ಚಿಕ್ಕಬಳ್ಳಾಪುರ: ‘ಬಿಜೆಪಿ ಮಾಜಿ ಸಚಿವ ಡಾ.ಕೆ.ಸುಧಾಕರ್ 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ. ಈ ಸಂಬಂಧ ಪಕ್ಷದ ಕೆಲವು ನಾಯಕರನ್ನು ಸಹ ಅವರು ಭೇಟಿ ಮಾಡಿದ್ದಾರೆ’ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸುಧಾಕರ್ ಕಾಂಗ್ರೆಸ್ ಟಿಕೆಟ್ ಕೇಳಿರುವುದು ನಿಜ. ಕೆಲವು ಕಾಂಗ್ರೆಸ್ ನಾಯಕರನ್ನು ಸಹ ಅವರು ಭೇಟಿ ಮಾಡಿದ್ದಾರೆ. ಅಲ್ಲದೆ ಚಿಕ್ಕಬಳ್ಳಾಪುರದ ಕೆಲವು ಕಾಂಗ್ರೆಸ್ ನಾಯಕರು ಸಹ ಸುಧಾಕರ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ, ಕಾಂಗ್ರೆಸ್‌ಗೆ ಅವರನ್ನು ಸೇರಿಸಿಕೊಳ್ಳುವುದಿಲ್ಲ’ ಎಂದರು.
‘ಕಾಂಗ್ರೆಸ್‌ಗೆ ದ್ರೋಹ ಮಾಡಿ ಬಿಜೆಪಿಗೆ ಹೋಗಿದ್ದ ಸುಧಾಕರ್ ಮತ್ತೆ ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ಸೇರಲು ಅವರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಿದ್ಧವಾಗಿಲ್ಲ. ಎರಡು ತಿಂಗಳಿನಿಂದ ಬಿಜೆಪಿ ಕಾರ್ಯಕ್ರಮದಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ. ಮುಂದೆ ಅವರಿಗೆ ಬಿಜೆಪಿ ಟಿಕೆಟ್ ದೊರೆಯುವುದು ಅನುಮಾನ’ ಎಂದು ತಿಳಿಸಿದರು.