ಗುರುವಾರ , ಡಿಸೆಂಬರ್ 3, 2020
20 °C

‘ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಚಳಿಗಾಲದಲ್ಲಿ ಕೊರೊನಾ ಸೋಂಕು ಉಲ್ಬಣಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರೂ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಮಂಜುನಾಥ್ ತಿಳಿಸಿದರು.

ನಗರದ ಬಸ್ ನಿಲ್ದಾಣದ ಬಳಿ ಗುರುವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕೋವಿಡ್-19 ಪ್ರಚಾರ ಆಂದೋಲನದ ಅಂಗವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಕೊರೊನಾ ಸೋಂಕು ಕಡಿಮೆಯಾಗಿದೆ ಎಂಬ ನಿರ್ಲಕ್ಷ್ಯದಿಂದ ಜನರು ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಗುಂಪು ಗುಂಪಾಗಿ ಸೇರುವುದು ಹೆಚ್ಚುತ್ತಿದೆ. ಚಳಿಗಾಲದ ದಿನಗಳಲ್ಲಿ ಸೋಂಕು ಹೆಚ್ಚಾಗುವ ಬಗ್ಗೆ ವರದಿಗಳು ಬಂದಿವೆ. ವ್ಯಾಪಾರಿಗಳು ತಮ್ಮ ಅಂಗಡಿಗೆ ಬರುವ ಗ್ರಾಹಕ ಮಾಸ್ಕ್ ಧರಿಸಿದ್ದರೆ ಮಾತ್ರ ವಸ್ತುಗಳನ್ನು ಕೊಡಬೇಕು. ಇಲ್ಲವಾದಲ್ಲಿ ಯಾವುದೇ ವಸ್ತು ನೀಡಬಾರದು ಎಂದರು.

ಅಂಗಡಿಗಳ ಮುಂಭಾಗ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಪಾಡಬೇಕು. ಮಾಸ್ಕ್ ಧರಿಸದೇ ಓಡಾಡುವವರು ಹಾಗೂ ಅಂಗಡಿಗಳ ಮುಂಭಾಗ ಗುಂಪು ಗುಂಪಾಗಿ ಸೇರಿದರೆ ಹೆಚ್ಚಿನ ದಂಡ ವಿಧಿಸಬೇಕು. ಜೊತೆಗೆ ಅಧಿಕಾರಿಗಳು ಅವರ ಮೇಲೆ ಅಗತ್ಯ ಕ್ರಮ ಜರುಗಿಸಲು ಮುಂದಾಗಬೇಕು ಎಂದರು.

ಇದೇ ಸಂದರ್ಭದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಕೆಲವರಿಗೆ ಮಾಸ್ಕ್ ವಿತರಿಸುವ ಜೊತೆಗೆ ಅಂಗಡಿಗಳಿಗೆ ಬ್ಯಾನರ್ ವಿತರಿಸಲಾಯಿತು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಎ. ಪಚ್ಚಾಪುರೆ, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ. ಚಂದ್ರಶೇಖರಗೌಡ, ಕಾರ್ಯದರ್ಶಿ ಎಂ.ಬಿ. ಲೋಕೇಶ್, ಕೋವಿಡ್ ನೋಡೆಲ್ ಅಧಿಕಾರಿ ಶಿವಕುಮಾರ್, ನಗರಸಭೆ ಪೌರಾಯುಕ್ತ ಶ್ರೀನಿವಾಸ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಮೂರ್ತಿ, ನಗರ ಠಾಣೆ ಪಿಎಸ್‌ಐ ಸತೀಶ್, ಆರೋಗ್ಯ ನಿರೀಕ್ಷಕಿ ಶೋಭಾ ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು