ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿದಿನ ಬಸ್ ಹತ್ತಿ ಇಳಿಯುವ ದ್ಯಾವರಹಳ್ಳಿ ಸರ್ಕಾರಿ ಶಾಲೆಯ ಮಕ್ಕಳು

Last Updated 3 ಅಕ್ಟೋಬರ್ 2019, 19:30 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ದ್ಯಾವರಹಳ್ಳಿ ಪುಟ್ಟ ಗ್ರಾಮ. ಈ ಗ್ರಾಮಕ್ಕೆ ಹೋಗಲು ಸಾರಿಗೆ ಬಸ್ ವ್ಯವಸ್ಥೆಯಿಲ್ಲ. ಪ್ರತಿದಿನ ಮೂರು ನಾಲ್ಕು ಬಾರಿ ಹತ್ತಿರದ ಅಮ್ಮಗಾರಹಳ್ಳಿಯ ಬಳಿ ಬಸ್ ಹಾದು ಹೋಗುತ್ತದೆ. ಅಲ್ಲಿಂದ ಸುಮಾರು ಒಂದು ಕಿಮೀ ನಡೆದು ಗ್ರಾಮಕ್ಕೆ ಹೋಗಬೇಕು.

ಆದರೆ, ದ್ಯಾವರಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಮಾತ್ರ ಪ್ರತಿ ದಿನ ಬಸ್ ಹತ್ತಿ ಇಳಿಯುತ್ತಾರೆ. ಹೇಗೆಂದರೆ, ಈ ಶಾಲೆಯ ಶಿಕ್ಷಕರು ಸರ್ಕಾರಿ ಶಾಲೆಯನ್ನು ಬಸ್ ರೀತಿಯಲ್ಲಿ ಕಾಣುವಂತೆ ಬಣ್ಣ ಬಳಿಸಿದ್ದಾರೆ. ನೋಡಲು ಥೇಟ್ ಬಸ್ಸಿನಂತೆ ಈ ಶಾಲೆ ಕಂಡು ಬರುತ್ತದೆ. ಬಸ್ಸಿನ ಮೇಲೆ ಕೆ.ಎಸ್.ಆರ್.ಟಿ.ಸಿ ಎಂಬುದರ ಬದಲಿಗೆ ಜಿ.ಎಲ್.ಪಿ.ಎಸ್.ಡಿ ಎಂದಿದೆ. ಸಂಚಾರದ ಮಾಹಿತಿಯಿರುವ ಫಲಕದ ಮೇಲೆ ‘ದ್ಯಾವರಹಳ್ಳಿ – ಶಿಡ್ಲಘಟ್ಟ ತಾ.’ಎಂದು ಬರೆಸಿದ್ದರೆ, ಬಸ್ಸಿನ ಸಂಖ್ಯೆಯಿರುವ ಕಡೆ ಶಾಲೆ ಪ್ರಾರಂಭವಾದ ಇಸವಿ ‘ಇ.ಎಸ್.ಟಿ – 1965’ಎಂದು ಬರೆಸಿದ್ದಾರೆ. ಬಾಗಿಲಿನ ಮೇಲೆ ‘ಸುಸ್ವಾಗತ’, ಒಂದು ಬದಿಯಲ್ಲಿ ‘ದ್ಯಾವರಹಳ್ಳಿ ಶೈಕ್ಷಣಿಕ ಶಾಲಾ ಸಾರಿಗೆ’ಹಾಗೂ ‘ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಶಾಲೆಗೆ ಸೇರಿಸಿ, ಸುರಕ್ಷಿತ ಪ್ರಯಾಣಕ್ಕಾಗಿ ಸರ್ಕಾರಿ ಸಾರಿಗೆ ಬಳಸಿ’ಎಂದು ಬರೆಸಲಾಗಿದೆ.

‘ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಹಲವು ಸೌಲಭ್ಯಗಳನ್ನು ನೀಡುತ್ತಿದ್ದರೂ ಖಾಸಗಿ ಶಾಲೆಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ. ನಾವು ಖಾಸಗಿ ಶಾಲೆಗಳಂತೆ ನಮ್ಮ ಶಾಲೆಯನ್ನು ರೂಪಿಸಲು ಹಲವು ಪ್ರಯತ್ನ ಮಾಡುತ್ತಿದ್ದೇವೆ. ತಾಲ್ಲೂಕಿನ ಕಾಚಹಳ್ಳಿ ಮತ್ತು ಜಿ.ಕುರುಬರಹಳ್ಳಿ ಸಕಾರಿ ಶಾಲೆಗಳ ಕಟ್ಟಡಗಳನ್ನು ರೈಲಿನಂತೆ ಬಣ್ಣ ಬಳಿದಿರುವುದನ್ನು ಗಮನಿಸಿ, ನಮ್ಮ ಶಾಲೆಯ ಸಹಶಿಕ್ಷಕಿ ಎನ್.ಸೌಮ್ಯ ಅವರೊಂದಿಗೆ ಚರ್ಚಿಸಿದೆ. ನಮ್ಮ ಶಾಲೆ ಒಂದೇ ಕಟ್ಟಡ ಹೊಂದಿರುವುದರಿಂದ ರೈಲು ಮಾದರಿಗಿಂತ ಕೆ.ಎಸ್.ಆರ್.ಟಿ.ಸಿ ಬಸ್ ಮಾದರಿ ಸೂಕ್ತವೆಂದು ತೀರ್ಮಾನಿಸಿದೆವು. ಎಸ್.ಡಿ.ಎಂ.ಸಿ ಸದಸ್ಯರ ಒಪ್ಪಿಗೆ ಪಡೆದು2019-20ನೇ ಸಾಲಿನ ಅನುದಾನದಲ್ಲಿ ಚಿಂತಡಪಿ ಶಾಲೆಯ ಶಿಕ್ಷಕ ರವಿ ಅವರಿಂದ ರಜಾ ದಿನಗಳಲ್ಲಿ ಬಣ್ಣ ಬಳಿಸಿದೆವು’ಎಂದು ಮುಖ್ಯಶಿಕ್ಷಕ ವಿ.ಎನ್.ಗಜೇಂದ್ರ ತಿಳಿಸಿದರು.

‘ನಮ್ಮ ದ್ಯಾವರಹಳ್ಳಿಯ ಶಾಲೆ 1965ರಲ್ಲಿ ಪ್ರಾರಂಭವಾಯಿತು. ಮೊದಲು ಗ್ರಾಮದ ಮಧ್ಯೆ ಇತ್ತು. ಕಟ್ಟಡ ಶಿಥಿಲವಾಗಿದ್ದರಿಂದ 2010–11ರಲ್ಲಿ ಜಿಲ್ಲಾಧಿಕಾರಿಯವರು ಗ್ರಾಮದ ಗೋಮಾಳದಲ್ಲಿ ಒಂದು ಎಕರೆ ಜಾಗವನ್ನು ಶಾಲೆಗೆ ಮಂಜೂರು ಮಾಡಿದರು. ಶಾಲಾ ಕಟ್ಟಡ, ಅಡುಗೆ ಕೋಣೆ ಮತ್ತು ಶೌಚಾಲಯಗಳ ನಿರ್ಮಾಣ ಆಯಿತು. ಹಂತಹಂತವಾಗಿ ಶಾಲೆಗೆ ವಿವಿಧ ಅನುಕೂಲಗಳನ್ನು ಮಾಡಿಸಿಕೊಳ್ಳುತ್ತಾ, ಮಕ್ಕಳನ್ನು ಪೋಷಕರು ಸರ್ಕಾರಿ ಶಾಲೆಗೆ ಸೇರಿಸುವಂತೆ ಪ್ರಯತ್ನಗಳನ್ನು ಮಾಡುತ್ತಿದ್ದೇವೆ’ಎಂದು ಶಿಕ್ಷಕಿ ಎನ್.ಸೌಮ್ಯ ಹೇಳಿದರು.

‘ಎಸ್.ಡಿ.ಎಂ.ಸಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಪಡೆದು ಶಾಲೆಯ ಆವರಣದಲ್ಲಿ 120ಗಿಡಗಳನ್ನು ನೆಟ್ಟಿದ್ದೇವೆ. ಶಾಲೆಗೆ ನಿರಂತರ ವಿದ್ಯುತ್ ಸಂಪರ್ಕವಿರುವುದರಿಂದ ಮಕ್ಕಳು ನೀರಿನ ಫಿಲ್ಟರ್ ನಿಂದ ಶುದ್ಧೀಕರಿಸಿದ ನೀರು ಕುಡಿಯುವಂತಾಗಿದೆ. ಎಂ.ಪಿ.ಸಿ.ಎಸ್ ಅಧ್ಯಕ್ಷ ಡಿ.ಎಲ್.ಕೃಷ್ಣಾರೆಡ್ಡಿ ಶಾಲೆಗೆ ಗೇಟ್ ಮಾಡಿಸಿಕೊಟ್ಟಿದ್ದಾರೆ. ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಶ್ರೀನಾಥ್, ದಯಾನಂದ, ಬೈರಾರೆಡ್ಡಿ ಅವರು ಶಾಲೆಗೆ ಸಿಂಟೆಕ್ಸ್ ಮತ್ತು ಮೋಟರ್ ಕೊಡಿಸುವವರಿದ್ದಾರೆ. ಶಾಲೆಯ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರಪ್ಪ, ಶಾರದಮ್ಮ ನಾರಾಯಣಸ್ವಾಮಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಡಿ.ಎಂ.ದೇವರಾಜ್, ಮಾಜಿ ಅಧ್ಯಕ್ಷ ಡಿ.ಎನ್.ಸುರೇಶ್, ಬೈರಾರೆಡ್ಡಿ ಸೇರಿದಂತೆ ಗ್ರಾಮಸ್ಥರು ಶಾಲೆಯ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ’ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT