ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಜಿ. ಈರುಳ್ಳಿ ₹1ಕ್ಕೆ ಬಿಕರಿ: ಲಾರಿ ಬಾಡಿಗೆಯೂ ಸಿಗದೆ ವಾಪಸ್‌

ಸಂಕಷ್ಟದಲ್ಲಿ ಈರುಳ್ಳಿ ಬೆಳೆಗಾರರು
Last Updated 20 ಸೆಪ್ಟೆಂಬರ್ 2022, 1:56 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಈರುಳ್ಳಿ ಮಾರಾಟಕ್ಕೆ ಬೆಂಗಳೂರಿಗೆ ತೆರಳಿದ್ದ ರೈತರಿಗೆ ಲಾರಿ ಬಾಡಿಗೆಯೂ ಸಿಗದ ಕಾರಣ ವ್ಯಾಪಾರಿಗಳ ಬಳಿಯೇ ಬಸ್ ಚಾರ್ಜ್ ಪಡೆದು ಗ್ರಾಮಗಳಿಗೆ ವಾಪಾಸ್ ಆಗಿದ್ದಾರೆ.

ತಾಲ್ಲೂಕಿನ ಮಾರಮ್ಮನಹಳ್ಳಿ, ರಾಯಾಪುರ, ಕೋನಸಾಗರ, ತೋಪು ಗ್ರಾಮಗಳ ಹಲವು ರೈತರು ಮಳೆ ಬಿಡುವು ನೀಡಿದ ನಂತರ ಕಟಾವು ಮಾಡಿದ್ದ ಈರುಳ್ಳಿಯನ್ನು ಒಣಗಿಸಿ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿದ್ದರು.

ಪ್ರತಿ ಟನ್‌ ಈರುಳ್ಳಿಗೆ ಇಲ್ಲಿಂದ ಬೆಂಗಳೂರಿಗೆ ಲಾರಿಯವರು ₹1,000ದಿಂದ ₹1,100 ತೆಗೆದುಕೊಳ್ಳುತ್ತಾರೆ. ಈರುಳ್ಳಿ ಲಾರಿ ಮಾರುಕಟ್ಟೆ ತಲುಪಿದ ನಂತರ ಮಾರಾಟಕ್ಕೆ ಬಿಡುವ ಮಳಿಗೆಯವರು ಲಾರಿ ಬಾಡಿಗೆ ನೀಡುತ್ತಾರೆ. ಬಾಡಿಗೆ ಹಣವನ್ನು ರೈತರಿಗೆ ನೀಡಬೇಕಾದ ಹಣದಲ್ಲಿಯೇ ಮುರಿದುಕೊಳ್ಳುವುದು ನಡೆದುಕೊಂಡು ಬಂದಿದೆ.

‘ಮಳೆ ಬಿಡುವು ನೀಡಿದ ನಂತರ ಕಟಾವು ಮಾಡಿದ್ದ ಈರುಳ್ಳಿಯನ್ನು ಒಣಗಿಸಿ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ 80 ಪ್ಯಾಕೆಟ್ ಈರುಳ್ಳಿಗೆ (ಪ್ರತಿ ಪ್ಯಾಕೆಟ್ 55-60 ಕೆ.ಜಿ. ತೂಕವಿರುತ್ತದೆ) ₹ 2000 ನೀಡಿದ್ದಾರೆ. ಲಾರಿ ಬಾಡಿಗೆ ಹಣ ಕೂಡ ವಾಪಸ್‌ ಬರಲಿಲ್ಲ. ವ್ಯಾಪಾರಿಗಳ ಹತ್ತಿರವೇ ಬಸ್ ಚಾರ್ಜ್‌ಗೆ ಹಣ ಪಡೆದು ಊರಿಗೆ ವಾಪಸ್ ಬಂದೆ’ ಎಂದು ಮಾರಮ್ಮನಹಳ್ಳಿಯ ಪಾಪೇಶ ಬೇಸರ ವ್ಯಕ್ತಪಡಿಸಿದರು.

‘ಇನ್ನು ಇದೇ ಗ್ರಾಮದ ನಲಬಾಲಯ್ಯ 17 ಪ್ಯಾಕೆಟ್, ರಮೇಶ್ 35 ಪ್ಯಾಕೆಟ್ ಹಾಕಿಕೊಂಡು ಹೋಗಿದ್ದರು. ಲಾರಿ ಬಾಡಿಗೆ ಕಳೆದು ಕ್ರಮವಾಗಿ ₹ 345 ಮತ್ತು ₹ 380 ನಷ್ಟವಾಗಿದೆ. ರಾಯಾಪುರ, ತೋಪಿನ ಇಬ್ಬರು 42 ಪ್ಯಾಕೆಟ್ ಈರುಳ್ಳಿ ತೆಗೆದುಕೊಂಡು ಹೋಗಿದ್ದರು. ಬಾಡಿಗೆ ಕಳೆದು ₹540 ತಮ್ಮ ಕೈಯಿಂದಲೇ ನೀಡಬೇಕಾಯಿತು’ ಎಂದು ಮಾರಮ್ಮನಹಳ್ಳಿಯ ಪಾಪೇಶ್ ಮಾಹಿತಿ ನೀಡಿದರು.

‘ನಷ್ಟಕ್ಕೆ ಹೆದರಿ ಲೋಡ್‌ನಷ್ಟು ಈರುಳ್ಳಿಯನ್ನು ಮಾರುಕಟ್ಟೆಯಲ್ಲಿಯೇ ಬಿಟ್ಟು ವಾಪಸ್ ಬಂದಿದ್ದೇವೆ. ಒಂದು ಐಷರ್ ಲಾರಿಯಲ್ಲಿ 250 ಈರುಳ್ಳಿ ಪ್ಯಾಕೆಟ್ ಸಾಗಣೆ ಮಾಡಬಹುದು. ಇಷ್ಟೊಂದು ಈರುಳ್ಳಿಯನ್ನು ಮಾರುಕಟ್ಟೆಯಲ್ಲಿ ಬಿಟ್ಟು ಬಂದೆವು. ತೂಕ ಮಾಡಿಸಿದಲ್ಲಿ ಸಾವಿರಾರು ರೂಪಾಯಿಯನ್ನು ನಾವೇ ಮಾರುಕಟ್ಟೆಗೆ ನೀಡಬೇಕಾಗುತ್ತದೆ. ಮನೆಗೆ ಬಂದ ನಂತರ ಉಳಿದಿದ್ದ ಈರುಳ್ಳಿಯನ್ನು ತಿಪ್ಪೆಗೆ ಹಾಕಿದೆವು. ಏನು ಮಾಡಬೇಕೋ ದಿಕ್ಕು ತೋಚದಾಗಿದೆ’ ಎಂದು ಅಳಲು ತೋಡಿಕೊಂಡರು.

‘ತೋಟಗಾರಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ನೆರವಿಗೆ ಬರಬೇಕು’ ಎಂದು ಅವರು ಮನವಿ ಮಾಡಿದರು.

ರೈತರಾದ ಪಾಪಯ್ಯ, ಬಸವರಾಜ್, ಜಗ್ಗಯ್ಯ, ನಾಗರಾಜ್, ಜಯಣ್ಣ ಅವರು ತೆಗೆದುಕೊಂಡು ಹೋಗಿದ್ದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ ₹ 120ಕ್ಕೆ ಮಾರಾಟವಾಗಿದೆ. ಖಾಲಿ ಚೀಲದ ಹಣ ಸಹ ವಾಪಸ್ ಬರಲಿಲ್ಲ.

ಪಾಪೇಶ, ಮಾರಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT