ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆೆಎಸ್‌ಆರ್‌ಟಿಸಿಯಿಂದ ರೈತರ ಉತ್ಪನ್ನ ಮಾರುಕಟ್ಟೆಗೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಯೋಜನೆಯ ಪ್ರಾಯೋಗಿಕ ಜಾರಿಗೆ ನಿಗಮ ಚಿಂತನೆ
Last Updated 31 ಜುಲೈ 2021, 16:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೆಎಸ್‌ಆರ್‌ಟಿಸಿಯು ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ಜಿಲ್ಲೆಯಿಂದ ಹಣ್ಣು, ತರಕಾರಿ, ಸೊಪ್ಪು ಮತ್ತು ಕೃಷಿ ಉತ್ಪನ್ನಗಳು ನಿತ್ಯ ಕೆಎಸ್‌ಆರ್‌ಟಿಸಿ ಹವಾನಿಯಂತ್ರಿತ ಬಸ್‌ಗಳಲ್ಲಿ ಬೆಂಗಳೂರಿನ ಮಾರುಕಟ್ಟೆ ತಲುಪಲಿದೆ.

ರೈತರು ಕೃಷಿ ಉತ್ಪನ್ನಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ನೆರವಾಗಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಇದಕ್ಕಾಗಿ ಹವಾನಿಯಂತ್ರಿತ ಹಳೇ ಬಸ್‌ಗಳನ್ನು ಮರು ವಿನ್ಯಾಸಗೊಳಿಸುತ್ತಿದೆ. ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೆಎಸ್‌ಆರ್‌ಟಿಸಿ, ಆದಾಯ ಹೆಚ್ಚಿಸಿಕೊಳ್ಳಲು ಈ ಮಾರ್ಗವನ್ನು ಕಂಡುಕೊಳ್ಳುತ್ತಿದೆ.‌

ಮೊದಲ ಹಂತದಲ್ಲಿ ಚಿಕ್ಕಬಳ್ಳಾಪುರ, ಕೋಲಾರ, ಹೊಸಕೋಟೆ ಮತ್ತು ಬೆಂಗಳೂರು ಸುತ್ತಮುತ್ತಲ ಇತರ ನಗರಗಳಿಂದ ಬಸ್‌ಗಳ ಕಾರ್ಯಾಚರಣೆಗೆ ನಿಗಮ ಉದ್ದೇಶಿಸಿದೆ. ಪ್ರಯೋಗಿಕವಾಗಿ ಒಂದು ತಿಂಗಳ ಕಾಲ ಈ ಬಸ್‌ಗಳು ಓಡಾಡಲಿವೆ.

ಇದು ಜಿಲ್ಲೆಯ ರೈತರಿಗೂ ವರದಾನವಾಗಲಿದೆ. ನಿತ್ಯ ಬಾಡಿಗೆ ವಾಹನಗಳಲ್ಲಿ ಹೆಚ್ಚು ದರವನ್ನು ತೆತ್ತು ರೈತರು ಬೆಂಗಳೂರಿಗೆ ಜಿಲ್ಲೆಯಿಂದ ಉತ್ಪನ್ನಗಳನ್ನು ಕೊಂಡೊಯ್ಯುತ್ತಿದ್ದರು. ಸ್ವಲ್ಪ ಉತ್ಪನ್ನವನ್ನು ಕೊಂಡೊಯ್ಯಬೇಕು ಎಂದರೂ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿಕೊಳ್ಳಬೇಕಿದೆ. ಖಾಸಗಿ ವಾಹನಗಳ ಮಾಲೀಕರ ಜತೆ ಚೌಕಾಸಿಗೆ ಇಳಿಯಬೇಕಿದೆ. ಈ ಎಲ್ಲವುಗಳಿಂದ ಮುಕ್ತಿ ಎನ್ನುವಂತೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಾರುಕಟ್ಟೆಗೆ ಉತ್ಪನ್ನಗಳನ್ನು ಸಾಗಿಸುವ ಅವಕಾಶ ಸಹ ದೊರೆಯಲಿದೆ.

ತರಕಾರಿ, ಹಣ್ಣಿನ ಆಗರ: ಚಿಕ್ಕಬಳ್ಳಾಪುರ ಜಿಲ್ಲೆಯು ತರಕಾರಿ, ಹಣ್ಣು, ಹೂ ಸೇರಿದಂತೆ ತೋಟಗಾರಿಕಾ ಬೆಳೆಗಳ ಆಗರ. ಜಿಲ್ಲೆಯ ರೈತರಿಗೆ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿದೆ. ನಿತ್ಯ ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಯಶವಂತಪುರ, ಕಲಾಸಿಪಾಳ್ಯ ಸೇರಿದಂತೆ ಬೆಂಗಳೂರಿನ ವಿವಿಧ ಕಡೆಗಳಿಗೆ ಜಿಲ್ಲೆಯಿಂದ ಹೂ, ತರಕಾರಿಯನ್ನು ರೈತರು ಖಾಸಗಿ ವಾಹನಗಳನ್ನು ಮಾಡಿಕೊಂಡು ಕೊಂಡೊಯ್ಯುವರು. ಕೆಎಸ್ಆರ್‌ಟಿಸಿ ಬಸ್‌ಗಳಲ್ಲಿ ಉತ್ಪನ್ನಗಳನ್ನು ಕೊಂಡೊಯ್ಯುವ ಅವಕಾಶವಾದರೆ ಖಾಸಗಿ ವಾಹನಗಳಿಗಿಂತ ಕಡಿಮೆ ದರ ಇರುತ್ತದೆ ಎನ್ನುವ ನಿರೀಕ್ಷೆಯೂ ಇದೆ. ರೈತರು ಗುಂಪುಗಳನ್ನು ಮಾಡಿಕೊಂಡು ಇಲ್ಲವೆ ಸಹಕಾರ ಸಂಘಗಳ ಮೂಲಕ ಉತ್ಪನ್ನಗಳನ್ನು ಬಸ್‌ಗಳಲ್ಲಿ ಮಾರುಕಟ್ಟೆಗೆ ತಲುಪಿಸಬಹುದು.

‘ಬೆಂಗಳೂರಿಗೆ ನಗರದ ಸುತ್ತಮುತ್ತಲ ಪ್ರದೇಶಗಳಿಂದ ತರಕಾರಿ ಮತ್ತು ಹಣ್ಣು ಸರಬರಾಜಾಗುತ್ತದೆ. ತರಕಾರಿ, ಹಣ್ಣು ಮತ್ತು ಇತರ ಕೃಷಿ ಉತ್ಪನ್ನಗಳನ್ನು ರೈತರು ಬಸ್‌ಗಳಲ್ಲಿ ತಂದು ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಾರೆ. ಹಣ್ಣು ಮತ್ತು ತರಕಾರಿ ಸಾಗಿಸಲು ಹವಾನಿಯಂತ್ರಿತ ಬಸ್‌ಗಳ ವ್ಯವಸ್ಥೆಯನ್ನು ಮಾಡಿದರೆ ರೈತರಿಗೆ ಇನ್ನಷ್ಟು ಅನುಕೂಲ ಆಗಗಲಿದೆ’ ಎಂದು ಕೆಎಸ್‌ಆರ್‌ಟಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ತಿಳಿಸಿದ್ದಾರೆ. ‌

ಗುತ್ತಿಗೆ ಆಧಾರದಲ್ಲಿ ಈ ಸೇವೆ ಒದಗಿಸುವ ಆಲೋಚನೆ ಇದೆ. ರೈತರು, ರೈತ ಗುಂಪುಗಳು, ಸಹಕಾರ ಸಂಘಗಳು ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಬಹುದಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ವಿಭಾಗಗಳಲ್ಲೂ ಸುಸ್ಥಿತಿಯಲ್ಲಿರುವ ಹವಾನಿಯಂತ್ರಿತ ಬಸ್‌ಗಳನ್ನು ಮರು ವಿನ್ಯಾಸಗೊಳಿಸಲಾಗುವುದು. ಯೋಜನೆಯನ್ನು ಏಪ್ರಿಲ್‌ನಲ್ಲೇ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ನೌಕರರ ಮುಷ್ಕರ, ಅದರ ಜತೆಯಲ್ಲೇ ಆರಂಭವಾದ ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಅದು ವಿಳಂಬವಾಯಿತು‘ ಎಂದಿದ್ದಾರೆ.

ಈ ಬಗ್ಗೆ ಜಿಲ್ಲಾ ಕೆಎಸ್‌ಆರ್‌ಟಿಸಿ ಅಧಿಕಾರಿಗಳನ್ನು ವಿಚಾರಿಸಿದರೆ, ಈ ಯೋಜನೆಯನ್ನು ಸಂಸ್ಥೆಯಿಂದ ಜಾರಿಗೊಳಿಸಲಾಗುತ್ತಿದೆ. ಇನ್ನೂ ರೂಪುರೇಷೆಯ ಹಂತದಲ್ಲಿದೆ ಎಂದು ಉತ್ತರಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT