ಶಿಡ್ಲಘಟ್ಟ: ‘ಅಂಬೇಡ್ಕರ್ ಭಾರತ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ದೇಶದ ಪ್ರತಿಯೊಬ್ಬರ ಪಾಲಿನ ಪವಿತ್ರ ಗ್ರಂಥವಾದ ಸಂವಿಧಾನದ ಹಿಂದಿನ ದೊಡ್ಡ ಶಕ್ತಿ ಅವರಾಗಿದ್ದಾರೆ. ಸಮಾನತೆ, ಪ್ರಗತಿಯ ಕನಸು ಕಂಡ ಮೇರು ನಾಯಕನ ಬದುಕು ಎಲ್ಲರಿಗೂ ಸ್ಫೂರ್ತಿಯಾಗಿದೆ’ ಎಂದು ಶಾಸಕ ವಿ. ಮುನಿಯಪ್ಪ ತಿಳಿಸಿದರು.
ನಗರದ ತಾಲ್ಲೂಕು ಕಚೇರಿ ಮುಂಭಾಗ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಂ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಎಲ್ಲರನ್ನು ಸಮಾನವಾಗಿ ಕಾಣುವ ಸಮಾಜದ ನಿರ್ಮಾಣಕ್ಕಾಗಿ ಅವಿರತವಾಗಿ ಶ್ರಮಿಸಿದವರು ಅಂಬೇಡ್ಕರ್. ಶೋಷಿತರು, ಕಾರ್ಮಿಕರು, ಮಹಿಳೆಯರ ಉನ್ನತಿಗೆ ಹೋರಾಡಿದರು. ಅಸಹಾಯಕರ ಧ್ವನಿಯಾಗಿ, ಸಮಾನತೆಯ ಕನಸು ಕಂಡ ಎಲ್ಲರ ಬದುಕಿಗೆ ಸ್ಫೂರ್ತಿಯಾದ ಈ ಮಹಾನ್ ನಾಯಕರ ಕೊಡುಗೆಯನ್ನು ಸದಾ ಸ್ಮರಿಸೋಣ ಎಂದರು.
ವಿದೇಶಗಳಿಂದ ಆಹಾರ ಧಾನ್ಯಗಳನ್ನು ರಪ್ತು ಮಾಡಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ದೇಶದಲ್ಲಿ ಹಸಿರು ಕ್ರಾಂತಿಯನ್ನು ಹುಟ್ಟು ಹಾಕಿದ ಬಾಬೂಜಿ ಅವರ ದೂರದೃಷ್ಟಿಯಿಂದ ದೇಶದ ಎಲ್ಲಾ ವರ್ಗದ ಜನರು ಇಂದು ನೆಮ್ಮದಿಯಿಂದ ಊಟ ಮಾಡುವಂತಾಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್. ಸಕ್ಫಾಲ್ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ವಿಶ್ವಸಂಸ್ಥೆ ವಿಶ್ವದ ಜ್ಞಾನದ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಶಿಕ್ಷಣ, ಸಂಘಟನೆ, ಹೋರಾಟ ಅವರ ಮೂಲ ಗುಣವಾಗಿತ್ತು ಎಂದು ಹೇಳಿದರು.
ನಗರದ ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿವರೆಗೂ ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಅವರ ಭಾವಚಿತ್ರಗಳನ್ನು ಹೊತ್ತ ಮುತ್ತಿನ ಪಲಕ್ಕಿಗಳ ಮೆರವಣಿಗೆ ನಡೆಯಿತು. ಡೊಳ್ಳುಕುಣಿತ, ತಮಟೆ ವಾದನ ಜನರನ್ನು ಆಕರ್ಷಿಸಿದವು. ಅಂಬೇಡ್ಕರ್ ಭವನಕ್ಕೆಂದು ಸಮಾಜ ಕಲ್ಯಾಣ ಇಲಾಖೆಗೆ 35 ಕುಂಟೆ ಜಾಗವನ್ನು ಹಸ್ತಾಂತರಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ 30 ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಲಾಯಿತು.
ತಹಶೀಲ್ದಾರ್ ಬಿ.ಎಸ್. ರಾಜೀವ್, ತಾಲ್ಲೂಕು ಪಂಚಾಯಿತಿ ಇಒ ಬಿ.ಕೆ. ಚಂದ್ರಕಾಂತ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ರಮೇಶ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಿ.ಸಿ. ನಂದೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಘುನಾಥರೆಡ್ಡಿ, ಸಮಾಜ ಕಲ್ಯಾಣ್ಯಾಧಿಕಾರಿ ಎಚ್. ಜಗದೀಶ್, ಸರ್ಕಲ್ ಇನ್‌ಸ್ಪೆಕ್ಟರ್ ಧರ್ಮೇಗೌಡ, ನಗರಸಭೆ ಸದಸ್ಯರಾದ ಕೃಷ್ಣಮೂರ್ತಿ, ವೆಂಕಟಸ್ವಾಮಿ, ಅನಿಲ್‌ಕುಮಾರ್, ಶಿವಮ್ಮ ಮುನಿರಾಜು, ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ, ದಲಿತ ಮುಖಂಡರು ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.