ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತ್ಯಕಾಣದ ‘ಜಮೀನು ದಾರಿ’ ವ್ಯಾಜ್ಯ

Last Updated 19 ಸೆಪ್ಟೆಂಬರ್ 2022, 3:09 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೆಳಗಾಗುವ ಮುನ್ನವೇ ಭಾಗ್ಯಮ್ಮ ಜಮೀನಿಗೆ ತೆರಳಿದ್ದರು. ಸೇವಂತಿ ಬೆಳೆಗೆ ನೀರು ಹಾಯಿಸುವ ಧಾವಂತ ಅವರಲ್ಲಿತ್ತು. ರೈತ ಮಹಿಳೆ ಬರುವಿಕೆಗಾಗಿ ಕಾದು ಕುಳಿತಿದ್ದ ದಾಯಾದಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ. ಕ್ಷಣಾರ್ಧದಲ್ಲಿ ರಕ್ತದ ಕೋಡಿಯೇ ಹರಿಯಿತು. ಚಿತ್ರದುರ್ಗ ತಾಲ್ಲೂಕಿನ ಕೆಳಗಳಹಟ್ಟಿಯಲ್ಲಿ ಮೇ 31ರಂದು ನಡೆದ ಘಟನೆ ಇದು. ಜಮೀನಿಗೆ ತೆರಳುವ ದಾರಿಯ ವಿವಾದ ಕೊಲೆಯಲ್ಲಿ ಅಂತ್ಯವಾಯಿತು.

ರೈತರ ನಡುವೆ ಇಂತಹ ಕಲಹಗಳಿಗೆ ಅಂತ್ಯವೇ ಇಲ್ಲವಾಗಿದೆ. ಕೃಷಿ ಭೂಮಿಗೆ ತೆರಳುವ ದಾರಿಯ ಸಮಸ್ಯೆ ಗ್ರಾಮೀಣ ಪ್ರದೇಶದಲ್ಲಿ ತೀವ್ರವಾಗಿದೆ.

ಪ್ರತಿಯೊಬ್ಬ ರೈತರೂ ಅವರವರ ಜಮೀನಿಗೆ ತೆರಳಲು ದಾರಿ ಇದೆ. 1891ರಲ್ಲಿ ಬ್ರಿಟಿಷ್ ಆಡಳಿತ ನಡೆಸಿದ ಸಮೀಕ್ಷೆಯಲ್ಲಿಯೂ ಇಂತಹ ದಾರಿಗಳಿವೆ. ಬಂಡಿ ದಾರಿ ನಕಾಶೆಯಲ್ಲಿ ಉಲ್ಲೇಖವಾಗಿದೆ. ಹಿಡುವಳಿಗಳು ಹರಿದು ಹಂಚಿದ ಪರಿಣಾಮವಾಗಿ ಇಂತಹ ದಾರಿಗಳ ಕುರುಹು ಅಳಿಸಿಹೋಗಿವೆ. ನಕಾಶೆಯಲ್ಲಿ ಉಲ್ಲೇಖವಾದ ದಾರಿಗಳು ಸುಸ್ಥಿತಿಯಲ್ಲಿಲ್ಲದ ಪರಿಣಾಮ ಕಲಹ ತೀವ್ರವಾಗುತ್ತಿವೆ.

ಹೊಲಗದ್ದೆ, ತೋಟ, ಜಮೀನು ಸಂಪರ್ಕಕ್ಕೆ ಬಿಟ್ಟಿದ್ದ ರಸ್ತೆಗಳು ಬಹುತೇಕ ಒತ್ತುವರಿಯಾಗಿವೆ. ಜಾತಿಯಿಂದ ಬಲಾಢ್ಯರು, ಆರ್ಥಿಕವಾಗಿ ಬಲಾಢ್ಯರು ಇಂತಹ ದಾರಿಗಳನ್ನು ಅಳಿಸಿಹಾಕಿದ ನಿದರ್ಶನಗಳು ಸಾಕಷ್ಟಿವೆ. ದಾರಿ ಇಲ್ಲದ ಕಾರಣಕ್ಕೆ ಕೆಲವರು ಜಮೀನು ಉಳುಮೆ ಮಾಡಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ತೊಳಲಾಡುತ್ತಿದ್ದಾರೆ. ಬಿತ್ತನೆ, ಬೆಳೆ ಕಟಾವು, ಸಾಗಣೆ, ಉಳುಮೆ ಸೇರಿ ಇತರ ಚಟುವಟಿಕೆಗಾಗಿ ಪರಿತಪಿಸುತ್ತಿದ್ದಾರೆ. ಮಳೆ ಸುರಿದರೆ ದಾರಿಯ ಸಮಸ್ಯೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ.

ಬಂಡಿಹಾದಿ, ಕಾಲು ದಾರಿಗೆ ಮೀಸಲಿದ್ದ ಭೂಮಿಯನ್ನು ಒತ್ತುವರಿ ಮಾಡಿರುವುದೇ ಸಮಸ್ಯೆಯ ಮೂಲವಾಗಿದೆ. ದಾಯಾದಿ ಕಲಹ ಹಾಗೂ ವೈಷಮ್ಯದ ಕಾರಣಕ್ಕೆ ಇದು ವಿಕೋಪಕ್ಕೆ ತಿರುಗುತ್ತಿದೆ. ಗಲಾಟೆ, ಹೊಡೆದಾಟ, ಕೊಲೆಯಂತಹ ಘಟನೆಗಳು ನಡೆಯುತ್ತಿವೆ. ಜೀವಹಾನಿಯಾದಾಗ ಸಮಸ್ಯೆ ಇತ್ಯರ್ಥದ ಭರವಸೆಗಳು ಸಿಗುತ್ತವೆಯಾದರೂ ಅನುಷ್ಠಾನಗೊಂಡಿದ್ದು ವಿರಳ.

ಜಮೀನು ದಾರಿ ವಿವಾದಗಳನ್ನು ತಹಶೀಲ್ದಾರ್‌ ಹಾಗೂ ಅವರ ಅಧೀನ ಕಂದಾಯ ಅಧಿಕಾರಿಗಳು ಬಗೆಹರಿಸುವ ಅಧಿಕಾರವನ್ನು ಸರ್ಕಾರ ನೀಡಿತ್ತು. ಎರಡು ದಶಕಗಳ ಹಿಂದೆ ಈ ಅಧಿಕಾರವನ್ನು ಮೊಟಕುಗೊಳಿಸಿ ಸಿವಿಲ್‌ ನ್ಯಾಯಾಲಯದ ಮೆಟ್ಟಿಲೇರುವಂತೆ ಸರ್ಕಾರ ತಿದ್ದುಪಡಿ ತಿಂದಿತು. ಅಲ್ಲಿಂದ ಈಚೆಗೆ ಇಂತಹ ಸಾವಿರಾರು ಪ್ರಕರಣಗಳು ಪ್ರತಿ ತಾಲ್ಲೂಕಿನಲ್ಲಿ ಇತ್ಯರ್ಥಕ್ಕೆ ಬಾಕಿ ಇವೆ. ಬೆರಳೆಣಿಕೆಯ ಪ್ರಕರಣಗಳು ಮಾತ್ರ ರಾಜಿಯಲ್ಲಿ ಬಗೆಹರಿಯುತ್ತಿವೆ.

ಬ್ರಿಟಿಷರ ಆಡಳಿತದ ಅವಧಿಯಲ್ಲಿ ರೂಪಿಸಿದ ಭೂದಾಖಲೆಗಳನ್ನೇ ಕಂದಾಯ ಇಲಾಖೆ ಬಳಕೆ ಮಾಡುತ್ತಿದೆ. ಮತ್ತೆ ಎಲ್ಲ ಭೂಮಿಯ ಸಮೀಕ್ಷೆ ನಡೆಸಿದರೆ ಮಾತ್ರ ಈ ಸಮಸ್ಯೆಗೆ ದಾರಿಗಳು ಕಾಣಲಿವೆ. ರೈತರು, ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಇವೆ. ಮೋಜಿಣಿಗೆ ಅವಕಾಶ ನೀಡುವುದಾಗಿ ಸರ್ಕಾರ ಪುನರುಚ್ಚಾರ ಮಾಡುತ್ತಲೇ ಇದೆ. ಆದರೆ, ಸಮಸ್ಯೆಯ ಶಾಶ್ವತ ಇತ್ಯರ್ಥಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂಬ ಆರೋಪಗಳಿವೆ.

ಜಮೀನು ದಾರಿ ದುರಸ್ತಿ, ನಿರ್ಮಾಣಕ್ಕೆ ಸಂಬಂಧಿಸಿದಂತೆ ‘ನಮ್ಮ ಹೊಲ, ನಮ್ಮ ದಾರಿ’ ಯೋಜನೆಯೊಂದು ಚಾಲ್ತಿಯಲ್ಲಿದೆ. ಮಹಾತ್ಮ ಗಾಂಧೀಜಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅಡಿ ಈ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಕೆಲ ತಾಂತ್ರಿಕ ತೊಡಕು, ವಿವಾದಗಳಿಂದಾಗಿ ಇದು ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ವಿವಾದರಹಿತ ದಾರಿಗಳನ್ನು ಮಾತ್ರ ಇದರಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ಹೆಚ್ಚು ಪ್ರಯೋಜನವಾಗುತ್ತಿಲ್ಲ ಎಂಬುದು ರೈತರ ಅಳಲು.

ರೂಢಿಗತ ದಾರಿಗೆ ಹೆಚ್ಚು ಕಲಹ

ವಿ.ಧನಂಜಯ

ನಾಯಕನಹಟ್ಟಿ: ಜಾತಿ ಬಲ, ಹಣ ಬಲ, ರಾಜಕೀಯ ಬಲಗಳ ಮಧ್ಯೆ ನೆನೆಗುದಿಗೆ ಬಿದ್ದಿದ್ದ ಹಳ್ಳ– ಕೊಳ್ಳ, ಕೆರೆ, ಸ್ಮಶಾನ ಸೇರಿದಂತೆ ಖಾಸಗಿ ಹಿಡುವಳಿ ಜಮೀನುಗಳ ದಾರಿ ವಿವಾದಗಳು ನಿಧಾನವಾಗಿ ಬಗೆಹರಿಯುತ್ತಿವೆ. ರೂಢಿಗತ ದಾರಿಯ ವಿವಾದಗಳಿಗೆ ಕಾನೂನು ತಿದ್ದುಪಡಿಯ ಅಗತ್ಯವಿದ್ದು, ಕಂದಾಯ ಇಲಾಖೆಗೂ ತಲೆನೋವಾಗಿ ಪರಿಣಮಿಸಿದೆ.

ಚಳ್ಳಕೆರೆ ತಾಲ್ಲೂಕು ಎರಡು ದಶಕಗಳಿಂದ ಭೀಕರ ಬರ ಎದುರಿಸಿದೆ. ಬಹುತೇಕ ರೈತರು ಕೃಷಿಯಿಂದ ವಿಮುಖರಾಗಿದ್ದರೂ ಹಲವು ಸವಾಲುಗಳ ಮಧ್ಯೆ ತೊಳಲಾಡುತ್ತಿದ್ದಾರೆ. ದುರಾಸೆ, ಅಸೂಯೆ, ದಾಯಾದಿ ಮತ್ಸರ, ಜಾತಿ, ಹಣ, ರಾಜಕೀಯ ಬಲದಿಂದ ಜಮೀನುಗಳ ದಾರಿ ಸಮಸ್ಯೆಯಾಗಿ ಪರಿಣಮಿಸಿವೆ.

ಗ್ರಾಮೀಣ ಪ್ರದೇಶದಲ್ಲಿ ಜಮೀನುಗಳ ದಾರಿಗಳಿಗೆ ಸಂಬಂಧಪಟ್ಟಂತೆ ಸಾಮಾನ್ಯ ರೈತರ ನಡುವೆ ಕಲಹಗಳು ನಡೆಯುತ್ತಲೇ ಇವೆ. ಇವುಗಳ ಇತ್ಯರ್ಥಕ್ಕಾಗಿ ರೈತರು ಪಂಚಾಯಿತಿ, ಪೊಲೀಸ್‍ ಠಾಣೆ, ನ್ಯಾಯಾಲಯದ ಮೆಟ್ಟಿಲು ತುಳಿದು ಕಾನೂನು ಹೋರಾಟಕ್ಕಿಳಿಯುತ್ತಿದ್ದಾರೆ. ಸಮಸ್ಯೆ ಇತ್ಯರ್ಥವಾಗದೇ ಸಮಯ, ಹಣ ಕಳೆದುಕೊಂಡು ಹೈರಾಣಾಗಿರುವ ಪ್ರಸಂಗಗಳು ಹೆಚ್ಚಿವೆ.

ಪ್ರತಿಯೊಂದು ಗ್ರಾಮಗಳಲ್ಲೂ ನಕಾಶೆ ಕಂಡ ದಾರಿ ಮತ್ತು ರೂಢಿಗತ ದಾರಿ ಎಂದು ಎರಡು ವಿಧದ ದಾರಿಗಳಿವೆ. ಕರ್ನಾಟಕ ರಾಜ್ಯ ಭೂಕಂದಾಯ ಕಾಯ್ದೆ 1964ರ ಸರ್ವೆ ದಾಖಲೆಗಳ ಪ್ರಕಾರ, ‘ನಕಾಶೆ ಕಂಡ ದಾರಿ ಸಾರ್ವಜನಿಕ ಬಳಕೆಮುಕ್ತ’ ಎಂಬ ಸ್ಪಷ್ಟ ಉಲ್ಲೇಖವಿದೆ. ರೂಢಿಗತ ದಾರಿಗಳು ಒಂದು ಜಮೀನಿನಿಂದ ಮತ್ತೊಂದು ಜಮೀನಿಗೆ ಅಥವಾ ಮುಖ್ಯರಸ್ತೆಯಿಂದ ಕವಲೊಡೆದು ದೂರದಲ್ಲಿರುವ ಮಧ್ಯದ ಜಮೀನುಗಳಿಗೆ ಸಂಪರ್ಕ ಸಾಧಿಸಲು ಹಲವು ದಶಕಗಳ ಹಿಂದೆಯೇ ಮಾತುಕತೆ, ಒಪ್ಪಂದದ ಮೂಲಕ ಬಿಟ್ಟುಕೊಂಡ ದಾರಿಗಳಾಗಿವೆ. ಇದಕ್ಕೆ ಭೂಕಾಯ್ದೆಯಲ್ಲಿ ಸ್ಪಷ್ಟ ನಿಯಮಾವಳಿಗಳಿಲ್ಲ.

ರೈತರ ಮಧ್ಯೆ ಉದ್ಭವಿಸುವ ವೈಮನಸ್ಸು ಜಗಳದಿಂದ ಆರಂಭಗೊಂಡು ಜಮೀನಿನ ದಾರಿಗಳಿಗೆ ಅಡ್ಡಿಪಡಿಸುವ ತನಕ ಬಂದು ನಿಲ್ಲುತ್ತದೆ. ಕೆಲ ಬಲಾಢ್ಯರು ರೂಢಿಗತ ದಾರಿಗಳ ಜತೆಗೆ ನಕಾಶೆ ಕಂಡ ದಾರಿಗಳನ್ನು ಸಹ ಒತ್ತುವರಿ ಮಾಡಿಕೊಂಡಿರುವುದು ಬೆಳಕಿಗೆ ಬಂದಿವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಇಂತಹ ಸಮಸ್ಯೆಗಳು ಜೀವಂತವಾಗಿವೆ. ದಾರಿ ಸಮಸ್ಯೆಗಳಿಗೆ ರೈತರು ಪರಸ್ಪರ ಜಗಳ, ಹೊಡೆದಾಟಗಳಿಂದ ಕೋರ್ಟ್ ಕಚೇರಿಗಳಿಗೆ ಅಲೆದು ಹೈರಾಣಾಗಿದ್ದಾರೆ.

ಚಳ್ಳಕೆರೆ ತಾಲ್ಲೂಕಿನಲ್ಲಿ ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಜಮೀನು ದಾರಿ, ಸಂಪರ್ಕ ರಸ್ತೆಗಳು, ಸಾರ್ವಜನಿಕ ಬಳಕೆಯ ದಾರಿಗಳ ಸಮಸ್ಯೆಗಳು ರೈತರ ಮನವೊಲಿಕೆಯಿಂದ ಬಗೆಹರಿದಿವೆ. ಒಂದು ವರ್ಷದಿಂದ ತಾಲ್ಲೂಕಿನಲ್ಲಿ ಹತ್ತಾರು ಗ್ರಾಮಗಳ ನೂರಾರು ರೈತರ ದಾರಿ ಸಮಸ್ಯೆಗಳು ಇತ್ಯರ್ಥವಾಗಿವೆ. ಇದರಿಂದ ರೈತರು ತಮ್ಮ ಜಮೀನುಗಳಿಗೆ ತೆರಳಿ ಕೃಷಿಚಟುವಟಿಕೆಗಳಲ್ಲಿ ತೊಡಗಲು ಅನುಕೂಲವಾಗಿದೆ.

ನೆರೆಹೊರೆಯವರು ಜಮೀನಿನಲ್ಲಿ ಓಡಾಡಲು ಅವಕಾಶ ನೀಡಲಾಗುತ್ತಿಲ್ಲ. ಸಣ್ಣತನ, ಅಸೂಯೆಯಿಂದಾಗಿ ಸಮಸ್ಯೆ ತೀವ್ರವಾಗಿದೆ. ರೂಢಿಗತ ದಾರಿಗಳನ್ನು ಕಾನೂನುಬದ್ಧಗೊಳಿಸಿ ನಕ್ಷೆಯಲ್ಲಿ ಸೇರಿಸಿದರೆ ಅನುಕೂಲ.

ಟಿ. ನುಲೇನೂರು ಎಂ. ಶಂಕರಪ್ಪ, ಪ್ರಧಾನ ಕಾರ್ಯದರ್ಶಿ, ರಾಜ್ಯ ರೈತ ಸಂಘ

ರೂಢಿಗತ ದಾರಿ ಸಮಸ್ಯೆ ಇತ್ಯರ್ಥಕ್ಕೆ ಭೂಕಂದಾಯ ಕಾಯ್ದೆಯಲ್ಲಿ ವಿಶೇಷ ನಿಯಾಮವಳಿ ರೂಪಿಸುವ ಅಗತ್ಯವಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.

ಎನ್. ರಘುಮೂರ್ತಿ, ತಹಶೀಲ್ದಾರ್, ಚಳ್ಳಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT