ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖನಿಜ ಪ್ರತಿಷ್ಠಾನ: ₹43.25 ಕೋಟಿ ಸಂಗ್ರಹ

ಜಿಲ್ಲೆಯಲ್ಲಿ 150 ಕಾಮಗಾರಿಗೆ ಹಣ ಬಿಡುಗಡೆ; ಗಣಿಬಾಧಿತ ಪ್ರದೇಶಗಳ ಅಭಿವೃದ್ಧಿಗಿರುವ ಹಣ
Last Updated 12 ಏಪ್ರಿಲ್ 2022, 6:07 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಜಿಲ್ಲಾ ಖನಿಜ ಪ್ರತಿಷ್ಠಾನವು ₹ 43.25 ಕೋಟಿ ಸಂಗ್ರಹಿಸಿದೆ. ಹೀಗೆ ಸಂಗ್ರಹವಾಗಿರುವ ಮೊತ್ತದಲ್ಲಿ ವಿವಿಧ ತಾಲ್ಲೂಕಿನಲ್ಲಿ ಒಟ್ಟು 150 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ಗಣಿಗಾರಿಕೆ ಸಂಬಂಧಿತ ಕಾರ್ಯಾಚರಣೆಗಳ ಪರಿಣಾಮದಿಂದ ಹಾನಿಗೊಳಗಾದ ವ್ಯಕ್ತಿಗಳು ಮತ್ತು ಪ್ರದೇಶಗಳ ಅನುಕೂಲಕ್ಕಾಗಿ ಹಾಗೂ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಸೂಚಿಸುವ ರೀತಿಯಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಕೆಲಸ ಮಾಡು‌ತ್ತದೆ.

ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್‌) ಶಾಸನಬದ್ಧ ಸಂಸ್ಥೆಯಾಗಿದ್ದು ರಾಜ್ಯ ಸರ್ಕಾರದ ಅಧಿಸೂಚನೆ ಮೂಲಕ ಸ್ಥಾಪಿತವಾಗಿದೆ. ಗಣಿಗಾರಿಕೆ ಕಾರ್ಯಾಚರಣೆ ಪೀಡಿತ ಜಿಲ್ಲೆಗಳಲ್ಲಿ ಪ್ರತಿ ಜಿಲ್ಲಾ ಖನಿಜ ಪ್ರತಿಷ್ಠಾನವನ್ನು ರಾಜ್ಯ ಸರ್ಕಾರಗಳು ಟ್ರಸ್ಟ್ ಅಥವಾ ಲಾಭರಹಿತ ಸಂಸ್ಥೆಯಾಗಿ ಅಧಿಸೂಚನೆ ಮೂಲಕ ಸ್ಥಾಪಿಸಿವೆ.

ಹೀಗೆ ಖನಿಜ ಪ್ರತಿಷ್ಠಾನವು ಸಂಗ್ರಹಿಸಿರುವ ಅನುದಾನವನ್ನು ಗಣಿಬಾಧಿತ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೂ ಈ ಅನುದಾನ ಸದ್ಬಳಕೆ ವಿಚಾರದಲ್ಲಿ ನಾಲ್ಕು ಬಾರಿ ಕ್ರಿಯಾ ಯೋಜನೆ ತಯಾರಿಸಲಾಗಿದೆ.

ಕಾಮಗಾರಿಯ ಅಂದಾಜುಪಟ್ಟಿಗೆ ಅನುಮೋದನೆ ಪಡೆದ ನಂತರ ಸಂಬಂಧಪಟ್ಟ ಅನುಷ್ಠಾನ ಇಲಾಖೆಗೆ ಕಾಮಗಾರಿ ಕೈಗೊಳ್ಳಲು ಜ್ಞಾಪನಾ ಪತ್ರ ನೀಡಲಾಗುತ್ತದೆ. ಕಾಮಗಾರಿ ಪ್ರಗತಿ ಪರಿಶೀಲಿಸಿದ ನಂತರ ಅನುದಾನ ಲಭ್ಯತೆಗೆ ಅನುಗುಣವಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ಮೂರನೇ ವ್ಯಕ್ತಿಯ ತಪಾಸಣಾ ವರದಿ ಹಾಗೂ ಇತರೆ ದಾಖಲೆಗಳನ್ನು ಪಡೆದ ನಂತರ ಕಾಮಗಾರಿಯ ಅಂತಿಮ ಮೊತ್ತವನ್ನು ಸಂಬಂಧಪಟ್ಟ ಅನುಷ್ಠಾನ ಇಲಾಖೆಗೆ ಬಿಡುಗಡೆ ಮಾಡಲಾಗುತ್ತದೆ.

ಶಾಲೆ ದುರಸ್ತಿ, ಕುಡಿಯುವ ನೀರು, ರಸ್ತೆಗಳ ಅಭಿವೃದ್ಧಿ ಹೀಗೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳ ಮೂಲಕ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ. ಸದ್ಯ ಜಿಲ್ಲಾ ಖಜಾನೆಯಲ್ಲಿ ಡಿಎಂಎಫ್‌ಟಿ ನಿಧಿ ₹ 13 ಕೋಟಿ ಇದೆ. ಈ ಹಣವುಡಿಎಂಎಫ್‌ಟಿ ಬ್ಯಾಂಕ್ ಖಾತೆಗೆ ವರ್ಗಾವಣೆಯಾದ ತರುವಾಯ ಬಾಕಿ ಇರುವ ಕಾಮಗಾರಿಗಳಿಗೆ ಈ ಹಣ ಬಿಡುಗಡೆ ಆಗಲಿದೆ ಎಂದು ಮೂಲಗಳು ತಿಳಿಸಿವೆ. ‌

2017–18ನೇ ಸಾಲಿನಿಂದ ಇಲ್ಲಿಯವರೆಗೆ ಜಿಲ್ಲಾ ಖನಿಜ ಪ್ರತಿಷ್ಠಾನದ ಗೌರ್ನಿಂಗ್ ಸಭೆಯಲ್ಲಿ ನಾಲ್ಕು ಬಾರಿ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದೆ.

2017–18ರಲ್ಲಿ ₹ 639.89 ಲಕ್ಷ, 2018–19ರಲ್ಲಿ 2,130.04 ಲಕ್ಷ, 2019–20ರಲ್ಲಿ 3,915.57 ಲಕ್ಷ ಹಾಗೂ 2020–21ನೇ ಸಾಲಿನಲ್ಲಿ 5,536.65 ಲಕ್ಷ ವೆಚ್ಚದ ಕ್ರಿಯಾಯೋಜನೆಯನ್ನು ತಯಾರಿಸಲಾಗಿದೆ. ಆದರೆ ಹೊಸದಾಗಿ ಅನುಮೋದಿತ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುದಾನದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ.

ಚಿಕ್ಕಬಳ್ಳಾಪುರ ತಾಲ್ಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ₹ 764.16 ಲಕ್ಷ, ಚಿಂತಾಮಣಿ ತಾಲ್ಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ₹ 102.65 ಲಕ್ಷ, ಶಿಡ್ಲಘಟ್ಟ ತಾಲ್ಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ₹ 77.78 ಲಕ್ಷ, ಗೌರಿಬಿದನೂರು ತಾಲ್ಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ₹ 168.36 ಲಕ್ಷ, ಬಾಗೇಪಲ್ಲಿ ತಾಲ್ಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ₹ 33.54 ಲಕ್ಷ ಹಾಗೂ ಗುಡಿಬಂಡೆ ತಾಲ್ಲೂಕು ವ್ಯಾಪ್ತಿಯ ಕಾಮಗಾರಿಗಳಿಗೆ ₹ 69.12 ಲಕ್ಷ ಬಿಡುಗಡೆ ಆಗಿದೆ.

ಜಿಲ್ಲೆಯಲ್ಲಿ ಬಾಗೇಪಲ್ಲಿ ಕ್ಷೇತ್ರವು ಗಣಿಬಾಧಿತ ಪ್ರದೇಶಗಳಲ್ಲಿ ಪ್ರಮುಖವಾಗಿದೆ. ಈ ತಾಲ್ಲೂಕಿನಲ್ಲಿ 2017–18ರಿಂದ ಇಲ್ಲಿಯವರೆಗೆ 429.40 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಅನುಮೋದನೆ ನೀಡಲಾಗಿದೆ. ಇದರಲ್ಲಿ ₹ 102.55 ಲಕ್ಷ ಮಾತ್ರ ಬಿಡುಗಡೆ ಆಗಿದೆ. ಹೀಗೆ ಹಲವು ಕಾಮಗಾರಿಗಳಿಗೆ ಅನುದಾನದ ಕೊರತೆ ಬಾಧಿಸುತ್ತಿದೆ. ಹೀಗೆ ಕೆಲವು ತಾಲ್ಲೂಕುಗಳಲ್ಲಿ ರೂಪಿಸಲಾಗಿರುವ ಕ್ರಿಯಾ ಯೋಜನೆಗಳಿಗೆ ಅನುದಾನದ ಕೊರತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT