ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಿನ್ನ ತಳಿಯ ಕುರಿ, ಮೇಕೆ ಸಾಕಾಣಿಕೆ

ಮರಿ ಮತ್ತು ಮಾಂಸ ಮಾರಾಟದಿಂದ ವರ್ಷಕ್ಕೆ ಕನಿಷ್ಠ ₹ 15 ಲಕ್ಷ ಆದಾಯ ಪಡೆಯುವ ಮಹ್ಮದ್‍ ಯಾಹಿಯ
Last Updated 8 ಜನವರಿ 2021, 6:53 IST
ಅಕ್ಷರ ಗಾತ್ರ

ಚಳ್ಳಕೆರೆ: ಮಳೆಯಾಶ್ರಿತ ಒಣ ಭೂಮಿ ಪ್ರದೇಶದಲ್ಲಿ ಕೊಳವೆ ಬಾವಿ ಕೊರೆಯಿಸಿ ಲಭ್ಯವಾದ ಅತ್ಯಲ್ಪ ನೀರಿಗೆ ಡ್ರಿಪ್ ಅಳವಡಿಸಿಕೊಂಡು ಹಣ್ಣಿನ ಬೆಳೆಗೆ ಬಂಡವಾಳ ಹಾಕಿ ಕೈ ಸುಟ್ಟುಕೊಂಡ ರೈತ ಮಹ್ಮದ್‍ ಯಾಹಿಯ, ಭಿನ್ನ ತಳಿಯ ಕುರಿ ಸಾಕಾಣಿಕೆಯಿಂದ ಉತ್ತಮ ಬದುಕು ಕಟ್ಟಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ.

ಚಳ್ಳಕೆರೆಯ ಗಾಂಧಿನಗರದ ಮಹ್ಮದ್‍ ಯಾಹಿಯ ಓದಿದ್ದು ಪಿಯುಸಿ ಆದರೂ ವ್ಯವಹಾರದ ಜ್ಞಾನ ಅಪಾರ. ನಗರದಲ್ಲಿ ಗ್ಯಾಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅವರು, ರೈತನಾಗಬೇಕೆಂಬ ಮಹಾದಾಸೆಯಿಂದ ತಾಲ್ಲೂಕಿನ ದೊಡ್ಡೇರಿ ಗ್ರಾಮದಲ್ಲಿ ಖರೀದಿಸಿದ ಭೂಮಿಯಲ್ಲಿ ಕೊಳವೆಬಾವಿ ಕೊರೆಯಿಸಿ ಡ್ರಿಪ್ ಅಳವಡಿಸಿ ವಿವಿಧ ಹಣ್ಣಿನ ಬೆಳೆ ಬೆಳೆದು ನಷ್ಟ ಅನುಭವಿಸಿದ್ದರು.

ಆದರೂ ಧೃತಿಗೆಡದೆ ಗೆಳೆಯರ ಹತ್ತಿರ ಕೈಸಾಲ ಮಾಡಿ 10-20 ಕುರಿಮರಿಗಳನ್ನು ತಂದು ಸಾಕುವ ಮೂಲಕ ದುಡಿಮೆಯ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಂಜನಗೂಡು, ಹಾವೇರಿ, ರಾಯಚೂರು ಮತ್ತು ಮಹಾರಾಷ್ಟ್ರದ ಕುರಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ವಿದೇಶಿ ತಳಿಯ ಕುರಿ ಮತ್ತು ಮೇಕೆ ಸಾಕಾಣಿಕೆಯ ಮಾಹಿತಿ ಪಡೆದು ಬಂದು ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

₹ 1.5 ಲಕ್ಷ ವೆಚ್ಚದಲ್ಲಿ ಖರೀದಿಸಿದ ಮಹಾರಾಷ್ಟ್ರದ ಬೋಯರ್ ತಳಿಯ ಮೇಕೆಹೋತ ಮತ್ತು ಕೇರಳದ ತಲ್ಛೇರಿ ತಳಿಯ 25 ಮೇಕೆ ಮರಿಗಳ ಜತೆ ತಳಿ ಸಂಕರಣ ನಡೆಸಿ 6-7 ತಿಂಗಳಲ್ಲೇ ಉತ್ತಮ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದರಿಂದ ಪ್ರತಿ ಮೇಕೆ 2ರಿಂದ 4 ಮರಿಗಳನ್ನು ಹಾಕುತ್ತದೆ.

‘ಮರಿ ಮತ್ತು ಮಾಂಸ ಮಾರಾಟದಿಂದ ವರ್ಷಕ್ಕೆ ಕನಿಷ್ಠ ₹ 10 ಲಕ್ಷದಿಂದ ₹ 15 ಲಕ್ಷ ಆದಾಯ ಬರುತ್ತದೆ. ಕ್ರಾಸ್ ಮಾಡಿದ ವಿದೇಶಿ ತಳಿಯ ಮೇಕೆ ಮತ್ತು ಕುರಿಗಳು ಆಕರ್ಷಣೀಯವಾಗಿರುತ್ತವೆ. ಹೀಗಾಗಿ ಪ್ರಾಣಿ ಪ್ರಿಯರು ಸಾಕುವ ಸಲುವಾಗೇ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಖರೀದಿಸಲು ಇಲ್ಲಿಗೆ ಬರುತ್ತಾರೆ’ ಎನ್ನುತ್ತಾರೆ ಯಾಹಿಯ.

ರೋಗ ನಿವಾರಣೆ: ಪ್ರತಿ 15 ದಿನಕ್ಕೊಮ್ಮೆ ವ್ಯಾಕ್ಸಿನ್, ಇಟಿ, ಪಿಪಿಆರ್, ಎಚ್-3 ಚಿಕಿತ್ಸೆ ಜತೆಗೆ 4 ತಿಂಗಳಿಗೊಮ್ಮೆ ಜಂತು ನಾಶಕದ ಮಾತ್ರೆ ಹಾಕಿ ಸರಿಯಾದ ನಿರ್ವಹಣೆ ಮಾಡುವುದರಿಂದ ಮೇಕೆ- ಕುರಿಗಳಿಗೆ ಅಷ್ಟೇನು ರೋಗ ಹರಡುವುದಿಲ್ಲ.

ಪ್ರತಿ ತಿಂಗಳು 10 ಟನ್ ಗೊಬ್ಬರ ದೊರೆಯುತ್ತದೆ. ಪ್ರತಿ ಟನ್ ₹ 4 ಸಾವಿರದಂತೆ 3 ತಿಂಗಳಿಗೆ ಕನಿಷ್ಠ ₹ 1.5 ಲಕ್ಷ ಆದಾಯ ಬರುತ್ತದೆ.
ಮುಂಗಡ ಹಣ ನೀಡಿ ಗೊಬ್ಬರವನ್ನು ಕಾಫಿ ಎಸ್ಟೆಟ್‍ಗೆ ಸರಬರಾಜು ಮಾಡುತ್ತಾರೆ.

ಮಹ್ಮದ್‍ಯಾಹಿಯ ಅವರ ಕಾರ್ಯ ಗುರುತಿಸಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ 2012ನೇ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

***

ಮೇವು ಸಂಗ್ರಹಣೆ

ಮೇವಿಗಾಗಿ ಸೂಪರ್‍ನೆಪಿಯಾ, ಗಿಣಿಗ್ರಾಸ್, ಹೆಡ್ಜಲೂನ್ ಹುಲ್ಲನ್ನು ಹೊಲದಲ್ಲಿಯೇ ಬೆಳೆಸುತ್ತಾರೆ. ಜತೆಗೆ ಕಡಲೆಹೊಟ್ಟು, ತೊಗರಿ, ಹುರುಳಿ, ರಾಗಿಕಡ್ಡಿ ಮುಂತಾದ ಒಣ ಮೇವನ್ನು ವರ್ಷಕ್ಕೆ ಆಗುವಷ್ಟು ಸಂಗ್ರಹಿಸುತ್ತಾರೆ.

ನಿರ್ವಹಣೆ: ಸಿಮೆಂಟ್ ಶೀಟ್ ಮತ್ತು ಹಲಗೆಯಿಂದ ಅಟ್ಟಣಿಗೆ ನಿರ್ಮಿಸಿ ಕೇರಳದ ತಲ್ಛೇರಿ, ರಾಜಸ್ಥಾನದ ಶಿರೋಹಿ, ಪಂಜಾಬ್‌ನ ಬಿಟೆಲ್, ಉತ್ತರ ಪ್ರದೇಶದ ಜಮುನಪಾರಿ, ದಕ್ಷಿಣ ಆಫ್ರಿಕಾದ ಬೋಯಾ, ಡಾರ್ಫಾ ಸೇರಿದಂತೆ ವಿವಿಧ ತಳಿಯ 200ಕ್ಕೂ ಹೆಚ್ಚು ರಾಸುಗಳನ್ನು ಸಾಕಿದ್ದಾರೆ.

ಮರಿಗಳ ತೂಕ ಹಾಗೂ ಬೆಳವಣಿಗೆ ಹೆಚ್ಚಿಸಲು ಪ್ರತಿ ದಿನ ಅವುಗಳಿಗೆ ಒಣ ಮೇವು, ಮಧ್ಯಾಹ್ನ ಮತ್ತು ಸಂಜೆ ಹಸಿ ಮೇವಿನ ಜತೆಗೆ ಮೆಕ್ಕೆಜೋಳ ಅಥವಾ ಬೂಸಾ (ಶೇಂಗಾಹಿಂಡಿ) ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT