ಚಿತ್ರದುರ್ಗ: ಇಲ್ಲಿನ ಬಹುತೇಕ ಬಟ್ಟೆ ಅಂಗಡಿ-ಮಳಿಗೆಗಳಲ್ಲಿ, ಬ್ಯಾಂಗಲ್ಸ್ ಸ್ಟೋರ್ಸ್‌ಗಳಲ್ಲಿ ಪ್ರತಿ ವರ್ಷ ರಂಜಾನ್ ಮಾಸಾಚರಣೆ ವೇಳೆ ಖರೀದಿಗೆ ಮುಸ್ಲಿಂ ಸಮುದಾಯದವರು ಮುಗಿ ಬೀಳುತ್ತಿದ್ದರು. ಆದರೆ, ಈ ಬಾರಿ ಗ್ರಾಹಕರ ದಟ್ಟಣೆಯೂ ಇಲ್ಲ. ಹಬ್ಬದ ಸಂಭ್ರಮವೂ ಇಲ್ಲ. ಇದಕ್ಕೆ ಕಾರಣ ಸರಳ ಆಚರಣೆಯ ತೀರ್ಮಾನ.
ರಂಜಾನ್ ಮುಸ್ಲಿಂ ಸಮುದಾಯದವರಿಗೆ ಪವಿತ್ರ ಮಾಸವಾಗಿದ್ದು, ಮುಕ್ತಾಯದ ಹಿನ್ನೆಲೆಯಲ್ಲಿ ಇನೇನೂ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದರೂ ಖರೀದಿ ಭರಾಟೆ ಎಲ್ಲಿಯೂ ಇಲ್ಲವಾಗಿದೆ. ಕೆಲ ಬಟ್ಟೆ ಮಳಿಗೆಗಳಲ್ಲಂತೂ ಹಿಂದಿನ ವರ್ಷ ರಾತ್ರಿ 11ರವರೆಗೂ ಖರೀದಿಸಿದ್ದರು. ಪ್ರಸಕ್ತ ವರ್ಷ ಯಾರಲ್ಲೂ ಉತ್ಸಾಹ ಇಲ್ಲವಾಗಿದೆ.
100ಕ್ಕೆ ಶೇ 90ರಷ್ಟು ಜನ ಬಟ್ಟೆ ಖರೀದಿಸಲು ಮಳಿಗೆಗಳಿಗೆ ಬಂದಿಲ್ಲ. 10ರಷ್ಟು ಬಂದರೂ ಅದು ಮಕ್ಕಳಿಗಾಗಿಯೇ ಹೊರತು ಮುಸ್ಲಿಂ ಸಮುದಾಯದ ಪುರುಷರು, ಸ್ತ್ರೀಯರು ಹೊಸ ಬಟ್ಟೆ ಖರೀದಿಸುತ್ತಿಲ್ಲ. ಒಟ್ಟಾರೆ ಮಾಸಾಚರಣೆಯಲ್ಲಿ ವ್ಯಾಪಾರವೇ ಇಲ್ಲದೇ ಮಾಲೀಕರು ಕಂಗಾಲಾಗಿದ್ದಾರೆ.
ಈ ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಕೋವಿಡ್-19 ಜಗತ್ತನ್ನು ತಲ್ಲಣಗೊಳಿಸಿರುವ ಸಂದರ್ಭದಲ್ಲಿ ಸಂಭ್ರಮದಿಂದ ಆಚರಿಸದಿರಲು ಮುಸ್ಲಿಂ ಧರ್ಮ ಗುರುಗಳು, ಮುಖಂಡರು ತೀರ್ಮಾನಿಸಿದ್ದಾರೆ. ಗುಜರಾತ್, ಮಹಾರಾಷ್ಟ್ರದಿಂದಲೂ ಬಟ್ಟೆಗಳನ್ನು ರಾಜ್ಯಕ್ಕೆ ತರಿಸಿಕೊಳ್ಳಲಾಗುತ್ತಿದೆ. ಅಲ್ಲಿ ಸೋಂಕು ಹೆಚ್ಚಿದ್ದು, ಬಟ್ಟೆ ಖರೀದಿಸಬೇಡಿ ಎಂಬುದಾಗಿ ಜಿಲ್ಲಾ ವಕ್ಫ್ ಮಂಡಳಿ ಮನವಿ ಮಾಡಿದೆ. ಈ ಎಲ್ಲಾ ಕಾರಣಗಳಿಂದಾಗಿ ವಸ್ತ್ರೋದ್ಯಮಕ್ಕೆ ಹಿನ್ನಡೆ ಉಂಟಾಗಿದೆ.
ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಬಟ್ಟೆ ಖರೀದಿಸುತ್ತಾರೆ ಎಂಬ ಕಾರಣಕ್ಕಾಗಿ ಫೆಬ್ರುವರಿ ತಿಂಗಳಲ್ಲೇ ಅನೇಕ ವ್ಯಾಪಾರಿಗಳು ವಿವಿಧ ವಿನ್ಯಾಸದ ಬಟ್ಟೆಗಳನ್ನು ಮುಂಗಡ ಬುಕ್ಕಿಂಗ್ ಮಾಡಿ ತರಿಸಿಕೊಂಡಿದ್ದರು. ಲಾಕ್‌ಡೌನ್‌ಗೂ ಮುನ್ನ ಶೇ 50ರಷ್ಟು ಮಾಲು ಬಂದಿತ್ತು. ಮಾರ್ಚ್‌ನಲ್ಲಿ ತಕ್ಕಮಟ್ಟಿಗೆ ವ್ಯಾಪಾರವೂ ಆಗಿತ್ತು. ಲಾಕ್‌ಡೌನ್ ಘೋಷಣೆಯಾದ ನಂತರ ಉಳಿದ ಅರ್ಧದಷ್ಟು ಬರಲಿಲ್ಲ. ರಂಜಾನ್‌ಗಾಗಿ ಏಪ್ರಿಲ್ ಕೊನೆ ವಾರದಲ್ಲಿ ಮಾಲು ಬಂದರೂ ಅಂಗಡಿಗಳಲ್ಲಿ ಗ್ರಾಹಕರೇ ಇಲ್ಲ.
‘ಪ್ರತಿ ವರ್ಷ ರಂಜಾನ್ ಮಾಸಾಚರಣೆ ವೇಳೆ 100ರಿಂದ 150 ಗ್ರಾಹಕರು ನಿತ್ಯ ಅಂಗಡಿಗೆ ಬಂದು ಬಟ್ಟೆ ಖರೀದಿಸುತ್ತಿದ್ದರು. ಈ ಬಾರಿ ಕೇವಲ 10 ಜನ ಮಾತ್ರ ಬರುತ್ತಿದ್ದಾರೆ. ಅಂಗಡಿಗಳಲ್ಲೂ ಬಟ್ಟೆ ಉಳಿದಿರುವ ಕಾರಣ ನಗರಕ್ಕೆ ಬರುವ ಮೊದಲೇ ಕಳಿಸದಂತೆ ಕಂಪನಿಗಳಿಗೆ ಮನವಿ ಮಾಡಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಬಟ್ಟೆ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಚಿತ್ರದುರ್ಗ ನಗರ ಸೇರಿ ಚಳ್ಳಕೆರೆ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರು, ಮೊಳಕಾಲ್ಮುರು ಭಾಗದ ಗ್ರಾಹಕರೂ ಸಮಾನ ಪ್ರಮಾಣದಲ್ಲಿದ್ದು, ಈ ಬಾರಿ ಮಳಿಗೆಗಳಿಗೆ ಹೆಚ್ಚು ಗ್ರಾಹಕರು ಭೇಟಿ ನೀಡಿಲ್ಲ. ವ್ಯಾಪಾರ ಇಲ್ಲವಾಗಿದೆ. ಆದರೂ ಮುಂದಿನ ದಿನಗಳಲ್ಲಿ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು.
ಮುಂಬರುವ ದಿನಗಳಲ್ಲಿ ವ್ಯಾಪಾರದ ನಿರೀಕ್ಷೆ:‘ನಮ್ಮ ಅಂಗಡಿಯಲ್ಲಿ ರಂಜಾನ್ ಅಂಗವಾಗಿ ಮಕ್ಕಳಿಗಾಗಿಯೇ ಫ್ಯಾನ್ಸಿ, ಡಿಸೈನರಿ, ವಿವಿಧ ವಿನ್ಯಾಸದಲ್ಲಿ ವರ್ಕ್ ಮಾಡಿದಂಥ ಬಟ್ಟೆಗಳನ್ನು ತರಿಸಿದ್ದೇವೆ. ಆದರೂ ವ್ಯಾಪಾರವೇ ಇಲ್ಲವಾಗಿದೆ. ಮುಂಬರುವ ದಿನಗಳಲ್ಲಿ ಮೊದಲಿನಂತೆ ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದೇವೆ’ ಎನ್ನುತ್ತಾರೆ ನಗರದ ಬಾಫ್ನಾ ಎಕ್ಸ್ಲೂಸಿವ್‌ನ ಮಾಲೀಕ ನೇಮಿಚಂದ್ ಬಾಫ್ನಾ.
‘ಫ್ಯಾನ್ಸಿ ಕಿವಿ ಓಲೆ, ಉಂಗುರ, ಸರ ಸೇರಿ ಸಣ್ಣಪುಟ್ಟ ವಸ್ತುಗಳಿಗೆ ಜನ ಮುಗಿ ಬೀಳುತ್ತಿದ್ದರು. ಆದರೆ, ಈ ಬಾರಿ ಅಂತಹ ವಾತಾವರಣವೂ ಇಲ್ಲವಾಗಿದೆ. ಹಿಂದಿನ ವರ್ಷದ ರಂಜಾನ್ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಸ್ತುಗಳು ಮಾರಾಟ ಆಗಿದ್ದವು. 38 ವರ್ಷದಿಂದ ನಾನೂ ವ್ಯಾಪಾರ ಮಾಡುತ್ತ ಬಂದಿದ್ದೇನೆ. ಇಷ್ಟು ವರ್ಷಗಳಲ್ಲಿ ಈ ಬಾರಿ ಸಂಪೂರ್ಣ ವ್ಯಾಪಾರವಿಲ್ಲ’ ಎನ್ನುತ್ತಾರೆ ಬೀದಿ ಬದಿಯ ಮಹಿಳಾ ಸಾಮಗ್ರಿ ವ್ಯಾಪಾರಿ ಮುನ್ನಾ.
‘ಸಾಮಾನ್ಯವಾಗಿ ಹಬ್ಬಗಳ ಸಂದರ್ಭದಲ್ಲಿ ವ್ಯಾಪಾರ ಚೆನ್ನಾಗಿಯೇ ಆಗುತ್ತದೆ. ಆದರೆ, ಈ ಬಾರಿ ಗ್ರಾಹಕರ ಸಂಖ್ಯೆಯಲ್ಲಿ ಬಹಳಷ್ಟು ಇಳಿಕೆಯಾಗಿದೆ. ಹೊಸ ಬಗೆಯ ವಿನ್ಯಾಸದ ವಸ್ತುಗಳನ್ನು ತರಿಸಿದ್ದೇವೆ. ಆದರೂ ನಿರೀಕ್ಷೆಯಂತೆ ವ್ಯಾಪಾರ ಆಗಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಬ್ಯಾಂಗಲ್ಸ್ ಸ್ಟೋರ್ಸ್‌ನ ಮಾಲೀಕರೊಬ್ಬರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.