ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷದಲ್ಲಿ ಮುಗಿಯಲಿದೆ ರಸ್ತೆ ಕಾಮಗಾರಿ: ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭರವಸೆ

ಪ್ರಗತಿ ಪರಿಶೀಲನಾ ಸಭೆ
Last Updated 15 ಸೆಪ್ಟೆಂಬರ್ 2021, 13:36 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರ ವ್ಯಾಪ್ತಿಯ ಹಲವೆಡೆ ನಡೆಯುತ್ತಿರುವ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಮುಂದಿನ ಒಂದುವರ್ಷದೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಯಿತು. ಅಲ್ಲದೆ, ಗಡುವು ಕೂಡ ವಿಸ್ತರಿಸಲಾಯಿತು.

ಪ್ರವಾಸಿ ಮಂದಿರದಲ್ಲಿ ಬುಧವಾರ ಭದ್ರಾ ಮೇಲ್ದಂಡೆ, ಲೋಕೋಪಯೋಗಿ, ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಬೆಸ್ಕಾಂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ‘ವರ್ಷದೊಳಗೆ ಎಲ್ಲಾ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಭರವಸೆ ನೀಡಿದರು.

‘ಅಧಿಕಾರಿಗಳು ನೋಟಿಸ್ ನೀಡಿದ ಕಾರಣವನ್ನೇ ಮುಂದಿಟ್ಟುಕೊಂಡು ಕೆಲವರು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ. ಈ ರೀತಿ ಒಟ್ಟು 47 ಪ್ರಕರಣಗಳಿವೆ. ಹೀಗಾಗಿ ರಸ್ತೆ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿದೆ. ಅದಕ್ಕಾಗಿ ಹೈಕೋರ್ಟ್‌ ಮೂಲಕ ಯಾವ ರೀತಿಯಲ್ಲೂ ಅಡ್ಡಿಯಾಗದಂತೆ ಆದೇಶ ತರಲಿಕ್ಕಾಗಿ ಇನ್ನೂ ಇಬ್ಬರು ವಕೀಲರನ್ನು ಹೆಚ್ಚುವರಿಯಾಗಿ ನೇಮಿಸಿದ್ದೇವೆ’ ಎಂದರು.

‘ಜನರಿಗೆ ಸಾಕಷ್ಟು ತೊಂದರೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಯಾವ ಸಮಸ್ಯೆ ಇಲ್ಲದ ಮಾರ್ಗಗಳನ್ನು ಮುಂದಿನ 4 ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಪರಿಸರ ಕುರಿತು ನನಗೂ ಕಾಳಜಿ ಇದ್ದು, ಮರಗಳನ್ನು ಕಡಿದಿರುವ ಕುರಿತು ನೋವಿದೆ. ಅದಕ್ಕೆ ಪರ್ಯಾಯವಾಗಿ ಎಲ್ಲಾ ಕಡೆಗಳಲ್ಲೂ ಮರಗಳನ್ನು ಬೆಳೆಸಲಾಗುವುದು. ಚಳ್ಳಕೆರೆ ಗೇಟ್‌ನಿಂದ ಜೆಎಂಐಟಿ ವೃತ್ತದವರೆಗೂ ರಸ್ತೆ ಮಧ್ಯದಲ್ಲಿ ಹೂವಿನ ಗಿಡಗಳನ್ನು ಬೆಳೆಸಲಾಗುವುದು’ ಎಂದು ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಅಷ್ಟೊಂದು ತೊಂದರೆ ಉಂಟಾಗುವುದಿಲ್ಲ. ಆದರೆ, ನಗರ ವ್ಯಾಪ್ತಿಯಲ್ಲಿ ಕಾಮಗಾರಿ ಆರಂಭವಾದಾಗಿನಿಂದ ಪೂರ್ಣಗೊಳ್ಳುವವರೆಗೂ ಅನೇಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಅವೆಲ್ಲವನ್ನೂ ಬಗೆಹರಿಸಿಕೊಂಡು ನಿರ್ಮಾಣ ಮಾಡಬೇಕಿದೆ. ಸಾರ್ವಜನಿಕರು ಅರ್ಥ ಮಾಡಿಕೊಂಡು ಸಹಕರಿಸಿ’ ಎಂದು ಮನವಿ ಮಾಡಿದರು.

‘ಸುಮಾರು 40ರಿಂದ 50 ವರ್ಷಗಳಿಂದಲೂ ನಗರದ ರಸ್ತೆಗಳು ಅಭಿವೃದ್ಧಿ ಭಾಗ್ಯ ಕಂಡಿರಲಿಲ್ಲ. ಈಗ ವಿವಿಧ ಇಲಾಖೆಗಳ ಅಡಿಯಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಡಾಂಬಾರು ರಸ್ತೆಗಳು ಪದೇ ಪದೇ ಗುಂಡಿ ಬೀಳುತ್ತಿದ್ದ ಕಾರಣ ಮುಂದಿನ 50 ವರ್ಷ ಯಾರೂ ಚಕಾರ ಎತ್ತದಂತೆ ಗುಣಮಟ್ಟದ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗುವುದು’ ಎಂದು ಭರವಸೆ ನೀಡಿದರು.

‘ಮಾಜಿ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರ ಮನೆಯ ಮುಂಭಾಗ ಕೈಗೊಂಡಿರುವ ರಸ್ತೆ ಕಾಮಗಾರಿಯಲ್ಲಿ ಸ್ವಲ್ಪ ವ್ಯತ್ಯಾಸವಾಗಿದೆ. ತಗ್ಗು ಪ್ರದೇಶವಾದ್ದರಿಂದ ಯಾರಿಗೂ ತೊಂದರೆ ಉಂಟಾಗದಂತೆ ಸರಿಪಡಿಸಿ. ಚರಂಡಿ ನೀರು ಸುಗಮವಾಗಿ ಹರಿಯಲಿಕ್ಕಾಗಿ ಮಾರ್ಗದುದ್ದಕ್ಕೂ 22 ಅಡಿ ಜಾಗ ಮೀಸಲಿಡಲಾಗಿದೆ. ಮೇಲ್ಭಾಗದಲ್ಲಿ ರಸ್ತೆ ನಿರ್ಮಿಸಿದರೆ ವಿಸ್ತೀರ್ಣ ಹೆಚ್ಚಾಗಲಿದೆ’ ಎಂದು ತಿಪ್ಪಾರೆಡ್ಡಿ ಸಲಹೆ ನೀಡಿದರು. ‘ರಸ್ತೆ ಬೇಡ, ಪಾದಚರಿ ಮಾರ್ಗ ಸೂಕ್ತ’ ಎಂದು ಅಧಿಕಾರಿಗಳು ಮನವರಿಕೆ ಮಾಡಿದರು.

‘ಅಮೃತ್‌ ಯೋಜನೆಯ ಅಡಿ ಕುಡಿಯುವ ನೀರು, ಅನಿಲ ಪೈಪ್‌ಲೈನ್ ಸಂಪರ್ಕ ಕಾಮಗಾರಿಗಳು ಕೂಡ ನಡೆಯುತ್ತಿರುವ ಕಾರಣ ಎಚ್ಚರಿಕೆಯಿಂದ ರಸ್ತೆ ಕಾಮಗಾರಿ ಕೈಗೊಳ್ಳಬೇಕು. ಎಷ್ಟೇ ವೆಚ್ಚವಾಗಲಿ ಅನುದಾನ ತಂದು ಪೂರ್ಣಗೊಳಿಸುತ್ತೇನೆ. ಗುಣಮಟ್ಟ ಕಾಪಾಡಿಕೊಳ್ಳಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವ್ಯಾಪಾರಸ್ಥರಿಗೆ ಪರ್ಯಾಯ ವ್ಯವಸ್ಥೆ

ನಗರದ ಎಲ್ಲೆಡೆ ಸುಂದರ ರಸ್ತೆ ನಿರ್ಮಾಣವಾದ ನಂತರ ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ತರಕಾರಿ ಮಾರಾಟಗಾರರಿಗೆ ಯಾವ ತೊಂದರೆ ಉಂಟಾಗದಂತೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ವೇಳೆ ಇಂದಿರಾ ಕ್ಯಾಂಟೀನ್‌ ಸ್ಥಳ ಬದಲಾವಣೆ ಕುರಿತು ಚರ್ಚಿಸಲಾಯಿತು.

ಇಲ್ಲಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಸೂಕ್ತ ತಡೆಗೋಡೆ ಇಲ್ಲದ ಕಾರಣ ರಾತ್ರಿ ವೇಳೆ ಆವರಣದಲ್ಲಿ ಮದ್ಯ ಸೇವನೆ ಸೇರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಕಾಲೇಜಿನ ಪಕ್ಕದ ರಸ್ತೆಯಲ್ಲಿ ಹೆಚ್ಚಿನ ಜನರು ಸಂಚರಿಸುವುದಿಲ್ಲ. ಹೀಗಾಗಿ ಅದನ್ನು ಮುಚ್ಚಲು ತೀರ್ಮಾನಿಸಲಾಯಿತು. ಜತೆಗೆ ಸುಸಜ್ಜಿತ ತಡೆಗೋಡೆ ನಿರ್ಮಿಸಲು ನಿರ್ಧರಿಸಲಾಯಿತು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸತೀಶ್‌ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸೋಮಶೇಖರ್, ನಗರಸಭೆ ಪೌರಾಯುಕ್ತ ಹನುಮಂತರಾಜು, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಾದ ಶ್ರೀಧರ್, ಸ್ವಾಮಿ ಇದ್ದರು.

***

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಹಲವು ಕೆರೆಗಳಿಗೂ ನೀರು ಹರಿಯಬೇಕು. ಅದಕ್ಕಾಗಿ ಈ ಭಾಗದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ಅಧಿಕಾರಿಗಳು ತ್ವರಿತವಾಗಿ ಪೂರ್ಣಗೊಳಿಸಿ.

-ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT