ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಶುರಾಂಪುರ | ಮಳೆಯ ಕೊರತೆ: ಶೇಂಗಾ ಬೆಳೆ ನಾಶ, ಕಂಗಾಲಾಗಿರುವ ರೈತರು

Published 29 ಆಗಸ್ಟ್ 2023, 6:07 IST
Last Updated 29 ಆಗಸ್ಟ್ 2023, 6:07 IST
ಅಕ್ಷರ ಗಾತ್ರ

ಪರಶುರಾಂಪುರ: ಮಳೆ ಅಭಾವದಿಂದಾಗಿ ಶೇಂಗಾ ಬೆಳೆ ಒಣಗಿರುವುದರಿಂದ ಕಂಗಾಲಾಗಿರುವ ಸುತ್ತಮುತ್ತಲಿನ ಗ್ರಾಮಗಳ ರೈತರು, ಟ್ರ್ಯಾಕ್ಟರ್‌ ಮೂಲಕ ಬೆಳೆ ನಾಶಪಡಿಸಲು ಮುಂದಾಗಿದ್ದಾರೆ.

ಪರಶುರಾಂಪುರ ಹೋಬಳಿ ವ್ಯಾಪ್ತಿಯಲ್ಲಿ 20,600 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಮುಂಗಾರು ಅಲ್ಪಸ್ವಲ್ಪ ಸುರಿದು, ಬಿತ್ತನೆ ಮಾಡಿದ ನಂತರ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ಮುಗಿಲಿನತ್ತ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ರೈತರು ಮಳೆಯನ್ನು ನಂಬಿ ಸಾಲ ಮಾಡಿ, ಬೀಜ ತಂದು ಬಿತ್ತನೆ ಮಾಡಿದ್ದರು. ಮಳೆ ಕೈ ಕೊಟ್ಟಿರುವುದರಿಂದ ಬೇಸರಗೊಂಡ ಕೊನಿಗರಹಳ್ಳಿ, ಟಿ.ಎನ್. ಕೋಟೆ ಭಾಗದ ರೈತರು ಶೇಂಗಾ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸುತ್ತಿದ್ದಾರೆ.

‘ಮುಂದೆ ಮಳೆ ಬಂದರೂ ಬೆಳೆ ಕೈಗೆ ಸಿಗುವುದಿಲ್ಲ. ಬೆಳೆ ನಾಶಪಡಿಸಿದರೆ ದನ ಕರುಗಳಿಗೆ ಅಲ್ಪಸ್ವಲ್ಪ ಮೇವಾದರೂ ಸಿಗುತ್ತದೆ ಎಂಬ ಕಾರಣಕ್ಕೆ ಶೇಂಗಾ ಬೆಳೆಯನ್ನು ನಾಶಪಡಿಸಿದ್ದೇವೆ’ ಎಂದು ಕೋನಿಗರಹಳ್ಳಿಯ ರೈತ ಜಯಣ್ಣ ತಿಳಿಸಿದರು.

ಸತತ 15 ವರ್ಷಗಳಿಂದ ಹೋಬಳಿಯ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಸರ್ಕಾರ ಶೇಂಗಾ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವಿನ ಕೊರೆತೆ ಉಂಟಾಗಿದ್ದು, ಸರ್ಕಾರ ಕೂಡಲೇ ಗೋಶಾಲೆಗಳನ್ನು ತೆರೆಯಬೇಕು ಎಂದು ರೈತರಾದ ಬೈಲಪ್ಪ, ನಿಂಗಣ್ಣ, ಮಲ್ಲಿಕಾರ್ಜುನ, ಚಂದ್ರಣ್ಣ ಅಗ್ರಹಿಸಿದರು.

ಹೋಬಳಿ ವ್ಯಾಪ್ತಿಯಲ್ಲಿ 2520 ಕ್ವಿಂಟಲ್ ಬಿತ್ತನೆ ಶೇಂಗಾ ವಿತರಣೆ ಮಾಡಿದ್ದು ಬಹುತೇಕ ರೈತರು ಬಿತ್ತನೆ ಮಾಡಿದ್ದಾರೆ. ಅದರೆ ಮಳೆ ಕೊರತೆಯಿಂದ ಬೆಳೆಗಳು ಒಣಗಿ ಹೋಗಿವೆ.
ಜೀವನ್ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಪರಶುರಾಂಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT