ಭಾನುವಾರ, ಜುಲೈ 3, 2022
27 °C
ಫ್ಲೆಕ್ಸ್, ಜಾಹೀರಾತು ಅಳವಡಿಕೆಗೆ ಸಂಬಂಧಿಸಿದಂತೆ ಕಠಿಣ ನಿಯಮ ಕೈಗೊಳ್ಳದ ನಗರಸಭೆ

ಚಿಕ್ಕಬಳ್ಳಾಪುರ ನಗರದಾದ್ಯಂತ ಫ್ಲೆಕ್ಸ್: ಆದಾಯ ಹೆಚ್ಚಳವಿಲ್ಲ!

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರವನ್ನು ಒಮ್ಮೆ ಸುತ್ತಿ. ಬಿ.ಬಿ. ರಸ್ತೆ, ಎಂ.ಜಿ. ರಸ್ತೆ, ಬಜಾರ್ ರಸ್ತೆ ಹೀಗೆ ಪ್ರಮುಖ ರಸ್ತೆಗಳಲ್ಲಿ ಕಣ್ಣು ಅರಳಿಸಿ. ಎಲ್ಲಿ ನೋಡಿದರೂ ಫ್ಲೆಕ್ಸ್, ಬ್ಯಾನರ್‌ಗಳ ಅಬ್ಬರ ಅಲ್ಲವೇ. ಇದು ಒಂದು ದಿನ ಎರಡು ದಿನದ ಕಥೆಯಲ್ಲ. ವರ್ಷವಿಡೀ ಇಂತಹ ಚಿತ್ರಣ ಕಂಡು ಬರುತ್ತದೆ. ಹೀಗಿದ್ದ ಮೇಲೆ ನಗರಸಭೆಗೆ ಇದರಿಂದ ಒಳ್ಳೆಯ ಆದಾಯವೂ ಬಂದಿರಬೇಕು ಎನ್ನುವ ಭಾವನೆ ಮೂಡುತ್ತದೆ. 

ಆದರೆ, ನಿಮ್ಮ ಅನಿಸಿಕೆ ತಪ್ಪು. ವರ್ಷವಡೀ ನಗರವು ಫ್ಲೆಕ್ಸ್, ಬ್ಯಾನರ್, ಜಾಹೀರಾತು ಫಲಕಗಳನ್ನು ಹೊದ್ದು ಮಲಗಿದರೂ ನಗರಸಭೆಯ ಆದಾಯ ವರ್ಷಕ್ಕೆ ಲಕ್ಷ ದಾಟಿಲ್ಲ! ಪ್ರಸಕ್ತ ವರ್ಷ ಮಾರ್ಚ್‌ 14ರ ವರೆಗೆ ನಗರಸಭೆಗೆ ಜಾಹೀರಾತಿನ ಶುಲ್ಕವಾಗಿ ₹ 47,147 ಆದಾಯ ಬಂದಿದೆ. ಇದು ಮುಂದಿನ 9 ತಿಂಗಳಲ್ಲಿ ಎಷ್ಟು ಹೆಚ್ಚಳವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

2019–20 ಮತ್ತು 2020–21ರಲ್ಲಿ ಕ್ರಮವಾಗಿ ₹ 3,668 ಮತ್ತು ₹ 5,908 ಮಾತ್ರ ಆದಾಯ ಬಂದಿದೆ. ಇದು ನಿಜಕ್ಕೂ ಅಚ್ಚರಿ. ವರ್ಷವೆಲ್ಲ ನಗರದ ತುಂಬಾ ಕಟೌಟ್‌ಗಳು ಎದ್ದರೂ ಈ ಎರಡು ವರ್ಷಗಳ ಆದಾಯ ₹ 6 ಸಾವಿರ ದಾಟಿಲ್ಲ. 

ಜಾಹೀರಾತು ಫಲಕ, ಫ್ಲೆಕ್ಸ್‌, ಕಟೌಟ್‍ಗಳ ಅಳವಡಿಸುವವರಿಗೆ ಆಯಾ ನಗರಸಭೆಯು ಇಂತಿಷ್ಟು ಹಣ ಎಂದು ದರ ನಿಗದಿಗೊಳಿಸುತ್ತದೆ. ‌ಆಯಾ ನಗರಗಳಲ್ಲಿ ಇಂತಹ ಸ್ಥಳಗಳಲ್ಲಿ ಫ್ಲೆಕ್ಸ್‌ಗಳನ್ನು ಅಳವಡಿಸಬೇಕು ಎಂದು ನಿಯಮಗಳನ್ನು ಜಾರಿಗೊಳಿಸುತ್ತದೆ. ಆ ಪ್ರಕಾರ ಚಿಂತಾಮಣಿ ನಗರಸಭೆಯು ಚಿಂತಾಮಣಿಯ 20 ಸ್ಥಳಗಳನ್ನು ಫ್ಲೆಕ್ಸ್‌ಗಳ ಅಳವಡಿಕೆಗೆ ಸ್ಥಳವನ್ನು ಗುರುತಿಸಿದೆ. ಚಿಕ್ಕಬಳ್ಳಾಪುರದಲ್ಲಿ ಹೀಗೆ ಗುರುತಿಸಿರುವ ಸ್ಥಳಗಳ ಸಂಖ್ಯೆ ಕೇವಲ 8! 

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಇತ್ತೀಚಿನ ದಿನಗಳಲ್ಲಿ ವಿವಿಧ ಸಭೆ, ಸಮಾರಂಭಗಳನ್ನು ನಡೆಸಿದವು. ಈ ಹಿನ್ನೆಲೆಯಲ್ಲಿ ಇಡೀ ನಗರದಾದ್ಯಂತ ಕಟೌಟ್‌ಗಳು, ಬ್ಯಾನರ್, ಬಂಟಿಂಗ್ಸ್‌ಗಳನ್ನು ಅಳವಡಿಸಿದ್ದವು. ಹೊಸ ವರ್ಷ, ಸಂಕ್ರಾಂತಿ, ಯುಗಾದಿ, ಕ್ರಿಸ್‌ಮಸ್ ಹೀಗೆ ಹಬ್ಬಗಳ ಸಂದರ್ಭದಲ್ಲಿ ಎಲ್ಲಡೆ ಸಚಿವ ಡಾ.ಕೆ. ಸುಧಾಕರ್ ಶುಭ ಕೋರುವ ಫ್ಲೆಕ್ಸ್‌, ಕಟೌಟ್‌ಗಳು ಎದ್ದು ನಿಲ್ಲುತ್ತವೆ. ಇತ್ತೀಚೆಗೆ ನಡೆದ ಶಿವೋತ್ಸವದಲ್ಲಿಯೂ ಇದೇ ಚಿತ್ರಣವಿತ್ತು. 

ರಾಜಕೀಯ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಕಟೌಟ್, ಫ್ಲೆಕ್ಸ್ ನಿಲ್ಲಿಸುತ್ತವೆ. ಸಣ್ಣ ಪುಟ್ಟ ಕಾರ್ಯಕ್ರಮಗಳು ನಡೆದರೂ ನಗರವು ಕಟೌಟ್‌ಗಳಿಂದ ತುಂಬಿ ತುಳುಕುತ್ತದೆ. ಅಷ್ಟೇ ಪೊಲೀಸ್ ಚೌಕಿ ಸೇರಿದಂತೆ ಸರ್ಕಾರಿ ಕಟ್ಟಡಗಳ ಮೇಲೂ ಕಟೌಟ್‌, ಬ್ಯಾನರ್‌ಗಳು ರಾರಾಜಿಸುತ್ತವೆ. ಇಂತಹ ‍ಪ್ರಕ್ರಿಯೆಗಳಿಗೆ ತಡೆಯೊಡ್ಡಬೇಕಾದ ನಗರಸಭೆ ಜಾಣ ಮೌನವಹಿಸಿದೆ. 

ರಸ್ತೆ ವಿಭಜಕದ ಮೇಲೆ ಫ್ಲೆಕ್ಸ್‌ಗಳು: ಜಿಲ್ಲಾ ಕೇಂದ್ರ ಸೇರಿದಂತೆ ತಾಲ್ಲೂಕು ಮಟ್ಟದಲ್ಲಿ ಯಾವುದೇ ರಾಜಕೀಯ ಪಕ್ಷಗಳ ಅಥವಾ ‍ಪ್ರಮುಖ ಕಾರ್ಯಕ್ರಮಗಳು ನಡೆದಾಗ ರಸ್ತೆಯ ವಿಭಜಕದ ಮೇಲೆ ಫ್ಲೆಕ್ಸ್‌ಗಳನ್ನು ಕಟ್ಟಲಾಗುತ್ತದೆ. ಇದು ಅಪಾಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ವಾಹನ ಚಾಲಕರು. 

****

ಚಿಕ್ಕಬಳ್ಳಾಪುರ ನಗರಸಭೆಗೆ ಜಾಹೀರಾತು ಶುಲ್ಕ

ವರ್ಷ;ಆದಾಯ
2018–19;57,921
2019–20;3,668
2020–21;5,908
2021–22;(ಮಾ.14);47,147

***

ಅನಾಹುತವಾದರೆ ಯಾರು ಹೊಣೆ

ಯಾವುದೇ ಸಭೆ, ಸಮಾರಂಭಗಳು ನಡೆದ ಸಮಯದಲ್ಲಿ ರಸ್ತೆಯ ವಿಭಜಕದ ಮೇಲೆ ಕಟೌಟ್‌ಗಳು, ಬ್ಯಾನರ್‌ಗಳನ್ನು ಕಟ್ಟುವರು. ಯೂ ಟರ್ನ್ ತೆಗೆದುಕೊಳ್ಳುವಾಗ ಯಾರು ಬರುತ್ತಾರೆ ಎನ್ನುವುದೇ ತಿಳಿಯುವುದಿಲ್ಲ. ಕಟೌಟ್‌ಗಳು ಬಿದ್ದೋ ಅಥವಾ ಮತ್ತೊಂದು ರೀತಿಯಲ್ಲಿ ಅನಾಹುತವಾದರೆ ಯಾರು ಹೊಣೆ. ಇದರಿಂದ ಸಾರ್ವಜನಿಕರಿಗೂ ತೊಂದರೆ ಆಗುತ್ತದೆ. ನಿರ್ದಿಷ್ಟ ಜಾಗದಲ್ಲಿ ಮಾತ್ರ ಕಟೌಟ್‌ಗಳನ್ನು ಅಳವಡಿಸಬೇಕು ಎನ್ನುತ್ತಾರೆ ನಗರದ ಎಚ್‌.ಎಸ್. ಗಾರ್ಡನ್ ನಿವಾಸಿ ರಾಮಮೂರ್ತಿ. 

ಕೆಲವಕ್ಕೆ ಮಾತ್ರ ಅನುಮತಿ

‘ಎಲ್ಲ ಪಕ್ಷದವರೂ ಹೇರಳವಾಗಿ ನಗರದಲ್ಲಿ ಬಂಟಿಂಗ್ಸ್ ಮತ್ತು ಫೆಕ್ಸ್‌ಗಳನ್ನು ಕಟ್ಟುತ್ತಾರೆ. ಆದರೆ, ಕೆಲವಕ್ಕೆ ಮಾತ್ರ ಅನುಮತಿ ಪಡೆಯುತ್ತಾರೆ. ನಾನೇ ಎರಡು ಮೂರು ಬಾರಿ ರಸ್ತೆಯಲ್ಲಿ ಸಾಗುವಾಗ ಬಂಟಿಂಗ್ಸ್‌ಗಳು ಬಿಚ್ಚಿಕೊಂಡು ಮೇಲೆ ಬಿದ್ದಿವೆ’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ ತಿಳಿಸಿದರು. 

‘ಇವು ಕಳಚಿ ಸಾರ್ವಜನಿಕರಿಗೆ ಅಪಾಯ ಎದುರಾಗಿದ ನಿದರ್ಶನವಿದೆ. ಎಲ್ಲಡೆ ಇವುಗಳನ್ನು ಕಟ್ಟುವ ಹುಡುಗರು ಎಲ್ಲೆಂದರಲ್ಲಿ ಕಟ್ಟುವರು. ವಿದ್ಯುತ್ ತಾಗಿ ಅಥವಾ ಬಿದ್ದು ಏನಾದರೂ ಅವಘಡವಾದರೆ ಯಾರು ಹೊಣೆ. ನಗರಸಭೆ ಈ ವಿಚಾರದಲ್ಲಿ ಕಠಿಣ ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು