ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕದ್ದು ಮುಚ್ಚಿ ಆಂಧ್ರಕ್ಕೆ ರಾಜ್ಯದ ಮದ್ಯ ಸಾಗಾಟ, 600 ಪ್ರಕರಣ

ಗಡಿಭಾಗಗಳ ಮದ್ಯದ ಅಂಗಡಿಗಳಿಂದ ಸರಬರಾಜು
Last Updated 1 ಅಕ್ಟೋಬರ್ 2021, 1:59 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಜಿಲ್ಲೆಯ ಗಡಿಭಾಗಗಳ ಮದ್ಯದ ಅಂಗಡಿಗಳಿಂದ ನೆರೆ ಆಂಧ್ರಪ್ರದೇಶಕ್ಕೆ ಅಕ್ರಮವಾಗಿ ಮದ್ಯ ಪೂರೈಸಲಾಗುತ್ತಿದೆ. ಕರ್ನಾಟಕಕ್ಕೆ ಹೋಲಿಸಿದರೆ ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ದುಬಾರಿ ಮತ್ತು ಕಳಪೆ ಗುಣಮಟ್ಟದ್ದಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಮದ್ಯ ಪ್ರಿಯರು ರಾಜ್ಯದ ಮದ್ಯಕ್ಕೆ ಮೋಹಿತರಾಗಿದ್ದಾರೆ!

ಹೀಗೆ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು, ಚಿಂತಾಮಣಿ ಮತ್ತು ಚೇಳೂರು ತಾಲ್ಲೂಕಿನ ಗಡಿಭಾಗಗಳ ಮದ್ಯದ ಅಂಗಡಿಗಳಿಗೆ ಆಂಧ್ರದ ಮದ್ಯಪ್ರಿಯರು ಲಗ್ಗೆ ಇಡುತ್ತಿದ್ದಾರೆ. ಅಲ್ಲದೆ ಜಿಲ್ಲೆಯಿಂದ ಕದ್ದು ಮುಚ್ಚು ಆಂಧ್ರಪ್ರದೇಶಕ್ಕೆ ಮದ್ಯ ಸಹ ‍ಪೂರೈಕೆ ಆಗುತ್ತಿದೆ.

ಆಂಧ್ರದಲ್ಲಿ ಮದ್ಯದ ಅಂಗಡಿಗಳು ಮಂಡಲ ಕೇಂದ್ರದಲ್ಲಿವೆ. ನಿಯಮಗಳು ಸಹ ಬಿಗಿಯಾಗಿವೆ.

ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಜನವರಿಯಿಂದ ಇಲ್ಲಿಯವರೆಗೆ 599 ಪ್ರಕರಣಗಳು ದಾಖಲಾಗಿವೆ. 605 ಆರೋಪಿಗಳನ್ನು ಪೊಲೀಸರು ಮತ್ತು ಅಬಕಾರಿ ಇಲಾಖೆಯವರು ವಶಕ್ಕೆ ಪಡೆದಿದ್ದಾರೆ. 3,287 ಲೀಟರ್ ಮದ್ಯ ವಶಕ್ಕೆ ಪಡೆದಿದ್ದಾರೆ. ಇದರ ಒಟ್ಟು ಮೌಲ್ಯ ₹12,24,761 ಆಗುತ್ತದೆ. ಇವುಗಳಲ್ಲಿ ಹೆಚ್ಚು ಪ್ರಕರಣಗಳು ಗಡಿಭಾಗಗಳಲ್ಲಿ ದಾಖಲಾಗಿವೆ.

ಚೇಳೂರು ತಾಲ್ಲೂಕಿನ ಊದವಾರಪಲ್ಲಿ ಗ್ರಾಮದಲ್ಲಿ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ತಕ್ಷಣವೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಮಾರ್ಚ್‌ನಲ್ಲಿ ಪುಲಗಲ್ ಗ್ರಾ.ಪಂ ಸದಸ್ಯ ಕಡಪಲ ಸುಧಾಕರರೆಡ್ಡಿ ಮತ್ತು ಮಾಜಿ ಉಪಾಧ್ಯಕ್ಷ ಕೆ. ಮಧುಸೂದನ ರೆಡ್ಡಿ ಚೇಳೂರು ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದರು.

ಈ ಗ್ರಾಮಕ್ಕೆ ಆಂಧ್ರ ಗಡಿಭಾಗದ ಊರುಗಳಿಂದ ಜನರು ಮದ್ಯ ಸೇವಿಸಲು ಬರುತ್ತಾರೆ. ಮದ್ಯವ್ಯಸನಿಗಳು ಬಣವೆ, ಟೊಮೆಟೊ ಕಟ್ಟಿಗೆಗಳಿಗೆ ಮತ್ತಿನಲ್ಲಿ ಬೆಂಕಿ ಇಡುತ್ತಿದ್ದಾರೆ. ಇದರಿಂದ ಅಪಾರ ನಷ್ಟವಾಗುತ್ತಿದೆ. ಕೊಳವೆಬಾವಿ ಕೇಬಲ್ ವೈರ್‌ಗಳನ್ನು ಕಟ್ ಮಾಡಿಕೊಂಡು ಹೋಗುತ್ತಿದ್ದಾರೆ. ಗ್ರಾಮದ ಸಣ್ಣ ಪೆಟ್ಟಿಗೆ ಅಂಗಡಿಗಳು, ದಿನಸಿ ಅಂಗಡಿಗಳಲ್ಲಿ ರಾಜಾರೋಷವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ’ ಎಂದು ದೂರಿನಲ್ಲಿ ತಿಳಿಸಿದ್ದರು.

ಎಗ್ಗಿಲ್ಲದೆ ನಡೆಯುತ್ತಿದೆ ಮಾರಾಟ: ಕೆಲವು ದಿನಗಳ ಹಿಂದೆ ಕೊತ್ತಕೋಟೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಸ್ಥಳದ ಮೇಲೆ ತಹಶೀಲ್ದಾರ್ ದಾಳಿ ನಡೆಸಿದರು. ಮದ್ಯವನ್ನು ವಶಪಡಿಸಿಕೊಂಡರು. ನಂತರವೂ ಈ ಅಕ್ರಮಗಳು ಮುಂದುವರಿದಿವೆ ಎನ್ನುತ್ತಾರೆ ಬಾಗೇಪಲ್ಲಿ ತಾಲ್ಲೂಕು ಮಾಡಪಲ್ಲಿಯ ನರಸಿಂಹಮೂರ್ತಿ.

ಹೀಗೆ ಗಡಿಭಾಗದ ಸಣ್ಣ ಪುಟ್ಟ ಅಂಗಡಿಗಳಲ್ಲಿಯೂ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ ಎನ್ನುವ ಆರೋಪವಿದೆ.

ಹೆಚ್ಚುತ್ತಿರುವ ಪ್ರಕರಣ: ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಹೆಚ್ಚುತ್ತಿವೆ. ಕಿರಾಣಿ ಅಂಗಡಿಗಳಲ್ಲಿ, ಸಣ್ಣ ಹೋಟೆಲ್‌ಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಮದ್ಯ ಸೇವೆನೆಗೆ ಅವಕಾಶಗಳನ್ನು ನೀಡಲಾಗುತ್ತಿದ್ದು ಪ್ರಕರಣ ಸಹ ದಾಖಲಾಗುತ್ತಿವೆ.

**
ಗಡಿಭಾಗಗಳಲ್ಲಿ ಕಣ್ಗಾವಲು
ಅಂಗಡಿಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನಕ್ಕೆ ಅವಕಾಶ ಮಾಡಿಕೊಡುವವರ ಮ‌ತ್ತು ಅಲ್ಲಿ ಮದ್ಯ ಸೇವಿಸುತ್ತಿರುವವ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ನಿತ್ಯವೂ ಇಂತಹ ಈ ಬಗ್ಗೆ ಪ್ರಕರಣಗಳು ದಾಖಲಾಗುತ್ತಿವೆ. ಅಬಕಾರಿ ಅಕ್ರಮಗಳ ಬಗ್ಗೆ ಜಿಲ್ಲೆಯ ಗಡಿಭಾಗಗಳಲ್ಲಿಯೂ ಕಣ್ಗಾವಲಿಡಲಾಗಿದೆ. ಅಬಕಾರಿ ಇಲಾಖೆಯವರಿಗೂ ಅಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

**
ನಾನಾ ಕಳ್ಳದಾರಿ
ಆಂಧ್ರಪ್ರದೇಶದಲ್ಲಿ ನಮ್ಮಲ್ಲಿ ದೊರೆತ ರೀತಿಯಲ್ಲಿ ಮದ್ಯ ದೊರೆಯುತ್ತಿಲ್ಲ. ಪಂಚಾಯಿತಿ ಕೇಂದ್ರಗಳಲ್ಲಿ ಮಾತ್ರ ಸರ್ಕಾರಿ ಮದ್ಯ ಮಾರಾಟ ಅಂಗಡಿಗಳು ಇವೆ. ಬೆಲೆಯೂ ಹೆಚ್ಚು ಈ ಕಾರಣದಿಂದ ಇಲ್ಲಿಗೆ ಖರೀದಿಗೆ ಬರುವರು. ಕೆಲವರು ಹಳ್ಳಗಳಲ್ಲಿ ಮದ್ಯವನ್ನು ಬಚ್ಚಿಟ್ಟು ಇಂತಹ ಸಮಯಕ್ಕೆ ಬನ್ನಿ ಎಂದು ಆಂಧ್ರಪ್ರದೇಶದ ಜನರಿಗೆ ತಿಳಿಸಿರುವರು. ಹೀಗೆ ನಾನಾ ಕಳ್ಳದಾರಿಗಳಲ್ಲಿ ರಾಜ್ಯದಿಂದ ಆಂಧ್ರಪ್ರದೇಶಕ್ಕೆ ಮದ್ಯ ರವಾನೆ ಆಗುತ್ತಿದೆ ಎಂದು ಬಾಗೇಪಲ್ಲಿ ತಾಲ್ಲೂಕು ಮಾಡಪಲ್ಲಿಯ ನರಸಿಂಹಮೂರ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT