ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೈದ್ಯ ವಿದ್ಯಾರ್ಥಿನಿ ಕೊಲೆ–ಅತ್ಯಾಚಾರ ಖಂಡಿಸಿ ಪ್ರತಿಭಟನೆ

Published : 17 ಆಗಸ್ಟ್ 2024, 16:23 IST
Last Updated : 17 ಆಗಸ್ಟ್ 2024, 16:23 IST
ಫಾಲೋ ಮಾಡಿ
Comments

ಹಿರಿಯೂರು: ಕೋಲ್ಕತ್ತದಲ್ಲಿ ಕರ್ತವ್ಯನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಕೊಲೆ ಮತ್ತು ಅತ್ಯಾಚಾರ ಖಂಡಿಸಿ ತಾಲ್ಲೂಕು ವೈದ್ಯರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.

ದೇಶದ ಬೇರೆ ಬೇರೆ ಭಾಗಗಳಿಂದ ದೂರದ ನಗರಗಳಿಗೆ ಹೋಗಿ ಕಷ್ಟಪಟ್ಟು ಓದಿ ವೈದ್ಯರಾಗಿ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಉದ್ದೇಶ ಹೊಂದಿರುವವರ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿರುವುದು ಖಂಡನೀಯ. ಕಠಿಣಾತಿ ಕಠಿಣ ಶಿಕ್ಷೆ ನೀಡುವ ಕಾನೂನು ಜಾರಿ ಮಾಡುವ ಮೂಲಕ ಅಮಾನುಷ ಕೃತ್ಯ ಎಸಗುವ ದುಷ್ಟರಿಗೆ ಎಚ್ಚರಿಕೆ ನೀಡಬೇಕು. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು ಮತ್ತು ಸಿಬ್ಬಂದಿಗೆ ಸರ್ಕಾರ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಹಿರಿಯ ವೈದ್ಯ ಗೋಪಾಲ್ ನಾಯ್ಕ ಆಗ್ರಹಿಸಿದರು.

ವೈದ್ಯರು ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಯಾವುದೇ ಮಹಿಳೆಯರು ಭಯಮುಕ್ತ ವಾತಾವರಣದಲ್ಲಿ ಕೆಲಸ  ನಿರ್ವಹಿಸುವಂತಾಗಬೇಕು. ಕೋಲ್ಕತ್ತದಲ್ಲಿ ಕೃತ್ಯ ಎಸಗಿರುವವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಂಜೀವಿನಿ ಆಸ್ಪತ್ರೆ ವೈದ್ಯೆ ಲತಾ ರಾಮಚಂದ್ರಪ್ಪ ಒತ್ತಾಯಿಸಿದರು.

ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಣ್ಣ ರೆಡ್ಡಿ, ಹಿರಿಯ ವೈದ್ಯ ರವಿನಾಯ್ಕ ಮಾತನಾಡಿದರು. ತಾಲ್ಲೂಕಿನ ಖಾಸಗಿ ಮತ್ತು ಸರ್ಕಾರಿ ವೈದ್ಯರು ಹಾಗೂ ಸಿಬ್ಬಂದಿ ಕೊಲ್ಕತ್ತ ಘಟನೆ ಖಂಡಿಸುವ ಫಲಕಗಳನ್ನು ಹಿಡಿದು ನಗರದ ರಂಜಿತ್ ಹೋಟೆಲ್ ವೃತ್ತದಿಂದ ತಾಲ್ಲೂಕು ಕಚೇರಿವರೆಗೂ ಮೆರವಣಿಗೆ ನಡೆಸಿದರು.

ನಿವೃತ್ತ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹಲಿಂಗಪ್ಪ, ತಾಲ್ಲೂಕು ವೈದ್ಯಾಧಿಕಾರಿ ವೆಂಕಟೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಕುಮಾರ ನಾಯ್ಕ, ಡಾ.ಕಮಲಾನಾಯ್ಕ, ಡಾ.ಮೂರ್ತಿ, ಡಾ.ಮಲ್ಲಿಕಾರ್ಜುನಪ್ಪ, ಡಾ.ಜಗನ್ನಾಥ, ಡಾ.ರಾಮಚಂದ್ರಪ್ಪ, ಡಾ.ಬಸವರಾಜ್, ಡಾ.ಹರ್ಷ, ಡಾ.ವೆಂಕಟೇಶ್, ಡಾ.ರೋಹಿತ್ ಹಾಗೂ ಔಷಧ ವ್ಯಾಪಾರಿಗಳಾದ ವಿ.ತಿಪ್ಪೇಸ್ವಾಮಿ, ಪ್ರಸನ್ನ, ಅಕ್ಷಯ್, ಮುದ್ದುವೀರಪ್ಪ, ಗೋಪಾಲ್, ಶೇಖರ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT