ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೌರಿಬಿದನೂರು | ರೈತನ ಕೃಷಿ ಪ್ರೀತಿ; ಬಾಳೆ, ಅಡಿಕೆ ತಂದಿತು ಸಿರಿ

Published 2 ಜೂನ್ 2024, 5:58 IST
Last Updated 2 ಜೂನ್ 2024, 5:58 IST
ಅಕ್ಷರ ಗಾತ್ರ

ಗೌರಿಬಿದನೂರು: ಜಮೀನಿನ ಯಾವ ಭಾಗದಲ್ಲಿ ನೋಡಿದರೂ ಕಂಗೊಳಿಸುವ ಹಸಿರು. ತಂಪಾದ ವಾತಾವರಣ. ಹುಲುಸಾಗಿ ಬೆಳೆದ ಅಡಿಕೆ ಮರಗಳು–ಇದು  ತಾಲ್ಲೂಕಿನ ಕುರೂಡಿ ಗ್ರಾಮದ ರೈತ ಜಗದೀಶ್ ಅವರ ತೋಟದಲ್ಲಿ ಕಾಣುವ ನೋಟ.

ಜಗದೀಶ್ ಅವರ ತೋಟವನ್ನು ಹೊಕ್ಕಿದರೆ ಬಯಲು ಸೀಮೆಯಲ್ಲೊಂದು ಮಲೆನಾಡಿನ ತೋಟದಂತೆ ಭಾಸವಾಗುತ್ತದೆ. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಕೃಷಿಯಲ್ಲಿಯೇ ಆನಂದಮಯ ಜೀವನ ಸಾಗಿಸುತ್ತಿದ್ದಾರೆ ಜಗದೀಶ್. 

ತಮಗಿರುವ 20 ಎಕರೆ ಜಮೀನಿನಲ್ಲಿ 12 ಎಕರೆಯಲ್ಲಿ ಅಡಿಕೆ ಕೃಷಿ ಮಾಡಿ ಯಶಸ್ಸು ಕಂಡಿದ್ದಾರೆ. 4 ಎಕರೆಯಲ್ಲಿ ಏಲಕ್ಕಿ ಬಾಳೆ, ಒಂದು ಎಕರೆಯಲ್ಲಿ ಪಚ್ಚ ಬಾಳೆಯನ್ನು ಅಂಗಾಂಶ ಕಸಿ ಮಾಡಿ ಬೆಳೆದಿದ್ದಾರೆ. ಇದರಿಂದ ಬಾಳೆಯಲ್ಲಿ ದೊಡ್ಡಗಾತ್ರದ ಗೊನೆಗಳು ತೊನೆದಾಡುತ್ತಿವೆ. 

ಬಾಳೆ ಮತ್ತು ಅಡಿಕೆ ವರ್ಷದ ಬೆಳೆಗಳಾಗಿರುವುದರಿಂದ ವರ್ಷದ ಕೊನೆಯಲ್ಲಿ ದೊಡ್ಡ ಮೊತ್ತದ ಆದಾಯವನ್ನು ನಿರೀಕ್ಷಿಸಬಹುದು. ಜೊತೆಗೆ 1.5 ಎಕರೆ ಜಮೀನಿನಲ್ಲಿ ಮೈಸೂರು ಬದನೆ ಬೆಳೆದಿದ್ದಾರೆ. ಇದೂ ಉತ್ತಮ ಆದಾಯ ತಂದು ಕೊಡುತ್ತಿದೆ. 

ಎರಡು ಎಕರೆ ಮೆಣಸಿನ ಗಿಡಗಳನ್ನು ಬೆಳೆದಿದ್ದಾರೆ. ಇದರಿಂದ ಕಾಲ ಕಾಲಕ್ಕೆ ವ್ಯವಸಾಯದ ಖರ್ಚುಗಳ ಜೊತೆಗೆ ಸಂಸಾರದ ಖರ್ಚಿಗೆ ಯಾವುದೇ ತೊಂದರೆಯಾಗದೆ ನಿರ್ವಹಣೆ ಮಾಡಬಹುದು ಎನ್ನುತ್ತಾರೆ ರೈತ ಜಗದೀಶ್.

₹1.5 ಲಕ್ಷ ಬೆಲೆ ಬಾಳುವ ಎತ್ತುಗಳನ್ನು ಸಾಕಿದ್ದಾರೆ. ಇವುಗಳನ್ನು ವ್ಯವಸಾಯಕ್ಕೆ ಬಳಸಲಾಗುತ್ತಿದೆ. 4 ಎಮ್ಮೆಗಳನ್ನು ಸಾಕಿದ್ದು ಮನೆಗಾಗುವಷ್ಟು ಹಾಲು ಮೊಸರು ತುಪ್ಪ ಉತ್ಪಾದನೆ ಆಗುತ್ತಿದೆ. ಸರ್ಕಾರದಿಂದ ಸಿಗುವ ಹಾನಿ ನೀರಾವರಿ ಸೌಲಭ್ಯ, ಟ್ರ್ಯಾಕ್ಟರ್, ಮಿನಿ ಟ್ರ್ಯಾಕ್ಟರ್ ಸೌಕರ್ಯಗಳನ್ನು ಬಳಸಿಕೊಂಡಿದ್ದಾರೆ.

ನೀರಿಗಾಗಿ 8 ಕೊಳವೆ ಬಾವಿಗಳಿವೆ. ಎಲ್ಲದರಲ್ಲೂ ಬರುವ ನೀರನ್ನು ದೊಡ್ಡ ತೊಟ್ಟಿಯಲ್ಲಿ ಸಂಗ್ರಹಿಸಿ, ಡ್ರಿಪ್ ಮುಖಾಂತರ ಎಲ್ಲಾ ಗಿಡ, ಮರಗಳಿಗೆ ಹಾಯಿಸಲಾಗುತ್ತದೆ. 

ತೋಟಗರಿಕಾ ಬೆಳೆಗಳಿಗೆ ಕೂಲಿ ಕಾರ್ಮಿಕರ ಅವಶ್ಯಕತೆ ಹೆಚ್ಚಾಗಿರುತ್ತದೆ. ಅಡಿಕೆ ಮತ್ತು ಬಾಳೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದರೂ ಕೂಲಿ ಕಾರ್ಮಿಕರನ್ನು ಹೆಚ್ಚು ಅವಲಂಬಿಸಿಲ್ಲ. ನಾವೇ ತೋಟದ ಕೆಲಸಗಳನ್ನು ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ರೈತ ಜಗದೀಶ್.

ಸರಿಯಾದ ಬೇಸಾಯ ಪದ್ಧತಿ ಅಳವಡಿಸಿಕೊಂಡರೆ ರೈತರಿಗೆ ನಷ್ಟವಾಗುವುದಿಲ್ಲ. ಈ ಎಲ್ಲಾ ಬೆಳೆಗಳೂ ಸಂಪೂರ್ಣ ಸಾವಯವ ರೀತಿಯಲ್ಲಿ ಬೆಳೆದಿರುವುದು ಮತ್ತೊಂದು ಖುಷಿಯ ವಿಚಾರ. ರಾಸಾಯನಿಕ ಗೊಬ್ಬರಗಳ ಬದಲಾಗಿ ಕೆರೆಯಲ್ಲಿನ ಫಲವತ್ತಾದ ಮಣ್ಣನ್ನು ಜಮೀನಿಗೆ ಹಾಕಿಸಿಕೊಂಡಿದ್ದೇವೆ. ಇದರಿಂದ ಅಡಿಕೆ ಮತ್ತು ಬಾಳೆ ಗಿಡಗಳು ಸಮೃದ್ಧಿಯಾಗಿ ಬೆಳೆದಿವೆ. ಉತ್ತಮ ಆದಾಯದ ಬರುತ್ತಿದೆ ಎನ್ನುವರು.

ಆದಾಯದ ನಿರೀಕ್ಷೆ

ಅಡಿಕೆಯಿಂದ ವಾರ್ಷಿಕ ₹ 30 ರಿಂದ ₹ 40 ಲಕ್ಷ ಆದಾಯ, ಬಾಳೆಯಿಂದ ₹ 10 ಲಕ್ಷ ಆದಾಯ ಬರಬಹುದು ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಜಗದೀಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT