ಚರ್ಮಗಂಟು ರೋಗಕ್ಕೆ ದೇವಸ್ಥಾನದ ಬಸವ ಬಲಿ

ಭರಮಸಾಗರ: ಇಲ್ಲಿನ ಗ್ರಾಮ ದೇವತೆ ದುರ್ಗಾಂಬಿಕ ದೇವಿ ದೇವಸ್ಥಾನದ ಗೂಳಿ ಬಸವ ಶನಿವಾರ ರಾತ್ರಿ ಚರ್ಮಗಂಟು ರೋಗಕ್ಕೆ ಬಲಿಯಾಗಿದೆ.
ದೇವರ ಗೂಳಿ ಗಂಟು ರೋಗಕ್ಕೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿರುವುದನ್ನು ಗಮನಿಸಿದ ಗ್ರಾಮದ ಯುವಕರು ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಗೂಳಿಯನ್ನು ಉಳಿಸಿಕೊಳ್ಳಲು ನಡೆಸಿದ ಯತ್ನ ಫಲಕಾರಿಯಾಗಲಿಲ್ಲ.
17 ವರ್ಷಗಳ ಹಿಂದೆ ಗ್ರಾಮದ ಎಳೆನೀರು ರಾಜು ಎಂಬುವರು ಈ ಗೂಳಿಯನ್ನು ಗ್ರಾಮ ದೇವತೆ ದೇವಸ್ಥಾನಕ್ಕೆ ದಾನವಾಗಿ ನೀಡಿದ್ದರು. ಯಾರಿಗೂ ತೊಂದರೆ ನೀಡದೆ ಜನರು ನೀಡಿದ್ದನ್ನು ತಿನ್ನುತ್ತ ಗ್ರಾಮದ ಬೀದಿಗಳಲ್ಲಿ ರಾಜಗಾಂಭೀರ್ಯದಿಂದ ನಡೆಯುತ್ತಿದ್ದ ಬಸವ ಗ್ರಾಮಸ್ಥರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿತ್ತು. ಈಗ ಬಸವನ ಸಾವು ಗ್ರಾಮಸ್ಥರಲ್ಲಿ ದುಃಖ ಉಂಟು ಮಾಡಿದೆ.
ಭಾನುವಾರ ಬೆಳಿಗ್ಗೆ ಸಾಂಪ್ರದಾಯಿಕ ವಿಧಿ ವಿಧಾನಗಳಂತೆ ಗೂಳಿ ಬಸವನಿಗೆ ಪೂಜೆ ಸಲ್ಲಿಸಲಾಯಿತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ವಿ.ಶರಣಪ್ಪ, ಕೆಪಿಸಿಸಿ ಸದಸ್ಯ ಎಚ್.ಎನ್.ತಿಪ್ಪೇಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಕೋಗುಂಡೆ ಕರಿಬಸಪ್ಪ, ವಿವಿಧ ಮುಖಂಡರು ಅಂತಿಮ ನಮನ ಸಲ್ಲಿಸಿದರು.
ನಂತರ ಮಂಗಳವಾದ್ಯದೊಂದಿಗೆ ಗೂಳಿಬಸವನ ಮೃತ ದೇಹವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಕೊಂಡೊಯ್ದು ದುರ್ಗಾಂಬಿಕಾ ದೇವಸ್ಥಾನದ ಸಮೀಪದಲ್ಲಿ ಸಮಾದಿ ಮಾಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.