ಸೋಮವಾರ, ಫೆಬ್ರವರಿ 17, 2020
15 °C
ಜಿಲ್ಲಾಡಳಿತ ಭವನದಲ್ಲಿ ರಾಜಕೀಯ ಪ್ರಹಸನ: ಜಿ.ಪಂ.ಅಧ್ಯಕ್ಷೆ ವಿರುದ್ಧ ಕ್ರಾಂಗ್ರೆಸ್‌ ಸದಸ್ಯರ ಆಕ್ರೋಶ, ಸಾಮಾನ್ಯ ಸಭೆಗೆ ಬಹಿಷ್ಕಾರ

ಬೈದಾಡಿದ ಅಧ್ಯಕ್ಷೆ ಶಿವಮ್ಮ– ‘ಕೈ’ ಸದಸ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವರಿಷ್ಠರ ಸೂಚನೆಯನ್ನೂ ಕಡೆಗಣಿಸಿ, ಆಂತರಿಕ ಒಪ್ಪಂದದಂತೆ ತಮ್ಮ ಹುದ್ದೆಗೆ ರಾಜೀನಾಮೆ ನೀಡದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ ಅವರ ವಿರುದ್ಧ ಕಾಂಗ್ರೆಸ್‌ ಸದಸ್ಯರೇ ಮುಗಿಬಿದ್ದು, ಅಧ್ಯಕ್ಷೆ ಮತ್ತು ಸದಸ್ಯರು  ಬೈದಾಡಿಕೊಂಡ ಘಟನೆ ಬುಧವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆಯಿತು. 

ಜಿಲ್ಲಾ ಪಂಚಾಯಿತಿಯ ಇತಿಹಾಸದಲ್ಲಿ, ಇದೇ ಮೊದಲ ಬಾರಿಗೆ ಅಧ್ಯಕ್ಷ‌ರ ವಿರುದ್ಧ ಆಡಳಿತ ಪಕ್ಷದ ಸದಸ್ಯರೇ ಬಹಿರಂಗವಾಗಿ ಅಧಿಕಾರ ದುರ್ಬಳಕೆ, ಭ್ರಷ್ಟಾಚಾರ ನಡೆಸಿರುವ ಆರೋಪ ಮಾಡುವ ಮೂಲಕ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಪಟ್ಟು ಹಿಡಿದರು. ಅಲ್ಲದೇ ಅಧ್ಯಕ್ಷರ ಕಚೇರಿ ಮುಂದೆ ದಿಢೀರ್‌ ಪ್ರತಿಭಟನೆ ನಡೆಸಿ, ಅಧ್ಯಕ್ಷರು ಒಳಗಿದ್ದ ಸಂದರ್ಭದಲ್ಲಿ ಹೊರಗಿನಿಂದ ಬಾಗಿಲ ಚಿಲಕ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

ಬುಧವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ಕರೆಯಲಾಗಿತ್ತು. ಅಧ್ಯಕ್ಷೆ ಶಿವಮ್ಮ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌.ನಾರಾಯಣರಾವ್‌, ಬಿಜೆಪಿಯ ನಾಲ್ವರು ಸದಸ್ಯರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಕಾಂಗ್ರೆಸ್‌ನ ಇತರ ಸದಸ್ಯರು ಬಂದಿರಲಿಲ್ಲ. 

11.30ರ ಹೊತ್ತಿಗೆ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌ ಸೇರಿದಂತೆ ಕಾಂಗ್ರೆಸ್‌ನ 12 ಸದಸ್ಯರು ಸಭಾಂಗಣದ ಪ್ರವೇಶ ದ್ವಾರದ ಬಳಿ ಅಧ್ಯಕ್ಷೆ ಶಿವಮ್ಮ ವಿರುದ್ಧ ಘೋಷಣೆ ಕೂಗಲು ಆರಂಭಿಸಿದರು. 

‍‘ಸದಸ್ಯರ ವಿಶ್ವಾಸ ಗಳಿಸಲು ವಿಫಲವಾಗಿರುವ, ವರಿಷ್ಠರ ಸೂಚನೆಯನ್ನು ಪಾಲಿಸದ ಅಧ್ಯಕ್ಷೆ ಶಿವಮ್ಮಗೆ ಧಿಕ್ಕಾರ’ ಎಂದು ಕೂಗಿದ ಸದಸ್ಯರು, ಸಾಮಾನ್ಯಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದರು. 

ನಾಟಕೀಯ ಬೆಳವಣಿಗೆ: ಕಾಂಗ್ರೆಸ್‌ ಸದಸ್ಯರು ಸಭೆಗೆ ಬರುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ, ಕೋರಂ ಕೊರತೆಯಿಂದಾಗಿ ಜಿಲ್ಲಾ ಪಂಚಾಯಿತಿ ಸಭೆಯನ್ನು ಮುಂದೂಡಲಾಯಿತು.

ಅಧ್ಯಕ್ಷೆ ಶಿವಮ್ಮ ಅವರು ಸಭಾಂಗಣದಿಂದ ಹೊರಗಡೆ ಬರುತ್ತಿದ್ದಂತೆಯೇ, ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರು ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಲು ಮತ್ತೆ ಆರಂಭಿಸಿದರು. ಮಹಿಳಾ ಸದಸ್ಯರು ಅದರಲ್ಲೂ ಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಶ್ವಿನಿ ಹಾಗೂ ಶಶಿಕಲಾ ಅವರು ಶಿವಮ್ಮ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಅಶ್ವಿನಿ ಅವರು ಒಂದು ಹೆಜ್ಜೆ ಮುಂದೆ ಹೋಗಿ ಏಕವಚನದಲ್ಲೇ ಬೈಯುವುದಕ್ಕೆ ಆರಂಭಿಸಿದರು. ಪರಿಸ್ಥಿತಿ, ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಶಿವಮ್ಮ ಪತಿ ಕೃಷ್ಣ, ಸದಸ್ಯ ಕೆರೆಹಳ್ಳಿ ನವೀನ್‌ ಅವರು ಶಿವಮ್ಮ ಹಾಗೂ ಅಶ್ವಿನಿ ಅವರನ್ನು ತಡೆದರು. 

ಶಿವಮ್ಮ ಅವರು ತಮ್ಮ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದಾಗ ಅಶ್ವಿನಿ ಹಾಗೂ ಇತರ ಸದಸ್ಯರು ಬೈಯುತ್ತಾ ಅವರನ್ನೇ ಹಿಂಬಾಲಿಸಿದರು. ಶಿವಮ್ಮ ಕಚೇರಿ ಪ್ರವೇಶಿಸಿದ ನಂತರ ಎಲ್ಲ ಸದಸ್ಯರು ಕಚೇರಿ ಎದುರು ಕುಳಿತು ಪ್ರತಿಭಟನೆ ಮುಂದುವರಿಸಿದರು. ಕಚೇರಿ ಬಾಗಿಲನ್ನು ಹಾಕಿ ಹೊರಗಡೆಯಿಂದ ಚಿಲಕ ಹಾಕಿದರು. ಅಧ್ಯಕ್ಷೆ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಮಾಡಿದ ಸದಸ್ಯರು, ರಾಜೀನಾಮೆ ಕೊಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು. 

ಪ್ರತಿಭಟನೆ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪೊಲೀಸರು, ಸದಸ್ಯರನ್ನು ಮನವೊಲಿಸಲು ಯತ್ನಿಸಿದರು. ಆದರೆ, ಪ್ರತಿಭಟನೆ ವಾಪಸ್‌ ಪಡೆಯಲು ಅವರು ಒಪ್ಪಲಿಲ್ಲ. ಸ್ಥಳಕ್ಕೆ ಬಂದ ಸಿಇಒ ಬಿ.ಎಚ್‌.ನಾರಾಯಣರಾವ್‌ ಅವರು ಸದಸ್ಯರೊಂದಿಗೆ ಮಾತನಾಡಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌, ಯೋಗೇಶ್‌, ಬರಗಿ ಚೆನ್ನಪ್ಪ ಮತ್ತಿತರರು, ‘ಅಧ್ಯಕ್ಷೆ ಶಿವಮ್ಮ ಅವರು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಏನೂ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಬಂದ ಅನುದಾನವನ್ನು ಎಲ್ಲ ಸದಸ್ಯರ ಕ್ಷೇತ್ರಗಳಿಗೆ ಸರಿಯಾಗಿ ಹಂಚದೆ, ತಮ್ಮ ಕ್ಷೇತ್ರಕ್ಕೆ ಮೀಸಲಿಡುತ್ತಿದ್ದಾರೆ. ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಬೇಕು’ ಎಂದು ಸಿಇಒ ಅವರನ್ನು ಆಗ್ರಹಿಸಿದರು. 

‘ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಖಾಸಗಿ ಉದ್ದೇಶಕ್ಕೆ ಸರ್ಕಾರಿ ಕಾರನ್ನು ಬಳಸಿ ಅಪಘಾತ ಮಾಡಿಸಿದ್ದಾರೆ. 18 ತಿಂಗಳುಗಳಿಂದ ಕಾರು ಶೋರೂಮ್‌ನಲ್ಲಿದೆ. ಅದರ ವೆಚ್ಚವನ್ನು ಅವರ ಕೈಯಿಂದಲೇ ಭರಿಸಬೇಕು. ಶಿಸ್ತು ಕ್ರಮವನ್ನೂ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು. 

ಸಭೆಗೆ ಹಾಜರಾಗುವುದಿಲ್ಲ: ‘ಶಿವಮ್ಮ ನೇತೃತ್ವದಲ್ಲಿ ನಡೆಯುವ ಯಾವ ಸಭೆಗೂ ನಾವು ಹಾಜರಾಗುವುದಿಲ್ಲ. ಜಿಲ್ಲೆಯ ಅಭಿವೃದ್ಧಿಗಾಗಿ ಯೋಜನೆಗಳಿಗೆ, ಬಜೆಟ್‌ಗೆ ಅನುಮೋದನೆ ನೀಡಲು ನಾವು ಸಿದ್ಧರಿದ್ದೇವೆ. ಅದಕ್ಕಾಗಿ ಅಧ್ಯಕ್ಷರನ್ನು ದೂರವಿಟ್ಟು, ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಬೇಕು. ಆ ಸಭೆಗಳಿಗೆ ನಾವು ಹಾಜರಾಗುತ್ತೇವೆ’ ಎಂದು ಸದಸ್ಯರು ಹೇಳಿದರು.

ಸಿಇಒ ಬಿ.ಎಚ್‌.ನಾರಾಯಣ ರಾವ್‌ ಅವರು ಮಾತನಾಡಿ, ‘ಇಂದು ನಡೆದಿರುವ ಬೆಳವಣಿಗೆಗಳ ಬಗ್ಗೆ ನಾನು ಸರ್ಕಾರಕ್ಕೆ ವರದಿ ಕಳುಹಿಸುತ್ತೇನೆ. ಉಪಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸುವುದಕ್ಕೆ ಅವಕಾಶ ಇದೆಯೇ ಎಂಬುದನ್ನೂ ಪರಾಮರ್ಶಿಸುತ್ತೇನೆ. ಈಗ ಪ್ರತಿಭಟನೆಯನ್ನು ಕೈಬಿಡಿ’ ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸದಸ್ಯರು ಪ್ರತಿಭಟನೆ ವಾಪಸ್‌ ಪಡೆದರು. 

ಶಿವಮ್ಮ ವಿರುದ್ಧ ಸದಸ್ಯರ ಆಕ್ರೋಶ
ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಉಪಾಧ್ಯಕ್ಷ ಕೆ.ಎಸ್‌.ಮಹೇಶ್‌ ಹಾಗೂ ಇತರ ಸದಸ್ಯರು ಶಿವಮ್ಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

‘ಪಕ್ಷದಲ್ಲಿ ನಡೆದಿರುವ ಒಪ್ಪಂದದಂತೆ, ವರಿಷ್ಠರ ಸೂಚನೆಯಂತೆ ಶಿವಮ್ಮ ನಡೆದುಕೊಂಡಿಲ್ಲ. ನವೆಂಬರ್‌ 1ರಂದು ಅವರು ರಾಜೀನಾಮೆ ಕೊಡಬೇಕಿತ್ತು. ಯಾವ ಸದಸ್ಯರನ್ನೂ ಅವರು ವಿಶ್ವಾಸದಿಂದ ನಡೆಸಿಕೊಳ್ಳುತ್ತಿಲ್ಲ. ಸ್ಥಾಯಿ ಸಮಿತಿಗಳ ಸಭೆಯನ್ನು ನಡೆಸುತ್ತಿಲ್ಲ. ತಮ್ಮ ಮನ ಬಂದಂತೆ ವರ್ತಿಸುತ್ತಿದ್ದಾರೆ. ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಕಾರನ್ನು ಖಾಸಗಿ ಉದ್ದೇಶಕ್ಕೆ ಬಳಸಿ ಅಪಘಾತ ಮಾಡಿಸಿದ್ದಾರೆ. ಅದಿನ್ನೂ ಇತ್ಯರ್ಥ ಆಗಿಲ್ಲ’ ಎಂದು ದೂರಿದರು.    

ಯೋಗೇಶ್‌ ಅವರು ಮಾತನಾಡಿ, ‘ಅಧ್ಯಕ್ಷರಿಗೆ ಆಡಳಿತದಲ್ಲಿ ನಿಯಂತ್ರಣ ಇಲ್ಲ. ಅಧಿಕಾರಿಗಳೊಂದಿಗೆ ಸೇರಿ ವ್ಯವಹಾರದಲ್ಲಿ ತೊಡಗಿದ್ದಾರೆ. ಯಾವ ಸದಸ್ಯರೂ ಅವರ ಬೆಂಬಲಕ್ಕೆ ನಿಲ್ಲುತ್ತಿಲ್ಲ. 20 ತಿಂಗಳ ಅಧಿಕಾರಾವಧಿ ನಂತರ ಅವರು ರಾಜೀನಾಮೆ ಕೊಡಬೇಕಿತ್ತು. ತಡವಾಗಿ ರಾಜೀನಾಮೆ ನೀಡಿ, ಅದನ್ನು ವಾಪಸ್‌ ಪಡೆದಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಕಾಂಗ್ರೆಸ್‌ನಲ್ಲಿ ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ನಮಗೆ ಅಧಿಕಾರ ಕೊಟ್ಟಿದ್ದು ಪಕ್ಷ. ಅಂತಹದ್ದರಲ್ಲಿ ಶಿವಮ್ಮ ಅವರು ಪಕ್ಷದ ಸೂಚನೆ ಧಿಕ್ಕರಿಸಿದ್ದಾರೆ. ಅವರಿಗೆ ರಾಜಕೀಯವಾಗಿ ಸ್ಥಾನಮಾನ ನೀಡಲು ಕಾರಣವಾದ ಹನೂರು ಶಾಸಕ ಆರ್‌.ನರೇಂದ್ರ ಅವರಿಗೆ ಮೋಸ ಮಾಡಿದ್ದಾರೆ. ಮಾಜಿ ಸಂಸದ ಧ್ರುವನಾರಾಯಣ, ಶಾಸಕರಾದ ಪುಟ್ಟರಂಗಶೆಟ್ಟಿ.. ಹೀಗೆ ಎಲ್ಲರಿಗೂ ಮೋಸ ಮಾಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರಿಗೂ ನಾವು ದೂರು ನೀಡಿದ್ದೇವೆ’ ‌ಎಂದರು. 

‘ಸರಿಯಾಗಿ ಸಭೆಯನ್ನೂ ನಡೆಸಿಲ್ಲ. 20 ತಿಂಗಳ ಅವಧಿಯಲ್ಲಿ 10 ಸಾಮಾನ್ಯ ಸಭೆಗಳು ನಡೆಸಬೇಕಿತ್ತು. ಐದು ಮಾತ್ರ ಆಗಿದೆ. ಸ್ಥಾಯಿ ಸಮಿತಿ ಸಭೆಗಳನ್ನೂ ಮಾಡಿಲ್ಲ’ ಎಂದು ದೂರಿದರು.

ಅಶ್ವಿನಿ ಅವರು ಮಾತನಾಡಿ, ‘ವರಿಷ್ಠರ ಸೂಚನೆಯನ್ನು ಧಿಕ್ಕರಿಸಿರುವ ಅಧ್ಯಕ್ಷರು ಸರಿಯಾಗಿ ಆಡಳಿತ ನಡೆಸುತ್ತಿಲ್ಲ. ಇತರ ಸದಸ್ಯರನ್ನು ವಿಶ್ವಾಸದಿಂದ ಕಾಣುತ್ತಿಲ್ಲ’ ಎಂದರು. 

‘ಇತ್ತೀಚೆಗೆ ಬಂದಿದ್ದ ಒಂದು ಕೋಟಿ ಅನುದಾನದಲ್ಲಿ ₹60 ಲಕ್ಷವನ್ನು ಅಧ್ಯಕ್ಷರು ತಮ್ಮ ಕ್ಷೇತ್ರಕ್ಕೇ ಹಂಚಿಕೆ ಮಾಡಿದ್ದಾರೆ’ ಎಂದು ಸದಸ್ಯರು ಆರೋಪಿಸಿದರು. 

ಸುಳ್ಳು ಆರೋಪ: ಶಿವಮ್ಮ
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಮ್ಮ ಅವರು, ‘ನನ್ನ ವಿರುದ್ಧ ಸದಸ್ಯರು ವೈಯಕ್ತಿಕವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ವರಿಷ್ಠರ ಸೂಚನೆಯನ್ನು ಪಾಲಿಸುತ್ತೇನೆ. ಫೆಬ್ರುವರಿಯಲ್ಲಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೇನೆ. ವರಿಷ್ಠರು ಮಾರ್ಚ್‌ವರೆಗೂ ಅವಕಾಶ ಕೊಟ್ಟಿದ್ದಾರೆ. ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಅಶ್ವಿನಿ ಅವರು ನನ್ನ ವಿರುದ್ಧ ಏಕವಚನ ಪ್ರಯೋಗ ಮಾಡಿದ್ದಾರೆ’ ಎಂದು ಹೇಳಿದರು. 

‘ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸುವ ಸಲುವಾಗಿಯೇ ಸಾಮಾನ್ಯ ಸಭೆ ಕರೆಯಲಾಗಿದೆ. ಸಭೆಗೆ ಇವರು ಬಂದಿಲ್ಲ. ಇಲ್ಲಿ ಈ ರೀತಿ ಮಾತನಾಡುತ್ತಿದ್ದಾರೆ. ಯಾಕೆ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದುನ್ನು ನೀವು ಅವರ ಬಳಿಯೇ ಕೇಳಬೇಕು’ ಎಂದರು.

ಚರ್ಚಿಸಿ ಬಗೆಹರಿಸಲಿ
‘ಕಾಂಗ್ರೆಸ್‌ ಪಕ್ಷದ ಸದಸ್ಯರು ಪಕ್ಷದ ಮಟ್ಟದಲ್ಲಿ ಆಂತರಿಕವಾಗಿ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಅದು ಬಿಟ್ಟು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ, ಸಭೆ ನಡೆಯದಂತೆ ಮಾಡುವುದು ಸರಿಯಲ್ಲ’ ಎಂದು ಬಿಜೆಪಿ ಸದಸ್ಯರಾದ ಸಿ.ಎನ್‌.ಬಾಲರಾಜು, ಇರ್ಷತ್‌ ಭಾನು ಅವರು ಹೇಳಿದರು. 

ಅವಕಾಶ ನೀಡಿಲ್ಲ: ಮರಿಸ್ವಾಮಿ
ಪಕ್ಷದ ಆಂತರಿಕ ಒಪ್ಪಂದ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರ ತೀರ್ಮಾನದಂತೆ 18 ತಿಂಗಳು ಅಧಿಕಾರ ಪೂರ್ಣಗೊಳಿಸಿ 2019ರ ಅಕ್ಟೋಬರ್‌ 31 ಮುಗಿಯುತ್ತಿದ್ದಂತೆಯೇ ರಾಜೀನಾಮೆ ಕೊಡಬೇಕಿತ್ತು. ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷನಾಗಿ ರಾಜೀನಾಮೆ ನೀಡಬೇಕು ಎಂದು ನಾನು ಸೂಚಿಸಿದ್ದೇನೆ. ಮುಖಂಡರಾದ ಆರ್‌.ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಆರ್‌.ನರೇಂದ್ರ ಹಾಗೂ ಮುಖಂಡ ಗಣೇಶ್‌ ಪ್ರಕಾಶ್‌ ಅವರೂ ಕೇಳಿಕೊಂಡಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಮರಿಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

‘ಜಿಲ್ಲೆಯ ವರಿಷ್ಠರು ಮಾರ್ಚ್‌ವರೆಗೆ ಅವಕಾಶ ಕೊಟ್ಟಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆ ನೀಡಿ, ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ. ಜಿಲ್ಲಾ ವರಿಷ್ಠರು ಯಾವುದೇ ಕಾಲಾವಕಾಶ ನೀಡಿಲ್ಲ’ ಎಂದು ಸ್ಪಷ್ಟ ಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು