ್ ಬಿಳಿ ಜೋಳದ ಉತ್ತಮ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

ತಾಲ್ಲೂಕಿನಲ್ಲಿ ಬೆಳೆಗಾರರು ಬಿಳಿ ಜೋಳ ಕೃಷಿಯಿಂದ ಹಿಂದೆ ಸರಿದಿದ್ದರು. ಬಿಳಿ ಜೋಳದ ಬದಲಾಗಿ ವಾಣಿಜ್ಯ ಬೆಳೆಗಳಾದ ಕಬ್ಬು, ಮೆಕ್ಕೆಜೋ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲು ಆಸಕ್ತಿ ತೋರಿದ್ದರು. ಆದರೆ ಪ್ರತಿಕೂಲ ಹವಾಮಾನದಿಂದ ವಾಣಿಜ್ಯ ಬೆಳೆಗಳನ್ನು ಕೈಬಿಟ್ಟು ಮತ್ತೆ ಬಿಳಿ ಜೋಳ ಬೆಳೆಯುವತ್ತ ಆಸಕ್ತಿ ತೋರಿದ್ದಾರೆ. ಪ್ರತಿಕೂಲ ಹವಾಮಾನದ ನಡುವೆಯೂ ಉತ್ತಮ ಬೆಳೆ ತೆಗೆಯಲು ಸಾಧ್ಯ ಎಂಬುದನ್ನು ಹೊನ್ನೂರು ಗ್ರಾಮದ ಸಾಗುವಳಿದಾರರು ತೋರಿಸಿಕೊಟ್ಟಿದ್ದಾರೆ.

ಅಗರ ಮತ್ತು ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬಿಳಿ ಜೋಳ ಬೆಳೆಯುವ ಕೃಷಿಕರು ಇಲ್ಲ. ಹೊನ್ನೂರಿಗೆ ಮಿತಿಗೊಂಡಂತೆ 100 ಹೆಕ್ಟೇರ್ ಜಮೀನಿನಲ್ಲಿ ಜೋಳ ಬಿತ್ತನೆ ಮಾಡಿದ್ದು, ಈಗ ಬೆಳೆ ಹಾಲು ತೆನೆಯ ಹಂತದಲ್ಲಿ ಇದೆ. ಇನ್ನೊಂದು ತಿಂಗಳಲ್ಲಿ ಕೊಯ್ಲಿಗೆ ಬರಲಿದೆ.

‘ಒಂದು ಎಕೆರೆಯಲ್ಲಿ ಬೆಳೆದ ಬಿಳಿಜೋಳ ಉತ್ತಮ ಇಳುವರಿ ಸಿಗುವ ನಿರೀಕ್ಷೆ ಮೂಡಿಸಿದೆ. ಆಗಾಗ ತುಂತುರು ಹನಿ ಸುರಿಯುತ್ತಿರುವುದರಿಂದ ಬಿತ್ತನೆ ನಂತರ ಒಮ್ಮೆಯೂ ನೀರು ಪೂರೈಸಿಲ್ಲ. ಬೆಳೆ ಸುಳಿ ಹಾಕುವಾಗ ಮತ್ತು ತೆನೆಗಟ್ಟುವ ಅವಧಿಯಲ್ಲಿ ಔಷಧಿ ಸಿಂಪಡಣೆ ಮಾಡಿದ್ದು ಕಡಿಮೆ ಪ್ರಮಾಣದಲ್ಲಿ ರಸಾಯನಿಕ ಗೊಬ್ಬರ ಬಳಕೆ ಮಾಡಿದ್ದೇವೆ. ನಿರ್ವಹಣಾ ವೆಚ್ಚವೂ ಹೆಚ್ಚಿಲ್ಲ ಎಂದು ಕೃಷಿಕ ಹೊನ್ನೂರು ಶಿವಶೆಟ್ಟಿ ಹೇಳಿದರು.

ಮೂರು ವರ್ಷಗಳಿಂದ ರೈತರು ಬರದ ತೀವ್ರತೆ ಅನುಭವಿಸಿದ್ದರು. ಈ ಸಲ ಮುಂಗಾರು ಸುರಿಯುವ ನಿರೀಕ್ಷೆ ಇದೆ. ಬಿಳಿಜೋಳ ರೈತರ ಆದಾಯದ ಜೊತೆಗೆ ಜಾನುವಾರುಗಳಿಗೆ ಅಗತ್ಯ ಮೇವನ್ನು ಒದಗಿಸುತ್ತದೆ. ಜೋಳ ಕಟಾವು ಮಾಡಿದ ನಂತರ ತೇವಾಂಶ ಉಳಿದರೆ ಮತ್ತೆ ಭತ್ತ ಬಿತ್ತನೆಗೂ ಭೂಮಿ ಹದಗೊಳಿಸಬಹುದು ಎಂಬುದು ಕೃಷಿಕರ ಮಾತು.

ಹೈಬ್ರಿಡ್ ಜೋಳ ಫಸಲು ಉತ್ತಮವಾಗಿದ್ದು, ಮನೆ ಬಳಕೆಗೆ ಇಟ್ಟುಕೊಂಡು ಮಾರಾಟ ಮಾಡಬಹುದು. ಮಾರುಕಟ್ಟೆಯಲ್ಲಿ ಬೇಡಿಕೆಯೂ ಹೆಚ್ಚಿದ್ದು ಉತ್ತಮ ಧಾರಣೆ ಇದೆ. ಹೈಬ್ರಿಡ್‌ ಬಿಳಿ ಜೋಳಕ್ಕೆ ಹೆಚ್ಚಿನ ಕೀಟಬಾಧೆ ಕಾಡದು ಎನ್ನುತ್ತಾರೆ ರೈತ ಮಲ್ಲಪ್ಪ.

‘ಔಷಧೋಪಚಾರ ಅತ್ಯಗತ್ಯ’

ತಾಲ್ಲೂಕಿನಲ್ಲಿ ಸಿಎಚ್ಎಸ್-5 ತಳಿಯ ಹೈಬ್ರಿಡ್ ಬಿಳಿ ಜೋಳ ಬಿತ್ತನೆಗೆ ಬೇಸಾಯಗಾರರು ಒತ್ತು ನೀಡಿದ್ದಾರೆ. ಎಕರೆಗೆ 30 ರಿಂದ 35 ಕ್ವಿಂಟಲ್ ಇಳುವರಿ ನಿರೀಕ್ಷಿಸಬಹುದು. ಬೆಳೆಗೆ ತಂಪು ವಾತಾವರಣ ಪೂರಕವಾಗಿದ್ದು ಸದ್ಯ ಹವಾಮಾನವೂ ಹಿತಕರವಾಗಿದೆ. ಮಳೆ ಹೆಚ್ಚಾದಲ್ಲಿ ಕೀಟಬಾಧೆ ಕಂಡುಬರಲಿದೆ. ರೈತರು ರಿಯಾಯಿತಿ ದರದಲ್ಲಿ ಕೀಟ ನಾಶಕ ಪಡೆದು ಸಿಂಪಡಿಸಬೇಕು ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT