ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು: ನಗರಸಭೆ ಚುಕ್ಕಾಣಿ ಯಾರ ಮಡಿಲಿಗೆ ?

ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ
Last Updated 1 ನವೆಂಬರ್ 2020, 4:23 IST
ಅಕ್ಷರ ಗಾತ್ರ

ಗೌರಿಬಿದನೂರು: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಭಾನುವಾರ (ನ.1) ನಡೆಯಲಿದ್ದು, ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ನಗರಸಭೆ ರಚನೆಯಾದ ನಂತರ ಮೊದಲ ಅಧ್ಯಕ್ಷ ಗಾದಿ‌ ಯಾರು‌ ಹಿಡಿಯುತ್ತಾರೆ ಎಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ‌ಹೆಚ್ಚಾಗಿದೆ.

ರಾಜ್ಯ ಸರ್ಕಾರ ಉಭಯ ಸ್ಥಾನಗಳ ಮೀಸಲಾತಿ ಎರಡನೇ ಬಾರಿಗೆ ಪರಿಷ್ಕೃತಗೊಳಿಸಿ ಪ್ರಕಟಿಸಿದ ಬೆನ್ನಲ್ಲೆ, ನಗರಸಭೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಮತ್ತು ಪುಟ್ಟಸ್ವಾಮಿಗೌಡರ ಬಣದಲ್ಲಿ ತೆರೆಮರೆಯ ರಾಜಕೀಯ ತಂತ್ರಗಾರಿಕೆಗಳು ಗರಿಗೆದರಿವೆ.

ಪ್ರಸ್ತುತ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್ ಸಿ ಮಹಿಳೆಗೆ ಮೀಸಲಾಗಿದೆ.

ಕಾಂಗ್ರೆಸ್ ‌ಮತ್ತು ಪುಟ್ಟಸ್ವಾಮಿಗೌಡರ ಬಣದ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಗೌಡರ ಬಣದೊಂದಿಗೆ ಗುರುತಿಸಿಕೊಂಡಿದ್ದಾರೆ.

ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ 26 ನೇ ವಾರ್ಡಿನ ಸದಸ್ಯೆ ಕೆ.ಎಂ.ಗಾಯತ್ರಿ ಹಾಗೂ 1 ನೇ ವಾರ್ಡಿನ ಸದಸ್ಯೆ ಎಸ್.ರಾಜೇಶ್ವರಿ ಹೆಸರು ಕೇಳಿ ಬರುತ್ತಿದೆ. ಉಳಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ಪಕ್ಷೇತರರಾಗಿ ಗೆದ್ದು ಕೈ ಪಾಳಯ ಸೇರಿರುವ 30 ನೇ ವಾರ್ಡಿನ ಸದಸ್ಯೆ ಭಾಗ್ಯಮ್ಮ ಹೆಸರು ಕಣದಲ್ಲಿದೆ. ಇನ್ನು ಗೌಡರ ಬಣದಲ್ಲಿ 11 ನೇ ವಾರ್ಡಿನ ಬಿಜೆಪಿ‌ ಸದಸ್ಯೆ ಜಿ.ಪುಣ್ಯವತಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಆಕಾಂಕ್ಷಿಯಾಗಿದ್ದಾರೆ.

ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರನ್ನು ಒಳಗೊಂಡಿರುವ ಗೌಡರ ಬಣವು ಬೆಂಗಳೂರಿನಲ್ಲಿ ಸಚಿವ ಡಾ.ಕೆ.ಸುಧಾಕರ್‌ ಅವರ ನಿವಾಸದಲ್ಲಿ ಎರಡು ಬಾರಿ‌ ಸಭೆ ನಡೆಸಿದೆ. ನಗರಸಭೆ ಅಧಿಕಾರವನ್ನು ಈ‌ ಬಾರಿ ಕೈ ಪಾಳಯದಿಂದ ಬಿಡಿಕೊಳ್ಳಬೇಕು‌ ಎಂದು ಶಪಥ ಮಾಡಲಾಗಿದೆ. ಆದರೆ ಬಿಜೆಪಿ ಸದಸ್ಯರಿಗೆ ಅಧಿಕಾರ ನೀಡಿದರೆ ಮಾತ್ರ ನಮ್ಮ ಬೆಂಬಲವಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ ಎನ್ನಲಾಗಿದೆ. ಈ ಷರತ್ತು ಒಪ್ಪದ ಜೆಡಿಎಸ್ ಹಾಗೂ ಪಕ್ಷೇತರರು ಕಾಂಗ್ರೆಸ್‌ ಕಡೆ ವಾಲುತ್ತಿದ್ದಾರೆ ಎನ್ನಲಾಗಿದೆ.

ದಶಕಗಳಿಂದಲೂ ಕೈ ಪಾಳಯದ ಹೊಡಿತದಲ್ಲಿದ್ದ ನಗರದ ಪುರಸಭೆ ಆಡಳಿತವು‌ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದ ಬಳಿ‌ಕ ನಡೆದ ಮೊದಲ ಚುನಾವಣೆ ಇದಾಗಿದೆ. ಇದರಿಂದ ಈ‌ ಬಾರಿ ಕಾಂಗ್ರೆಸ್ ಅಧಿಕಾರ ಪಡೆಯಬೇಕು ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ರಾಜಕೀಯ ತಂತ್ರಗಾರಿಕೆ ನಡೆಸುತ್ತಿದ್ದರೆ, ಇವರ ವಿರೋಧಿ ಬಣವು ಈ‌ ಬಾರಿ ತಾವೇ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಉಸ್ತುವಾರಿ ಸಚಿವರ ಮೊರೆಹೋಗಿದ್ದಾರೆ.

144 ಸೆಕ್ಷನ್ ಜಾರಿ
ನಗರದ ನಗರಸಭೆ ಕಚೇರಿಯಲ್ಲಿ ಇಂದು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ನಗರಸಭೆ ಕಚೇರಿಯಿಂದ ಸುಮಾರು‌ 1 ಕಿ.ಮೀ ವ್ಯಾಪ್ತಿಗೆ ಅನ್ವಯವಾಗುವಂತೆ ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುತ್ತದೆ.

ಲೆಕ್ಕಾಚಾರ

ನಗರಸಭೆಯ 31 ಸ್ಥಾನಗಳಿಗೆ ಕಳೆದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನ ಪಡೆದಿದೆ. ಒಬ್ಬ ಪಕ್ಷೇತರ ಅಭ್ಯರ್ಥಿ ಕೈ ಪಾಳಯ ಸೇರುವುದರೊಂದಿಗೆ ಕಾಂಗ್ರೆಸ್‌ ಸದಸ್ಯರ ಸಂಖ್ಯಾಬಲ 16ಕ್ಕೆ ಏರಿದೆ.ಗೌಡರ ಬಣ 15 ಸದಸ್ಯರನ್ನು‌ ಹೊಂದಿದೆ.

ಸದಸ್ಯರ ‘ಜಾಲಿ ಟ್ರಿಪ್‌’

ಕಾಂಗ್ರೆಸ್ ಹಾಗೂ ಗೌಡರ ಬಣದ ಸದಸ್ಯರುಗಳಿಗೆ ಒಂದು ವಾರದ ಮಟ್ಟಿಗೆ ಜಾಲಿ ಪ್ರವಾಸದ ಅವಕಾಶ ಕಲ್ಪಿಸಲಾಗಿದೆ. ಭಾನುವಾರ ನಡೆಯುವ ಚುನಾವಣೆಗೆ ನೇರವಾಗಿ ಸದಸ್ಯರು ನಗರಸಭೆಗೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಸಪ್ತಗಿರಿ ನಡೆ ಯಾರ ಕಡೆ?

13ನೇ ವಾರ್ಡ್‌ ಪಕ್ಷೇತರ ಸದಸ್ಯ ಕೆ.ಆರ್.ಸಪ್ತಗಿರಿ ಅವರನ್ನು ಪಕ್ಷಕ್ಕೆ ಸೆಳೆಯಲು ಶಾಸಕರು ತೆರೆಮರೆಯ ತಂತ್ರಗಾರಿಕೆ ನಡೆಸಿದ್ದರು.

ದಶಕಗಳಿಂದಲೂ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದ ಅವರಿಗೆ ಅಂತಿಮ‌ ಕ್ಷಣದಲ್ಲಿ ಪಕ್ಷದ ಟಿಕೆಟ್ ತಪ್ಪಿತ್ತು.

ಗೌಡರ ಬಣದಲ್ಲಿ ಗುರುತಿಸಿಕೊಂಡಿರುವ ಸಪ್ತಗಿರಿ ಯಾರಿಗೆ ಬೆಂಬಲ ಸೂಚಿಸುತ್ತಾರೆ ಎಂಬುದು ಚರ್ಚೆಗೆ ಗ್ರಾಸವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT