ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಡ್ಲಘಟ್ಟ | ಮಕ್ಕಳ ಸೃಜನಶೀಲತೆ ಬೆಳಗುವ ಶಾಲೆ

ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವಿಧ ಚಟುವಟಿಕೆ
Published 6 ಜುಲೈ 2024, 7:42 IST
Last Updated 6 ಜುಲೈ 2024, 7:42 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ತಾಲ್ಲೂಕಿನ ತಾತಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಗ್ರಂಥಾಲಯದ ಪುಸ್ತಕಗಳನ್ನು ಓದಿ ಅವುಗಳ ಬಗ್ಗೆ ಅನಿಸಿಕೆ ಬರೆಯುತ್ತಾರೆ.

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ವಿಷಯಗಳ ಆಧಾರದ ಮೇಲೆ ವರ್ಗೀಕರಿಸಿ, ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವಂತೆ ಸ್ಟಿಕ್ಕರ್‌ಗಳನ್ನು ಹಚ್ಚಲಾಗಿದೆ. ವ್ಯಕ್ತಿಪರಿಚಯ, ಮಕ್ಕಳ ಸಾಹಿತ್ಯ, ಶಿಕ್ಷಣ, ಇಂಗ್ಲಿಷ್, ವಿಜ್ಞಾನ, ಗಣಿತ ಇನ್ನು ಮುಂತಾದ ವಿಷಯಗಳಲ್ಲಿ ವರ್ಗೀಕರಿಸಿಟ್ಟಿದ್ದಾರೆ. ವಾರದಲ್ಲೊಮ್ಮೆ ಮಕ್ಕಳಿಗೆ ಮನೆಗೆ ಗ್ರಂಥಾಲಯ ಪುಸ್ತಕ ನೀಡುವುದಲ್ಲದೆ, ಮಕ್ಕಳು ಪುಸ್ತಕಗಳನ್ನು ಓದಿ ಬಂದು ತಮ್ಮ ಅಭಿಪ್ರಾಯ ದಾಖಲಿಸುತ್ತಾರೆ. ಆ ಮೂಲಕ ಮಕ್ಕಳ ಬರವಣಿಗೆಗೆ ಪ್ರೋತ್ಸಾಹ ನೀಡಲಾಗುತ್ತಿದೆ.

ಮಕ್ಕಳು ಪುಸ್ತಕಗಳನ್ನಷ್ಟೇ ಅಲ್ಲ, ಚಲನಚಿತ್ರಗಳನ್ನು ನೋಡಿ ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಗಂಧದಗುಡಿ ಸಿನಿಮಾವನ್ನು ತೋರಿಸಿ ಆ ಸಿನಿಮಾದ ಅಂಶಗಳ ಆಧಾರದ ಮೇಲೆ ಪರೀಕ್ಷೆ ನಡೆಸಲಾಗಿತ್ತು.

ಶಾಲೆಯ ಪ್ರತಿ ಮಗುವಿಗೂ ಲೇಖನಪುಸ್ತಕಗಳ ಮೂಲಕ ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮಕ್ಕಳ ಅಭಿವ್ಯಕ್ತಿಗೆ ವೇದಿಕೆಯಾಗಿ ಅವಲಕ್ಕಿ ಪವಲಕ್ಕಿ ಎಂಬ ಯೂಟ್ಯೂಬ್‌ ಚಾನಲ್ ಮತ್ತು ಅದೇ ಹೆಸರಿನ ಶಾಲಾ ಪತ್ರಿಕೆಯನ್ನು ಸಹ ಹೊರತರಲಾಗುತ್ತಿದೆ.

ಶಾಲೆಯಲ್ಲಿ ಪಾಠಕ್ಕೆ ಪೂರಕವಾಗಿ ಕೆಲವು ವಿಡಿಯೋಗಳನ್ನು ಟಿವಿಮೂಲಕ ತೋರಿಸಲಾಗುತ್ತಿದೆ. ಕೆಲವು ವಿಶೇಷ ಮಕ್ಕಳ ಸಿನಿಮಾಗಳನ್ನು, ಸಾಕ್ಷ್ಯಚಿತ್ರಗಳನ್ನು ತೋರಿಸಲು ವಾರದ ವಿಡಿಯೋ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶಾಲೆಯ ಮಕ್ಕಳನ್ನು ಸ್ವಪ್ನ, ಸೃಜನ, ಸ್ಪಂದನ, ಸಾಧನಾ ಎಂಬ ನಾಲ್ಕು ತಂಡಗಳಲ್ಲಿ ವಿಂಗಡಿಸಿ ಈ ತಂಡಗಳ ನಡುವೆ ಪ್ರತಿವಾರದ ಪಾಠ ಆಧರಿಸಿದ ರಸಪ್ರಶ್ನೆ ನಡೆಸಲಾಗುತ್ತಿದೆ.

ಪ್ರತಿ ಸೋಮವಾರ ಮಕ್ಕಳೇ ನಡೆಸುವ ಕಾಮನಬಿಲ್ಲು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲೆಯ ಎಂಟನೇ ತರಗತಿ ಮಕ್ಕಳಿಗೆ ಎನ್‌ಎಂಎಂಎಸ್‌ ಪರೀಕ್ಷೆಗಾಗಿ ತರಬೇತಿ ನೀಡಿ ಇದುವರೆಗೂ ಮೂರು ಮಕ್ಕಳು ಆಯ್ಕೆಯಾಗಿದ್ದಾರೆ.

ಶಾಲೆಯ ಮಕ್ಕಳು ಬರೆದಿರುವ ಹಲವು ಚಿತ್ರಗಳು ಹಾಗೂ ಮಕ್ಕಳ ಭಾವಚಿತ್ರಗಳು ರಾಜ್ಯಮಟ್ಟದ ಟೀಚರ್ ಪತ್ರಿಕೆಯ ಮುಖಪುಟಗಳಾಗಿ ಪ್ರಕಟವಾಗಿವೆ. ಪಂಚಾಯತ್ ರಾಜ್ ಇಲಾಖೆಯ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಕೈಪಿಡಿಯ ಮುಖಪುಟಗಳಾಗಿ ಆಯ್ಕೆಯಾಗಿವೆ.

ಶಾಲೆಯಲ್ಲಿ ಹಲವು ಸಾಹಿತ್ಯಿಕ ಕೃತಿಗಳು ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಲೇಖಕರನ್ನು ಪರಿಚಯಿಸಲಾಗಿದೆ. ಗುಹೆಯಲ್ಲಿ ಒಂದು ದಿನ, ಫಾತಿಮಾ ಮತ್ತು ತನ್ವಿ, ಆಪರೇಷನ್ ಕೈಟೀನ್, ಷಹೀನ್ ಮತ್ತು ಕಾಲದ ಸಾಕ್ಷಿಯಾಗಿ ಕಳ್ಳೀ ಹೂಗಳು ಎಂಬ ಮಕ್ಕಳ ಲೇಖಕರು, ಅನುವಾದಕರು, ಪ್ರಕಾಶಕ ನೆಲವಾಗಿಲು ಧನಪಾಲ್ ಈ ಶಾಲೆಯಲ್ಲಿ ತಮ್ಮ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ. ಹುಸೇನಿ ಎಂಬ ಕಲಾವಿದರಿಂದ ಕಾಗದಕಲೆ ಸೇರಿದಂತೆ ಶಾಲೆಯಲ್ಲಿ ಹಲವು ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಕಾರ್ಯಾಗಾರ ನಡೆಸಲಾಗಿದೆ. ಹೊರಸಂಚಾರದ ಮೂಲಕ ನಿಸರ್ಗ ಅಧ್ಯಯನ ಕೂಡ ನಡೆಸಲಾಗುತ್ತದೆ.

ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ಮಕ್ಕಳೇ ನಿರ್ವಹಿಸುವಂತೆ ತರಬೇತಿ ನೀಡಲಾಗಿರುವುದು ಈ ಶಾಲೆಯ ಮತ್ತೊಂದು ವಿಶೇಷತೆ.

ಒಟ್ಟು 90 ಮಂದಿ ಮಕ್ಕಳಿರುವ ತಾತಹಳ್ಳಿ ಸರ್ಕಾರಿ ಶಾಲೆಯಲ್ಲಿ ಮುಖ್ಯಶಿಕ್ಷಕಿ ಎಚ್.ಎಂ.ಸರಸ್ವತಮ್ಮ, ಸಹಶಿಕ್ಷಕ ಪಿ.ಸುದರ್ಶನ, ಎಸ್.ಕಲಾಧರ್, ಕೆ.ಎ.ನಾಗರಾಜ, ವಿ.ಶಾಂತಮ್ಮ ಅವರು ಗ್ರಾಮಸ್ಥರು ಹಾಗೂ ದಾನಿಗಳ ನೆರವು ಪಡೆದು ಮಕ್ಕಳ ಪ್ರಗತಿಗಾಗಿ ಶ್ರಮಿಸುತ್ತಿದ್ದಾರೆ.

ಗ್ರಾಮದ ಜೈ ಭಾರತ್ ಯುವಕರ ಸಂಘ ಶಾಲೆಯ ಪ್ರಗತಿಗೆ ಸಹಕಾರ ಕೊಡುತ್ತಿದೆ. ನಡಿಪಿನಾಯಕನಹಳ್ಳಿ ಗ್ರಾಮದ ಶ್ರೀನಿವಾಸ್‌ ಶಾಲೆಗೆ ಡೆಸ್ಕ್‌, ದೇವನಹಳ್ಳಿಯ ಬಸವರಾಜ್ ಪಾಟೀಲರು ಯುಪಿಎಸ್, ಗ್ರಾಮದ ಸತ್ಯನಾರಾಯಣರಾವ್‌ ಶಾಲೆಗೆ ನಾಮಫಲಕ ಬರೆಸಲು ಸಹಕರಿಸಿದ್ದಾರೆ. ವಾಗ್ದೇವಿ ಶೈಕ್ಷಣಿಕ ಮತ್ತು ಗ್ರಾಮೋದ್ಧಾರ ಟ್ರಸ್ಟ್ ನಲಿಕಲಿ ಮಕ್ಕಳಿಗೆ ಪೀಠೋಪಕರಣ, ಪ್ರಥಮ್‌ ಬುಕ್ಸ್‌ನವರು ಗ್ರಂಥಾಲಯ ಪುಸ್ತಕಗಳನ್ನು, ಚೈಲ್ಡ್ ರೈಟ್‌ ಟ್ರಸ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಉಷಾಶೆಟ್ಟಿ ಗ್ರಾಮಾಂತರ ಟ್ರಸ್ಟ್ ಮೂಲಕ ಶಾಲೆಗೆ ವಿಜ್ಞಾನ ಪ್ರಯೋಗಾಲಯವನ್ನು ಒದಗಿಸಲಾಗಿದೆ.

ಶಾಲೆಗೆ ಸುಸಜ್ಜಿತ ಶೌಚಾಲಯ, ಹೆಚ್ಚುವರಿ ಸುಸಜ್ಜಿತ ಶಾಲಾಕೊಠಡಿ, ಶಾಲಾ ಮೈದಾನ ಬೇಕಿವೆ.

ಹಿಪ್ಪುನೇರಳೆ ತೋಟದಲ್ಲಿ ಮಕ್ಕಳಿಗೆ ರೇಷ್ಮೆ ಕೃಷಿಯ ಪಾಠ
ಹಿಪ್ಪುನೇರಳೆ ತೋಟದಲ್ಲಿ ಮಕ್ಕಳಿಗೆ ರೇಷ್ಮೆ ಕೃಷಿಯ ಪಾಠ
ಮಕ್ಕಳ ಓದುವಿಕೆ
ಮಕ್ಕಳ ಓದುವಿಕೆ
ಅನನ್ಯ ವಿದ್ಯಾರ್ಥಿನಿ
ಅನನ್ಯ ವಿದ್ಯಾರ್ಥಿನಿ
ಪಾವನ ವಿದ್ಯಾರ್ಥಿನಿ
ಪಾವನ ವಿದ್ಯಾರ್ಥಿನಿ
ಮುರಳಿ ಎಸ್.ಡಿ.ಎಂ. ಸಿ ಅಧ್ಯಕ್ಷ
ಮುರಳಿ ಎಸ್.ಡಿ.ಎಂ. ಸಿ ಅಧ್ಯಕ್ಷ

ನಮ್ಮ ಸರ್ಕಾರಿ ಶಾಲೆಯಿಂದ ಊರಿಗೆ ಗೌರವ ಬಂದಿದೆ. ಶಿಕ್ಷಕರು ಉತ್ತಮ ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಾವು ಯಾವಾಗಲೂ ಬೆಂಬಲ ಕೊಡುತ್ತೇವೆ

-ಮುರಳಿ ಎಸ್‌ಡಿಎಂಸಿ ಅಧ್ಯಕ್ಷ

ಎನ್‌ಎಂಎಂಎಸ್ ಪರೀಕ್ಷೆಗೆ ತರಬೇತಿ ಕೊಡುತ್ತಾರೆ. ಇದರಲ್ಲಿ ಬಹಳ ವಿಷಯಗಳನ್ನು ತಿಳಿಯುತ್ತೇವೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ಹೇಗೆಂದು ಶಿಕ್ಷಕರು ಕಲಿಸಿಕೊಡುತ್ತಾರೆ

-ಪಾವನ ವಿದ್ಯಾರ್ಥಿನಿ

ಶಾಲೆಯಲ್ಲಿ ಹಲವಾರು ಕಾರ್ಯಕ್ರಮ ಮಾಡುತ್ತಾರೆ. ಅದರಲ್ಲಿ ಭಾಗವಹಿಸಿ ಮಾತನಾಡಲು ಶಿಕ್ಷಕರು ನಮ್ಮನ್ನು ಪ್ರೋತ್ಸಾಹಿಸುತ್ತಾರೆ. ಇದರಿಂದ ನಮಗೆ ಧೈರ್ಯ ಬರುತ್ತದೆ

- ಅನನ್ಯ ವಿದ್ಯಾರ್ಥಿನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT