ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆಗಳಿಗೆ ಈರುಳ್ಳಿ ಹಾಕಿದ ರೈತ

ಲಾಕ್‌ಡೌನ್‌ನಿಂದ ನಲುಗಿದ ಅನ್ನದಾತರು
Last Updated 27 ಮೇ 2020, 19:26 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಸೂರಪ್ಪನಹಟ್ಟಿಯಲ್ಲಿ ಈರುಳ್ಳಿಗೆ ಸೂಕ್ತ ಬೆಲೆ ದೊರೆಯದ ಕಾರಣ ಹತಾಶಗೊಂಡ ರೈತರೊಬ್ಬರು ಈರುಳ್ಳಿಯನ್ನು ಕುರಿ–ಮೇಕೆಗಳಿಗೆ ತಿನ್ನಲು ಬಿಟ್ಟಿದ್ದಾರೆ.

ತಮಗಿರುವ ನಾಲ್ಕು ಎಕರೆ ಜಮೀನಿನಲ್ಲಿ ರಾಮಪ್ಪ ಮೆಣಸಿನಕಾಯಿ, ಹತ್ತಿಯ ಜೊತೆಗೆ ಒಂದೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದರು. ಇದಕ್ಕೆ ₹ 55 ಸಾವಿರದಿಂದ ₹ 60 ಸಾವಿರದಷ್ಟು ಖರ್ಚು ಮಾಡಿದ್ದರು.

‘ಕುರಿ ಮೇಯಿಸಲು ವಲಸೆ ಹೋಗಿದ್ದ ನಾನು ಯುಗಾದಿ ಹಬ್ಬದ ಸಮಯಕ್ಕೆ ಈರುಳ್ಳಿ ಕಟಾವಿಗೆ ಬಂದಿದ್ದರಿಂದ ಊರಿಗೆ ಮರಳಿದ್ದೆ. ಅದೇ ವೇಳೆಗೆ ಲಾಕ್‌ಡೌನ್‌ ಘೋಷಣೆ ಆಯಿತು. ಈರುಳ್ಳಿ ತುಂಬಲು ಖಾಲಿ ಚೀಲ ಸಿಗುವುದೂ ಕಷ್ಟವಾಗಿತ್ತು. ₹ 30–₹ 35 ಬೆಲೆಯ ಚೀಲಗಳನ್ನು ₹ 48ಕ್ಕೆ ಖರೀದಿಸಿ ತಂದೆ. 70 ಕೆ.ಜಿ ತೂಕದ ಒಂದು ಚೀಲ ಈರುಳ್ಳಿ ಕೊಯ್ಯಲು ₹ 50 ಕೊಟ್ಟಿದ್ದೆ. ಲಾಕ್‌ಡೌನ್ ತೆರವಿನ ನಂತರ ಬೆಲೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ಖರೀದಿದಾರರು ಚೀಲವೊಂದನ್ನು ₹150ರಿಂದ ₹ 200ಕ್ಕೆ ಕೇಳಿದರು. ಅಷ್ಟು ಕಡಿಮೆ ದರಕ್ಕೆ ಕೊಡಲು ಮನಸ್ಸು ಒಪ್ಪಲಿಲ್ಲ. ಈರುಳ್ಳಿ ಚೀಲದಲ್ಲಿಯೇ ಕೊಳೆಯಲಾರಂಭಿಸಿತು. ಹೀಗಾಗಿ ಬೇಸರದಿಂದ ಕುರಿ–ಮೇಕೆಗಳಿಗೆ ತಿನ್ನಲು ಬಿಟ್ಟಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ಎಕರೆಯಲ್ಲಿ ಈರುಳ್ಳಿ ಬೆಳೆದು ಕೊಯ್ಲು ಮಾಡುವ ವೇಳೆಗೆ ₹ 30 ಸಾವಿರದಿಂದ ₹ 40 ಸಾವಿರ ಖರ್ಚು ಬರುತ್ತದೆ. ಒಂದೂವರೆ ಎಕರೆಯಲ್ಲಿ 75 ಪ್ಯಾಕೆಟ್ ಈರುಳ್ಳಿ ಬೆಳೆದಿದ್ದೆ. ₹650– ₹ 700 ದರ ಸಿಕ್ಕಿದ್ದರೆ ಹಾಕಿದ ಬಂಡವಾಳ ಬರುತ್ತಿತ್ತು. ₹150– ₹200 ಕ್ಕೆ ಮಾರಿದ್ದರೆ ಚೀಲ ಮತ್ತು ಕೂಲಿ, ಮಾರುಕಟ್ಟೆಗೆ ಸಾಗಿಸುವ ಖರ್ಚೂ ಬರುತ್ತಿರಲಿಲ್ಲ. ಹೀಗಾಗಿ ಮಾರಾಟ ಮಾಡಿ ನಷ್ಟ ಅನುಭವಿಸುವುದು ಬೇಡ ಎಂದು ಇಂತಹ ತೀರ್ಮಾನ ಕೈಗೊಂಡೆ’ ಎಂದು ರಾಮಪ್ಪ ಹೇಳಿದರು.

‘ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ನೀಡಬೇಕು. ಈರುಳ್ಳಿ ಹೆಚ್ಚು ಬೆಳೆಯುವ ಕಡೆ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT