ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ: ಡ್ರ್ಯಾಗನ್‌ ಫ್ರೂಟ್‌ನಿಂದ ಆದಾಯದ ನಿರೀಕ್ಷೆ

ಮೂರನೇ ವರ್ಷ 10 ಕ್ವಿಂಟಲ್ ಇಳುವರಿ
Last Updated 17 ಆಗಸ್ಟ್ 2022, 4:07 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಮಲ್ಲಾಡಿಹಳ್ಳಿಯ ಜನಾರ್ದನ್ ತಮ್ಮ 2 ಎಕರೆ ಭೂಮಿಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದು, ಈ ವರ್ಷ 10 ಕ್ವಿಂಟಲ್ ಇಳುವರಿ ಬಂದಿದೆ. ಉತ್ತಮ ಆದಾಯದ ನಿರೀಕ್ಷೆ ಮೂಡಿದೆ.

ವೃತ್ತಿಯಲ್ಲಿ ಆರೋಗ್ಯ ನಿರೀಕ್ಷಕರಾಗಿರುವ ಇವರು ಕೃಷಿಯಲ್ಲಿ ಹೊಸತನ ಕಂಡುಕೊಳ್ಳುವ ಉದ್ದೇಶದಿಂದ ಈ ಹಣ್ಣು ಬೆಳೆದಿದ್ದಾರೆ. 4,000 ಡ್ರ್ಯಾಗನ್ ಫ್ರ್ಯೂಟ್ ಸಸಿ ನೆಡಲಾಗಿದ್ದು, ಬಳ್ಳಿಯ ಮಾದರಿಯಲ್ಲಿ ಇರುವುದರಿಂದ ಆಸರೆಗಾಗಿ ಕಲ್ಲಿನ ಕಂಬಗಳನ್ನು ನೆಟ್ಟು, ಮೇಲೆ ಬೈಕ್ ಟೈರ್‌ಗಳನ್ನು ನೇತುಹಾಕುವ ಮೂಲಕ ಬಳ್ಳಿ ಹಬ್ಬಿಸಿದ್ದಾರೆ.

‘3 ವರ್ಷಗಳ ಹಿಂದೆ ಸಸಿಯ ಕಾಂಡಗಳನ್ನು ನಾಟಿ ಮಾಡಿದ್ದೆವು. ₹ 35ಕ್ಕೆ ಒಂದು ಕಾಂಡದಂತೆ ವಿಜಯಪುರದಿಂದ ಸಸಿ ತರಿಸಿದ್ದೆವು. ನಾಟಿ ಮಾಡಿದ 2 ವರ್ಷಕ್ಕೇ ಹಣ್ಣು ಬಿಡುತ್ತವೆ. ಆದರೆ ನಾವು ಸಸಿ ದೊಡ್ಡವಾಗಲಿ ಎಂಬ ಕಾರಣದಿಂದ 2ನೇ ವರ್ಷ ಫಸಲು ನಿರಾಕರಿಸಿ, ಮೂರನೇ ವರ್ಷ ಫಸಲು ಪಡೆಯುತ್ತಿದ್ದೇವೆ. ಒಟ್ಟು ₹ 10 ಲಕ್ಷ ಖರ್ಚು ಮಾಡಿದ್ದು, ಈಗ ಹಣ್ಣು ಸಿಗುತ್ತಿದೆ’ ಎನ್ನುತ್ತಾರೆ ಜನಾರ್ದನ್.

‘ಈ ಫಸಲು 25 ವರ್ಷಗಳವರೆಗೆ ಸಿಗುತ್ತದೆ. ಬಳ್ಳಿ ದೊಡ್ಡದಾದಂತೆ ಕತ್ತರಿಸಬೇಕು. ಹೆಚ್ಚು ತೇವಾಂಶ ಇರಬಾರದು. ಕಡಿಮೆ ನೀರಿನಲ್ಲಿ ಉತ್ತಮ ಬೆಳೆ ಬರುತ್ತದೆ. ಮಳೆ ಹೆಚ್ಚಾದರೆ ಕೊಳೆ ರೋಗ ತಗಲುತ್ತದೆ. ಬೆಳವಣಿಗೆಯೂ ಕುಂಠಿತವಾಗುತ್ತದೆ. 22 ಟನ್‌ಗಳಂತೆ 2 ಲೋಡ್ ಕುರಿಗೊಬ್ಬರ ತರಿಸಿ ಹಾಕಿದ್ದೇವೆ. ಹಣ್ಣಿನ ಇಳುವರಿ ಸಮಸ್ಯೆ ಇಲ್ಲ. ಆದರೆ ಮಾರುಕಟ್ಟೆ ಸಮಸ್ಯೆ ಇದೆ. ಬೆಲೆಯ ಏರಿಳಿತವೂ ಇರುತ್ತದೆ. ಈಗ ಬೆಂಗಳೂರಿಗೆ ಹಣ್ಣು ಕಳಿಸುತ್ತಿದ್ದೇವೆ. ಇದರಿಂದ ಖರ್ಚು ಹೆಚ್ಚಾಗುತ್ತದೆ. ಚಿತ್ರದುರ್ಗ, ಶಿವಮೊಗ್ಗ ಅಥವಾ ದಾವಣಗೆರೆಯಲ್ಲಿ ಮಾರುಕಟ್ಟೆ ಇದ್ದರೆ ಅನುಕೂಲ’ ಎಂದು ಅವರು ಹೇಳಿದರು.

‘ಪ್ರತಿ ಗಿಡದಲ್ಲಿ 4 ರಿಂದ 5 ಕೆ.ಜಿ. ಹಣ್ಣು ಸಿಗುತ್ತದೆ. ಪ್ರತಿ ಹಣ್ಣು 250 ಗ್ರಾಂನಿಂದ 400 ಗ್ರಾಂ ಇರುತ್ತದೆ. ಈ ಹಣ್ಣಿನಿಂದ ಉತ್ತಮ ಆರೋಗ್ಯ ಪಡೆಯಬಹುದು. ರಕ್ತದೊತ್ತಡ, ಮಧುಮೇಹದಿಂದ ಗುಣವಾಗಲು, ರಕ್ತಕಣಗಳ ಉತ್ಪತ್ತಿಗೂ ಈ ಹಣ್ಣು ಸಹಕಾರಿ. ಕೆಲವೊಮ್ಮೆ ಕೆ.ಜಿ.ಗೆ ₹ 200 ಇದ್ದ ಬೆಲೆ ₹ 100,₹ 80ಕ್ಕೆ ಇಳಿಯುತ್ತದೆ. ಗ್ರಾಮೀಣ ಭಾಗದ ಜನರಿಗೆ ಈ ಹಣ್ಣಿನ ಬಗ್ಗೆ ಹೆಚ್ಚು ತಿಳಿದಿಲ್ಲ. ಅರಿವು ಮೂಡಿಸುವ ಮೂಲಕ ಸೇವನೆಗೆ ಪ್ರೇರೇಪಿಸಬೇಕಿದೆ. ಬೆಳೆಯುವುದಕ್ಕೂ ಪ್ರೋತ್ಸಾಹ ನೀಡಬೇಕಿದೆ’ ಎಂದು ಜನಾರ್ದನ್ ಅವರ ಪುತ್ರ ಮುರಳೀಧರ್ ಹೇಳುತ್ತಾರೆ.

*

ಡ್ರ್ಯಾಗನ್ ಫ್ರ್ಯೂಟ್ ಬೆಳೆಯುವುದು ಸುಲಭ. ಆದರೆ ಮಾರುಕಟ್ಟೆ ಸಮಸ್ಯೆ ಇದೆ.
-ಜನಾರ್ದನ್, ಮಲ್ಲಾಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT