ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ಇಸ್ಕಾನ್‌ಗೆ 5.23 ಎಕರೆ ‘ಸರ್ಕಾರಿ ಬೀಳು’ ಜಾಗ; ಸಚಿವರ ಶಿಫಾರಸು

ಚಿಕ್ಕಬಳ್ಳಾಪುರ ತಾಲ್ಲೂಕಿನ ಯರ‍್ರಮಾರೇನಹಳ್ಳಿ ಗ್ರಾಮದಲ್ಲಿ 5.23 ಎಕರೆ ಜಮೀನು
Published : 29 ಸೆಪ್ಟೆಂಬರ್ 2024, 4:49 IST
Last Updated : 29 ಸೆಪ್ಟೆಂಬರ್ 2024, 4:49 IST
ಫಾಲೋ ಮಾಡಿ
Comments

ಚಿಕ್ಕಬಳ್ಳಾಪುರ: ತಾಲ್ಲೂಕಿನ ಯರ‍್ರಮಾರೇನಹಳ್ಳಿ ಗ್ರಾಮದಲ್ಲಿ 5.23 ಎಕರೆ ‘ಸರ್ಕಾರಿ ಬೀಳು’ ಜಾಗವನ್ನು ಇಸ್ಕಾನ್ ಸಂಸ್ಥೆಗೆ ಮಂಜೂರು ಮಾಡುವ ಯತ್ನಗಳು ಸರ್ಕಾರದ ಮಟ್ಟದಲ್ಲಿ ನಡೆದಿವೆ. 

ಈ ಸಂಬಂಧ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೆ ವರದಿ ಸಹ ಸಲ್ಲಿಸಿದ್ದಾರೆ. ಮಂಡಿಕಲ್ಲು ಹೋಬಳಿಯಲ್ಲಿ ಭೂಮಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚಿದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರ ಪ್ರಕಾರ ಇಲ್ಲಿ ಎಕರೆಗೆ ಕನಿಷ್ಠ ₹40 ಲಕ್ಷಕ್ಕೂ ಹೆಚ್ಚಿನ ಮೌಲ್ಯವಿದೆ. ರಾಷ್ಟ್ರೀಯ ಹೆದ್ದಾರಿ 44ರಿಂದ ಪ್ರಸ್ತಾವಿತ ಜಮೀನು 22 ಕಿ.ಮೀ ದೂರದಲ್ಲಿ ಇದೆ.

ಉಪವಿಭಾಗಾಧಿಕಾರಿ ನೀಡಿರುವ ಪರಿಶೀಲನಾ ವರದಿಯ ಪ್ರಕಾರ ಯರ‍್ರಮಾರೇನಹಳ್ಳಿ ಗ್ರಾಮದಲ್ಲಿ ಖುಷ್ಕಿ ಜಮೀನು ಬೆಲೆ ಎಕರೆಗೆ ₹5 ಲಕ್ಷವಿದೆ!

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯ ಯರ‍್ರಮಾರೇನಹಳ್ಳಿ ಸರ್ವೆ ನಂಬರ್‌ 187ರಲ್ಲಿ 4.38 ಎಕರೆ ಮತ್ತು ಸರ್ವೆ ನಂಬರ್‌ 191ರಲ್ಲಿ 25 ಗುಂಟೆ ಸೇರಿ ಒಟ್ಟು 5.23 ಎಕರೆ ಜಮೀನನ್ನು ಅಕ್ಷಯ ಪಾತ್ರ ಯೋಜನೆಯ ಅಡುಗೆ ಮನೆ ಮತ್ತು ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲೆ ನಿರ್ಮಾಣಕ್ಕೆ ಕೊಡುವಂತೆ ಇಸ್ಕಾನ್ ಅಧ್ಯಕ್ಷರು, ಕಂದಾಯ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದರು. 

ಕಂದಾಯ ಸಚಿವರು, ‘ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವುದು’ ಎಂದು ಷರಾ ಬರೆದಿದ್ದಾರೆ. ಅಲ್ಲದೆ ಈ ಮನವಿಯನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಸಹ ಸೂಚಿಸಿದ್ದಾರೆ.

ಪರಿಶೀಲನೆಯ ಅಂಶಗಳಲ್ಲಿ ಏನಿದೆ:

ಸಚಿವರು ಮತ್ತು ಶಾಸಕರ ಸೂಚನೆ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರು ಪರಿಶೀಲಿಸಿ ಜಿಲ್ಲಾಧಿಕಾರಿ ಅವರಿಗೆ ವರದಿ ಸಲ್ಲಿಸಿದ್ದಾರೆ. ಈ ಎಲ್ಲವನ್ನೂ ಪರಿಗಣಿಸಿ ಜಿಲ್ಲಾಧಿಕಾರಿ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದಾರೆ.

ಗ್ರಾಮದ ಸರ್ವೆ 187ರಲ್ಲಿ ಅರ್‌ಟಿಸಿಯಂತೆ ಒಟ್ಟು 5.13 ಎಕರೆ ಜಮೀನು ಇದೆ. ಈ ಪೈಕಿ ಬಿ ಖರಾಬು 15 ಗುಂಟೆ. ಉಳಿಕೆ 4.38 ಎಕರೆ ‘ಸರ್ಕಾರಿ ಬೀಳು’ ಎಂಬುದಾಗಿ ವರ್ಗೀಕರಣವಾಗಿದೆ. ಸರ್ವೆ ನಂ 191ರಲ್ಲಿ ಆರ್‌ಟಿಸಿಯಂತೆ ಒಟ್ಟು 28 ಗುಂಟೆ ಜಮೀನು ಇದೆ. ಈ ಪೈಕಿ 3 ಗುಂಟೆ ಬಿ.ಖರಾಬು ಇದ್ದು 25 ಗುಂಟೆ ಸರ್ಕಾರಿ ಬೀಳು ಎಂದು ವರ್ಗೀಕರಣವಾಗಿದೆ. ಈ 5.23 ಎಕರೆಯನ್ನು ಮಂಜೂರು ಮಾಡಲು ಇಸ್ಕಾನ್ ಅಧ್ಯಕ್ಷರು ಕೋರಿದ್ದಾರೆ.

ಪ್ರಸ್ತಾಪಿತ ಜಮೀನಿನಲ್ಲಿ ಬೆಲೆ ಬಾಳುವ ಮರಗಳು ಇಲ್ಲ. ಗ್ರಾಮಸ್ಥರ ಮಹಜರ್‌ನಂತೆ ತಂಟೆ ತಕರಾರು ಇಲ್ಲ. ಗ್ರಾಮದಲ್ಲಿ ರಾಸುಗಳಿಗೆ ಅನುಗುಣವಾಗಿ ಹೆಚ್ಚುವರಿ ಗೋಮಾಳ ಇದೆ ಎಂದು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರು ವರದಿಯಲ್ಲಿ ತಿಳಿಸಿದ್ದಾರೆ. 

ಪ್ರಸ್ತಾಪಿತ ಜಮೀನು ಮಂಜೂರು ಕೋರಿ ನಮೂನೆ 50ರಲ್ಲಿ ಯಾವುದೇ ಅರ್ಜಿಗಳು ಬಾಕಿ ಇಲ್ಲ. ನಮೂನೆ 53ರಲ್ಲಿ ಮೂರು ಮತ್ತು ನಮೂನೆ 57ರಲ್ಲಿ ಒಂದು ಅರ್ಜಿಯನ್ನು ಸಲ್ಲಿಸಿದ್ದು ಸದರಿ ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿ ಅವರು ‘ಅರ್ಜಿದಾರರು ಯಾರೂ ಅನುಭವದಲ್ಲಿ ಇರುವುದಿಲ್ಲ. ವ್ಯವಸಾಯ ಮಾಡುತ್ತಿಲ್ಲ’ ಎಂದು ತಿರಸ್ಕರಿಸಿ ಆದೇಶಿಸಿದ್ದಾರೆ.

ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 21 ಮತ್ತು 22ಎ(1) ಕ್ರಮ ಸಂಖ್ಯೆ (4)ರ ಅನ್ವಯ ಜಮೀನು ಮಂಜೂರು ಮಾಡಬಹುದಾಗಿರುತ್ತದೆ ಎಂದು ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರರು ಶಿಫಾರಸು ಮಾಡಿದ್ದಾರೆ.

ಸಚಿವರು, ಶಾಸಕರ ಶಿಫಾರಸ್ಸಿನಂತೆ, ಉಪವಿಭಾಗಾಧಿಕಾರಿ, ತಹಶೀಲ್ದಾರರ ವರದಿ ಆಧರಿಸಿ, ಕೋರಿಕೆದಾರರ ಕೋರಿಕೆಯಂತೆ ಮಂಜೂರು ಮಾಡಲು ಅಗತ್ಯ ದಾಖಲೆಗಳನ್ನು ಈ ಪತ್ರದೊಂದಿಗೆ ಅಡಕವಿರಿಸಿ ಅವಗಾಹನೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. 

ನರಸಿಂಹದೇವರ ಬೆಟ್ಟಕ್ಕೆ ಸಮೀಪ

ಪ್ರಸ್ತಾವಿತ ಜಮೀನು ಅರಣ್ಯ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಅರಣ್ಯ ಇಲಾಖೆ ವರದಿ ನೀಡಿದೆ. ಚಿಕ್ಕಬಳ್ಳಾಪುರ ವಲಯದ ನರಸಿಂಹದೇವರ ಬೆಟ್ಟ 4ನೇ ಬೀಟ್ ಅರಣ್ಯ ಪ್ರದೇಶಕ್ಕೆ 200 ಮೀಟರ್ ದೂರದಲ್ಲಿ ಇದೆ ಎಂದು ಚಿಕ್ಕಬಳ್ಳಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ವರದಿ ಸಲ್ಲಿಸಿದ್ದಾರೆ.

ಮೊತ್ತ ಪಾವತಿಸಲು ಬದ್ಧ

ಇಸ್ಕಾನ್ ಸಂಸ್ಥೆಗೆ ಪ್ರಸ್ತಾವಿತ ಜಮೀನು ಮಂಜೂರು ಮಾಡಿದ್ದಲ್ಲಿ ಸರ್ಕಾರವು ವಿಧಿಸುವ ಮೊತ್ತವನ್ನು ಪಾವತಿಸಲು ಬದ್ಧರಾಗಿರುವುದಾಗಿ ಪ್ರಮಾಣ ಪತ್ರವನ್ನು ಸಹ ಸಂಸ್ಥೆ ಸಲ್ಲಿಸಿದೆ ಎಂದು ವರದಿಯಲ್ಲಿ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT