ಶನಿವಾರ, ಜುಲೈ 24, 2021
21 °C
ಜೂಜು, ಮೋಜಿಗೆ ಅಡ್ಡದಾರಿ ತುಳಿದ ಸ್ಥಿತಿವಂತ ಕುಟುಂಬದ ಯುವಕ

ಯುಟ್ಯೂಬ್‌ ನೋಡಿ ಸರಗಳವು ಕಲಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪೋಷಕರ ಬುದ್ದಿ ಮಾತಿಗೆ ಕಿವಿಗೊಡದೇ ಶಿಕ್ಷಣವನ್ನು ಮೊಟಕುಗೊಳಿಸಿ ಜೂಜು, ಮೋಜು ಮಾಡುತ್ತಿದ್ದ ಯುವಕನೊಬ್ಬ ಹಣ ಹೊಂದಿಸಲು ಸರಗಳ್ಳತನಕ್ಕೆ ಕೈಹಾಕಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಯುಟ್ಯೂಬ್ ನೋಡಿ ಸರಗಳವು ತಂತ್ರಗಳನ್ನು ಕಲಿತಿದ್ದ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಹೊಸಹಟ್ಟಿ ಗ್ರಾಮದ ಉಮೇಶ (22) ಬಂಧಿತ ಆರೋಪಿ. ಕೃತ್ಯಕ್ಕೆ ನೆರವು ನೀಡಿದ ಇದೇ ಗ್ರಾಮದ ಉದಯ್ ಕುಮಾರ್ (21) ಮತ್ತು ಕೀರ್ತಿ (22) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದ ಆರೋಪದ ಮೇರೆಗೆ ಉತ್ಸವಾಂಭ ಜ್ಯುಯಲರ್ಸ್ ಮಾಲೀಕ ವಿನಯ್ ಮತ್ತು ಯಶವಂತ್ ಎಂಬವರು ಜೈಲು ಸೇರಿದ್ದಾರೆ.

‘ಆರೋಪಿಗಳ ಬಂಧನದಿಂದ ಚಿತ್ರದುರ್ಗ ನಗರ ಹಾಗೂ ಗ್ರಾಮಾಂತರ ಠಾಣಾ ವ್ಯಾಪ್ತಿಯ ತಲಾ ಮೂರು, ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಸೇರಿ ಎಂಟು ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತರಿಂದ ಸುಮಾರು ₹ 10 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ. ಹೆಚ್ಚುವರಿ ತನಿಖೆಗೆ ಆರೋಪಿಗಳನ್ನು ಪೊಲೀಸ್‌ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೈಕ್‌ ಸವಾರರೇ ಗುರಿ 

‘‍ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ಮಹಿಳೆಯರ ಸರಗಳನ್ನೇ ಆರೋಪಿಗಳು ಕಿತ್ತು ಪರಾರಿ ಆಗುತ್ತಿದ್ದರು. ಇದಕ್ಕೆ ಒಂದಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಚಿನ್ನಾಭರಣ ಪ್ರದರ್ಶಿಸುತ್ತ ದ್ವಿಚಕ್ರ ವಾಹನದಲ್ಲಿ ಸಾಗುವ ಮಹಿಳೆಯರನ್ನು ಹಿಂಬಾಲಿಸುತ್ತಿದ್ದರು. ನಿರ್ಜನ ಪ್ರದೇಶದಲ್ಲಿ ಸರ ಕಿತ್ತು ಬೈಕಿನಲ್ಲಿ ವೇಗವಾಗಿ ಪರಾರಿಯಾಗುತ್ತಿದ್ದರು. ಇವರನ್ನು ಹಿಡಿಯಲು ಪ್ರಯತ್ನಿಸಿ ಅನೇಕರು ವಿಫಲರಾಗಿದ್ದರು’ ಎಂದು ವಿವರಿಸಿದರು.

‘ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ನಿರ್ಜನ ಪ್ರದೇಶಗಳಿವೆ. ಹೆದ್ದಾರಿಯ ಮೇಲ್ಸೇತುವೆಯಲ್ಲಿ ಸರ ಕೀಳುತ್ತಿದ್ದರು. ಸರ ಕೀಳುವ ತಂತ್ರಗಾರಿಕೆಯನ್ನು ಕರಗತ ಮಾಡಿಕೊಂಡಿದ್ದರು. ಸಮೀಪಕ್ಕೆ ತೆರಳಿ ಸರ ಕಿತ್ತಿದ್ದು ಒಮ್ಮೊಮ್ಮೆ ಮಹಿಳೆಯರ ಗಮನಕ್ಕೂ ಬರುತ್ತಿರಲಿಲ್ಲ. ಕೊರಳಲ್ಲಿ ಏನೊ ಸರಿದಂತೆ ಅನಿಸಿ ಮುಟ್ಟಿ ನೋಡಿಕೊಂಡಾಗ ಗೊತ್ತಾಗಿದೆ. ಮಹಿಳೆಯರ ಅರಿವಿಗೆ ಬರುವ ಹೊತ್ತಿಗೆ ಆರೋಪಿಗಳ ಬೈಕ್‌ ಸಾಕಷ್ಟು ದೂರ ಸಾಗಿರುತ್ತಿತ್ತು’ ಎಂದರು.

ಯುಟ್ಯೂಬ್‌ ವಿಡಿಯೊ ಮಾಹಿತಿ 

‘ಸ್ಥಿತಿವಂತ ಕುಟುಂಬದಲ್ಲಿ ಜನಿಸಿದ ಉಮೇಶ್‌, ಪೋಷಕರ ಮಾತು ಕೇಳುತ್ತಿರಲಿಲ್ಲ. ಶಿಕ್ಷಣವನ್ನು ಮೊಟಕುಗೊಳಿಸಿ ದುಶ್ಚಟಗಳನ್ನು ಕಲಿತಿದ್ದ. ಮೋಜಿಗಾಗಿ ಹಣ ಹೊಂದಿಸಲು ಕಳವು ಕೃತ್ಯಕ್ಕೆ ಕೈಹಾಕಲು ಮುಂದಾದ. ಯುಟ್ಯೂಬ್‌ನಲ್ಲಿ ಸರಗಳವು ಮಾಡುವ ವಿಡಿಯೊಗಳನ್ನು ನೋಡಿ ಪರಿಣತಿ ಸಾಧಿಸಿದ್ದ’ ಎಂದರು.

‘ಆರಂಭದಲ್ಲಿ ಒಬ್ಬನೇ ಕೃತ್ಯ ಎಸಗಲು ಪ್ರಯತ್ನಿಸಿ ವಿಫಲನಾಗಿದ್ದಾನೆ. ಇದಕ್ಕೆ ಮತ್ತೊಬ್ಬರ ನೆರವು ಅಗತ್ಯವಿದೆ ಎಂಬುದು ಗೊತ್ತಾದ ಬಳಿಕ ಸ್ನೇಹಿತರನ್ನು ಸೇರಿಸಿಕೊಂಡಿದ್ದಾನೆ. ಇವರಿಗೆ ಸರಗಳವು ಮಾಡುವ ಬಗ್ಗೆ ತರಬೇತಿ ನೀಡಿದ್ದಾನೆ. ಆರು ತಿಂಗಳಿಂದ ಈ ಕೃತ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದರು. ಕಳವು ಮಾಡಿದ ಸರಗಳನ್ನು ಚಿನ್ನಾಭರಣ ಅಂಗಡಿಗಳಿಗೆ ಹಾಗೂ ಚಿನ್ನದ ಸಾಲ ನೀಡುವ ಫೈನಾನ್ಸ್‌ ಕಂಪನಿಗಳಲ್ಲಿ ಅಡ ಇಡುತ್ತಿದ್ದರು’ ಎಂದು ವಿವರಿಸಿದರು.

ಪೊಲೀಸರ ಯಶಸ್ವಿ ಕಾರ್ಯಾಚರಣೆ

ಚಿತ್ರದುರ್ಗ ನಗರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಆರು ತಿಂಗಳಿಂದ ನಡೆಯುತ್ತಿದ್ದ ಸರಗಳವು ಪ್ರಕರಣಗಳನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಗಂಭೀರವಾಗಿ ಪರಿಗಣಿಸಿ ವಿಶೇಷ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.

‘ಸರಗಳವು ಪ್ರಕರಣದ ಪತ್ತೆಗೆ ನಾಲ್ಕು ತಂಡಗಳನ್ನು ರಚಿಸಿದೆವು. ನಾಕಾಬಂದಿ, ಗಸ್ತು, ತನಿಖಾ ಹಾಗೂ ತಾಂತ್ರಿಕ ತಂಡಗಳಿಗೆ ಹೊಣೆಗಾರಿಕೆ ನಿಗದಿಪಡಿಸಲಾಯಿತು. ಲಾಕ್‌ಡೌನ್‌, ವಾರಾಂತ್ಯದ ಕರ್ಫ್ಯೂ ಸಂದರ್ಭದಲ್ಲಿಯೇ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸಿದವು. ಸಂಶಯಾಸ್ಪದ ವಾಹನ ಹಾಗೂ ವ್ಯಕ್ತಿಗಳನ್ನು ತಪಾಸಣೆ ನಡೆಸಲಾಯಿತು’ ಎಂದು ರಾಧಿಕಾ ವಿವರಿಸಿದರು.

ಸರಗಳವು ನಡೆದ ನೆರೆಹೊರಯ ಜಿಲ್ಲೆಯ ಮಾಹಿತಿ ಪಡೆದು ತನಿಖೆ ಚುರುಕುಗೊಳಿಸಲಾಯಿತು. ಕೃತ್ಯಕ್ಕೆ ಪಲ್ಸರ್‌ ಬೈಕ್‌ ಬಳಕೆ ಮಾಡಿದ್ದು ಗೊತ್ತಾಗಿ ವಿಶೇಷ ನಿಗಾ ಇಡಲಾಯಿತು. ಹಲವು ತಾಂತ್ರಿಕ ಮಾಹಿತಿಗಳನ್ನು ವಿಶ್ಲೇಷಿಸಿ ಮುದ್ದಾಪುರ ಗ್ರಾಮದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ.ಬಿ.ನಂದಗಾವಿ, ಚಿತ್ರದುರ್ಗ ಉಪವಿಭಾಗದ ಡಿವೈಎಸ್‌ಪಿ ಎಸ್.ಪಾಂಡುರಂಗ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು