ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆಗುಂದಿದ ಸಾರ್ವಜನಿಕ ಗಣೇಶೋತ್ಸವ: ಚಿಕ್ಕ ಗಾತ್ರದ ಗಣೇಶಮೂರ್ತಿಗಷ್ಟೇ ಬೇಡಿಕೆ

Last Updated 20 ಆಗಸ್ಟ್ 2020, 10:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೃಹತ್‌ ಗಾತ್ರದ ಗಣೇಶಮೂರ್ತಿಗಳು ಆಸೀನವಾಗಿರುತ್ತಿದ್ದ ದೊಡ್ಡಪೇಟೆಯ ರಾಜಬೀದಿಯಲ್ಲಿ ಪುಟಾಣಿ ಗಣಪ ಮಾತ್ರ ಕಾಣುತ್ತಿವೆ. ಸಾರ್ವಜನಿಕ ಸ್ಥಳದಲ್ಲಿ ವಿಘ್ನ ನಿವಾರಕನನ್ನು ಪ್ರತಿಷ್ಠಾಪಿಸುವ ಸಮಿತಿಗಳಿಂದಲೂ ಚಿಕ್ಕ ಗಾತ್ರದ ಮೂರ್ತಿಗಷ್ಟೇ ಬೇಡಿಕೆ ಬಂದಿದೆ.

ಸಾರ್ವಜನಿಕ ಸ್ಥಳದಲ್ಲಿ ಪ್ರತಿಷ್ಠಾಪಿಸುವ ಗಣೇಶಮೂರ್ತಿ ನಾಲ್ಕು ಅಡಿ ಮೀರುವಂತಿಲ್ಲ ಎಂಬ ಸರ್ಕಾರದ ಮಾರ್ಗಸೂಚಿ ಕಲಾವಿದರ ಮೇಲೆ ಪರಿಣಾಮ ಬೀರಿದೆ. ಬೃಹತ್‌ ಗಾತ್ರದ ಮೂರ್ತಿಗಳು ಬೇಡಿಕೆ ಕಳೆದುಕೊಂಡು ಮೂಲೆ ಸೇರಿವೆ. ₹ 15ರಿಂದ 20 ಸಾವಿರಕ್ಕೆ ಒಂದು ಮೂರ್ತಿ ಮಾರಾಟ ಮಾಡುತ್ತಿದ್ದ ಕಲಾವಿದರು ₹ 1 ರಿಂದ 3 ಸಾವಿರಕ್ಕೆ ಮೂರ್ತಿ ನೀಡುತ್ತಿದ್ದಾರೆ.

ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಪರಿಣಾಮ ಹಬ್ಬದ ಉತ್ಸಾಹ ಕಾಣುತ್ತಿಲ್ಲ. ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ಸಹಿತ ಅನುಮತಿ ನೀಡಿದರೂ ಹಲವು ಸಮಿತಿಗಳು ಸಿದ್ಧತೆ ಮಾಡಿಕೊಂಡಿಲ್ಲ. ಹಳ್ಳಿ ಅಥವಾ ವಾರ್ಡ್‌ಗೆ ಒಂದು ಮೂರ್ತಿ ಎಂಬ ನಿರ್ಬಂಧವೂ ಭಕ್ತರನ್ನು ಗೊಂದಲಕ್ಕೆ ದೂಡಿದಂತೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ವ್ಯಾಪಾರ – ವಹಿವಾಟು ಸಂಪೂರ್ಣ ಕಳೆಗುಂದಿದೆ.

ಚಿತ್ರದುರ್ಗದ ದೊಡ್ಡಪೇಟೆ, ಚಿಕ್ಕಪೇಟೆ ಸೇರಿ ಹಲವೆಡೆ ಗಣೇಶಮೂರ್ತಿ ತಯಾರಿಸುವ ಹಲವು ಕುಟುಂಬಗಳಿವೆ. ಕೊರೊನಾ ಸೋಂಕಿನ ಆತಂಕದ ನಡುವೆಯೂ ಮೂರ್ತಿ ತಯಾರಿಸಿ ಭಕ್ತರಿಗೆ ಕಾಯುತ್ತಿವೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಕೆಲವರು ಮಾತ್ರ ಮುಂಗಡವಾಗಿ ಮೂರ್ತಿಗಳನ್ನು ಕಾಯ್ದಿರಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಸಂಘ, ಸಮಿತಿ ಸದಸ್ಯರು ಗುರುವಾರದಿಂದ ಮೂರ್ತಿ ತಯಾರಕರನ್ನು ಸಂಪರ್ಕಿಸುತ್ತಿದ್ದಾರೆ. ಹಬ್ಬದ ಎರಡು ದಿನಗಳ ಮೊದಲೇ ದಾವಣಗೆರೆ, ಬೆಂಗಳೂರಿನಿಂದ ಬರುತ್ತಿದ್ದ ಗಣೇಶಮೂರ್ತಿಗಳು ಈ ವರ್ಷ ಕಾಣುತ್ತಿಲ್ಲ.

‘ಗಣೇಶ ಹಬ್ಬದ ಐದು ತಿಂಗಳ ಮೊದಲೇ ಮೂರ್ತಿ ತಯಾರಿಸುವ ಸಿದ್ಧತೆ ಆರಂಭವಾಗುತ್ತಿತ್ತು. ಕೊರೊನಾ ಸೋಂಕು ಹಾಗೂ ಲಾಕ್‌ಡೌನ್‌ ಕಾರಣಕ್ಕೆ ಕೊಂಚ ವಿಳಂಬವಾಯಿತು. ಚಿಕ್ಕ ಮೂರ್ತಿಗಳನ್ನು ಮೊದಲು ತಯಾರಿಸಿಕೊಳ್ಳುವುದು ವಾಡಿಕೆ. ಮುಂಗಡವಾಗಿ ಹೇಳಿದರೆ ಮಾತ್ರ ದೊಡ್ಡ ಮೂರ್ತಿ ತಯಾರಿಸುತ್ತಿದ್ದೆವು. ಮೂರು ಅಡಿ ಮೀರಿದ ಯಾವ ಮೂರ್ತಿಗಳನ್ನು ತಯಾರಿಸಿಲ್ಲ’ ಎನ್ನುತ್ತಾರೆ ದೊಡ್ಡಪೇಟೆಯ ಯಶೋದಮ್ಮ.

ಗಣೇಶಮೂರ್ತಿ ತಯಾರಿಕೆಗೆ ಅಗತ್ಯವಿರುವ ಮಣ್ಣನ್ನು ಇವರು ಚಿಕ್ಕಜಾಜೂರು ಸಮೀಪದ ಹಳ್ಳಿಗಳಿಂದ ತಂದಿದ್ದಾರೆ. ಜಿಗುಟಾದ ಮಣ್ಣಲ್ಲಿ ತಯಾರಿಸಿದ ಮೂರ್ತಿ ಬಹುಕಾಲದವರೆಗೆ ಸುಸ್ಥಿತಿಯಲ್ಲಿ ಇರುತ್ತವೆ ಎಂಬುದು ಯಶೋದಮ್ಮ ಅವರ ಅನುಭವ. ಬೆಂಗಳೂರು, ಮಹಾರಾಷ್ಟ್ರ, ಆಂಧಪ್ರದೇಶಕ್ಕೂ ಮೂರ್ತಿಗಳನ್ನು ಕಳುಹಿಸುತ್ತಿದ್ದ ಇವರಿಗೆ ಹೊರ ಊರುಗಳಿಂದ ಮೂರ್ತಿಗೆ ಬೇಡಿಕೆ ಬಂದಿಲ್ಲ.

ಕೊರೊನಾ ಗಣೇಶ

ಕೊರೊನಾ ಸೋಂಕು ಮೆಟ್ಟಿ ನಿಂತಿರುವ ಗಣೇಶಮೂರ್ತಿಯನ್ನು ದೊಡ್ಡಪೇಟೆಯ ಸಿದ್ದೇಶ್ ರಾಮಗಿರಿ ಅವರು ತಯಾರಿಸಿದ್ದಾರೆ.

ಸೋಂಕಿನ ಆಕಾರವನ್ನು ಗಣೇಶ ಕಾಲಲ್ಲಿ ತುಳಿದ ಚಿತ್ರ ಗಮನ ಸೆಳೆಯುತ್ತದೆ. ಗಣೇಶಮೂರ್ತಿ ಖರೀದಿಸಲು ಬರುವವರ ಆಕರ್ಷಣೆಯ ಕೇಂದ್ರವಾಗಿದೆ. ಶ್ರೀರಾಮ, ಆಂಜನೇಯ ಅವತಾರದಲ್ಲಿರುವ ಗಣೇಶಮೂರ್ತಿಗಳು ಕೂಡ ಕಣ್ಮನ ಸೆಳೆಯುತ್ತಿವೆ. ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿದ ಅಂಗವಾಗಿ ಈ ಮೂರ್ತಿಗಳನ್ನು ತಯಾರಿಸಲಾಗಿದೆ.

‘ಜಗತ್ತು ಆವರಿಸಿದ ಕೊರೊನಾ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಮೂರ್ತಿ ತಯಾರಿಸಿದ್ದೇನೆ. ಕೊರೊನಾ ವಿಘ್ನ ನಿವಾರಣೆಯಾಗುತ್ತದೆ ಎಂಬುದು ಇದರ ಸಂಕೇತ’ ಎನ್ನುತ್ತಾರೆ ಸಿದ್ದೇಶ್‌.

ಅನುಮತಿ ಕೋರಿ 5 ಅರ್ಜಿ!

ಸಾರ್ವಜನಿಕ ಸ್ಥಳದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಆಡಳಿತ, ಪೊಲೀಸ್‌ ಇಲಾಖೆ ಹಾಗೂ ಬೆಸ್ಕಾಂ ಅನುಮತಿ ಪಡೆಯುವುದು ಕಡ್ಡಾಯ. ಅನುಮತಿ ನೀಡುವಂತೆ ಕೋರಿ ಚಿತ್ರದುರ್ಗ ನಗರಸಭೆಗೆ ಗುರುವಾರದವರೆಗೆ ಬಂದಿರುವ ಅರ್ಜಿಗಳು ಕೇವಲ ಐದು.

ನಗರಸಭೆ ವ್ಯಾಪ್ತಿಯಲ್ಲಿ ಪ್ರತಿವರ್ಷ ನೂರಕ್ಕೂ ಹೆಚ್ಚು ಸಾರ್ವಜನಿಕ ಸ್ಥಳದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ಅರ್ಧಕ್ಕೂ ಕಡಿಮೆ ಸ್ಥಳಗಳಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಬಹುದು ಎಂದು ನಗರಸಭೆ ಅಂದಾಜಿಸಿದೆ.

‘ಅನುಮತಿ ಪಡೆಯಲು ಶುಕ್ರವಾರ ಸಂಜೆಯವರೆಗೆ ಅವಕಾಶವಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಷರತ್ತು ವಿಧಿಸಿ ಅವಕಾಶ ಕಲ್ಪಿಸಲಾಗುವುದು’ ಎನ್ನುತ್ತಾರೆ ನಗರಸಭೆ ಪೌರಾಯುಕ್ತ ಜೆ.ಟಿ.ಹನುಮಂತರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT