ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ಸ್ಪಂದಿಸಿದ ಕೋಟೆನಾಡ ಜನ

* ಅಗತ್ಯ ಸೇವೆಗೆ ಅವಕಾಶ * ಬೆಳಿಗ್ಗೆ 10ರ ನಂತರ ಮಾರುಕಟ್ಟೆ–ರಸ್ತೆ ಖಾಲಿ–ಖಾಲಿ
Last Updated 28 ಏಪ್ರಿಲ್ 2021, 13:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಅನುಷ್ಠಾನಗೊಳಿಸಿದ 14 ದಿನದ ಲಾಕ್‌ಡೌನ್‌ನ ಮೊದಲ ದಿನವಾದ ಬುಧವಾರ ಕೋಟೆನಾಡಿನಲ್ಲಿ ಉತ್ತಮ ಸ್ಪಂದನೆ ದೊರೆಯಿತು. ಕಳೆದ ವರ್ಷದಂತೆ ಲಾಕ್‌ಡೌನ್‌ಗೆ ಹೊಂದಿಕೊಂಡಂತೆ ಕಾಣುವ ಜನರು ಅನಗತ್ಯವಾಗಿ ಹೊರಗೆ ಸುಳಿದಾಡುವುದು ಅಪರೂಪವಾಗಿದ್ದು, ಕಟ್ಟುನಿಟ್ಟಾಗಿ ಪಾಲನೆಯಾಯಿತು.

ಲಾಕ್‌ಡೌನ್‌ಗೆ ಜಿಲ್ಲೆ ಸಂಪೂರ್ಣ ಸ್ತಬ್ಧವಾಗಿತ್ತು. ಅಗತ್ಯ ಸೇವೆ ಹೊರತುಪಡಿಸಿ ಉಳಿದ ವಹಿವಾಟು ಸ್ಥಗಿತಗೊಂಡಿತ್ತು. ತರಕಾರಿ, ಹಾಲು, ಮಾಂಸ, ಹಣ್ಣು ಸೇರಿ ಅಗತ್ಯ ವಸ್ತು ಖರೀದಿಗೆ ಬೆಳಿಗ್ಗೆ 6ರಿಂದ 10ರ ವರೆಗೆ ಅವಕಾಶವಿತ್ತು. ತರಕಾರಿ ಮಾರುಕಟ್ಟೆಗಳ ಬಳಿ ಬೆಳಿಗ್ಗೆ 9ರ ವರೆಗೂ ವ್ಯಾಪಾರ ಚಟುವಟಿಕೆ ಜೋರಾಗಿ ನಡೆಯಿತು. ಈ ವೇಳೆ ಒಂದಿಷ್ಟು ವಾಹನಗಳ ಸದ್ದು ಕೇಳಿಸಿತು. 9.30ರ ನಂತರ ಜನಸಂಚಾರ ಕಡಿಮೆಯಾಯಿತು.

ಬೀದಿ ಸುತ್ತಿ ತರಕಾರಿ ಮಾರಾಟ ಮಾಡುವ ವ್ಯಾಪಾರಸ್ಥರು ಬೆಳಿಗ್ಗೆ 10ರ ನಂತರವೂ ವಿವಿಧೆಡೆ ವ್ಯಾಪಾರ ಚಟುವಟಿಕೆಯಲ್ಲಿ ತೊಡಗಿದ್ದರು. ‘ವ್ಯಾಪಾರ ಮಾಡಿದ್ದು ಸಾಕು, ಮನೆಗೆ ನಡೆಯಿರಿ’ ಎಂದು ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದರು. ಆದರೂ, ‘ಗುಂಪು ಸೇರಿಸದೆ ವ್ಯಾಪಾರ ಮಾಡುತ್ತೇವೆ. ಇನ್ನೂ ಸ್ವಲ್ಪ ತರಕಾರಿ ಇದೆ’ ಎಂದು ಕೆಲವೆಡೆ ಮನವೊಲಿಸಿದರು. ಹೀಗಾಗಿ ಬೆಳಿಗ್ಗೆ 11ರ ವರೆಗೂ ತಳ್ಳುವ ಗಾಡಿ, ವಾಹನಗಳಲ್ಲಿ ತರಕಾರಿ ಮಾರಾಟ ನಡೆಯಿತು.

ನಿಗದಿತ ಸಮಯ ಮುಗಿಯುತ್ತಿದ್ದಂತೆ ಹಲವು ಅಂಗಡಿಗಳು ಬಾಗಿಲು ಮುಚ್ಚಿದವು. ಮನೆಯತ್ತ ಹೆಜ್ಜೆ ಹಾಕಿದ ಜನರು ಮತ್ತೆ ರಸ್ತೆಗೆ ಇಳಿದಿದ್ದು ಕಡಿಮೆ. ‍ಪ್ರಮುಖ ವೃತ್ತ, ಮಾರುಕಟ್ಟೆ, ಮುಖ್ಯ ರಸ್ತೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ಸಕಾರಣ ಇಲ್ಲದೆಯೇ ಮನೆಯಿಂದ ಹೊರಗೆ ಬರುವವರ ಮೇಲೆ ನಿಗಾವಹಿಸಿದ್ದರು. ನಿಯಮ ಉಲ್ಲಂಘಿಸಿ ಸಂಚರಿಸಿದವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಇದರಲ್ಲಿ ಯುವಕರೇ ಹೆಚ್ಚು ದಂಡ ತೆತ್ತರು.

ಆಸ್ಪತ್ರೆ, ಆರೋಗ್ಯ ಕೇಂದ್ರ, ಲ್ಯಾಬ್‌, ಸ್ಕ್ಯಾನಿಂಗ್‌ ಕೇಂದ್ರ, ಔಷಧ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಗಳು ಬಂದ್ ಆಗಿದ್ದವು. ಆರೋಗ್ಯ ಸಮಸ್ಯೆ, ಲಸಿಕೆ ಹಾಕಿಸಿಕೊಳ್ಳಲು, ಔಷಧಿ ಖರೀದಿಸಲು ಕೆಲವರು ಸಂಚಾರ ನಡೆಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಬಸ್‌ಗಳು ಹೊರಗೆ ಬರಲಿಲ್ಲ. ಬಸ್‌ ನಿಲ್ದಾಣದತ್ತ ಪ್ರಯಾಣಿಕರು ಸುಳಿದಾಡಲಿಲ್ಲ. ಬಿ.ಡಿ.ರಸ್ತೆ, ಮೆದೇಹಳ್ಳಿ ರಸ್ತೆ, ಗಾಂಧಿ ವೃತ್ತ, ಜೋಗಿಮಟ್ಟಿ ರಸ್ತೆ, ಜೆಸಿಆರ್‌ ಬಡಾವಣೆ, ಜಿಲ್ಲಾ ಕ್ರೀಡಾಂಗಣ ರಸ್ತೆ ಸೇರಿ ಪ್ರಮುಖ ಸ್ಥಳಗಳು ಬಿಕೋ ಎನ್ನುತ್ತಿದ್ದವು. ವಾಣಿಜ್ಯ ವಹಿವಾಟು ಸ್ಥಗಿತಗೊಂಡಿತ್ತು. ಕೋಟೆನಾಡು ಸಂಪೂರ್ಣ ಸ್ತಬ್ಧವಾಗಿತ್ತು.

ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ, ಸೊಲ್ಲಾಪುರ–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಸರಕು ಸಾಗಣೆ ವಾಹನಗಳು ಮಾತ್ರ ಸಂಚರಿಸುತ್ತಿದ್ದವು. ಹೋಟೆಲ್‌ಗಳ ಬಾಗಿಲು ತೆರೆದಿತ್ತಾದರೂ ಪಾರ್ಸಲ್‌ ಕೊಳ್ಳುವವರ ಸಂಖ್ಯೆ ವಿರಳವಾಗಿತ್ತು. ವಾಣಿಜ್ಯ ಕೇಂದ್ರಗಳು ಬಾಗಿಲು ತೆರೆಯಲಿಲ್ಲ. ವಾಯು ವಿಹಾರಕ್ಕೆ ಬೆಳಿಗ್ಗೆ ಅವಕಾಶ ಸಿಕ್ಕಿತ್ತು. ಸಂಜೆ ಮುಖ್ಯ ರಸ್ತೆಗಳಲ್ಲಿ ಇದಕ್ಕೆ ಕಡಿವಾಣ ಬಿದ್ದಿತ್ತು.

ನಸುಕಿನಲ್ಲೇ ಹಾಲು ಖರೀದಿ ಭರದಿಂದ ನಡೆಯಿತು. ಬೆಳಕು ಕಾಣಿಸಿಕೊಳ್ಳುತ್ತಿದ್ದಂತೆ ವಹಿವಾಟು ನಿಧಾನಗತಿಯಲ್ಲಿ ಸಾಗಿತು. ಮುಖ್ಯ ರಸ್ತೆ ಹೊರತುಪಡಿಸಿ ಕೆಲವೆಡೆ ಕಿರಾಣಿ ಅಂಗಡಿಗಳು ತೆರೆದಿದ್ದವು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದವಾದರೂ ಅಲ್ಲಿ ಎಂದಿನಂತೆ ಹೆಚ್ಚು ವಾಹನಗಳು ಕಂಡು ಬರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT